ಹಿಜಾಬ್‌ಗಿಂತ ಶಿಕ್ಷಣದ ಅಗತ್ಯ ಅರಿತ ತಬಸ್ಸುಮ್ ಶೇಖ್ ಇಂದು ರಾಜ್ಯಕ್ಕೆ ಟಾಪರ್!
12 ನೇ ತರಗತಿಯ ಪಿಯುಸಿ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಟಾಪರ್‌ಗಳಲ್ಲಿ ಕಾಣಿಸಿಕೊಂಡಿರುವ ಪ್ರಮುಖ ಹೆಸರು ತಬಸ್ಸುಮ್ ಶೇಖ್. 600 ರಲ್ಲಿ 593 ಅಂಕಗಳಿಸಿರುವ ತಬಸ್ಸುಮ್ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಬೆಂಗಳೂರು (ಏ.26): ದ್ವಿತೀಯ ಪಿಯುಸಿ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ರಾಜ್ಯದ ಟಾಪರ್‌ಗಳ ಲಿಸ್ಟ್ ಕೂಡ ಪ್ರಕಟವಾಗಿದೆ. ಫಲಿತಾಂಶ ಘೋಷಣೆಯ ಜೊತೆಗೆ ಅಧಿಕಾರಿಗಳು ಟಾಪರ್‌ಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾಣಿಸಿಕೊಂಡಿರುವ ಪ್ರಮುಖ ಹೆಸರು ತಬಸ್ಸುಮ್ ಶೇಕ್. ಕಲಾ ವಿಭಾಗದಲ್ಲಿ 600ಕ್ಕೆ 593 ಅಂಕಗಳನ್ನು ಸಂಪಾದಿಸುವ ಮೂಲಕ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಮ್ಮ ಸಾಧನೆಯ ಕುರಿತಾಗಿ ಇಂಡಿಯಾ ಟುಡೆ ವೆಬ್‌ಸೈಟ್‌ಗೆ ಮಾತನಾಡಿರುವ ತಬಸ್ಸುಮ್ ಶೇಖ್, ಹಿಜಾಬ್‌ಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ತೀರ್ಮಾನದ ಬಗ್ಗೆ ತಿಳಿಸಿದರು. 'ಹಿಜಾಬ್ ನಿಷೇಧದ ನಿರ್ಧಾರ ತಿಳಿದಾಗ ನನ್ನ ಪೋಷಕರು ನನಗೆ ಈ ಆದೇಶವನ್ನು ಪಾಲನೆ ಮಾಡುವಂತೆ ತಿಳಿಸಿದರು. ನಾನು ಎರಡು ವಾರಗಳ ಕಾಲ ಕಾಲೇಜಿಗೆ ಹೋಗಿರಲಿಲ್ಲ. ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿ ನಾನಿದ್ದೆ' ಎಂದು ಟಾಪರ್ ಆಗಿರುವ ತಬಸ್ಸುಮ್ ತಿಳಿಸಿದ್ದಾರೆ. ಅದಾದ ಬಳಿಕ ನನ್ನ ಪಾಲಕರು, ನಾನು ಕಾಲೇಜಿಗೆ ಹೋಗಲೇಬೇಕು ಎಂದು ಒತ್ತಾಯ ಮಾಡಿದರು.
ನಾನು ಶಿಕ್ಷಣ ಪಡೆದಲ್ಲಿ ಮಾತ್ರವೇ ಭವಿಷ್ಯದಲ್ಲಿ ಇಂಥ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತದೆ ಎನ್ನುವ ಅರಿವು ಮೂಡಿಸಿದರು ಎಂದು ಆಕೆ ಹೇಳಿದ್ದಾರೆ. ಒಟ್ಟಾರೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ನನ್ನ ಪಾಲಿಗೆ ಕನಸು ನನಸಾದ ಕ್ಷಣ ಎಂದಿದ್ದಾರೆ. ನಾನು ಐದನೇ ವರ್ಷದಿಂದ ಹಿಜಾಬ್ ಧರಿಸುತ್ತಿದ್ದೇನೆ. ಇಂದು ಹಿಜಾಬ್ ನನ್ನ ಐಡೆಂಟಿಟಿಯ ಭಾಗವಾಗಿದೆ ಎಂದಿದ್ದಾರೆ.
ತಬಸ್ಸುಮ್ ಶೇಖ್‌ಗೆ ಶಿಕ್ಷಣ ಪೂರೈಸುವಲ್ಲಿ ಬೆಂಬಲ ನೀಡಿದ್ದ ಆಕೆಯ ಹೆತ್ತವರು. ಕಾಲೇಜಿನ ಹೊರಗೆ ಹಿಜಾಬ್ ಧರಿಸುತ್ತಿದ್ದ ಆಕೆ, ತರಗತಿಗೆ ಹೋಗುವಾಗ ಹಿಜಾಬ್ ತೆಗೆದು ಹೋಗುತ್ತಿದ್ದಳು ಎಂದು ತಿಳಿಸಿದ್ದಾರೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು 2 ನೇ ಪಿಯುಸಿ ಫಲಿತಾಂಶಗಳನ್ನು ಪ್ರಕಟಿಸಿದೆ. 7.2 ಲಕ್ಷ ಅಭ್ಯರ್ಥಿಗಳಿಗೆ ಫಲಿತಾಂಶ ಪ್ರಕಟಿಸಲಾಗಿದ್ದು, ಅವರಲ್ಲಿ 5.24 ಮಂದಿ ಉತ್ತೀರ್ಣರಾಗಿದ್ದಾರೆ. 74.67 ರಷ್ಟು, ಒಟ್ಟಾರೆ ಶೇಕಡಾವಾರು ದಾಖಲಾಗಿದೆ.
ಬೆಂಗಳೂರಿನ ನಾಗರತ್ನಮ್ಮ ಮೆದಾ ಕಸ್ತೂರಿರಂಗ ಸೆಟ್ಟಿ ರಾಷ್ಟ್ರೀಯ ವಿದ್ಯಾಲಯ (ಎನ್‌ಎಂಕೆಆರ್‌ವಿ) ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದ ತಬಸ್ಸುಮ್ ಆಯ್ಕೆ ಸ್ಪಷ್ಟವಾಗಿತ್ತು. 'ಕಾಲೇಜಿನಲ್ಲಿ ಹಿಜಾಬ್‌ಅನ್ನು ಧರಿಸದೇ ಇರುವ ನನ್ನ ನಿರ್ಧಾರ ಸ್ಪಷ್ಟವಾಗಿತ್ತು. ಶಿಕ್ಷಣ ನನ್ನ ಮೊದಲ ಆಯ್ಕೆಯಾಗಿತ್ತು. ಶಿಕ್ಷಣಕ್ಕಾಗಿ ನಾವು ಕೆಲವೊಂದು ತ್ಯಾಗಗಳನ್ನು ಮಾಡಬೇಕಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಇರಾನ್‌ನಲ್ಲಿ ಹೊಸ ಕಾನೂನು, ಹಿಜಾಬ್ ಧರಿಸದಿದ್ರೆ 49 ಲಕ್ಷ ದಂಡ, ಇಂಟರ್ನೆಟ್ ಕಟ್!
ಕಳೆದ ವರ್ಷ ರಾಜ್ಯದಲ್ಲಿ ಹಿಜಾಬ್ ಬ್ಯಾನ್ ಕುರಿತಾದ ವಿವಾದದಿಂದ ವಿಚಲಿತಳಾಗಿದ್ದು ನಿಜ ಎಂದ ತಬಸ್ಸುಮ್, ಈ ವೇಳೆ ನನಗೆ ನನ್ ಶಿಕ್ಷಣದ ಕುರಿತಾಗಿಯೇ ಹೆಚ್ಚಿನ ಆತಂಕವಿತ್ತು. ಅಲ್ಲಿಯವರೆಗೂ ನಾನು ಹಿಜಾಬ್ ಧರಿಸಿಕೊಂಡೇ ಹೋಗುತ್ತಿದ್ದೆ ಎಂದಿದ್ದಾರೆ. 'ಸರ್ಕಾರದ ಆದೇಶ ಜಾರಿಯಾದ ಬೆನ್ನಲ್ಲೇ ನಮಗೆ ವಿಚಾರ ಕ್ಲಿಯರ್ ಆಗಿತ್ತು. ಈ ನೆಲದ ಕಾನೂನು ಪಾಲಿಸಬೇಕು ಅನ್ನೋದು ನನ್ನ ನಿರ್ಧಾರ. ಪ್ರತಿ ಮಕ್ಕಳಿಗೂ ಶಿಕ್ಷಣ ಅಗತ್ಯ' ಎಂದು ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ತಬಸ್ಸುಮ್ ಅವರ ತಂದೆ ಅಬ್ದುಲ್ ಖೌಮ್ ಶೇಖ್ ಹೇಳಿದ್ದಾರೆ. ಇನ್ನು ಕಾಲೇಜಿನಲ್ಲಿ ಹಿಜಾಬ್‌ಅನ್ನು ತೆಗೆಯಲು ವಿಶೇಷ ಕೋಣೆಯನ್ನು ನೀಡಿದ್ದರು. ಅಲ್ಲಿ ಹಿಜಾಬ್ ತೆಗೆದು ತರಗತಿಗೆ ಹೋಗುತ್ತಿದ್ದೆ ಎಂದು ತಬಸ್ಸುಮ್ ತಿಳಿಸಿದ್ದಾರೆ.
ಪಿಯು ಪರೀಕ್ಷೆಗೆ ಹಿಜಾಬ್ ಧರಿಸಿ ಬರುವಂತಿಲ್ಲ: ಸಚಿವ ನಾಗೇಶ್
ಕ್ಲಿನಿಕಲ್ ಸೈಕಾಲಜಿಸ್ಟ್ ಆಗಬೇಕು ಎನ್ನುವ ತಬಸ್ಸುಮ್, ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾಲಯದಲ್ಲಿ ಮುಂದಿನ ವಿದ್ಯಾಭ್ಯಾಸ ಪೂರೈಸಲು ಯೋಚನೆ ಮಾಡಿದ್ದಾರೆ. ಆಕೆಯ ಅಣ್ಣ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದು ಎಂಟೆಕ್ ಡಿಗ್ರಿ ಓದುತ್ತಿದ್ದಾರೆ.