ಸಿಮ್ ಸ್ವಾಪ್ ವಂಚನೆ, ಬಿಎಸ್‌ಎನ್‌ಎಲ್‌ಗೆ ₹55.5 ಲಕ್ಷ ದಂಡ: ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು!
ನಕಲಿ ಸಿಮ್ ನೀಡಿ 'ಸಿಮ್ ಸ್ವಾಪ್' ವಂಚನೆಗೆ ದಾರಿ ಮಾಡಿಕೊಟ್ಟರೆ, ಅದರಿಂದ ಗ್ರಾಹಕರಿಗೆ ಉಂಟಾಗುವ ಹಣಕಾಸಿನ ನಷ್ಟಕ್ಕೆ ಟೆಲಿಕಾಂ ಕಂಪನಿಗಳೇ ಹೊಣೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ನಿರ್ಲಕ್ಷ್ಯ ವಹಿಸಿದ ಬಿಎಸ್‌ಎನ್‌ಎಲ್‌ಗೆ ಸಹಕಾರಿ ಬ್ಯಾಂಕ್‌ಗೆ ₹55.5 ಲಕ್ಷ ದಂಡ ಪಾವತಿಸಲು ಆದೇಶಿಸಿದೆ.

ಬಿಎಸ್‌ಎನ್‌ಎಲ್‌ಗೆ ಚಾಟಿ ಬೀಸಿ ದಂಡ
ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭಾರಿ ಸಂಚಲನ ಸೃಷ್ಟಿಸಬಹುದಾದ ಅತ್ಯಂತ ಮಹತ್ವದ ತೀರ್ಪೊಂದನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ಟೆಲಿಕಾಂ ಸೇವಾ ಪೂರೈಕೆದಾರರು (Telecom Service Providers) ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ, ನಿರ್ಲಕ್ಷ್ಯದಿಂದ ನಕಲಿ ಸಿಮ್ ಕಾರ್ಡ್‌ಗಳನ್ನು ನೀಡಿ 'ಸಿಮ್ ಸ್ವಾಪ್' (SIM Swap) ವಂಚನೆಗೆ ದಾರಿ ಮಾಡಿಕೊಟ್ಟರೆ, ಅದರಿಂದ ಗ್ರಾಹಕರಿಗೆ ಉಂಟಾಗುವ ಸಂಪೂರ್ಣ ಹಣಕಾಸಿನ ನಷ್ಟಕ್ಕೆ ಆಯಾ ಟೆಲಿಕಾಂ ಕಂಪನಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ನ್ಯಾಯಾಲಯ ಖಡಕ್ ಆಗಿ ಆದೇಶಿಸಿದೆ. ಈ ಮೂಲಕ ಪರಕರಣ ಒಂದರಲ್ಲಿ ಕರ್ನಾಟಕ ಸುಪ್ರೀಂ ಕೋರ್ಟ್ ದಾಖಲೆ ಪರಿಶೀಲಿಸದೆ ನಕಲಿ ಸಿಮ್ ನೀಡಿದ ಬಿಎಸ್‌ಎನ್‌ಎಲ್‌ಗೆ (BSNL) ಚಾಟಿ ಬೀಸಿ ಬರೋಬ್ಬರಿ 55 ಲಕ್ಷ ದಂಡ ವಿಧಿಸಿದೆ.
ಗ್ರಾಹಕರ ಎಫ್‌ಐಆರ್ ಅಥವಾ ಸಿವಿಲ್ ಅರ್ಜಿಗೆ ಸಂಬಂಧಿಸಿದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಇಂದು ಇಡೀ ದೇಶವೇ ಡಿಜಿಟಲ್ ಆರ್ಥಿಕತೆಯತ್ತ ಮುಖ ಮಾಡಿರುವಾಗ, ಈ ತೀರ್ಪು ಸೈಬರ್ ಭದ್ರತೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.
ಗುರುತು ಪರಿಶೀಲನೆ ಕೇವಲ ಕಾಟಾಚಾರಕ್ಕೆ ಮಾಡಬಾರದು
ಇಂದಿನ ಡಿಜಿಟಲ್ ಹಣಕಾಸು ವಹಿವಾಟಿನ ಯುಗದಲ್ಲಿ, ನಕಲಿ ಸಿಮ್ ಕಾರ್ಡ್ ಅನ್ನು ಬದಲಾಯಿಸುವ (Duplicate SIM) ಅಥವಾ ಹೊಸದಾಗಿ ವಿತರಿಸುವ ಮುನ್ನ ಮೂಲ ಚಂದಾದಾರರ ಗುರುತನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದು ಕೇವಲ ಒಂದು ಖಾಲಿ ಔಪಚಾರಿಕತೆ ಅಥವಾ ನಿಯಮದ ಆಚರಣೆಯಲ್ಲ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಬಲವಾಗಿ ಒತ್ತಿ ಹೇಳಿದರು. ಇದು ದೇಶದ ಲಕ್ಷಾಂತರ ಬ್ಯಾಂಕ್ ಖಾತೆದಾರರ ಆರ್ಥಿಕ ಸುರಕ್ಷತೆಯನ್ನು ಕಾಯುವ ಅತ್ಯಂತ ನಿರ್ಣಾಯಕ ಭದ್ರತಾ ಕ್ರಮವಾಗಿದೆ. ಈ ವ್ಯವಸ್ಥೆಯು ಕೇವಲ ಒಂದು ಸಣ್ಣ ತಪ್ಪಿನಿಂದ ಹಳಿತಪ್ಪಿದರೆ ಇಡೀ ಆರ್ಥಿಕ ಭದ್ರತೆಯೇ ಅಪಾಯಕ್ಕೆ ಸಿಲುಕುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
87 ಲಕ್ಷ ರೂ ಕಳೆದುಕೊಂಡಿದ್ದ ಸಹಕಾರಿ ಬ್ಯಾಂಕ್ ಪ್ರಕರಣ!
2019ರಲ್ಲಿ ಬಿಎಸ್‌ಎನ್‌ಎಲ್ (BSNL) ಮೊಬೈಲ್ ಸಂಖ್ಯೆಯನ್ನು ಹೊಂದಿದ್ದ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನಿಯಮಿತ ಎಂಬ ಸಹಕಾರಿ ಬ್ಯಾಂಕ್, ಸಿಮ್ ಸ್ವಾಪ್ ವಂಚನೆಯ ಜಾಲಕ್ಕೆ ಸಿಲುಕಿ ತನ್ನ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹87 ಲಕ್ಷವನ್ನು ಕಳೆದುಕೊಂಡಿತ್ತು. ಈ ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ಈ ತೀರ್ಪು ಪ್ರಕಟಿಸಿದೆ.
ವಂಚಕರಿಗೆ ಬ್ಯಾಂಕಿನ ಅಧಿಕೃತ ಮೊಬೈಲ್ ಸಂಖ್ಯೆಯನ್ನೇ ಹೋಲುವ ನಕಲಿ ಸಿಮ್ ನೀಡುವಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಸಹಕಾರಿ ಬ್ಯಾಂಕ್ ಆರೋಪಿಸಿತ್ತು. ಬ್ಯಾಂಕಿನ ಹಣವನ್ನು ಬೇರೆ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲು ವಂಚಕರಿಗೆ ಒನ್ ಟೈಮ್ ಪಾಸ್‌ವರ್ಡ್ (OTP) ಅಗತ್ಯವಿತ್ತು. ಬಿಎಸ್‌ಎನ್‌ಎಲ್ ನಕಲಿ ಸಿಮ್ ನೀಡಿದ್ದರಿಂದ, ಬ್ಯಾಂಕಿನ ಅಸಲಿ ಸಿಮ್ ಬಂದ್ ಆಗಿ, ಒಟಿಪಿಗಳೆಲ್ಲಾ ವಂಚಕರ ಕೈಯಲ್ಲಿದ್ದ ನಕಲಿ ಸಿಮ್‌ಗೆ ರವಾನೆಯಾಗಿ ಸುಲಭವಾಗಿ ವಂಚಕರಿಗೆ ಹಣ ಸಿಕ್ಕಿತು.
ಬಿಎಸ್‌ಎನ್‌ಎಲ್ ತಪ್ಪನ್ನು ಎತ್ತಿಹಿಡಿದ ಹೈಕೋರ್ಟ್
ಯಾವುದೇ ಸರಿಯಾದ ದಾಖಲೆಗಳ ಪರಿಶೀಲನೆ ನಡೆಸದೆ ತನ್ನ ಉದ್ಯೋಗಿಯ ಬೇಜವಾಬ್ದಾರಿತನದಿಂದ ನಕಲಿ ಸಿಮ್ ನೀಡಿದ ಬಿಎಸ್‌ಎನ್‌ಎಲ್, ತನ್ನ ಗ್ರಾಹಕರಿಗೆ ನೀಡಬೇಕಾದ ಕನಿಷ್ಠ 'ಕಾಳಜಿಯ ಕರ್ತವ್ಯವನ್ನು' (Duty of Care) ಉಲ್ಲಂಘಿಸಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿತು.ಬಿಎಸ್‌ಎನ್‌ಎಲ್ ನಿಯಮಾವಳಿಗಳ ಪ್ರಕಾರ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ್ದರೆ, ನಕಲಿ ಸಿಮ್ ವಂಚಕರ ಕೈ ಸೇರುತ್ತಿರಲಿಲ್ಲ ಮತ್ತು ಇಷ್ಟು ದೊಡ್ಡ ಸೈಬರ್ ಅಪರಾಧ ನಡೆಯುತ್ತಿರಲಿಲ್ಲ ಎಂದು ಕೋರ್ಟ್ ಗಮನಕ್ಕೆ ಬಂತು.
ಗೇಟ್ ಕೀಪರ್ ಆಗಿ ಕೆಲಸ ಮಾಡಿ, ಟೆಲಿಕಾಂ ಕಂಪನಿ ವಿರುದ್ಧ ಗರಂ ಆದ ಕೋರ್ಟ್
ಬಿಎಸ್‌ಎನ್‌ಎಲ್‌ನಂತಹ ದೂರಸಂಪರ್ಕ ಸೇವಾ ಪೂರೈಕೆದಾರರು ದೇಶದ ನಿರ್ಣಾಯಕ ಮೂಲಸೌಕರ್ಯ ಪೂರೈಕೆದಾರರಾಗಿದ್ದಾರೆ. ಇಂತಹ ದೊಡ್ಡ ನಂಬಿಕೆಯ ಸ್ಥಾನದಲ್ಲಿರುವ ಟೆಲಿಕಾಂ ಸಂಸ್ಥೆಗಳಿಗೆ ಒಂದು ಕಟ್ಟುನಿಟ್ಟಾದ ಬಾಧ್ಯತೆ ಇರುತ್ತದೆ. ಅದು ಆರ್ಥಿಕ ಭದ್ರತೆಯಯನ್ನಯ ಆತ್ಮಸಾಕ್ಷಿಯಾಗಿ ಕಾಯುವುದು ಮತ್ತು ಸಿಮ್ ನೀಡುವ ಮುನ್ನ ಪ್ರತಿಯೊಂದು ವಿನಂತಿಯನ್ನೂ ಅತ್ಯಂತ ಸೂಕ್ಷ್ಮತೆಯಿಮದ ಗಂಭೀರವಾಗಿ ಪರಿಗಣಿಸುವುದಾಗಿದೆ. ಟೆಲಿಕಾಂ ಕಂಪನಿಗಳು ನಕಲಿ ಸಿಮ್ ಅನ್ನು ಅಜಾಗರೂಕತೆಯಿಂದ ನೀಡಿದಾಗ, ಅದು ಕೇವಲ ಒಬ್ಬ ಗ್ರಾಹಕನಿಗೆ ಹಾನಿ ಮಾಡುವುದಿಲ್ಲ. ಬದಲಿಗೆ ಇಡೀ ದೇಶದ ಡಿಜಿಟಲ್ ಹಣಕಾಸು ವ್ಯವಹಾರಕ್ಕೆ ಹೊಡೆತ ಆದ್ದರಿಂದ, ಡಿಜಿಟಲ್ ಆರ್ಥಿಕತೆಯಲ್ಲಿ ಇವುಗಳ ಜವಾಬ್ದಾರಿ ಕೇವಲ ಖಾಸಗಿ ಒಪ್ಪಂದದ ವ್ಯಾಪ್ತಿಗೆ ಸೀಮಿತವಾಗಿಲ್ಲ. ಅದು ಸಾರ್ವಜನಿಕ ಜೀವನದ ಹೊಣೆಗಾರಿಕೆಯಾಗಿದೆ ಎಂದಿದೆ.
ಒಟ್ಟು 55.5 ಲಕ್ಷ ದಂಡ
ಭಾರತದಲ್ಲಿ ಸಿಮ್ ಸ್ವಾಪ್ ವಂಚನೆಗಳು ದಿನದಿಂದ ದಿನಕ್ಕೆ ತೀವ್ರವಾಗಿ ಹೆಚ್ಚುತ್ತಿರುವುದರ ಬಗ್ಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತು. ಭಾರತೀಯ ರಿಸರ್ವ್ ಬ್ಯಾಂಕ್ (RBI), ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ವಿವಿಧ ರಾಜ್ಯಗಳ ಸೈಬರ್ ಕ್ರೈಮ್ ವಿಭಾಗಗಳು ನೀಡಿರುವ ವರದಿಗಳನ್ನು ಉಲ್ಲೇಖಿಸಿ ಬರುತೇಕ ಈ ಎಲ್ಲಾ ಪ್ರಕರಣಗಳಿಗೆ ಟೆಲಿಕಾಂ ಕಂಪನಿಗಳ ಬೇಜವಾಬ್ದಾರಿತನವೇ ಇದಕ್ಕೆ ಪ್ರಮುಖ ಕಾರಣ ಎಂದು ಬೇಸರ ವ್ಯಕ್ತಪಡಿಸಿತು. ಈ ಎಲ್ಲಾ ಗಂಭೀರ ಲೋಪದೋಷಗಳನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ಸಂತ್ರಸ್ತ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕಿಗೆ ಆಗಿರುವ ನಷ್ಟವನ್ನು ಸರಿದೂಗಿಸಲು, ಸಹಕಾರಿ ಬ್ಯಾಂಕ್ ಅನುಭವಿಸಿದ ಆಡಳಿತಾತ್ಮಕ ತೊಂದರೆಗಳು, ಕಾರ್ಯಚರಣೆಯ ಅಡಚಣೆ ಒಟ್ಟಾರೆಯಾಗಿ ಬಿಎಸ್‌ಎನ್‌ಎಲ್ ₹55.5 ಲಕ್ಷ ಹಣವನ್ನು ದಂಡದ ರೂಪದಲ್ಲಿ ನೀಡಲು ಆದೇಶಿಸಿದೆ.
ಈ ಹೈಪ್ರೊಫೈಲ್ ಪ್ರಕರಣದಲ್ಲಿ ಸಹಕಾರಿ ಬ್ಯಾಂಕ್ ಪರವಾಗಿ ಪ್ರಮುಖ ವಕೀಲರಾದ ಮಹೇಶ್ ಆರ್. ಉಪ್ಪಿನ್ ಅವರು ವಾದ ಮಂಡಿಸಿದ್ದರು. ಕೆನರಾ ಬ್ಯಾಂಕ್ ಪರವಾಗಿ ವಕೀಲ ಎಂ. ಮೋಹನ್ ರಾವ್ ಮತ್ತು ಬಿಎಸ್ಎನ್ಎಲ್ ಪರವಾಗಿ ವಕೀಲ ಗಂಗಾಧರಯ್ಯ ಎ.ಎನ್. ಅವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ವಾದ ಮಂಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

