Asianet Suvarna News Asianet Suvarna News

ತಮಿಳುನಾಡಿಗೆ 24000 ಕ್ಯುಸೆಕ್‌ ಕಾವೇರಿ ನೀರು ಬಿಡೋದು ಅಸಾಧ್ಯ: ಸುಪ್ರೀಂ

ತಮಿಳುನಾಡು ಕಾವೇರಿ ಕ್ಯಾತೆ ತಕ್ಷಣಕ್ಕೆ ಒಪ್ಪದ ಸುಪ್ರೀಂ. 24000 ಕ್ಯುಸೆಕ್‌ ಬಿಡಲು ಅಸಾಧ್ಯ,  ಕರ್ನಾಟಕದ ಬಳಿ  ವರದಿ ಕೇಳಿ ಸೆ.1ಕ್ಕೆ ಮತ್ತೆ ವಿಚಾರಣೆ ಮಾಡುವುದಾಗಿ ಹೇಳಿದ ಸುಪ್ರೀಂ. ಕೆಆರ್‌ಎಸ್‌ ನೀರು ಬಿಡುಗಡೆ ಸ್ಥಗಿತ.

Supreme Court refuses order on Tamil Nadu plea to release Cauvery water gow
Author
First Published Aug 26, 2023, 11:55 AM IST

ನವದೆಹಲಿ (ಆ.26): ಮಳೆ ಕೊರತೆಯ ಈ ಸಂಕಷ್ಟದ ಸಮಯದಲ್ಲೂ ನಿತ್ಯ 24 ಸಾವಿರ ಕ್ಯುಸೆಕ್‌ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ ಮಾಡಿದ್ದ ಮನವಿಯನ್ನು ತಕ್ಷಣಕ್ಕೆ ಪರಿಶೀಲಿಸಲು ಸುಪ್ರೀಂ ಕೋರ್ಚ್‌ ನಿರಾಕರಿಸಿದೆ. ಈ ಸಂಬಂಧ ತಜ್ಞರ (ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ) ವರದಿ ನೋಡದೆ ಯಾವುದೇ ಆದೇಶ ನೀಡುವುದಿಲ್ಲ ಎಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೇಳಿರುವ ಸುಪ್ರೀಂ ಕೋರ್ಚ್‌, ಅರ್ಜಿಯ ಮುಂದಿನ ವಿಚಾರಣೆಯನ್ನು ಸೆ.1ಕ್ಕೆ ನಿಗದಿ ಮಾಡಿದೆ.

ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ಸುಪ್ರೀಂ ಕೋರ್ಚ್‌ನ ನ್ಯಾ.ಬಿ.ಆರ್‌.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ)ದಿಂದ ಈ ಸಂಬಂಧ ವರದಿ ಕೇಳಿತು. ಆಗ ಮಧ್ಯಪ್ರವೇಶ ಮಾಡಿದ ಹೆಚ್ಚುವರಿ ಅಟಾರ್ನಿ ಜನರಲ್‌ ಐಶ್ವರ್ಯ ಬಾಟಿ, ಸೋಮವಾರ ಸಿಡಬ್ಲ್ಯುಎಂಎ ಸಭೆ ನಿಗದಿ ಮಾಡಿದೆ ಎಂದು ಪೀಠದ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಡಬ್ಲ್ಯುಎಂಎಗೆ ವಸ್ತುಸ್ಥಿತಿ ಕುರಿತು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಮೇಕೆದಾಟು ಅಣೆಕಟ್ಟು ನಿರ್ಮಾಣವಾಗಿದ್ದರೆ ಕಾವೇರಿ ನೀರಿನ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಡಿ.ಕೆ. ಶಿವಕುಮಾರ್‌

ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಶಾಮ್‌ ದಿವಾನ್‌, ಕರ್ನಾಟಕಕ್ಕೆ ಇದು ಮಳೆಯ ಕೊರತೆ ವರ್ಷ. ತಮಿಳುನಾಡಿನ ಬೇಡಿಕೆಯಂತೆ ನಿತ್ಯ 24 ಸಾವಿರ ಕ್ಯುಸೆಕ್‌ ನೀರು ಬಿಡಲು ಸಾಧ್ಯವಿಲ್ಲ ಎಂದು ಪೀಠದ ಗಮನಕ್ಕೆ ತಂದರು. ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ, ತಮಿಳುನಾಡಿಗೆ ನಿಗದಿಯಂತೆ ಕರ್ನಾಟಕ ನೀರು ಬಿಡಬೇಕು. ಒಂದು ಪ್ರಾಧಿಕಾರ(ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ) 15 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಹೇಳಿದರೆ, ಮತ್ತೊಂದು ಪ್ರಾಧಿಕಾರ 10 ಸಾವಿರ ಕ್ಯುಸೆಕ್‌ ನೀರು ಬಿಡಲು ಹೇಳಿದೆ ಎಂದರು.

ನೀರು ಬಿಟ್ಟು ಸರ್ವ ಪಕ್ಷ ಸಭೆ ಕರೆಯುವುದು ಸರಿಯಲ್ಲ: ಎಂಟಿಬಿ ನಾಗರಾಜ್‌

ಈ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾಯಪೀಠ, ನೀವು ಈ ವಿಚಾರವಾಗಿ ಪ್ರಾಧಿಕಾರದ ಮುಂದೆಯೇ ಹೋಗಬಹುದಲ್ಲ. ನಾವು ಈ ವಿಚಾರದಲ್ಲಿ ಪರಿಣತಿಯನ್ನು ಪಡೆದಿಲ್ಲ. ಹೀಗಾಗಿ ಪೀಠ ಹೇಗೆ ತಕ್ಷಣ ಆದೇಶ ಹೊರಡಿಸಲು ಸಾಧ್ಯ ಎಂದು ಪ್ರಶ್ನಿಸಿತು.

ರೋಹಟಗಿ ಮತ್ತೆ ವಾದ ಮುಂದಿಟ್ಟು, ನ್ಯಾಯಪೀಠ ಆದೇಶ ಮಾಡುವ ತನಕ ಕರ್ನಾಟಕಕ್ಕೆ ನಿತ್ಯ ನೀರು ಬಿಡಲು ಸೂಚಿಸಬೇಕು ಎಂದರು. ಈ ವಾದ ಒಪ್ಪದ ನ್ಯಾಯಪೀಠ ವಾಸ್ತವ ಸ್ಥಿತಿಯ ಕುರಿತು ತಜ್ಞರ ವರದಿ ಬಂದ ಬಳಿಕ ಆದೇಶ ನೀಡುವುದಾಗಿ ಹೇಳಿತು.

Follow Us:
Download App:
  • android
  • ios