ತಮಿಳುನಾಡಿಗೂ ಮೇಕೆದಾಟು ಡ್ಯಾಂ ಲಾಭ: ಡಿ.ಕೆ.ಶಿವಕುಮಾರ್
ನಮಗೇನೂ ತಮಿಳುನಾಡಿನ ಮೇಲೆ ದ್ವೇಷ ಮಾಡುವ, ಯುದ್ಧ ಮಾಡುವ ಉದ್ದೇಶವಿಲ್ಲ. ಅಲ್ಲಿರುವವರೂ ನಮ್ಮ ಅಣ್ಣ-ತಮ್ಮಂದಿರೆ. ನಮಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ. ಸಮುದ್ರಕ್ಕೆ ಹೋಗುವ ನೀರು ತಡೆದು ಅದನ್ನು ಕಾವೇರಿ ಭಾಗದ ಜನರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು(ಜೂ.02): ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರು ಸಂಗ್ರಹಿಸಿ ಬಳಕೆ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ನಮ್ಮ ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಹಾಗಾಗಿ ತಮಿಳುನಾಡಿನವರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೇಕೆದಾಟು ಯೋಜನೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ತಮ್ಮ ವಿರುದ್ಧವೂ ಹರಿಹಾಯ್ದಿದ್ದ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ನಮಗೇನೂ ತಮಿಳುನಾಡಿನ ಮೇಲೆ ದ್ವೇಷ ಮಾಡುವ, ಯುದ್ಧ ಮಾಡುವ ಉದ್ದೇಶವಿಲ್ಲ. ಅಲ್ಲಿರುವವರೂ ನಮ್ಮ ಅಣ್ಣ-ತಮ್ಮಂದಿರೆ. ನಮಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ. ಸಮುದ್ರಕ್ಕೆ ಹೋಗುವ ನೀರು ತಡೆದು ಅದನ್ನು ಕಾವೇರಿ ಭಾಗದ ಜನರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಕಾವೇರಿ ನದಿಯ ಅಣೆಕಟ್ಟುಗಳ ಬೀಗ ಕೇಂದ್ರ ಸರ್ಕಾರದ ಕೈಯಲ್ಲಿದೆ. ಯಾವಾಗ ಎಷ್ಟುನೀರು ಬಿಡಬೇಕು ಎಂದು ಅವರು ತೀರ್ಮಾನಿಸಿ ಬಿಡುತ್ತಾರೆ ಎಂದರು. ಇದು ನಮ್ಮ ರಾಜ್ಯದ ಯೋಜನೆ. ಇದರಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆಯೇ ಹೊರತು ಯಾವುದೇ ಅನಾನುಕೂಲ ಆಗುವುದಿಲ್ಲ ಎಂದರು.
ಡಿಕೆಶಿ ಮೇಕೆದಾಟು ಹೇಳಿಕೆ: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಎಐಎಡಿಎಂಕೆ
ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸುವುದರಿಂದ ಅವರಿಗೆ ಆಗುವ ತೊಂದರೆ ಏನು? ನಮ್ಮಲ್ಲಿ ನೀರು ಸಂರಕ್ಷಣೆ ಮಾಡಿಕೊಂಡು ಕುಡಿಯುವ ನೀರು ಪೂರೈಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹೀಗಾಗಿ ತಮಿಳುನಾಡಿನವರು ಆತಂಕಪಡುವ ಅಗತ್ಯವಿಲ್ಲ. ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ. ತಮಿಳುನಾಡಿನವರಿಗೂ ಹೃದಯ ಶ್ರೀಮಂತಿಕೆ ಇರಲಿ. ನಾವು ಜಗಳವಾಡಿ ಕೋರ್ಟು- ಕಚೇರಿ ಅಲೆದದ್ದು ಸಾಕು. ತಮಿಳುನಾಡಿನ ರೈತರಿಗೂ ಅನುಕೂಲವಾಗುವ ಈ ಯೋಜನೆಗೆ ಸೌಹಾರ್ದತೆಯಿಂದ ಸಹಕಾರ ನೀಡಲಿ ಎಂದರು.