ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಹದಗೆಡುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಮಾಲಿನ್ಯ ತಪಾಸಣಾ ಯಂತ್ರೋಪಕರಣವುಳ್ಳ ಸುಸಜ್ಜಿತ ವಾಹನ ಇಲ್ಲೀಗ ಹರಿದಾಡುತ್ತಿದೆ.
ಆನಂದ್ ಎಂ. ಸೌದಿ
ಯಾದಗಿರಿ (ಮೇ.11): ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಹದಗೆಡುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಮಾಲಿನ್ಯ ತಪಾಸಣಾ ಯಂತ್ರೋಪಕರಣವುಳ್ಳ ಸುಸಜ್ಜಿತ ವಾಹನ ಇಲ್ಲೀಗ ಹರಿದಾಡುತ್ತಿದೆ. ಆದರೆ, ದಿಢೀರ್ ದಾಳಿ ಮಾಡುವುದಾಗಿ ಹೇಳಿ, ವಾರ ಮೊದಲೇ ಡಂಗೂರ ಸಾರಿ ಬರುವಂತೆ, ಪರಿಸರ- ಮಾಲಿನ್ಯ ತಪಾಸಣೆ ನಡೆಸುವ ಇಂತಹ ಪರಿಶೀಲನಾ ಕಾರ್ಯ ಅದೆಷ್ಟರ ಮಟ್ಟಿಗೆ ವಾಸ್ತವ ವರದಿ ನೀಡುತ್ತದೆ ಎನ್ನಲಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ಕಂಪನಿಗಳಿಂದ ವಿಷಗಾಳಿಯ ಆತಂಕ ಹಾಗೂ ತ್ಯಾಜ್ಯ ಘಾಟಿನಿಂದಾಗಿ ಜನ-ಜಲ-ಜೀವನದ ಮೇಲೆ ಅಡ್ಡ ಪರಿಣಾಗಳು ಉಂಟಾಗುತ್ತಿದ್ದು, ವಿಷಗಾಳಿ ಸೂಸುವ ಕಂಪನಿಗಳ ಬಂದ್ ಮಾಡಿ ಎಂಬುದಾಗಿ ಸುತ್ತಮುಲ್ಲಿನ ಹತ್ತಾರು ಗ್ರಾಮಗಳ ಜನರು ಸಿಡಿದೆದ್ದ ಬೆನ್ನಲ್ಲೇ, ಜಿಲ್ಲಾಧಿಕಾರಿ ಡಾ. ಸುಶೀಲಾ ಸೂಚನೆಯಂತೆ ಸಮಿತಿಯೊಂದು ರಚನೆಗೊಂಡು, ಆರೋಗ್ಯ, ಕೃಷಿ, ಶಿಕ್ಷಣ, ಜಲ, ಹವಾಮಾನ ಮುಂತಾದ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಪಗಳಿಗೆ ಗಂಭೀರತೆ ಮೂಡಿಸಿದೆ. ಇವೆಲ್ಲಗಳ ಪರಿಣಾಮ, ಎಚ್ಚೆತ್ತ ಕಂಪನಿಗಳು ಇದೀಗ ಕಳೆದ ಕೆಲವು ದಿನಗಳಿಂದ ಗಾಳಿ- ತ್ಯಾಜ್ಯ ಹೊರಬಿಡುವ ಕಾರ್ಯಕ್ಕೆ ಒಂದಿಷ್ಟು ಸ್ಥಗಿತಗೊಳಿಸಿದಂತಿದೆ. ಇದರಿಂದಾಗಿ, ಈ ಹಿಂದೆಂದೂ ಕಾಣದ ವಾತಾವರಣ ಈಗ ಒಂದಿಷ್ಟು ಸಹಜ ಸ್ಥಿತಿಗೆ ಬಂದಂತೆ ಅನ್ನಿಸುತ್ತದೆ. ಅಧಿಕಾರಿಗಳ ಭೇಟಿ, ಕಾರ್ಖಾನೆಗಳ ತಪಾಸಣೆ, ವಾಯು, ನೀರು, ಆರೋಗ್ಯ, ಕೃಷಿ ಮುಂತಾದವುಗಳ ಬಗ್ಗೆ ಗಮನ ಹರಿಸಿ, ಸಾಧಕ-ಬಾಧಕಗಳ ಬಗ್ಗೆ ಆಡಳಿತ ವರದಿ ತಯಾರಿಸಿ, ಸರ್ಕಾರಕ್ಕೆ ಕಳುಹಿಸುತ್ತಿದೆ.
ಅಪಾಯಕಾರಿ ಕೆಲಸಕ್ಕೆ ಮಕ್ಕಳ ಬಳಕೆ: ಕೆಮಿಕಲ್ ಕಂಪನಿ ವಿರುದ್ಧ ದೂರು ದಾಖಲು
ಇದರ ಬಿಸಿ ಮುಟ್ಟಿದ ಪರಿಣಾಮ ಎಂಬಂತೆ, ಕಳೆದನೇ ವರ್ಷಗಳಿಂದ ಪ್ರತಿದಿನ ಕಾಡುತ್ತಿದ್ದ ದುರ್ನಾತ, ವಿಷಗಾಳಿಯ ಆತಂಕಕ್ಕೆ ಕಡಿವಾಣ ಬಿದ್ದಂತಾಗಿದೆ. ಪರಿಸರ ಮಾಲಿನ್ಯ ಪರಿಶೀಲನಾ ವಾಹನ ತಪಾಸಣೆ ಬಗ್ಗೆ ಮೊದಲೇ ಮಾಹಿತಿ ಅರಿತಂತಿರುವ ಕಾರ್ಖಾನೆಗಳು ಅದು ಬರುವ ಇಂತಿಷ್ಟು ಕಿ.ಮೀ. ಪರಿಸರದ ಸ್ಥಳದಲ್ಲಿ ಕೆಲಸ ಸ್ಥಗಿತಗೊಳಿಸಿ, ಅಲ್ಲೇನೂ ನಡೆದಿಯೇ ಇಲ್ಲ ಎಂಬಂತೆ ಭಾಸವಾಗಿಸುತ್ತಿವೆ ಎಂಬ ಮಾತುಗಳಿವೆ. ಇದೇ ವರ್ಷಾರಂಭದ ದಿನದಿಂದ "ಕನ್ನಡಪ್ರಭ" ಈವರೆಗೆ ನಿರಂತರ ಸಂಗ್ರಹಿಸುತ್ತಿರುವ ವಾಯು ಗುಣಮಟ್ಟ ಸೂಚ್ಯಾಂಕದ ಪ್ರಕಾರ, 100 ಕ್ಕೂ ಮಿತಿ ದಾಟಿದ "ಅನಾರೋಗ್ಯಕರ" ವಾತಾವರಣವೇ ಹೆಚ್ಚು ಕಾಣುತ್ತಿತ್ತು.
ಆದರೀಗ, ಕಳೆದ 15-20 ದಿನಗಳಿಂದ ಇದರಲ್ಲಿ ಒಂದಿಷ್ಟು ತಾತ್ಕಾಲಿಕ ನಿಯಂತ್ರಣ ಕಂಡು ಬರುತ್ತಿದೆ. ಸದನದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಕಂಪನಿಗಳ ವಿರುದ್ಧ ವಾಗ್ದಾಳಿ, ಸಿಎಂಗೆ ಪತ್ರ, ಮಾನವ ಹಕ್ಕುಗಳ ಆಯೋಗಕ್ಕೆ ದೂರು, ಜನಮಾನಸದಲ್ಲಿ ಮೂಡುತ್ತಿರುವ ಜಾಗೃತಿಯಿಂದಾಗಿ ಕಂಪನಿಗಳು ಎಚ್ಚರಗೊಂಡಂತಿವೆ. ಹೀಗಾಗಿ, ಬಹುತೇಕ ಚಟುವಟಿಕೆಗಳು ಸ್ಥಗಿತಗೊಳಿಸಿದ್ದು, ಜನರು ಇದನ್ನು ಮರೆತಾಗ, ಎಂದಿನಂತೆ ಅಧಿಕಾರಿಗಳು ತಮ್ಮ ವರದಿ ಸಲ್ಲಿಸಿದಾಗ ಎಲ್ಲವೂ ಮರೆತಂತಾಗಿ ಮತ್ತೇ ಶುರು ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಂತಿವೆ ಅಂತಾರೆ ಸಂಗ್ವಾರದ ಮಲ್ಲಪ್ಪ.
ರೈಲು ಕಂಪನೀಲಿ ನೌಕ್ರಿ ಕೊಡ್ತೀವೆಂದು ರೀಲು ಬಿಟ್ಟರೇ?: ಭರವಸೆಯೇ ನೀಡಿಲ್ಲವೆಂದ ರೈಲ್ವೆ ಇಲಾಖೆ
ನಮ್ಮೂರು ಬಾಲಛೇಡಕ್ಕೆ ವಾಯು ಮಾಲಿನ್ಯ ಪರಿಶೀಲನಾ ವಾಹನ ಬಂದು ಅಲ್ಲ ಆರೇಳು ಗಂಟೆಗಳ ಕಾಲ ತಪಾಸಣೆ ನಡೆಸಿದೆ. ಅಚ್ಚರಿಯೆಂದರೆ, ಈ ವೇಳೆ ಎಂದಿನಂತೆ ಕಂಪನಿಗಳ ದುರ್ನಾತ, ಹೊಗೆ ಕಂಡು ಬಂದಿರಲಿಲ್ಲ. ಈ ಭಾಗದಲ್ಲಿ ತಪಾಸಣೆ ನಡೆಸುತ್ತಾರೆ ಎಂಬುದರಿತು ಅವರೆಲ್ಲ ಕೆಲಸ ಸ್ಥಗಿತಗೊಳಿಸಿರುತ್ತಾರೆ. ಹೀಗಾದಾಗ, ಮಾಲಿನ್ಯ ಪರಿಶೀಲನಾ ವಾಹನ ನೀಡುವ ವರದಿಯಲ್ಲಿ ಎಲ್ಲವೂ ಸರಿಯಿದೆ ಎಂದೇ ಬರುತ್ತದೆ. ಹೀಗಾದರೆ ಹೇಗೆ ?
- ಮಲ್ಲಿಕಾರ್ಜುನ, ಬಾಲಛೇಡ ಗ್ರಾಮಸ್ಥ.


