ಬೆಂಗಳೂರಿನ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿದ್ದ ವಾಹನಗಳಿಗೆ ಭೌತಿಕ ಪರಿಶೀಲನೆ ಇಲ್ಲದೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ (FC) ನೀಡಿರುವ ಬೃಹತ್ ಹಗರಣವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲಿಗೆಳೆದಿದೆ.  

ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ವಿಶೇಷ ತನಿಖಾ ವರದಿ ಬಯಲಿಗೆಳೆದಿದೆ. ಇದು ಸಾಮಾನ್ಯ ಸುದ್ದಿಯಲ್ಲ, ಕರ್ನಾಟಕದ ಪ್ರತಿಯೊಬ್ಬ ನಾಗರಿಕರೂ ತಿಳಿಯಲೇಬೇಕಾದ, ರಾಜ್ಯದ ಮಾನ-ಮರ್ಯಾದೆಗೆ ಧಕ್ಕೆ ತರುವಂತಹ ಗಂಭೀರ ಪ್ರಕರಣವಾಗಿದೆ.

ಹಣ ಕೊಟ್ಟರೆ ಯಾವ ರಾಜ್ಯದ ವಾಹನವಾದರೂ ಫಿಟ್ನೆಸ್ ಸರ್ಟಿಫಿಕೇಟ್ (FC) ಪಡೆಯಬಹುದಾದ ಸ್ಥಿತಿಗೆ ರಾಜ್ಯದ ಕೆಲ ಆರ್‌ಟಿಒ ಕಚೇರಿಗಳು ತಲುಪಿವೆ ಎಂಬ ಆತಂಕಕಾರಿ ಅಂಶಗಳು ಹೊರಬಿದ್ದಿವೆ. “ಕಾಸು ಕೊಟ್ಟರೆ ಸಾಕು – ವಾಹನ ಎಲ್ಲಿದ್ದರೂ ಪರವಾಗಿಲ್ಲ, ಕೂತಲ್ಲೇ ಎಫ್‌ಸಿ ಸಿಗುತ್ತದೆ” ಎಂಬಂತೆ ಕೆಲ ಅಧಿಕಾರಿಗಳು ನಡೆದುಕೊಂಡಿರುವುದು ಈಗ ಸಾಕ್ಷ್ಯಾಧಾರಗಳೊಂದಿಗೆ ಬಹಿರಂಗವಾಗಿದೆ.

ಗುಜರಾತ್‌ನಲ್ಲಿದ್ದ ಬಸ್‌ಗಳಿಗೆ ಬೆಂಗಳೂರಿನಲ್ಲಿ ಫಿಟ್ನೆಸ್ ಸರ್ಟಿಫಿಕೇಟ್!

ಗುಜರಾತ್ ರಾಜ್ಯದಲ್ಲಿದ್ದ ಸುಮಾರು 50 ಖಾಸಗಿ ಹಾಗೂ ಶಾಲಾ ಬಸ್‌ಗಳಿಗೆ, ಬೆಂಗಳೂರು ಕೋರಮಂಗಲ ಆರ್‌ಟಿಒ ಕಚೇರಿಯಿಂದ ಯಾವುದೇ ಸ್ಥಳ ಪರಿಶೀಲನೆ ಇಲ್ಲದೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿದೆ ಎಂಬ ಗಂಭೀರ ಆರೋಪ ಸಾಬೀತಾಗಿದೆ. ನಿಯಮಾನುಸಾರ, ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಟಿಒ ಅಧಿಕಾರಿಗಳು ವಾಹನವನ್ನು ಖುದ್ದಾಗಿ ಪರಿಶೀಲಿಸಬೇಕು. ವಾಹನ ರಸ್ತೆ ಯೋಗ್ಯವಾಗಿದೆಯೇ, ತುರ್ತು ಸಂದರ್ಭಗಳಿಗೆ ಅಗತ್ಯವಿರುವ ಸುರಕ್ಷತಾ ಸಾಧನಗಳಿವೆಯೇ ಎಂಬುದನ್ನು ದೃಢಪಡಿಸಬೇಕಾಗುತ್ತದೆ.

ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಗುಜರಾತ್‌ನಲ್ಲೇ ಇದ್ದ ಬಸ್‌ಗಳಿಗೆ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ಎಫ್‌ಸಿ ನೀಡಲಾಗಿದೆ. ಈ ಅಕ್ರಮವನ್ನು ಪತ್ತೆ ಹಚ್ಚಿದವರು ಸ್ವತಃ ಗುಜರಾತ್ ರಾಜ್ಯದ ಅಧಿಕಾರಿಗಳು. “ವಾಹನಗಳು ನಮ್ಮ ರಾಜ್ಯದಲ್ಲಿದ್ದಾಗ ನೀವು ಹೇಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದಿರಿ?” ಎಂದು ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸಿದ್ದಾರೆ.

ಟೋಲ್ ಸಾಕ್ಷ್ಯ, ಸಮಯ ದಾಖಲೆಗಳಿಂದ ಭ್ರಷ್ಟಾಚಾರ ಸಾಬೀತು

2025ರ ಅಕ್ಟೋಬರ್ 8ರಂದು ಒಂದೇ ದಿನ 20 ಗುಜರಾತ್ ವಾಹನಗಳಿಗೆ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ಖುದ್ದು ಪರಿಶೀಲನೆ ನಡೆಸಲಾಗಿದೆ ಎಂದು ದಾಖಲಿಸಿ ಎಫ್‌ಸಿ ಮಂಜೂರು ಮಾಡಲಾಗಿದೆ. ಆದರೆ ಅದೇ ದಿನ, ಅದೇ ಸಮಯದಲ್ಲಿ ಆ ವಾಹನಗಳು ಗುಜರಾತ್ ರಾಜ್ಯದ ಟೋಲ್ ಗೇಟ್‌ಗಳಲ್ಲಿ ಸಂಚರಿಸುತ್ತಿದ್ದವು ಎಂಬ ದಾಖಲೆಗಳನ್ನು ಗುಜರಾತ್ ಅಧಿಕಾರಿಗಳು ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕೋರಮಂಗಲ ಆರ್‌ಟಿಒ ನೀಡಿದ್ದ ಫಿಟ್ನೆಸ್ ಸರ್ಟಿಫಿಕೇಟ್‌ಗಳನ್ನು ಗುಜರಾತ್ ಸರ್ಕಾರ ರದ್ದುಗೊಳಿಸಿದೆ.

ಮಹಾರಾಷ್ಟ್ರದ 460 ವಾಹನಗಳಿಗೂ ಅಕ್ರಮ FC

ಇದೇ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಮಹಾರಾಷ್ಟ್ರದಲ್ಲಿದ್ದ 400ಕ್ಕೂ ಹೆಚ್ಚು ವಾಹನಗಳಿಗೆ, ಬಳಿಕ ಒಟ್ಟು 460 ವಾಹನಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಥಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಅತ್ಯಂತ ಆತಂಕಕಾರಿ ಅಂಶವೆಂದರೆ, ಕೆಲ ಅಧಿಕಾರಿಗಳು ಕೇವಲ 55 ಸೆಕೆಂಡುಗಳಲ್ಲಿ ಒಂದು ವಾಹನವನ್ನು “ಪರಿಶೀಲನೆ” ಮಾಡಿದಂತೆ ದಾಖಲೆ ಮಾಡಿ ಎಫ್‌ಸಿ ನೀಡಿರುವುದು. ಇದು ನೇರವಾಗಿ ಸಾರ್ವಜನಿಕರ ಜೀವ ಸುರಕ್ಷತೆಗೆ ಧಕ್ಕೆ ತರುವ ಗಂಭೀರ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದ ಉದಾಹರಣೆಯಾಗಿದೆ.

ಬಸ್ ಅಗ್ನಿ ದುರಂತಗಳಿಗೆ ಕಾರಣವೇ ಸಾರಿಗೆ ಇಲಾಖೆ?

ದೇಶದಲ್ಲಿ ಸಾಲು ಸಾಲಾಗಿ ಸಂಭವಿಸುತ್ತಿರುವ ಬಸ್ ಅಗ್ನಿ ದುರಂತಗಳ ಹಿಂದೆ ಇಂತಹ ಅಕ್ರಮ ಫಿಟ್ನೆಸ್ ಸರ್ಟಿಫಿಕೇಟ್‌ಗಳ ಪಾತ್ರ ಇದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ರಸ್ತೆ ಯೋಗ್ಯತೆ ಇಲ್ಲದ ವಾಹನಗಳಿಗೆ ಹಣದಾಸೆಗೆ ಎಫ್‌ಸಿ ನೀಡಿರುವುದು ಭಾರೀ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್,ತನಿಖೆಗೆ ತಂಡ ರಚನೆ

ಈ ಪ್ರಕರಣ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾದ ಬೆನ್ನಲ್ಲೇ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, “ಈ ವಿಚಾರ ಅತ್ಯಂತ ಗಂಭೀರವಾಗಿದೆ. ತನಿಖೆ ನಡೆಸಲು ತಂಡ ರಚಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ಜಂಟಿ ಆಯುಕ್ತೆ ಶೋಭಾ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ. “ಗುಜರಾತ್ ಕಮಿಷನರ್ ನಮ್ಮ ಕಮಿಷನರ್‌ಗೆ ಪತ್ರ ಬರೆದಿದ್ದಾರೆ. ಆಲ್ ಇಂಡಿಯಾ ಪರ್ಮಿಟ್ ಎಲ್ಲೆಂದರಲ್ಲಿ ಮಾಡಬಹುದು, ಆದರೆ ವಾಹನ ಖುದ್ದಾಗಿ ಹಾಜರಿರಬೇಕು. ವಾಹನ ಇಲ್ಲದೇ ಸರ್ಟಿಫಿಕೇಟ್ ನೀಡಿದರೆ ಅದು ತಪ್ಪು” ಎಂದು ಸಚಿವರು ಹೇಳಿದ್ದಾರೆ.

ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಷಣ ಅಮಾನತು

“ತನಿಖೆ ಈಗಾಗಲೇ ಆರಂಭವಾಗಿದೆ. ತಪ್ಪು ಮಾಡಿದ ಆರ್‌ಟಿಒ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಲಾಗುತ್ತದೆ. ನಮ್ಮ ಕಮಿಷನರ್‌ಗೆ ಇಂದೇ ವರದಿ ನೀಡುವಂತೆ ಸೂಚಿಸಿದ್ದೇನೆ” ಎಂದು ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಲ್ಲಿ ಜಿಯೋ ಟ್ಯಾಗಿಂಗ್ ಕಡ್ಡಾಯವಾಗಿದ್ದು, ಜಿಯೋ ಟ್ಯಾಗಿಂಗ್ ಇಲ್ಲದೇ ಎಫ್‌ಸಿ ನೀಡಲು ಅವಕಾಶ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ಸುರಕ್ಷತೆಗೆ ಸರ್ಕಾರದ ಕಟ್ಟುನಿಟ್ಟಿನ ಕ್ರಮ?

ಈ ಪ್ರಕರಣವು ಕೇವಲ ಭ್ರಷ್ಟಾಚಾರದ ಪ್ರಶ್ನೆಯಲ್ಲ, ಸಾರ್ವಜನಿಕರ ಜೀವ-ಸುರಕ್ಷತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ತನಿಖೆ ಯಾವ ಹಂತಕ್ಕೆ ತಲುಪುತ್ತದೆ? ಎಷ್ಟು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ? ಎಂಬುದನ್ನು ರಾಜ್ಯವೇ ಗಮನಿಸುತ್ತಿದೆ.