ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ಅಂಟಿಕ್ಕೊಂಡಂತೆ ಇರುವ, ತೆಲಂಗಾಣದ ಹತ್ತಾರು ಗ್ರಾಮಗಳ ಜನರು ಇದೀಗ ಅಲ್ಲಿನ ಸಿಎಂ ರೇವಂತರೆಡ್ಡಿ ಅವರಿಗೆ ಪತ್ರ ಬರೆದು, ಕೆಮಿಕಲ್ ಫ್ಯಾಕ್ಟರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆನಂದ್ ಎಂ. ಸೌದಿ
ಯಾದಗಿರಿ (ಮೇ.06): ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ಅಂಟಿಕ್ಕೊಂಡಂತೆ ಇರುವ, ತೆಲಂಗಾಣದ ಹತ್ತಾರು ಗ್ರಾಮಗಳ ಜನರು ಇದೀಗ ಅಲ್ಲಿನ ಸಿಎಂ ರೇವಂತರೆಡ್ಡಿ ಅವರಿಗೆ ಪತ್ರ ಬರೆದು, ಕೆಮಿಕಲ್ ಫ್ಯಾಕ್ಟರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ ಕೆಲವೇ ಕಿ.ಮೀ. ದೂರದಲ್ಲಿರುವ, ನಮ್ಮ ತೆಲಂಗಾಣದ ಕೃಷ್ಣಾ, ಚೇಗುಂಟಾ, ಐನಾಪುರ ಮುಂತಾದ ಹತ್ತಾರು ಗ್ರಾಮಗಳಲ್ಲಿ ಕೆಮಿಕಲ್ -ತ್ಯಾಜ್ಯ ಫ್ಯಾಕ್ಟರಿಗಳ ದುರ್ನಾತ ಹಾಗೂ ಕಲುಷಿತ ಪರಿಸರದಿಂದಾಗಿ ಇಲ್ಲಿನ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳುಂಟಾಗುತ್ತಿದ್ದು, ಕೂಡಲೇ ತೆಲಂಗಾಣ ಸರ್ಕಾರ ಜನರ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಕೃಷ್ಣಾ, ಚೇಗುಂಟಾ, ಐನಾಪುರ ಸುತ್ತಮುತ್ತಲಿನ ಗ್ರಾಮಸ್ಥರು ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
ಕೃಷ್ಣಾ ಮಂಡಲ ಪ್ರಾಂತದ ಮುಖಂಡ, ಗಡಿ ಕನ್ನಡಿಗರ ಹೋರಾಟದ ಸಮಿತಿಯ ಮುಖಂಡರೂ ಆಗಿರುವ ಅಮರ್ ದೀಕ್ಷಿತ್, ಬಿಆರ್‌ಎಸ್ ಯುವ ನಾಯಕ ಶಿವರಾಜ್ ಪಾಟೀಲ್, ಚೇಗುಂಟಾ ಗ್ರಾಮದ ಮಾಜಿ ಸರಪಂಚ ಶಿವಪ್ಪ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ನಲ್ಲೆ ನರಸಪ್ಪ ಮುಂತಾದವರ ತಂಡ ಆ ಭಾಗದ ಜನರ ಜೊತೆ ಸಭೆ ನಡೆಸಿ ಸಿಎಂ ದೂರಿ ಪತ್ರ ಬರೆದಿದ್ದಾರೆ. ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಸಮೀಪವೇ ಇರುವ ತೆಲಂಗಾಣದ ಈ ಗ್ರಾಮಗಳ ಗ್ರಾಮಸ್ಥರು ಕೆಮಿಕಲ್ ದುರ್ನಾತ-ತ್ಯಾಜ್ಯ ಘಾಟಿನಿಂದಾಗಿ ಅನಾರೋಗ್ಯಕರ ವಾತಾವರಣಕ್ಕೆ ತುತ್ತಾಗುತ್ತಿದ್ದಾರೆ. ಕೂಡಲೇ, ತೆಲಂಗಾಣ ಸರ್ಕಾರ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪರಿಸರ ಮಂಡಳಿ ಶಿಫಾರಸಿಗೂ ಕ್ಯಾರೇ ಎನ್ನದ ಕಂಪನಿಗಳು: ಸಮಿತಿ ಆತಂಕ
ನಾವು ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ, ಕರ್ನಾಟಕದ ಕೆಮಿಕಲ್ ಫ್ಯಾಕ್ಟರಿಗಳಿಂದ ಕಲುಷಿತ ವಾತಾವರಣ ಹಾಗೂ ಜೀವಸಂಕುಲದ ಮೇಲೆ ಬೀರುತ್ತಿರುವ ಹಾಗೂ ಭವಿಷ್ಯದಲ್ಲಿ ಬೀರಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದೇವೆ. ನಮ್ಮ ತೆಲಂಗಾಣ ಸಿಎಂ ರೇವಂತರೆಡ್ಡಿ ಅವರಿಗೂ ಕೃಷ್ಣಾ ಮಂಡಲ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಅಮರ್ ದೀಕ್ಷಿತ್ ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭಕ್ಕೆ ತಿಳಿಸಿದರು.
ರೆಡ್ ಝೋನ್ ಫ್ಯಾಕ್ಟರಿಗಳಲ್ಲಿ ಬಾಲಕಾರ್ಮಿಕರ ಬಳಕೆ: ರೆಡ್ ಝೋನ್ ಎಂದು ಗುರುತಿಸಲಾದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕೆಮಿಕಲ್ ಕಂಪನಿಗಳು ಬಾಲ- ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ಬಳಸುತ್ತಿದ್ದ ಆರೋಪದಡಿ, ಸೋಮವಾರ ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ ರಿಯಾಜ್ ಪಟೇಲ್ ಹಾಗೂ ಕಾರ್ಮಿಕ ನಿರೀಕ್ಷಕರಾದ ಸಂಗೀತಾ ಅವರ ತಂಡ ಅಲ್ಲಿನ ಕೆಮಿಕಲ್ ಕಾರ್ಖಾನೆಯೊಂದಕ್ಕೆ ತೆರಳಿ, ಪರಿಶೀಲನೆ ನಡೆಸಿದೆ. ಕೆಲಸದ ವೇಳೆ ಸಲ್ಫ್ಯೂರಿಕ್ ಆ್ಯಸಿಡ್ - ಅಪಾಯಕಾರಿ ರಾಸಾಯನಿಕ ತಗುಲಿ, ಚಿಕಿತ್ಸೆ ನೀಡಿಸುವಲ್ಲಿ ಕಂಪನಿಯವರು ಹಿಂದೇಟು ಹಾಕುತ್ತಿದ್ದಾರೆಂದು ದೂರಿ, ಬದ್ದೇಪಲ್ಲಿ ತಾಂಡಾದ ಐವರು ಕಾರ್ಖಾನೆಯೆದುರು ಶನಿವಾರ ಪ್ರತಿಭಟಿಸಿದ್ದರು. ಕಾರ್ಮಿಕರಿಗೆ ಯಾವುದೇ ಸುರಕ್ಷತೆ ಹಾಗೂ ಮಕ್ಕಳನ್ನು ಅಪಾಯಕಾರಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಈ ವೇಳೆ ಆರೋಪಗಳು ಕೇಳಿಬಂದಿದ್ದವು.
ಮಾಧ್ಯಮಗಳಲ್ಲಿ ಇದು ವರದಿಯಾದ ಬಳಿಕ, ಘಟನೆ ಮಾಹಿತಿ ಅರಸಿ ಹೋದ ಜಿಲ್ಲಾ ಬಾಲ ಕಾರ್ಮಿಕರ ಯೋಜನಾಧಿಕಾರಿ ರಿಯಾಜ್ ಪಟೇಲ್ ಹಾಗೂ ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಸಂಗೀತಾ, ಅಲ್ಲಿನ ಕಂಪನಿ ವೀಕ್ಷಿಸಿದ್ದರಲ್ಲದೆ, 17 ವರ್ಷದ ಮೂವರು ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡಿದ್ದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಸಂತ್ರಸ್ತ ಬಾಲಕರಿಂದ ದೂರು ಪಡೆದಿದ್ದಾರೆ. ಬಾಲ- ಕಿಶೋರ ಕಾರ್ಮಿಕರ ಬಳಕೆ ನಿಷೇಧವಿರುವಾಗ, ಅದರಲ್ಲೂ ಅಪಾಯಕಾರಿ ಕೆಮಿಕಲ್ ಕಂಪನಿಗಳಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದರ ಬಗ್ಗೆ ಸಂತ್ರಸ್ತರ ಹೇಳಿಕೆ ಹಾಗೂ ದಾಖಲೆಗಳ ಪರಿಶೀಲನೆಯಿಂದ ತಪಾಸಣೆ ವೇಳೆ ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಸಂಬಂಧಿತ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ರಿಯಾಜ್ ಪಟೇಲ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಕೆಮಿಕಲ್ ಕಂಪನಿಗಳ ದುರ್ನಾತ ಸಹಿಸಲು ಆಗುತ್ತಿಲ್ಲ. ಇದು ನಮ್ಮ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ತೆಲಂಗಾಣ ಸಿಎಂ ಅವರ ಗಮನಕ್ಕೆ ತಂದು, ಕ್ರಮಕ್ಕೆ ಆಗ್ರಹಿಸಿದ್ದೇವೆ.
-ನಲ್ಲೆ ನರಸಪ್ಪ, ಬಿಜೆಪಿ ಮಂಡಳ ಅಧ್ಯಕ್ಷರು, ಕೃಷ್ಣಾ.
ತೆಲಂಗಾಣದ ಬಾಧಿತ ಹಳ್ಳಿಗಳಲ್ಲಿ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಜನರಿಗೆ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿ, ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರಿ ಅನಾಹುತದ ಆತಂಕವಿದೆ.
-ಶಿವರಾಜ್ ಪಾಟೀಲ್, ಬಿಜೆಪಿ ಪಕ್ಷದ ಮಂಡಳ ಯುವ ನಾಯಕ. ಕಷ್ಣಾ, ತೆಲಂಗಾಣ.
Toxic Air: ರೈತರಿಗೆ ಸುಳ್ಳು ಹೇಳಿ ಭೂಮಿ ಪಡೆದ ಸರ್ಕಾರ: ವಿಳಂಬ ಏಕೆ?
ಅಪಾಯಕಾರಿ ಕೆಮಿಕಲ್ ಕಂಪನಿಗಳಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದರ ಬಗ್ಗೆ ಸಂತ್ರಸ್ತರ ಹೇಳಿಕೆ ಹಾಗೂ ದಾಖಲೆಗಳ ಪರಿಶೀಲನೆಯಿಂದ ತಪಾಸಣೆ ವೇಳೆ ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಸಂಬಂಧಿತ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು.
-ರಿಯಾಜ್ ಪಟೇಲ್, ಯೋಜನಾ ನಿರ್ದೇಶಕರು, ಬಾಲ ಕಾರ್ಮಿಕ ಇಲಾಖೆ, ಯಾದಗಿರಿ ಜಿಲ್ಲೆ.


