Asianet Suvarna News Asianet Suvarna News

ದಿಲ್ಲಿಗೆ ಬನ್ನಿ: ರಮೇಶ್‌ ಜಾರಕಿಹೊಳಿಗೆ ಅಮಿತ್‌ ಶಾ ಸೂಚನೆ

ಸಂಪುಟ ಸೇರಲು ಸತತ ಪ್ರಯತ್ನ ನಡೆಸುತ್ತಿರುವ ರಮೇಶ್‌ ಜಾರಕಿಹೊಳಿ ಅವರು ಶನಿವಾರ ಪಕ್ಷದ ಪ್ರಭಾವಿ ನಾಯಕರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

Union Minister Amit Shah instructs Ramesh Jarkiholi to come to Delhi gvd
Author
First Published Jan 1, 2023, 1:00 AM IST

ಬೆಂಗಳೂರು (ಜ.01): ಸಂಪುಟ ಸೇರಲು ಸತತ ಪ್ರಯತ್ನ ನಡೆಸುತ್ತಿರುವ ರಮೇಶ್‌ ಜಾರಕಿಹೊಳಿ ಅವರು ಶನಿವಾರ ಪಕ್ಷದ ಪ್ರಭಾವಿ ನಾಯಕರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುವುದಾಗಿ ಹೇಳಿದ ರಮೇಶ್‌ ಜಾರಕಿಹೊಳಿ ಅವರ ಮಾತಿಗೆ ಅಮಿತ್‌ ಶಾ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. 

ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಜಾರಕಿಹೊಳಿ ಅವರು ಸಂಪುಟದಲ್ಲಿ ಅವಕಾಶ ನೀಡುವ ಬಗ್ಗೆ ತಮ್ಮ ಒತ್ತಾಯ ಪುನರುಚ್ಚರಿಸಿದರು. ಅಲ್ಲದೆ, ಈ ಬಗ್ಗೆ ಅಮಿತ್‌ ಶಾ ಅವರನ್ನು ಭೇಟಿ ಮಾಡುವ ಇಂಗಿತವನ್ನೂ ಅವರ ಮುಂದೆ ವ್ಯಕ್ತಪಡಿಸಿದರು. ಹೀಗಾಗಿ, ಬೊಮ್ಮಾಯಿ ಅವರು ತಮ್ಮ ನಿವಾಸದಿಂದ ಅಮಿತ್‌ ಶಾ ಅವರು ಉಳಿದುಕೊಂಡಿದ್ದ ಹೋಟೆಲ್‌ಗೆ ಕರೆದೊಯ್ದರು. ಅಲ್ಲಿ ಸಮಾರಂಭಕ್ಕೆ ತೆರಳಲು ಸಜ್ಜಾಗಿದ್ದ ಅಮಿತ್‌ ಶಾ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪರಿಚಯಿಸಿದರು. 

ರಾಜ್ಯ ಬಿಜೆಪಿಗೆ ಅಮಿತ್‌ ಶಾ 3 ಗುರಿ: ಹಳೆ ಮೈಸೂರು ಬಗ್ಗೆ 2 ತಾಸು ಚರ್ಚೆ

ಜಾರಕಿಹೊಳಿ ಅವರ ಹೆಸರು ಕೇಳುತ್ತಿದ್ದಂತೆಯೇ ಅಮಿತ್‌ ಶಾ ಅವರು ‘ಶುಕ್ರವಾರ ಮಂಡ್ಯದಲ್ಲಿ ನಡೆದ ಕೆಎಂಎಫ್‌ ಸಮಾರಂಭಕ್ಕೆ ಅದರ ಅಧ್ಯಕ್ಷರಾಗಿರುವ ಸಹೋದರ ಬಾಲಚಂದ್ರ ಜಾರಕಿಹೊಳಿ ಯಾಕೆ ಬಂದಿಲ್ಲ?’ ಎಂದು ಕೇಳಿದರು. ಬಳಿಕ ರಮೇಶ್‌ ಸಮಜಾಯಿಷಿ ನೀಡಿದರು. ಇದೇ ವೇಳೆ ‘ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಬೇಕು’ ಎಂಬ ಬೇಡಿಕೆಯನ್ನು ರಮೇಶ್‌ ಮುಂದಿಡಲು ಯತ್ನಿಸಿದರು. ಆದರೆ, ಸಮಯದ ಅಭಾವ ಗಮನಿಸಿದ ರಮೇಶ್‌ ಅವರು ದೆಹಲಿಗೆ ಬರುವುದಾಗಿ ತಿಳಿಸಿದರು. ಇದಕ್ಕೆ ಅಮಿತ್‌ ಶಾ ಅವರು ‘ಆಗಲಿ’ ಎಂಬ ಮಾತನ್ನು ಹೇಳಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯ ರಾಜಕೀಯದ ಮಾಹಿತಿ ಕಲೆ ಹಾಕಿದ ಶಾ: ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯದ ನಾಯಕರ ಜತೆಗೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಿದ್ದು, ಲಿಂಗಾಯಿತ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ಇತರೆ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು. ಖಾಸಗಿ ಹೊಟೇಲ್‌ನಲ್ಲಿ ಸುಮಾರು 45 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಂಘಟನಾ ಕಾರ್ಯದರ್ಶಿ ರಾಜೇಶ್‌, ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾಗಿಯಾಗಿದ್ದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹದಾಯಿ ಯೋಜನೆಗೆ ಪರಿಷ್ಕೃತ ಡಿಪಿಆರ್‌ಗೆ ಅನುಮೋದನೆ ನೀಡಿದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಇನ್ನು, ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಲು ಕೈಗೊಂಡಿರುವ ತೀರ್ಮಾನ ಕುರಿತು ಮಾಹಿತಿ ನೀಡಿದರು. ಎರಡು ಸಮುದಾಯಗಳ ಬಹಳ ದಿನಗಳ ಬೇಡಿಕೆಯನ್ನು ಈಡೇರಿಕೆ ಮಾಡಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ನಿರ್ಣಾಯಕ ಮತ್ತು ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ವಿವರಣೆ ನೀಡಿದರು.

ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ್ದರಿಂದ ಮುಂದಿನ ಚುನಾವಣೆಗೆ ಅನುಕೂಲವಾಗಲಿದೆ. ಚುನಾವಣಾ ದೃಷ್ಟಿಯಿಂದ ಈ ತೀರ್ಮಾನವು ಪ್ರಯೋಜವಾಗಲಿದೆ ಎಂಬುದನ್ನು ಮುಖ್ಯಮಂತ್ರಿಗಳು ಮನವರಿಕೆ ಮಾಡಿಕೊಟ್ಟರು. ಇದಲ್ಲದೇ, ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆ ಚುರುಕಾಗಿದೆ ಎಂದು ಸಹ ವಿವರಿಸಿದರು.

ಅಮಿತ್‌ ಶಾ ಆಗಮನದಿಂದ ವಿಪಕ್ಷಗಳಲ್ಲಿ ನಡುಕ: ಬಿ.ವೈ.ವಿಜಯೇಂದ್ರ

ಇದೇ ವೇಳೆ ಅಮಿತ್‌ ಶಾ ಜನತಾ ಪರಿವಾರಕ್ಕೆ ಅಧಿಕಾರ ಲಭಿಸಿದ ಇತಿಹಾಸದ ಕುರಿತು ರಾಜ್ಯ ನಾಯಕರಿಂದ ಮಾಹಿತಿ ಪಡೆದುಕೊಂಡರು. ಯಾವ ಯಾವ ಚುನಾವಣೆಯಲ್ಲಿ ಯಾರಿಗೆ ಯಾವ ಅಂಶ ಬೂಸ್ಟ್‌ ನೀಡಿದೆ ಎನ್ನುವುದರ ಮಾಹಿತಿಯನ್ನು ಕ್ರೋಢೀಕರಿಸಿದರು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಮಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದ ಪರಿಯನ್ನು ತಿಳಿದುಕೊಂಡರು. ಬಿಜೆಪಿ ರಾಜ್ಯದಲ್ಲಿ ಆರಂಭದಲ್ಲಿ ಎರಡು ಸ್ಥಾನ ಮಾತ್ರ ಪಡೆದುಕೊಂಡಿತ್ತು. ಅನಂತರ ಅದು ಅಧಿಕಾರ ಹಿಡಿಯುವ ಮಟ್ಟಕ್ಕೆಬೆಳೆಯಿತು ಎಂಬ ಮಾಹಿತಿಯನ್ನು ಸಹ ಪಡೆದು, ಪಕ್ಷ ಈಗಿರುವ ವೇಗವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಸಲಹೆ ನೀಡಿದರು.

Follow Us:
Download App:
  • android
  • ios