ಮಂಡ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬದುಕಿಬಂದ ವ್ಯಕ್ತಿ ಹೇಳಿದ ಅನುಭವವ ಎಂತಹ ಕಲ್ಲೆದೆಯನ್ನು ನಡುಗಿಸುವಂತಿದೆ. 

ಮಂಡ್ಯ : ಬಸ್ಸಿನಲ್ಲಿದ್ದವರಲ್ಲಿ ಕೆಲವರು ಅವರವರ ಲೋಕದಲ್ಲಿದ್ದರು, ಇನ್ನು ಕೆಲವರು ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಇದ್ದಕ್ಕಿದ್ದಂತೆ ಗಡ ಗಡ ಶಬ್ದ ಬಂತು. ಏನಾಯ್ತು ಎಂದು ಅರಿಯುವಷ್ಟರಲ್ಲಿ ಬಸ್‌ ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿತು. ಕೊನೆಗೆ ಎಡ ಭಾಗಕ್ಕೆ ಚಲಿಸಿದ ಬಸ್‌ ನೇರವಾಗಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿತು. ಒಂದರೆಕ್ಷಣ ಚೀರಾಟ, ಕೂಗಾಟ ಕೇಳಿಸಿತು. ಆ ನಂತರ ಎಲ್ಲವೂ ಮೌನವಾಯಿತು!

ಪಾಂಡವಪುರ ತಾಲೂಕು ಕನಗನಮರಡಿ ಗ್ರಾಮದಲ್ಲಿ ಸಂಭವಿಸಿದ ಬಸ್‌ ದುರಂತದಲ್ಲಿ ಬದುಕುಳಿದು ಬಂದ ವದೇಸಮುದ್ರ ಗ್ರಾಮದ ಯುವಕ ಗಿರೀಶ್‌ ಆ ಮಹಾ ದುರಂತವನ್ನು ವಿವರಿಸಿತ್ತು ಹೀಗೆ. ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದ ಗಿರೀಶ್‌ ಬಸ್‌ ನೀರಿಗೆ ಬಿದ್ದ ತಕ್ಷಣ ಅದರ ಕಿಟಕಿ ಗಾಜು ಒಡೆದು ಹೊರಬಂದಿದ್ದಾರೆ. ಜತೆಗೆ, ಪಕ್ಕದಲ್ಲಿದ್ದ ತಮ್ಮೂರಿನ ಏಳನೇ ತರಗತಿ ಬಾಲಕ ರಾಹುಲ್‌ನ ಪ್ರಾಣವನ್ನೂ ಉಳಿಸಿ ಸಾಹಸ ಮೆರೆದಿದ್ದಾರೆ.

ದೇವರ ದಯೆ: ‘‘ನಾನು ಬದುಕಿದ್ದೇ ದೇವರ ದಯೆಯಿಂದ. ಬಸ್ಸು ನೀರಿನಲ್ಲಿ ಪೂರ್ಣವಾಗಿ ಮುಳುಗಿದ ಮೇಲೆ ಧೈರ್ಯ ಮಾಡಿ ಕಿಟಕಿ ಗ್ಲಾಸುಗಳನ್ನು ಒಡೆದು ಹೊರಗೆ ಬಂದೆ. ಹಾಗೆ ಬರುವಾಗ ಜೊತೆಯಲ್ಲಿ ಒಬ್ಬ ಬಾಲಕನನ್ನು ಕರೆತಂದೆ. ನಮ್ಮಿಬ್ಬರ ಹಣೆಯಲ್ಲಿ ಸಾವನ್ನು ಗೆಲ್ಲುವುದೆಂದೇ ಬರೆದಿದ್ದಂತೆ ತೋರುತ್ತದೆ.

ಪಾಂಡವಪುರದಲ್ಲಿ ನಮ್ಮೂರಿಗೆ ಬಸ್‌ ಹತ್ತಿದ್ದೆ. ಸುಮಾರು 12.15ರ ವೇಳೆಗೆ ಬಸ್‌ ಕನಗನಮರಡಿ ಗ್ರಾಮದಿಂದ ಹೊರಟಿತ್ತು. ಯಾರಿಗೂ ಮುಂದೆ ನಡೆಯಬಹುದಾದ ಮಹಾ ದುರಂತದ ಸಣ್ಣ ಮುನ್ಸೂಚನೆಯೂ ಇರಲಿಲ್ಲ. ರಸ್ತೆ ಕಿರಿದಾಗಿತ್ತು ಮತ್ತು ಸಂಪೂರ್ಣ ಅದ್ವಾನಗೊಂಡಿತ್ತು. ಆದರೂ ಬಸ್‌ ವೇಗವಾಗಿಯೇ ಓಡುತ್ತಿತ್ತು. ಇಳಿಜಾರಲ್ಲಿ ಸಾಗುತ್ತಿದ್ದಂತೆ ಬಸ್ಸಿನಲ್ಲಿ ಏಕಾಏಕಿ ಶಬ್ದ ಕೇಳಲಾರಂಭಿಸಿತ್ತು. ಅದೇನಾಯ್ತೋ ಏನೋ, ಇದಕ್ಕಿದ್ದಂತೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಎಡಭಾಗಕ್ಕೆ ಚಲಿಸಲಾರಂಭಿತು. ಏನಾಯ್ತು ಎಂದು ಊಹಿಸುವ ಮೊದಲೇ ಏಕಾಏಕಿ ನಾಲೆಗೆ ಧುಮುಕಿಬಿಟ್ಟಿತು.

ಬಸ್ಸಿನಲ್ಲಿದ್ದವರು ಚೀರುತ್ತಿದ್ದರು, ಕೂಗುತ್ತಿದ್ದರು. ನೋಡನೋಡುತ್ತಿದ್ದಂತೆ ಬಸ್‌ ನೋಡನೋಡುತ್ತಿದ್ದಂತೆ ನಾಲೆಯಲ್ಲಿ ಮುಳುಗಲಾರಂಭಿಸಿತು. ನಾನು ಧೈರ್ಯ ಮಾಡಿ ಗ್ಲಾಸ್‌ ಒಡೆದೆ, ಹಾಗೆ ಬರುವಾಗ ಪಕ್ಕದಲ್ಲಿದ್ದ ನಮ್ಮ ಗ್ರಾಮದ 7ನೇ ತರಗತಿ ಓದುತ್ತಿದ್ದ ರೋಹಿತ್‌ ಎಂಬ ಬಾಲಕನನ್ನು ಹೊರಗೆಳೆದುಕೊಂಡು ಬಂದೆ.

ಹಿಂತಿರುಗಿ ನೋಡಿದರೆ ನನ್ನ ಕಣ್ಣೆದುರಿಗೆ ಜೊತೆಯಲ್ಲಿದ್ದವರು ಜಲಸಮಾಧಿಯಾಗುತ್ತಿದ್ದರು. ಹೊರ ಬರುತ್ತಿದ್ದಂತೆ ಪಕ್ಕದ ಕನಗನಮರಡಿ ಗ್ರಾಮಸ್ಥರು ಓಡಿ ಬಂದು ರಕ್ಷಣೆಗೆ ಮುಂದಾದರು. ದೇವರ ದಯೆಯಿಂದ ನಾನು ಪ್ರಾಣಾಪಾಯದಿಂದ ಪಾರಾದೆ. ಆ ಕ್ಷಣವನ್ನು ನೆನಪು ಮಾಡಿಕೊಂಡರೆ ಈಗಲೂ ಎದೆ ಝಲ್‌ ಎನಿಸುತ್ತದೆ. ಘಟನೆ ಬಳಿಕ ಸ್ವಲ್ಪ ಚೇತರಿಸಿಕೊಂಡು ನನ್ನ ಗ್ರಾಮಕ್ಕೆ ಬಂದ ನಂತರ ಅನೇಕರು ಬಸ್‌ ದುರಂತವನ್ನು ನೋಡಲು ಓಡಿ ಬಂದರು.