ಸರ್ಕಾರಗಳು ಈಗಾಗಲೇ ಡಿಸೇಲ್, ಪೆಟ್ರೋಲ್, ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವುಗಳ ಬೆಲೆಯನ್ನು ಜಾಸ್ತಿ ಮಾಡಿದ್ದು ಜನರು ಬೆಲೆಯ ಬಿಸಿಯಲ್ಲಿ ಬೆಂದು ಹೋಗುತ್ತಿದ್ದಾರೆ. ಇದರ ನಡುವೆ ಕೊಡಗು ಜಿಲ್ಲೆ ಕುಶಾಲನಗರ ಪುರಸಭೆ ಆಸ್ತಿ ಮತ್ತು ವ್ಯಾಪಾರ ಪರವಾನಗಿ ತೆರಿಗೆಯನ್ನು ದುಪ್ಪಟ್ಟು ಮಾಡಿದ್ದು ಸಾವಿರಾರು ಜನರು ಪರದಾಡುವಂತೆ ಮಾಡಿದೆ. ಪುರಸಭೆಯ ಈ ನಡೆಗೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ. 

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.22): ಸರ್ಕಾರಗಳು ಈಗಾಗಲೇ ಡಿಸೇಲ್, ಪೆಟ್ರೋಲ್, ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವುಗಳ ಬೆಲೆಯನ್ನು ಜಾಸ್ತಿ ಮಾಡಿದ್ದು ಜನರು ಬೆಲೆಯ ಬಿಸಿಯಲ್ಲಿ ಬೆಂದು ಹೋಗುತ್ತಿದ್ದಾರೆ. ಇದರ ನಡುವೆ ಕೊಡಗು ಜಿಲ್ಲೆ ಕುಶಾಲನಗರ ಪುರಸಭೆ ಆಸ್ತಿ ಮತ್ತು ವ್ಯಾಪಾರ ಪರವಾನಗಿ ತೆರಿಗೆಯನ್ನು ದುಪ್ಪಟ್ಟು ಮಾಡಿದ್ದು ಸಾವಿರಾರು ಜನರು ಪರದಾಡುವಂತೆ ಮಾಡಿದೆ. ಪುರಸಭೆಯ ಈ ನಡೆಗೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ. 

ಹೌದು ಕೊಡಗು ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಕುಶಾಲನಗರವೇ ಮೊದಲು. ಆದರೆ ಕುಶಾಲನಗರ ಪುರಸಭೆ ಸರ್ಕಾರದ ನಿಯಮಗಳನ್ನು ಮೀರಿ ಆಸ್ತಿ ಮತ್ತು ಉದ್ದಿಮೆ ಪರವಾನಗಿ ತೆರಿಗೆಯನ್ನು ಹೆಚ್ಚಳ ಮಾಡಿದೆ. ಸರ್ಕಾರ ಮಾಡಿರುವ ನಿಯಮದ ಪ್ರಕಾರ ಆಸ್ತಿ ತೆರಿಗೆಯನ್ನು ಶೇ 3 ರಿಂದ 5 ರವರೆಗೆ ಹೆಚ್ಚಿಸಬಹುದು. ಆದರೆ ಕುಶಾಲನಗರ ಪುರಸಭೆಯಿಂದ ಅದನ್ನು ಶೇ 50 ರಿಂದ 100 ರಷ್ಟು ಹೆಚ್ಚಿಸಲಾಗಿದೆ. ಅಂದರೆ ಕಳೆದ ಬಾರಿ 2000 ಸಾವಿರ ಇದ್ದ ಆಸ್ತಿ ತೆರಿಗೆಯನ್ನು ಈ ಬಾರಿ ಕೆಲವರಿಗೆ 3 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಅಂದರೆ ಶೇ 50 ರಷ್ಟು ಹೆಚ್ಚಳ ಮಾಡಲಾಗಿದೆ. 

ಇನ್ನು ಕೆಲವರಿಗೆ ಶೇ 100 ರಷ್ಟು ಹೆಚ್ಚಳ ಅಂದರೆ ಒನ್ ಟು ಡಬ್ಬಲ್ ಹೆಚ್ಚಿಸಲಾಗಿದೆ. ಅರ್ಥಾತ್ 4 ಸಾವಿರ ಮಾಡಲಾಗಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬರೋಬ್ಬರಿ 9950 ಆಸ್ತಿಗಳಿದ್ದು, ಇಷ್ಟು ಜನರು ಡಬ್ಬಲ್ ತೆರಿಗೆ ಭರಿಸಲು ಪರದಾಡಬೇಕಾಗಿದೆ. ಅದೇ ರೀತಿ ಉದ್ದಿಮೆ ಪರವಾನಗಿ ತೆರಿಗೆಯನ್ನು ಸಾಕಷ್ಟು ಹೆಚ್ಚಳ ಮಾಡಲಾಗಿದ್ದು ವ್ಯಾಪಾರೋದ್ಯಮಿಗಳು ಕಣ್ಣುಬಾಯಿ ಬಿಡುವಂತೆ ಆಗಿದೆ. ಇದು ಕೇವಲ ಹೊಸ ಪರವಾನಗಿ ಪಡೆಯುವುದಕ್ಕೆ ಅಷ್ಟೇ ಅಲ್ಲ, ಹಳೆಯ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳುವುದಕ್ಕೂ ಅಷ್ಟೇ ಪ್ರಮಾಣದ ತೆರಿಗೆಯನ್ನು ಭರಿಸಬೇಕಾಗಿದೆ. 

ಇದನ್ನೂ ಓದಿ: ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ ಮಡಿಕೇರಿಯ ಕೂರ್ಗ್ ವಿಲೇಜ್: ವಿಫಲಗೊಂಡ ಪ್ರವಾಸಿ ತಾಣ

ಕಳೆದ ಬಾರಿ ಉದ್ದಿಮೆ ಪರವಾನಗಿಗೆ 1500 ರೂಪಾಯಿ ಇದ್ದರೆ, ಈ ಬಾರಿ 2 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅಂದರೆ ಶೇ 35 ರಿಂದ 40 ರಷ್ಟು ಹೆಚ್ಚಳ ಮಾಡಲಾಗಿದೆ. ಇದೆಲ್ಲವೂ ನಿಯಮ ವಿರುದ್ಧ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಇಷ್ಟೊಂದು ತೆರಿಗೆ ಹೆಚ್ಚಳ ಮಾಡಿರುವುದು ಅವೈಜ್ಞಾನಿಕ. ಯಾವ ಉದ್ದೇಶದಿಂದ ಇಷ್ಟು ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಇದೆಲ್ಲವೂ ಜನರಿಗೆ ತೊಂದರೆ ಕೊಡುವ ಉದ್ದೇಶವಲ್ಲವೇ ಎಂದು ಪ್ರಶ್ನಿಸಿದೆ. 

ಸರ್ಕಾರವೇ ಶೇ 3 ರಿಂದ 5 ರಷ್ಟು ತೆರಿಗೆಯನ್ನು ಹೆಚ್ಚಿಸಬಹುದು ಎಂಬ ನಿಯಮ ರೂಪಿಸಿದ್ದರೂ ಸ್ಥಳೀಯ ಆಡಳಿತ ಮಾತ್ರ ಇಷ್ಟೊಂದು ತೆರಿಗೆ ವಿಧಿಸಿರುವುದು ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಪುರಸಭೆ ಆಯುಕ್ತರಾದ ಗಿರೀಶ್ ಅವರನ್ನು ಕೇಳಿದರೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿಲ್ಲ. ಉದ್ದಿಮೆ ಪರವಾನಗಿ ತೆರಿಗೆಯನ್ನು ಶೇ 10 ರಷ್ಟು ಮಾತ್ರವೇ ಹೆಚ್ಚಳ ಮಾಡಲಾಗಿದೆ. ಕೆಲವರಿಗೆ ಮಾತ್ರ ಶೇ 15 ರಿಂದ 20 ರಷ್ಟು ಹೆಚ್ಚಳವಾಗಿರಬಹುದು ಅದನ್ನು ಸರಿಪಡಿಸುತ್ತೇವೆ ಎಂಬ ಸಬೂಬು ಹೇಳಿದ್ದಾರೆ. 

ಇದನ್ನೂ ಓದಿ: ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ; ಕೆಜಿ ಬೋಪಯ್ಯ ಕಿಡಿ

ಒಟ್ಟಿನಲ್ಲಿ ಒಂದೆಡೆ ರಾಜ್ಯ, ಕೇಂದ್ರ ಸರ್ಕಾರಗಳು ಎಲ್ಲಾ ವಸ್ತು, ಸೇವೆಗಳಿಗೂ ತೆರಿಗೆ ವಿಧಿಸಿ ಜನರನ್ನು ಹೈರಾಣಾಗಿಸುತ್ತಿದ್ದರೆ, ಸ್ಥಳೀಯ ಆಡಳಿತಗಳು ಇಷ್ಟೊಂದು ತೆರಿಗೆ ವಸೂಲಿ ಮಾಡುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.