ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಜತೆಗೆ, ನೈಋುತ್ಯ ದಿಕ್ಕಿನಿಂದ ಬೀಸುವ ಗಾಳಿ ಕಡಿಮೆಯಾಗಿ ವಾಯವ್ಯ ದಿಕ್ಕಿನಿಂದ ಬೀಸುತ್ತಿದೆ. ಇದರಿಂದ ರಾಜ್ಯದಲ್ಲಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ.
ಬೆಂಗಳೂರು(ಆ.28): ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಹಾಗೂ ವಾಯವ್ಯ ದಿಕ್ಕಿನಿಂದ ಗಾಳಿ ಬೀಸುತ್ತಿರುವ ಪರಿಣಾಮ ಗರಿಷ್ಠ ಉಷ್ಣಾಂಶದಲ್ಲಿ ವಾಡಿಕೆಗಿಂತ ಸರಾಸರಿ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್‌ನಿಂದ ಈವರೆಗೆ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ 666 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ರಾಜ್ಯದಲ್ಲಿ ಈವರೆಗೆ ಕೇವಲ 490 ಮಿ.ಮೀ. ಮಳೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿಯೇ ಶೇ.23ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ ಜುಲೈ ಕೊನೆಯ ವಾರದಲ್ಲಿ ರಾಜ್ಯದಲ್ಲಿ ಒಂದಿಷ್ಟು ಉತ್ತಮ ಮಳೆಯಾಗಿತ್ತು. ಅದಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ, ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಜತೆಗೆ, ನೈಋುತ್ಯ ದಿಕ್ಕಿನಿಂದ ಬೀಸುವ ಗಾಳಿ ಕಡಿಮೆಯಾಗಿ ವಾಯವ್ಯ ದಿಕ್ಕಿನಿಂದ ಬೀಸುತ್ತಿದೆ. ಇದರಿಂದ ರಾಜ್ಯದಲ್ಲಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ.
ಜುಲೈ 3 ವಿಶ್ವದಲ್ಲಿಯೇ ಅತ್ಯಂತ 'ಹಾಟ್' ದಿನ, ಅಮರಿಕ ಸಂಸ್ಥೆ ಘೋಷಣೆ
ಮಡಿಕೇರಿಯಲ್ಲಿ 7 ಡಿಗ್ರಿ ಹೆಚ್ಚಳ:
ಮಲೆನಾಡು ಭಾಗದಲ್ಲಿ ಮುಂಗಾರು ಆರಂಭದಿಂದಲೂ ಭಾರಿ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ಕಳೆದ ಮೂರು ತಿಂಗಳಲ್ಲಿ ಜುಲೈನಲ್ಲಿ ಸ್ವಲ್ಪ ಮಟ್ಟಿನ ಮಳೆಯಾಗಿರುವುದನ್ನು ಬಿಟ್ಟರೆ ಉತ್ತಮ ಮಳೆಯಾಗಿಲ್ಲ. ಹೀಗಾಗಿ, ಮಡಿಕೇರಿಯಲ್ಲಿ 22 ಡಿಗ್ರಿ ಸೆಲ್ಸಿಯಸ್ ವಾಡಿಕೆ ಉಷ್ಣಾಂಶದ ಬದಲು ಈಗ 29 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.
ಉಳಿದಂತೆ ಮಂಡ್ಯದಲ್ಲಿ ವಾಡಿಕೆಗಿಂತ 4.6 ಡಿಗ್ರಿ ಸೆಲ್ಸಿಯಸ್ (ವಾಡಿಕೆ 29.4), ಶಿರಸಿಯಲ್ಲಿ 4.1 (29.7), ಬೆಂಗಳೂರಿನಲ್ಲಿ 3.8 (28), ಚಿಂತಾಮಣಿಯಲ್ಲಿ 3.2 (29.1), ಕಲಬುರಗಿ (31.9) ಹಾಗೂ ಮೈಸೂರಿನಲ್ಲಿ (28.9) ತಲಾ 2.6, ಬೀದರ್ (29.4) ಹಾಗೂ ಚಿತ್ರದುರ್ಗದಲ್ಲಿ (28.3) ತಲಾ 2.2, ವಿಜಯಪುರದಲ್ಲಿ (30.8) 2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ.
ಇದೇ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ ವಾಡಿಕೆಗಿಂತ ಹೆಚ್ಚು ದಾಖಲಾಗಿದೆ. ಬೆಂಗಳೂರು ನಗರ (20.6), ಬೀದರ್ (20.2), ಮಂಡ್ಯದಲ್ಲಿ (20.2) ವಾಡಿಕೆ ಪ್ರಮಾಣಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಾಗುವ ಲಕ್ಷಣ ಇದೆ
ಮಳೆ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕಳೆದ 15 ದಿನದಿಂದ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಪ್ರದೇಶದಿಂದ ಪ್ರದೇಶಕ್ಕೆ ಗರಿಷ್ಠ ಉಷ್ಣಾಂಶದಲ್ಲಿ ವ್ಯತ್ಯಾಸವಿದೆ. ಸರಾಸರಿ ರಾಜ್ಯದಲ್ಲಿ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಿದೆ. ಮಳೆ ಆಗುವ ಲಕ್ಷಣ ಕಾಣಿಸುತ್ತಿದ್ದು, ಮಳೆ ಬಂದರೆ ಉಷ್ಣಾಂಶ ಕಡಿಮೆ ಆಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ತಿಳಿಸಿದ್ದಾರೆ.
ತಾಪ ಹೆಚ್ಚಳ ಏಕೆ?
- ಜೂನ್‌ನಿಂದ ಈವರೆಗೆ ಮುಂಗಾರಿನಲ್ಲಿ 666 ಮಿ.ಮೀ. ಮಳೆ ಆಗಬೇಕಿತ್ತು
- ರಾಜ್ಯದಲ್ಲಿ ಈವರೆಗೆ ಕೇವಲ 490 ಮಿ.ಮೀ. ಮುಂಗಾರು ಮಳೆಯಾಗಿದೆ
- ಜುಲೈ ಕೊನೆ ವಾರ ಉತ್ತಮ ಮಳೆಯಾಗಿತ್ತು. ಆಗಸ್ಟ್‌ನಲ್ಲಿ 23% ಕೊರತೆ
- ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ವಾತಾವರಣದಲ್ಲಿ ತೇವಾಂಶ ಕುಸಿತ
- ನೈಋುತ್ಯ ದಿಕ್ಕಿನಿಂದ ಬೀಸುವ ಗಾಳಿ ಇಳಿಮುಖ. ಹೀಗಾಗಿ ತಾಪಮಾನ ಏರಿಕೆ
ಎಲ್ಲೆಲ್ಲಿ ತಾಪ ಏರಿಕೆ? (ಡಿಗ್ರಿ ಸೆಲ್ಸಿಯಸ್‌ಗಳಲ್ಲಿ) ಪ್ರದೇಶ ಈಗಿನ ತಾಪ ವಾಡಿಕೆ ಏರಿಕೆ
ಮಡಿಕೇರಿ 29 22 7
ಮಂಡ್ಯ 34 29.4 4.6
ಶಿರಸಿ 33.8 29.7 4.1
ಬೆಂಗಳೂರು 31.8 28 3.8
ಚಿಂತಾಮಣಿ 32.3 29.1 3.2
ಕಲಬುರಗಿ 34.5 31.9 2.6
ಮೈಸೂರು 31.5 28.9 2.6
ಬೀದರ್ 31.6 29.4 2.2
ಚಿತ್ರದುರ್ಗ 30.5 28.3 2.2
ವಿಜಯಪುರ 32.8 30.8 2
