ಬಿಜೆಪಿ ಕೋಟೆ ಬೇಧಿಸಲು ರಾಜ್ಯಕ್ಕೆ ಪದೇಪದೇ ಎಂಟ್ರಿ ಕೊಡ್ತಿದ್ದಾರಾ ಶರದ್ ಪವಾರ್?

• ಎರಡು ದಿನಗಳ ಬೆಳಗಾವಿ ಪ್ರವಾಸದಲ್ಲಿ ಗಡಿವಿವಾದ ಬಗ್ಗೆ ಶರದ್ ಪವಾರ್ ಮೌನ..!

• ಮಹಾರಾಷ್ಟ್ರ ರಾಜಕಾರಣದ ಚಾಣಕ್ಯನ ನಡೆಯಿಂದ ಬಿಜೆಪಿಗೆ ಶುರುವಾಯ್ತು ಆತಂಕ..!

• 'ಎಂಇಎಸ್ ಶರದ್ ಪವಾರ್ ಸಾಕಿದ ಗಿಣಿ, ಡಬಲ್ ಗೇಮ್ ಆಡ್ತಿದ್ದಾರೆ' ಎಂದಿದ್ಯಾರು?

Is Sharad Pawar repeatedly making entry to Karnataka to Create Break in BJP fortress san

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ. 12): ಮಹಾರಾಷ್ಟ್ರ(Maharastra) ರಾಜಕಾರಣದ ಚಾಣಕ್ಯ ಅಂತಾನೇ ಕರೆಯಿಸಿಕೊಳ್ಳುವ ಎನ್‌ಸಿಪಿ ಮುಖ್ಯಸ್ಥ (NCP Leader), ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ (Former CM Sharad Pawar) ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ  (Karnataka Assembly Elections) ಸಮೀಪಿಸುತ್ತಿದ್ದಂತೆ ರಾಜ್ಯಕ್ಕೆ ಪದೇಪದೇ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಎರಡು ದಿನಗಳ ಕಾಲ ಬೆಳಗಾವಿ (Belagavi) ಪ್ರವಾಸದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶರದ್ ಪವಾರ್ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಪ್ರಸ್ತಾಪಿಸುವ ಗೋಜಿಗೆ ಹೋಗಲಿಲ್ಲ. 

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎನ್‌ಸಿಪಿ ಬೆಳಗಾವಿಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸೋದಾಗಿ ಘೋಷಿಸಿದೆ. ಬಿಜೆಪಿ ವೋಟ್ ಬ್ಯಾಂಕ್ ಸೆಳೆಯಲು ಶರದ್ ಪವಾರ್ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು ಎರಡು ದಿನಗಳ ಪ್ರವಾಸದಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಬಗ್ಗೆ ಪ್ರಸ್ತಾಪಿಸುವ ಗೋಜಿಗೆ ಹೋಗದಿದ್ದರೂ ಎಂಇಎಸ್ ಮುಖಂಡರ ಜೊತೆ ಗೌಪ್ಯ ಸಭೆ ನಡೆಸಿ ನಿಮ್ಮ ಬೆಂಬಲಕ್ಕೆ ನಾವಿದ್ದೀವಿ ಎಂಬ ಸಂದೇಶ ರವಾನಿಸಿದ್ದಾರೆ. ಬೆಳಗಾವಿ ಜಿಲ್ಲೆಯ 18 ಮತಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಮರಾಠಾ ಸಮುದಾಯದ ಮತಗಳು ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತವೆ. 

ಬೆಳಗಾವಿ ಜಿಲ್ಲೆಯ ಅಥಣಿ, ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ - ಸದಲಗಾ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ ಕ್ಷೇತ್ರದಲ್ಲಿ ಮರಾಠಾ ಮತದಾರರು ತಕ್ಕಮಟ್ಟಿಗೆ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮಹಾರಾಷ್ಟ್ರದ ರಾಜಕೀಯ ಚಾಣಕ್ಯನ ನಡೆಯಿಂದ ಬೆಳಗಾವಿ ಬಿಜೆಪಿಗೆ ಟೇನ್ಷನ್ ಶುರುವಾಗಿದೆ ಎಂಬ ಮಾತು ಸದ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಗಡಿಜಿಲ್ಲೆಯಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಶರದ್ ಪವಾರ್ ರಣತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದ್ದು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದರು‌. 

ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿ 'ಮಹಾಮೈತ್ರಿ ಕೂಟ' ಏನಾದರೂ ರಚಿಸ್ತಾರಾ? ಎಂಇಎಸ್ ಬೆಂಬಲ ಪಡೆದು ಕಾಂಗ್ರೆಸ್ ಜೊತೆ ಏನಾದರೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ತಾರಾ ಎಂಬ ಚರ್ಚೆಯೂ ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇನ್ನು ತಮ್ಮ ಭಾಷಣ ವೇಳೆ ಎಂಇಎಸ್ ಕಾರ್ಯಕರ್ತರು 'ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಲೇಬೇಕು' ಎಂಬ ನಾಡದ್ರೋಹಿ ಘೋಷಣೆ ಕೂಗಿದರೂ ಸಹ ಮೌನವಹಿಸಿ ಭಾಷಣ ಪ್ರಾರಂಭಿಸಬಹುದಾ ಅಂತಾ ನಾಡದ್ರೋಹಿಗಳ ಅನುಮತಿ ಪಡೆದು ಭಾಷಣ ಮಾಡಿದ್ದರು. 

ಮತ್ತೊಂದಡೆ ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದಾಗ ಎಂಇಎಸ್ ಮುಖಂಡರೊಂದಿಗೆ ರಹಸ್ಯ ಸಭೆ ನಡೆಸಿದ್ದ ಶರದ್ ಪವಾರ್ ಚಿತ್ರೀಕರಣ ಮಾಡಲು ಹೋದ ಮಾಧ್ಯಮಗಳ ಕ್ಯಾಮರಾ ಆಫ್ ಮಾಡಿಸಿ ಕ್ಲೋಸ್ ಡೋರ್ ಮೀಟಿಂಗ್ ಮಾಡಿದ್ರು. ಸಭೆಯಲ್ಲಿ ಯುವಕರು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡುತ್ತಿರುವುದಕ್ಕೆ ಶರದ್ ಪವಾರ್ ಬೇಸರ ವ್ಯಕ್ತಪಡಿಸಿದ್ದು ಯುವಕರನ್ನು ಪಕ್ಷ ದತ್ತ ಸೆಳೆದು ಸಂಘಟಿತರಾಗುವಂತೆ ಎಂಇಎಸ್‌ಗೆ ಕಿವಿಮಾತು ಹೇಳಿದ್ದಾರೆ. ಎನ್‌ಸಿಪಿ ಪದಾಧಿಕಾರಿಗಳಿಗೂ ಇದೇ ಸೂಚನೆ ನೀಡಿರುವ ಶರದ್ ಪವಾರ್, ಮರಾಠಿಗರ ಜೊತೆ ಕನ್ನಡ ಮತದಾರರ ಓಲೈಕೆಗೂ ಪ್ರಯತ್ನಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಮೂರ್ತಿ ಲೋಕಾರ್ಪಣೆ ಮಾಡಿದ್ದು ರಾಜಕೀಯ ಚಾಣಕ್ಯ ಶರದ್ ಪವಾರ್ ನಡೆಯಿಂದ ಬಿಜೆಪಿ ಪಾಳಯದಲ್ಲಿ ಆತಂಕ ಶುರುವಾಗಿದೆ‌‌.

ಚಾರಣ ಪ್ರಿಯರಿಗೆ ಯೋಗ್ಯ ಸ್ಥಳ ಇತಿಹಾಸ ಪ್ರಸಿದ್ಧ ಭೀಮನ ಬುಗರಿ

ಎಂಇಎಸ್ ಶರದ್ ಪವಾರ್ ಸಾಕಿದ ಗಿಣಿ, ಡಬಲ್ ಗೇಮ್ ಆಡ್ತಿದ್ದಾರೆ:
ಇನ್ನು ಎರಡು ದಿನಗಳ ಬೆಳಗಾವಿ ಪ್ರವಾಸದಲ್ಲಿ ಶರದ್ ಪವಾರ್ ಎಲ್ಲಿಯೂ ಬಹಿರಂಗವಾಗಿ ಗಡಿವಿವಾದ ಬಗ್ಗೆ ಪ್ರಸ್ತಾಪಿಸದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, 'ಎಂಇಎಸ್ ಶರದ್ ಪವಾರ್ ಸಾಕಿದ ಗಿಣಿ, ಅವರು ಡಬಲ್ ಗೇಮ್ ಆಡುತ್ತಿದ್ದಾರೆ. ಶರದ್ ಪವಾರ್ ರಾಜಕೀಯ ಚತುರ, ಗಡಿವಿವಾದ ಬಗ್ಗೆ ಬಹಿರಂಗವಾಗಿ ಪ್ರಸ್ತಾಪಿಸದಿದ್ದರೂ ಅವರಿಗೇನು ಬೇಕೋ ಅದನ್ನ ಮಾಡಿ ಹೋಗಿದ್ದಾರೆ. ಶರದ್ ಪವಾರ್ ಭಾಷಣ ವೇಳೆ ಎಂಇಎಸ್ ನವರು ನಾಡದ್ರೋಹಿ ಘೋಷಣೆ ಕೂಗಿದ್ದರೂ ಸುಮ್ಮನಿದ್ದಿದ್ದೇಕೆ? ನಿಮ್ಮ ಅನುಮತಿ ಪಡೆದು ಭಾಷಣ ಶುರು ಮಾಡ್ತೀನಿ ಅಂತಾ ಹೇಳಿದ್ದೇಕೆ? ನಾಡದ್ರೋಹಿಗಳ ಜೊತೆ ಗೌಪ್ಯ ಸಭೆ ಮಾಡಿದ್ದೇಕೆ? ಅವರು ಕರ್ನಾಟಕ ವಿಧಾನಸಭೆಯಲ್ಲಿ ಎನ್‌ಸಿಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೀವಿ ಅಂದ್ರೆ ಗಡಿವಿವಾದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಅಂತಾ ಬಹಿರಂಗವಾಗಿ ಹೇಳಬೇಕು‌. ಇಲ್ಲವಾದ್ರೆ ಎನ್‌ಸಿಪಿ ರಾಜ್ಯದಲ್ಲಿ ಚುನಾವಣೆಗೆ ನಿಲ್ಲಲು ನಾವು ಬಿಡಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

ಒಟ್ಟಾರೆ ಬಿಜೆಪಿ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಶರದ್ ಪವಾರ್ ಪದೇಪದೇ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಹಿಂದಿರುವ ರಾಜಕೀಯ ಲೆಕ್ಕಾಚಾರ, ಶರದ್ ಪವಾರ್ ಮಾಸ್ಟರ್ ಪ್ಲ್ಯಾನ್ ರಾಜ್ಯದಲ್ಲಿ ವರ್ಕೌಟ್ ಆಗುತ್ತಾ? ಇದಕ್ಕೆ ಕಾಲವೇ ಉತ್ತರಿಸಲಿದೆ.

Latest Videos
Follow Us:
Download App:
  • android
  • ios