ಮಂಕಿಪಾಕ್ಸ್ ಪತ್ತೆಗೆ ಏರ್ಪೋರ್ಟ್, ಬಂದರಲ್ಲೇ ಪರೀಕ್ಷೆ ನಡೆಸಿ: ತಜ್ಞರು
ಹಲವು ದೇಶಗಳಲ್ಲಿ 50 ಕ್ಕಿಂತ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಕಂಡು ಬಂದಿದ್ದು, ಅಂತಹ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು
ಬೆಂಗಳೂರು(ಜು.21): ವಿದೇಶದಿಂದ ಮಂಗಳೂರಿಗೆ ಬಂದು ಕೇರಳಕ್ಕೆ ಪ್ರಯಾಣಿಸಿದ್ದ ವ್ಯಕ್ತಿಯಲ್ಲಿ ‘ಮಂಕಿಪಾಕ್ಸ್’ ರೋಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ವಿಮಾನ ನಿಲ್ದಾಣ ಮತ್ತು ಬಂದರಿನಲ್ಲಿಯೇ ಮಂಕಿಪಾಕ್ಸ್ ಶಂಕಿತರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವಂತೆ ‘ತಾಂತ್ರಿಕ ಸಲಹಾ ಸಮಿತಿ’ ಆರೋಗ್ಯ ಇಲಾಖೆಗೆ ಶಿಫಾರಸ್ಸು ಮಾಡಿದೆ. ಹಲವು ದೇಶಗಳಲ್ಲಿ 50 ಕ್ಕಿಂತ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಕಂಡು ಬಂದಿದ್ದು, ಅಂತಹ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು. ಇದಕ್ಕಾಗಿ ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಲ್ಲಿ ರೋಗ ಲಕ್ಷಣಗಳಾದ ಜ್ವರ, ಬೆವರುವಿಕೆ, ಊದಿಕೊಳ್ಳುವಿಕೆ, ತಲೆನೋವು, ಕೀಲುನೋವು, ಕಫ, ಗಂಟಲುನೋವು, ಚರ್ಮದಲ್ಲಿ ದದ್ದು ಇದೆಯೇ ಎಂಬುದನ್ನು ಪರೀಕ್ಷಿಸಬೇಕು ಎಂದು ಹೇಳಿದೆ.
ಕಳೆದ 21 ದಿನದಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಹಾಗೂ ಒಂದು ಅಥವಾ ಎರಡು ರೋಗ ಲಕ್ಷಣವಿರುವವರು ರಾಜ್ಯಕ್ಕೆ ಆಗಮಿಸಿದ ತಕ್ಷಣ ವಿಮಾನ ನಿಲ್ದಾಣ ಅಥವಾ ಬಂದರು ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ನಿಲ್ದಾಣ ಅಥವಾ ಬಂದರಿನಿಂದ ನಿರ್ಗಮಿಸಿದ್ದರೆ ತಕ್ಷಣವೇ ತಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.
ಇಡೀ ದೇಶಕ್ಕೇ ವ್ಯಾಪಿಸುತ್ತಾ ಮಂಕಿಪಾಕ್ಸ್? ICMR ವಿಜ್ಞಾನಿ ಹೇಳಿದ್ದೇನು?
ರೋಗ ಲಕ್ಷಣ ಕಂಡು ಬಂದರೆ ಅವರನ್ನು ತಕ್ಷಣವೇ ಪ್ರತ್ಯೇಕಿಸಿ ನಿಗದಿತ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿಕೊಳ್ಳಬೇಕು. ಶಂಕಿತರ ಸ್ಯಾಂಪಲ್ಸ್ ಪಡೆದು ಪರೀಕ್ಷೆಗೆ ಒಳಪಡಿಸಬೇಕು. ಶಂಕಿತ ಸಂಪರ್ಕಿತರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಮಂಕಿಪಾಕ್ಸ್ ಇರುವುದು ದೃಢಪಟ್ಟರೆ ಸೋಂಕಿನ ಗುಣಲಕ್ಷಣಗಳು ವಾಸಿ ಆಗುವವರೆಗೆ ಮತ್ತು ವೈದ್ಯರು ಸೂಚಿಸುವವರೆಗೆ ಪ್ರತ್ಯೇಕವಾಗಿಯೇ ಇರಬೇಕು.
ಸೋಂಕಿತ ವ್ಯಕ್ತಿಗಳನ್ನು ಬೆಂಗಳೂರಿನ ಇಂದಿರಾನಗರದಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಅಥವಾ ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಬೇಕು. ಸ್ಯಾಂಪಲ್‌ಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಮೈಕ್ರೋಬಯೋಲಜಿ ಮತ್ತು ವೈರಾಣು ಸಂಶೋಧನೆ ರೋಗನಿರ್ಣಯ ವಿಭಾಗಕ್ಕೆ ಕಳುಹಿಸುವಂತೆ ಶಿಫಾರಸ್ಸು ಮಾಡಲಾಗಿದೆ.
ಸೋಂಕು ಲಕ್ಷಣ ಇದ್ದವರ ಬಳಿ ಹೋಗುವ ವೈದ್ಯಕೀಯ ಸಿಬ್ಬಂದಿ ಎನ್ - 95 ಮಾಸ್‌್ಕ ಮತ್ತು ಮಾಸ್‌್ಕ ಶೀಲ್ಡ್ ಧರಿಸಬೇಕು, ಪಿಪಿಇ ಕಿಟ್ ಬಳಕೆ ಮಾಡಬೇಕು ಎಂದು ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿದೆ.
ತಾಂತ್ರಿಕ ಸಲಹಾ ಸಮಿತಿ ನೀಡಿರುವ ಶಿಫಾರಸ್ಸು ಆರೋಗ್ಯ ಇಲಾಖೆಯ ಕೈಸೇರಿದೆ. ಈ ಶಿಫಾರಸ್ಸುಗಳನ್ನು ಪರಿಶೀಲಿಸಿ ಗುರುವಾರದೊಳಗೆ ತೀರ್ಮಾನ ಕೈಗೊಳ್ಳುತ್ತೇವೆ ಅಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.