ಧರ್ಮಗಳ ಸಂದೇಶ ಒಗ್ಗಟ್ಟೇ ವಿನಾಃ ಬಿಕ್ಕಟ್ಟು ಅಲ್ಲ: ಸ್ಪೀಕರ್ ಖಾದರ್
ಎಲ್ಲ ಧರ್ಮಗಳು ಸಮಾಜದ ಒಗ್ಗಟ್ಟಿನ ಬದಲು ಬಿಕ್ಕಟ್ಟಿನ ಬಗ್ಗೆ ಸಂದೇಶ ನೀಡುವುದಿಲ್ಲ ಎಂದು ಸನಾತನ ಧರ್ಮ ಕುರಿತ ವಿವಾದ ಬಗ್ಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು (ಸೆ.9) : ಎಲ್ಲ ಧರ್ಮಗಳು ಸಮಾಜದ ಒಗ್ಗಟ್ಟಿನ ಬದಲು ಬಿಕ್ಕಟ್ಟಿನ ಬಗ್ಗೆ ಸಂದೇಶ ನೀಡುವುದಿಲ್ಲ ಎಂದು ಸನಾತನ ಧರ್ಮ ಕುರಿತ ವಿವಾದ ಬಗ್ಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸನಾತನ ಧರ್ಮದ ಕುರಿತಂತೆ ಯಾರು, ಏನೆಲ್ಲ ಹೇಳಿದ್ದಾರೆ ಎಂದು ನನಗೆ ಮಾಹಿತಿ ಇಲ್ಲ. ಎಲ್ಲ ಧರ್ಮಗಳನ್ನೂ ಗೌರವ, ಪ್ರೀತಿ, ವಿಶ್ವಾಸದಿಂದ ಕಾಣಬೇಕು, ಯಾವುದೇ ಧರ್ಮ ದ್ವೇಷ ಕಲಿಸುವುದಿಲ್ಲ. ಸಮಾಜದ ಒಗ್ಗಟ್ಟಿಗೆ ಎಲ್ಲ ಧರ್ಮಗಳೂ ಸಂದೇಶ ನೀಡುತ್ತವೆ. ಮಾನವೀಯತೆ, ಕರುಣೆ, ಸೋದರತೆ, ಕ್ಷಮಾ ಗುಣ ಇದ್ದು ಜೀವನ ನಡೆಸಬೇಕು. ಆತ್ಮವಿಶ್ವಾಸದ ಬದುಕು ಎಲ್ಲರದ್ದಾಗಬೇಕು. ಆಗ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಎಲ್ಲ ಧರ್ಮಕ್ಕೂ ಅದರದ್ದೇ ಆದ ಪಾವಿತ್ರ್ಯತೆ ಇದೆ. ದ್ವೇಷ, ಅಸೂಯೆ, ನೋವಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.
ಸದನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಲು ಹೆಚ್ಚಿನ ಕಾಲಾವಕಾಶ ಯಾವುದೇ ಶಾಸಕರು ಕೋರಿಲ್ಲ: ಖಾದರ್
ಗಣೇಶೋತ್ಸವ ಬಗ್ಗೆ ಕುಲಪತಿ ತೀರ್ಮಾನ:
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗಣೇಶೋತ್ಸವ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಈ ವಿಚಾರವನ್ನು ಯುಜಿಸಿ ಹಾಗೂ ವಿವಿ ನಿಯಮಾವಳಿಯಂತೆ ಕುಲಪತಿಗಳೇ ತೀರ್ಮಾನಿಸುತ್ತಾರೆ. ಈ ವಿಚಾರದಲ್ಲಿ ಹೊರಗಿನವರಿಗೆ ಏನು ಕೆಲಸ ಎಂದು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಮಾನ ಮನಸ್ಕ ಸಂಘಟನೆಗಳ ಹೆಸರೆತ್ತದೆ ಹೇಳಿದರು.
ವಿವಿಯಲ್ಲಿ ಕಳೆದ 30 ವರ್ಷಗಳಿಂದ ಹಾಸ್ಟೆಲ್‌ನಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈಗ ಅದನ್ನು ಬದಲಾಯಿಸಲು ಹೊರಟ ಉದ್ದೇಶ ಏನು? ಹೊರಗಿನವರಿಗೆ ಅಲ್ಲಿ ಏನು ಕೆಲಸವಿದೆ ಎಂದು ಖಾದರ್ ಖಾರವಾಗಿ ಪ್ರಶ್ನಿಸಿದರು.
ವಿವಿ ಕ್ಯಾಂಪಸ್ಸಿನಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಶಿಸ್ತಿಗೆ ಮೊದಲ ಆದ್ಯತೆ. ಕುಲಪತಿಗಳಿಗೆ ಬಗೆಹರಿಸಲು ಸಾಧ್ಯವಾಗದಿದ್ದರೆ, ಸರ್ಕಾರ ಗಮನ ಹರಿಸಬೇಕಾಗುತ್ತದೆ. ಈ ಹಿಂದೆ ''''ಎ'''' ಗ್ರೇಡ್‌ನಲ್ಲಿದ್ದ ವಿವಿ ಈಗ ''''ಬಿ'''' ಗ್ರೇಡ್‌ಗೆ ಇಳಿದಿದೆ. ಈ ಬಗ್ಗೆ ಯಾರ ಜನಪ್ರತಿನಿಧಿಗಳೂ ಮಾತನಾಡುತ್ತಿಲ್ಲ. ಅಲ್ಲದೆ ಅಲ್ಲಿ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಹಣದ ಕೊರತೆ ಉಂಟಾಗಿದೆ. ಆ ಮೊತ್ತವನ್ನು ವಿವಿಧ ಕಾಮಗಾರಿಗೆ ಬಳಸಲಾಗಿದೆ. ಈ ವಿಚಾರವನ್ನು ಕೂಡ ಯಾರೂ ಪ್ರಸ್ತಾಪಿಸುತ್ತಿಲ್ಲ ಯಾಕೆ ಎಂದು ಖಾದರ್ ಪ್ರಶ್ನಿಸಿದರು.
ಮಂಗಳ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ವಿರೋಧ: ವಿಸಿ ಭೇಟಿಯಾದ ನಿಯೋಗ !
ಶಾಸಕ ಜವಾಬ್ದಾರಿಯುತನಾಗಿದ್ದರೆ..
ಮಂಗಳೂರು ಪೊಲೀಸ್ ಕಮಿಷನರ್ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಮಿಸಿದ್ದರು. ಈಗ ಅವರ ವರ್ಗಾವಣೆಯಾಗಿದೆ. ಅವರು ಒಳ್ಳೆಯ ಕೆಲಸ ಮಾಡಿರಬಹುದು, ಆದರೆ ಇಲ್ಲಿ ವ್ಯಕ್ತಿಗಿಂತ ಸರ್ಕಾರದ ನಿರ್ಧಾರ ಮುಖ್ಯ, ಸರ್ಕಾರ ವರ್ಗಾವಣೆ ಮಾಡಿದೆ, ಇದು ಆಡಳಿತಕ್ಕೆ ಸಂಬಂಧಿಸಿದ ವಿಚಾರ. ಒಬ್ಬ ಶಾಸಕರ ಜವಾಬ್ದಾರಿಯುತವಾಗಿ ಇದ್ದರೆ, ಆತನ ಕ್ಷೇತ್ರ ಸರಿಯಾಗಿ ಇರುತ್ತದೆ. ನನ್ನ ಕ್ಷೇತ್ರದಲ್ಲಿ ಕ್ಲಬ್, ವಿಡಿಯೋ ಗೇಮ್, ಹುಕ್ಕಾ ಬಾರ್ ಇಂತಹ ಸಂಗತಿಗಳೇ ಇಲ್ಲ. ನಾನು ಅಂಥದ್ದಕ್ಕೆಲ್ಲ ಅವಕಾಶವನ್ನೂ ನೀಡುವುದಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.