ಗುಜರಾತ್ ವಾಹನಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ (FC) ನೀಡಿದ ಕೋರಮಂಗಲ ಆರ್.ಟಿ.ಒ ಅಧಿಕಾರಿ ನಿಸಾರ್ ಅಹಮದ್ ಅಮಾನತು. ಈ ಭ್ರಷ್ಟಾಚಾರವನ್ನು ಸುವರ್ಣ ನ್ಯೂಸ್ ಸಾಕ್ಷಿ ಸಮೇತ ಬಯಲಿಗೆಳೆದ ನಂತರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ. ಈ ಹಗರಣದಿಂದಾಗಿ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಎದುರಾಗಿದೆ.

ಬೆಂಗಳೂರು (ಜ.21): ರಾಜ್ಯ ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರದ ಜಾಲವೊಂದನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಸಾಕ್ಷಿ ಸಮೇತ ಬಯಲಿಗೆಳೆದ ಬೆನ್ನಲ್ಲೇ, ಸರ್ಕಾರ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಗುಜರಾತ್ ಮೂಲದ ವಾಹನಗಳು ಕರ್ನಾಟಕಕ್ಕೆ ಬರದಿದ್ದರೂ, ಅವುಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ (FC) ನೀಡಿದ್ದ ಕೋರಮಂಗಲ ಆರ್.ಟಿ.ಒ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಸಾರಿಗೆ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಏನಿದು ಹಗರಣ? ಕರ್ನಾಟಕದ ಮಾನ ಹರಾಜು!

ಸಾಮಾನ್ಯವಾಗಿ ಯಾವುದೇ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಮೊದಲು ಆರ್.ಟಿ.ಒ ಅಧಿಕಾರಿಗಳು ಆ ವಾಹನವನ್ನು ಖುದ್ದಾಗಿ ಪರಿಶೀಲಿಸಬೇಕು. ವಾಹನ ರಸ್ತೆಯಲ್ಲಿ ಸಂಚರಿಸಲು ಯೋಗ್ಯವಾಗಿದೆಯೇ? ತುರ್ತು ನಿರ್ಗಮನ ಮತ್ತು ಸುರಕ್ಷತಾ ಸಾಧನಗಳು ಸರಿಯಾಗಿವೆಯೇ ಎಂದು ತಪಾಸಣೆ ನಡೆಸಬೇಕು. ಆದರೆ, ಕೋರಮಂಗಲ ಆರ್.ಟಿ.ಒ ಕಚೇರಿಯಲ್ಲಿ ಹಣದ ಆಸೆಗೆ ಬಿದ್ದು ಅಧಿಕಾರಿಗಳು ನಿಯಮವನ್ನೇ ಗಾಳಿಗೆ ತೂರಿದ್ದಾರೆ.

ಗುಜರಾತ್‌ನಲ್ಲಿ ಸಂಚರಿಸುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಮತ್ತು ಶಾಲಾ ಬಸ್‌ಗಳು ಬೆಂಗಳೂರಿಗೆ ಬರದಿದ್ದರೂ, ಅವುಗಳನ್ನು ಖುದ್ದಾಗಿ ನೋಡಿದ್ದೇವೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿದೆ.

ಗುಜರಾತ್ ಅಧಿಕಾರಿಗಳಿಂದಲೇ ಬಯಲಾದ ಬಣ್ಣ

ಈ ಭ್ರಷ್ಟಾಚಾರದ ಆಳ ಎಷ್ಟು ದೊಡ್ಡದಿದೆ ಎಂದರೆ, ಗುಜರಾತ್ ರಾಜ್ಯದ ಅಧಿಕಾರಿಗಳೇ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2025ರ ಅಕ್ಟೋಬರ್ 8ರಂದು ಒಂದೇ ದಿನ ಸುಮಾರು 20 ವಾಹನಗಳಿಗೆ ಕೋರಮಂಗಲ ಆರ್.ಟಿ.ಒ ಅಧಿಕಾರಿಗಳು ಎಫ್‌ಸಿ ಮಂಜೂರು ಮಾಡಿದ್ದರು. ಆದರೆ, ಅದೇ ಸಮಯದಲ್ಲಿ ಆ ಬಸ್‌ಗಳು ಗುಜರಾತ್‌ನ ಟೋಲ್‌ಗಳಲ್ಲಿ ಸಂಚರಿಸುತ್ತಿದ್ದವು ಎಂಬ ಡಿಜಿಟಲ್ ಸಾಕ್ಷ್ಯಗಳನ್ನು ಗುಜರಾತ್ ಅಧಿಕಾರಿಗಳು ನೀಡಿದ್ದಾರೆ. ಅಂದರೆ, ವಾಹನಗಳು ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ ಇಲ್ಲಿನ ಅಧಿಕಾರಿಗಳು "ಕೈ ಬೆಚ್ಚಗಾದ ತಕ್ಷಣ" ಪ್ರಮಾಣಪತ್ರ ನೀಡಿದ್ದಾರೆ!

ಸುವರ್ಣನ್ಯೂಸ್ ತನಿಖೆ ಮತ್ತು ಬಿಗ್ ಇಂಪ್ಯಾಕ್ಟ್

ರಾಜ್ಯದ ಮಾನವನ್ನು ನೆರೆ ರಾಜ್ಯಗಳಲ್ಲಿ ಹರಾಜು ಹಾಕುತ್ತಿದ್ದ ಈ ಅಧಿಕಾರಿಗಳ ಕೃತ್ಯವನ್ನು ಸುವರ್ಣನ್ಯೂಸ್ ಸಾಕ್ಷಿ ಸಮೇತ ಪ್ರಸಾರ ಮಾಡಿತ್ತು. ಈ ಸುದ್ದಿಯಿಂದ ಎಚ್ಚೆತ್ತ ಸಾರಿಗೆ ಆಯುಕ್ತರು ನಿನ್ನೆ ತುರ್ತು ತನಿಖೆ ನಡೆಸಿದ್ದರು. ತನಿಖೆಯಲ್ಲಿ ನಿಸಾರ್ ಅಹಮದ್ ಅವರ ಕರ್ತವ್ಯ ಲೋಪ ಮತ್ತು ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.

ಬರೀ ಗುಜರಾತ್ ಮಾತ್ರವಲ್ಲದೆ, ಮಹಾರಾಷ್ಟ್ರದ ಸುಮಾರು 400 ವಾಹನಗಳಿಗೂ ಇದೇ ರೀತಿ ಅಕ್ರಮವಾಗಿ ಎಫ್‌ಸಿ ನೀಡಿರುವ ಆತಂಕಕಾರಿ ವಿಷಯ ಈಗ ಬೆಳಕಿಗೆ ಬಂದಿದೆ. ಈ ದಂಧೆಯಿಂದಾಗಿ ರಸ್ತೆಗಿಳಿಯುವ ಅಯೋಗ್ಯ ವಾಹನಗಳಿಂದಾಗಿ ಸಾರ್ವಜನಿಕರ ಜೀವಕ್ಕೆ ಕುತ್ತು ಬರುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.