ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ತಾತ್ಕಾಲಿಕ ರಿಲೀಫ್: ಹೈಕೋರ್ಟ್ ಅಮಾನತು ಆದೇಶ ತಡೆಹಿಡಿದ ಸುಪ್ರೀಂ
ಹಾಸನ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ 4 ವಾರಗಳವರೆಗೆ ತಾತ್ಕಾಲಿಕ ತಡೆಯನ್ನು ನೀಡಿದೆ.

ಬೆಂಗಳೂರು (ಸೆ.18): ಲೋಕಸಭಾ ಚುನಾವಣೆಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆಂಬ ಆರೋಪದಡಿ ಹಾಸನ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ 4 ವಾರಗಳವರೆಗೆ ತಾತ್ಕಾಲಿಕ ತಡೆಯನ್ನು ನೀಡಿದೆ.
ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆಗಳನ್ನು ನೀಡಿ ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಎಂದು ಸೋತ ಅಭ್ಯರ್ಥಿ ಎ. ಮಂಜು ದೂರು ದಾಖಲಿಸಿದ್ದರು. ಈ ಪ್ರಕರಣದ ಕುರಿತು ಸುಧೀರ್ಘ ವಿಚಾರಣೆ ಮಾಡಿದ ಕರ್ನಾಟಕ ಹೈಕೋರ್ಟ್ ಸೆಪ್ಟಂಬರ್ 1 ರಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು. ಇನ್ನು ಅಮಾನತು ಆದೇಶಕ್ಕೆ ತಾತ್ಕಾಲಿಕ ತಡೆ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದರೂ, ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಹಾಸನ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದ ಪ್ರಜ್ವಲ್ ರೇವಣ್ಣಗೆ ಮತ್ತೆ ಶಾಕ್ ಕೊಟ್ಟ ಹೈಕೋರ್ಟ್
ಹೈಕೋರ್ಟ್‌ನಲ್ಲಿ ಸೋಲನುಭವಿಸಿ ಸಂಸದ ಸ್ಥಾನದಿಂದ ಅಸಿಂಧುಗೊಂಡ ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಈ ಅರ್ಜಿಯನ್ನು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ನಿಂದ ಹೈಕೋರ್ಟ್ ಅಸಿಂಧುಗೊಳಿಸಿದ್ದ ಆದೇಶವನ್ನು 4 ವಾರಗಳವರೆಗೆ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಆದರೆ, ಕೆಲವು ಷರತ್ತುಗಳನ್ನು ವಿಧಿಸಿದೆ. ಲೋಕಸಭೆಯಲ್ಲಿ ಅಧಿವೇಶನದಲ್ಲಿ ಸಂಸದ ಪ್ರಜ್ವಲ್ ರೇವಣ್ಣಗೆ ಯಾವುದೇ ವೋಟಿಂಗ್ ಪವರ್ ಇರುವುದಿಲ್ಲ. ಸರ್ಕಾರದಿಂದ ಬರುವ ಭತ್ಯೆಗಳನ್ನ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠವು ಆದೇಶಿಸಿದೆ.
ನಾಳೆಯಿಂದ ಲೋಸಕಭಾ ವಿಶೇಷ ಅಧಿವೇಶನಕ್ಕೆ ಹಾಜರು: ಇಂದಿನಿಂದ ಲೋಕಸಭೆಯ ವಿಶೇಷ ಅಧಿವೇಶನವನ್ನು ಆರಂಭಿಸಲಾಗಿದೆ. ಹಳೆಯ ಸಂಸತ್ ಭವನದಲ್ಲಿ ಕೊನೆಯದಾಗಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಾಳೆಯಿಂದ ಅಧಿವೇಶನವನ್ನು ಹೊಸ ಸಂಸತ್ ಭವನದಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಸಂಸದ ಸ್ಥಾನದಿಂದ ಅಸಿಂಧುಗೊಂಡಿದ್ದ ಕಾರಣದಿಂದಾಗಿ ಪ್ರಜ್ವಲ್ ರೇವಣ್ಣ ಮೊದಲ ದಿನದ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ನಾಳೆಯಿಂದ ಹೊಸ ಸಂಸತ್ ಭವನದಲ್ಲಿ ಅಧಿವೇಶನ ನಡೆಯಲಿದ್ದು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪ್ರಜ್ವಲ್ ರೇವಣ್ಣ ಅಧಿವೇಶನಕ್ಕೆ ಹಾಜರಾಗಬಹುದು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಸಿಂಧುಗೊಂಡ ಹಾಸನ ಸಂಸದ ಪ್ರಜ್ವಲ್ ರೇವಣ್ಣ
ಆಟಕ್ಕುಂಟು ಲೆಕ್ಕಕ್ಕಿಲ್ಲದ ಪ್ರಜ್ವಲ್ ರೇವಣ್ಣ: ಸುಪ್ರೀಂ ಕೋರ್ಟ್ ಆದೇಶದಲ್ಲಿ ಸಂಸದ ಸ್ಥಾನ ಅಸಿಂಧುಗೊಂಡಿರುವುದನ್ನು ಮಾತ್ರ ತಡೆಹಿಡಿದು ಆದೇಶ ಹೊರಡಿಸಿದೆ. ಆದರೆ, ಲೋಕಸಭೆಯಲ್ಲಿ ಒಬ್ಬ ಸಂಸದನಿಗೆ ಕೆಲವು ವಿಶೇಷ ಅರ್ಹತೆಗಳನ್ನು ಮೊಟಕುಗೊಳಿಸಿದೆ. ಅಂದರೆ, ಲೋಕಸಭಾ ವಿಶೇಷ ಅಧಿವೇಶನದಲ್ಲಿ ನಡೆಯುವ ಯಾವುದೇ ಕಾಯ್ದೆ ಅಥವಾ ಕಾನೂನುಗಳಿಗೆ ಮತವನ್ನು ಹಾಕುವ ಅಧಿಕಾರವನ್ನು ಕೊಟ್ಟಿಲ್ಲ. ಜೊತೆಗೆ, ಸರ್ಕಾರದಿಂದ ಒಬ್ಬ ಸಂಸದನಿಗೆ ನೀಡಲಾಗುವ ವಾಹನ, ವಸತಿ ಹಾಗೂ ಇತ್ತಾದಿ ಭತ್ಯೆಗಳನ್ನು ಪಡೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರಿಂದ ಲೋಕಸಭೆಯಲ್ಲಿ ಸಂಸದನ ಸ್ಥಾನದಲ್ಲಿ ಕುಳಿತುಕೊಳ್ಳಬಹುದು ಹೊರತು ಬೇರಾವ ಹಕ್ಕು ಚಲಾಯಿಸುವಂತಿಲ್ಲ. ಆದ್ದರಿಂದ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣನ ಸ್ಥಾನ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.