ಮಾಧ್ಯಮಗಳು ಜೀವಂತವಾಗಿ ಇರದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುತ್ತಿರಲಿಲ್ಲ. ಹೀಗಾಗಿ ಮಾಧ್ಯಮಗಳು ತಪ್ಪು ಮಾಡದಂತೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.
ಬೆಂಗಳೂರು (ಜ.01): ಮಾಧ್ಯಮಗಳು ಜೀವಂತವಾಗಿ ಇರದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುತ್ತಿರಲಿಲ್ಲ. ಹೀಗಾಗಿ ಮಾಧ್ಯಮಗಳು ತಪ್ಪು ಮಾಡದಂತೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.
ಶನಿವಾರ ಬೆಂಗಳೂರು ಪ್ರೆಸ್‌ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ಮಾಧ್ಯಮ ಕ್ಷೇತ್ರ ಇಂದು ಬೃಹದಾಕಾರವಾಗಿ ಬೆಳೆದಿದ್ದು ದೃಶ್ಯ, ಡಿಜಿಟಲ್ ಮಾಧ್ಯಮ ಸೇರಿ ಹಲವು ಪ್ರಕಾರಗಳಲ್ಲಿ ವಿಸ್ತೃತಗೊಂಡಿದೆ. ಇಂದು ಪ್ರಜಾಪ್ರಭುತ್ವ ಉಳಿಯುವುದಕ್ಕೆ ಮಾಧ್ಯಮವೂ ಕಾರಣ. ಆದ್ದರಿಂದ ಮಾಧ್ಯಮ ತಪ್ಪು ಮಾಡಬಾರದು. ಪತ್ರಕರ್ತರು ತಪ್ಪು ಮಾಡಿದರೆ ಸಮಾಜ ಸಂಕಷ್ಟಕ್ಕೆ ಒಳಗಾಗಲಿದೆ’ ಎಂದು ಕಿವಿಮಾತು ಹೇಳಿದರು.
ದಿಲ್ಲಿಗೆ ಬನ್ನಿ: ರಮೇಶ್ ಜಾರಕಿಹೊಳಿಗೆ ಅಮಿತ್ ಶಾ ಸೂಚನೆ
‘ಮಾಧ್ಯಮಗಳು ಧ್ವನಿ ಇಲ್ಲದೆ ಇರುವವರಿಗೆ ಧ್ವನಿಯಾಗಬೇಕು. ಸಣ್ಣಪುಟ್ಟಕೆಲಸಕ್ಕಾಗಿ ನಾವು ನಮ್ಮ ತತ್ವ ಬಿಟ್ಟಾಗ ಆಗ ಪ್ರಜಾಪ್ರಭುತ್ವದ ಕೊಲೆಯಾಗುತ್ತದೆ. ಸತ್ಯವನ್ನು ಹೇಳುತ್ತಾರೆ ಎನ್ನುವ ಕಾರಣಕ್ಕಾಗಿ ಮಾಧ್ಯಮಗಳು ಮತ್ತು ಪತ್ರಕರ್ತರ ಕಡೆಗೆ ಜನರು ಹೆಚ್ಚಿನ ಗಮನ ಹರಿಸುತ್ತಾರೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳ ಆಧಾರದಲ್ಲೇ ಸಂಸದರು, ಶಾಸಕರು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕ ವಲಯದಲ್ಲಿರುವ ಮಾಧ್ಯಮಗಳು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು’ ಎಂದರು.
ನಿರಾಣಿಗೆ ವಿಶೇಷ ಪ್ರಶಸ್ತಿ: ವಿಶೇಷ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ‘ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಕೈಗಾರಿಕಾ ಕ್ರಾಂತಿಯಾಗಿದೆ. ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದಗಳಾಗಿವೆ. ಇದರಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ನವೋದ್ಯಮಗಳಿಗೆ ಹೆಚ್ಚಿನ ಬೆಂಬಲ ನೀಡಲಾಗುತ್ತಿದೆ. ರಾಜ್ಯದಲ್ಲಿ 680ಕ್ಕೂ ಹೆಚ್ಚು ಆರ್‌ಎನ್‌ಡಿ ಕೇಂದ್ರಗಳಿವೆ. ಅವುಗಳು ಔದ್ಯೋಗಿಕ ವಲಯದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಲಿವೆ’ ಎಂದರು.
ಕಾರ್ಯಕ್ರಮದಲ್ಲಿ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಯು.ಬಿ.ವೆಂಕಟೇಶ್, ಪ್ರೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ, ಉಪಾಧ್ಯಕ್ಷ ಆನಂದ ಪಿ.ಬೈದನಮನೆ ಹಾಗೂ ಪದಾಧಿಕಾರಿಗಳು ಇದ್ದರು.
ಬಸವಪ್ರಭು ಶ್ರೀಗಳೇ ಸಿದ್ದರಾಮಯ್ಯರನ್ನು ಸಿಎಂ ಮಾಡಲಿ: ಕೆ.ಎಸ್.ಈಶ್ವರಪ್ಪ
ಯಾರಿಗೆ ಯಾವ ಪ್ರಶಸ್ತಿ?
ವರ್ಷದ ವ್ಯಕ್ತಿ ಪ್ರಶಸ್ತಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಚ್ ವಿಶ್ರಾಂತ ನ್ಯಾ.ಗೋಪಾಲಗೌಡ ಅವರಿಗೆ ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ.
ವಿಶೇಷ ಪ್ರಶಸ್ತಿ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿ ಮುರುಗೇಶ ಆರ್.ನಿರಾಣಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ವಿಶೇಷ ಪ್ರಶಸ್ತಿ
ವಾರ್ಷಿಕ ಪ್ರಶಸ್ತಿ: ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್ ಸುವರ್ಣ ನ್ಯೂಸ್ ಔಟ್‌ಪುಟ್ ಎಡಿಟರ್ ಎಂ.ಸಿ.ಶೋಭಾ ಸೇರಿದಂತೆ 32 ಮಂದಿ ಹಿರಿಯ ಪತ್ರಕರ್ತರಿಗೆ 2022ರ ವಾರ್ಷಿಕ ಪ್ರಶಸ್ತಿ ಪ್ರದಾನ
