Sugar War: ಸಾಲು ಸಾಲು ಆರೋಪ ಇದ್ದರೂ ರಮೇಶ್ ಜಾರಕಿಹೊಳಿ ಮೌನವೇಕೆ?

• ಡಿಫಾಲ್ಟರ್ಸ್ ಬೇಗ ಸಾಲ ಪಾವತಿಸಬೇಕು ಎಂದ ಚನ್ನರಾಜ ಹಟ್ಟಿಹೊಳಿ

• ಸಂಪುಟ ವಿಸ್ತರಣೆ ಮುನ್ಸೂಚನೆ ಬೆನ್ನಲ್ಲೇ ರಾಜಕೀಯ ವಿರೋಧಿಗಳ ಸಾಲು ಸಾಲು ಆರೋಪ

• ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡದಂತೆ ರೈತರ ಆಗ್ರಹ

Sugar War after so many allegations ramesh jarkiholi silence surprising says Channaraja Hottihalli san

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ. 12): ರಮೇಶ್ ಜಾರಕಿಹೊಳಿ(ramesh jarkiholi )  - ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ.ಶಿವಕುಮಾರ್ (DK Shivakumar) ಮಧ್ಯೆ ಶುಗರ್ ವಾರ್ (Sugar war) ಶುರುವಾಗಿದ್ದು, ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ (Congress)ಶಾಕ್ ನೀಡಿದೆ‌. 

ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಪೆಕ್ಸ್ ಸೇರಿ ಇತರ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ಸಾಲ ಪಡೆದು ಮರುಪಾವತಿ ಮಾಡಿಲ್ಲವೆಂಬ ಆರೋಪ ಕೇಳಿಬಂದಿತ್ತು. ಸದ್ಯ ರಮೇಶ್ ಜಾರಕಿಹೊಳಿಗೆ ತಮ್ಮ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲ ಬಾಕಿ ವಿಚಾರ ಮುಳುವಾಗುತ್ತಾ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ. 

ಸಂಪುಟ ವಿಸ್ತರಣೆ ಮುನ್ಸೂಚನೆ ಬೆನ್ನಲ್ಲೇ ರಾಜಕೀಯ ವಿರೋಧಿಗಳು ಸಾಲು ಸಾಲು ಆರೋಪ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, 'ಸಾಹುಕಾರ್ ಗಳೆಲ್ಲಾ ಪಾಪರ್ ಆಗುತ್ತಿದ್ದಾರೆ, ಭಿಕ್ಷುಕರಾಗುತ್ತಿದ್ದಾರೆ' ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಕುರಿತು ವ್ಯಂಗ್ಯವಾಡಿದ್ದರು. ಸೂಕ್ತ ಸಂದರ್ಭದಲ್ಲಿ ತಮ್ಮ ವಿರುದ್ಧದ ಆರೋಪಕ್ಕೆ ತಿರುಗೇಟು ನೀಡೋದಾಗಿ ಆಪ್ತರ ಬಳಿ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರಂತೆ. ಸಂಪುಟ ವಿಸ್ತರಣೆ ವೇಳೆ ವಿವಾದ ಮೈಮೇಲೆ ಎಳೆದುಕೊಳ್ಳೋದು ಬೇಡ ಎಂದು ಈ ನಿರ್ಧಾರ ಕೈಗೊಂಡಿದ್ದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಮೂಲಗಳು ಮಾಹಿತಿ ನೀಡಿವೆ.

ರಾಜ್ಯ ಸರ್ಕಾರದ (state government) ಇಬ್ಬುಗೆ ನಡೆಗೆ ರೈತರ ಆಕ್ರೋಶ: ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ (Sugar Factory) ಸಾಲನೂ ಬಾಕಿ, ರೈತರಿಗೆ ನೀಡಬೇಕಾದ ಕಬ್ಬಿನ ಹಣವೂ ಬಾಕಿ ಇದ್ದು ಸಂಕಷ್ಟದಲ್ಲಿರುವ ಅನ್ನದಾತನ ಗೋಳನ್ನು ಸಕ್ಕರೆ ಕಾರ್ಖಾನೆಗಳು, ಸರ್ಕಾರ ಆಲಿಸುತ್ತಿಲ್ಲ. ಸರ್ಕಾರದ ಇಬ್ಬುಗೆ ನೀತಿಗೆ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಪೆಕ್ಸ್ ಬ್ಯಾಂಕ್ ನಿಂದ ಸಾಲ ಪಡೆದ ಸಕ್ಕರೆ ಕಾರ್ಖಾನೆಗಳ ಸಾಲ ಬಡ್ಡಿ ಮನ್ನಾ ಮಾಡ್ತೀರಿ. ಹೀಗಾಗಿ ಅಪೆಕ್ಸ್ ಬ್ಯಾಂಕ್ ನಿಂದ ಸಾಲ ಪಡೆದವರಿಗೆ ರಿಯಾಯಿತಿ ನೀಡದಂತೆ ಒತ್ತಾಯಿಸಿದ್ದಾರೆ‌‌. ಮೊನ್ನೆ ಬೆಳಗಾವಿಗೆ ಆಗಮಿಸಿದ್ದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ಗೆ ಮನವಿಯನ್ನೂ ಮಾಡಿದ್ದಾರೆ. ಯಾವುದೇ ಪಕ್ಷದವರು ಇದ್ದರೂ ಕ್ರಮ ಕೈಗೊಳ್ತೀವಿ ಎಂದು ರೈತರಿಗೆ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದ್ದಾರೆ.

ಸಾಹುಕಾರ್‌ಗೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಪರೋಕ್ಷ ಟಾಂಗ್: ಇನ್ನು ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡದೇ ಬಾಕಿ ವಸೂಲಾತಿ ಮಾಡಬೇಕೆಂಬ ರೈತರ ಆಗ್ರಹ ವಿಚಾರಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯಿಸಿದ್ದು, 'ಸಾಲಮನ್ನಾ ಪದ ಎಲ್ಲರೂ ತಮ್ಮ ಡಿಕ್ಷನರಿಯಿಂದ ತಗೆದೊಗೆಯಬೇಕು. ಬ್ಯಾಂಕ ಡಿಫಾಲ್ಟರ್ಸ್ ಯಾರೇ ಇರಲಿ ನಿರ್ದಾಕ್ಷಿಣ್ಯ ಕ್ರಮ ಆಗಬೇಕು' ಎನ್ನುವ ಮೂಲಕ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಚನ್ನರಾಜ ಹಟ್ಟಿಹೊಳಿ ಆಗ್ರಹಿಸಿದ್ದಾರೆ. 

'ಬ್ಯಾಂಕ್ ಇರೋದೆ ಸಾಲ ಕೊಡೋಕೆ. ಚಿಕ್ಕ ಉದ್ಯಮ ಇರಲಿ, ದೊಡ್ಡ ಉದ್ಯಮ ಇರಲಿ ಸಾಲ ಕೊಟ್ಟಾಗಲೇ ನಾವು ಉದ್ಯೋಗ ಮಾಡೋದು. ಆದ್ರೆ ಬ್ಯಾಂಕಿಂಗ್ ವ್ಯವಸ್ಥೆಯ ದುರುಪಯೋಗ ಆಗಬಾರದು. ಸರ್ಕಾರ, ಬ್ಯಾಂಕ್‌ಗಳ ಸೌಲಭ್ಯಗಳು ಮಿಸ್ ಯೂಸ್ ಆಗಬಾರದು. ಬ್ಯಾಂಕ್‌ನವರು ನಮ್ಮ ಮೇಲೆ ವಿಶ್ವಾಸ ಇಟ್ಟು ಸಾಲ ನೀಡಿರುತ್ತಾರೆ. ಬ್ಯಾಂಕ್‌ನಲ್ಲಿ ಜನಸಾಮಾನ್ಯರು, ರೈತರು, ದಿನದಲೀತರು ಈಗೀಗ ಭಿಕ್ಷುಕರು ಹಣ ಇಟ್ಟಿರ್ತಾರೆ‌. ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಹಣ ಸಾಲ ಕೊಟ್ಟಿರ್ತಾರೆ ಅದು ಮಿಸ್ ಯೂಸ್ ಆಗಬಾರದು' ಎಂದಿದ್ದಾರೆ. 

ಬಿಜೆಪಿ ಕೋಟೆ ಬೇಧಿಸಲು ರಾಜ್ಯಕ್ಕೆ ಪದೇಪದೇ ಎಂಟ್ರಿ ಕೊಡ್ತಿದ್ದಾರಾ ಶರದ್ ಪವಾರ್?

ಇನ್ನು ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲ ಮರುಪಾವತಿಸದ ವಿಚಾರವಾಗಿ ಪ್ರತಿಕ್ರಿಯಿಸಿ, 'ಸಕ್ಕರೆ ಕಾರ್ಖಾನೆ ಮೇಲೆ ಲೋನ್ ಪಡೆದವರು ಪ್ರಾಮಾಣಿಕವಾಗಿ ಮರುಪಾವತಿಸಬೇಕು. ನಾನು ಒಬ್ಬ ಸಕ್ಕರೆ ಕಾರ್ಖಾನೆ ಮಾಲೀಕನಾಗಿ ಹೇಳುತ್ತಿದ್ದೇನೆ. ಯಾವುದೇ ಪರಿಸ್ಥಿತಿಯಲ್ಲಿ ಸಾಲಮನ್ನಾ ಮಾಡುವ ಕೆಲಸ ನಡೆದಿದ್ರೆ ಸರ್ಕಾರ ಹಸ್ತಕ್ಷೇಪ ಮಾಡಿ ನಿಲ್ಲಿಸಬೇಕು. ಠೇವಣಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಂಬಾನಿಯಿಂದ ಚನ್ನರಾಜ ಹಟ್ಟಿಹೊಳಿವರೆಗೂ ಸಮನ್ವಯ ಕಾನೂನು ಜಾರಿ ಆಗಬೇಕು ಎಂದು ಆಗ್ರಹಿಸಿದ್ದಾರೆ.

ತಹಶಿಲ್ದಾರ್ ಕಚೇರಿ ಎದುರು ಕುಡಿದು ಮಕಾಡೆ ಮಲಗಿದ್ದ ಗ್ರಾಮಲೆಕ್ಕಾಧಿಕಾರಿ ಅಮಾನತು!

‌ಒಟ್ಟಿನಲ್ಲಿ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಶಾಕ್ ನೀಡಿದ್ರೆ ತಮ್ಮ ವಿರುದ್ಧದ ಆರೋಪಕ್ಕೆ ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಆಪ್ತರ ಬಳಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಇತ್ತ ಸಕ್ಕರೆ ಕಾರ್ಖಾನೆಗಳ ಸಾಲ ಮನ್ನಾ ಮಾಡದೇ ವಸೂಲಿ ಮಾಡಬೇಕೆಂದು ಸರ್ಕಾರಕ್ಕೆ ರೈತ ಸಂಘಟನೆಗಳು ಒತ್ತಾಯಿಸಿದ್ದು ಸದ್ಯ ಎಲ್ಲರ ಚಿತ್ತ ಸರ್ಕಾರದ ನಿರ್ಧಾರದತ್ತ ನೆಟ್ಟಿದೆ.

 

Latest Videos
Follow Us:
Download App:
  • android
  • ios