Asianet Suvarna News Asianet Suvarna News

ಮಳೆ ಇಳಿಮುಖ, ಕೆಲವೆಡೆ ಪ್ರವಾಹ ಯಥಾಸ್ಥಿತಿ

* ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಯ ಕೆಲವೆಡೆ ಇನ್ನೂ ನೆರೆಭೀತಿ
*  ಉತ್ತರ ಕನ್ನಡದಲ್ಲಿ ಪ್ರವಾಹ ನಿಧಾನವಾಗಿ ತಹಬದಿಗೆ
* ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರಮುಖ ಸಂಪರ್ಕ ಕಡಿತ
 

Still Flood in Some Parts of Karnataka grg
Author
Bengaluru, First Published Jul 26, 2021, 7:12 AM IST
  • Facebook
  • Twitter
  • Whatsapp

ಬೆಂಗಳೂರು(ಜು.26): ಕರಾವಳಿ, ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಎದೆಬಿಡದೆ ಸುರಿಯುತ್ತಿದ್ದ ಮಳೆ ಮತ್ತು ಅದರಿಂದ ಉಂಟಾದ ಪ್ರವಾಹ ಬಹುತೇಕ ಇಳಿಮುಖವಾಗಿದೆ. ಆದರೆ ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳ ಕಾಲ ಸುರಿದ ಮಳೆಯಿಂದಾಗಿ ಹೆಚ್ಚಿನ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿ ನೀರಿನ ಹರಿವಿನಲ್ಲಿ ಯಥಾಸ್ಥಿತಿ ಇದೆ. 

ಏತನ್ಮಧ್ಯೆ ಘಟಪ್ರಭಾದಿಂದಾಗಿ ಪ್ರವಾಹಕ್ಕೆ ಒಳಗಾಗಿದ್ದ ಗೋಕಾಕ ಪಟ್ಟಣದಲ್ಲಿ ಮಳೆ ನೀರು ಸ್ವಲ್ಪ ಇಳಿಮುಖವಾಗಿದ್ದರೆ, ಬಾಗಲಕೋಟೆ ಜಿಲ್ಲೆಯ ಮುಧೋಳದ ನದಿತೀರ ಪ್ರದೇಶದಲ್ಲಿ, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಜೊತೆಗೆ ಮಲಪ್ರಭಾ, ಬೆಣ್ಣೆಹಳ್ಳದ ಪ್ರವಾಹ ಏರಿಕೆಯಾಗುತ್ತಲೇ ಇರುವುದರಿಂದ ಗದಗ ಜಿಲ್ಲೆಯ ಕೆಲಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಮುಂದುವರಿದಿದೆ.

ಇನ್ನು ಕಳೆದ ಕೆಲ ದಿನಗಳಿಂದ ಭಾರೀ ಪ್ರಕೃತಿ ವಿಕೋಪಕ್ಕೊಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿಧಾನಕ್ಕೆ ತಹಬದಿಗೆ ಬರುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿಯೂ ಇಳಿಮುಖವಾಗುತ್ತಿದೆ. ಆದರೂ ಹೊಲಗದ್ದೆಗಳಿಗೆ ನುಗ್ಗಿದ್ದ ನೀರು ಇನ್ನೂ ಕಡಿಮೆಯಾಗಿಲ್ಲ. ಇನ್ನು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ನಾಯಕತ್ವ ಬದಲಾವಣೆ: ಯಡಿಯೂರಪ್ಪನವರನ್ನ ಬಚಾವ್ ಮಾಡುತ್ತಾ ಪ್ರವಾಹ?

ಕೃಷ್ಣಾ ತೀರದಲ್ಲಿ ಇನ್ನೂ ಪ್ರವಾಹಾತಂಕ:

ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಜೊತೆಗೆ ಬೆಳಗಾವಿಯಲ್ಲಿ ಭಾನುವಾರ ಮತ್ತೆ ಮಳೆ ಆರಂಭಗೊಂಡಿದೆ. ಹೀಗಾಗಿ ಜಿಲ್ಲೆಯ ಅಥಣಿ, ಕಾಗವಾಡ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿತಾಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿ 52 ಸೇತುವೆ, ಬಾಗಲಕೋಟೆ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಸೇತುವೆಗಳು ಮುಳುಗಡೆಯಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 145 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿವೆ. 16 ಮನೆಗಳು ಸಂಪೂರ್ಣವಾಗಿ ಬಿದ್ದಿದ್ದು, 1285 ಮನೆಗಳು ಭಾಗಶಃ ಬಿದ್ದಿವೆ. 3012 ಜಾನುವಾರುಗಳು ಅಸುನೀಗಿವೆ. 28,024 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 129 ಕೇಂದ್ರಗಳನ್ನು ತೆರೆಯಲಾಗಿದೆ.

ಬೆಳಗಾವಿ ಜಿಲ್ಲೆಯ ಅತಿ ದೊಡ್ಡ ಸೇತುವೆಗಳಲ್ಲಿ ಒಂದಾದ ಅಥಣಿ ತಾಲೂಕಿನ ದರೂರ ಸೇತುವೆ ಮುಳುಗಡೆಯಾಗಿದ್ದು ಸಂಚಾರ ಬಂದ್‌ ಆಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಧಾರವಾಡ, ಬೆಂಗಳೂರು, ಗೋಕಾಕ ಮಾರ್ಗಕ್ಕೆ ಸಂಚರಿಸುವ ಬಸ್‌ಗಳನ್ನು ಸ್ಥಗಿತ ಮಾಡಿದ್ದಾರೆ.

ಕೃಷ್ಣಾ ನದಿಯಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ 21 ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿ ಪಾತ್ರದಲ್ಲಿನ ಅಬ್ಬರ ಹೆಚ್ಚಾದ ಕಾರಣ ಮುಧೋಳ ತಾಲೂಕಿನ 6ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ. 15ಕ್ಕೂ ಹೆಚ್ಚು ಕೆಳ ಹಂತದ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಘಟಪ್ರಭಾ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಮುಧೋಳ ತಾಲೂಕಿನ 3 ಗ್ರಾಮಗಳು ಜಲಾವೃತವಾಗಿದೆ.

ಭಾನುವಾರ ಬೆಳಗ್ಗೆ ಮುಧೋಳ-ಯಾದವಾಡ ರಾಜ್ಯ ಹೆದ್ದಾರಿಯ ಮೇಲಿನ ಎತ್ತರದ ಸೇತುವೆ ಸಂಪೂರ್ಣ ಭರ್ತಿಯಾಗಿ ರಸ್ತೆಗೆ ನೀರು ನುಗ್ಗಿದ್ದರಿಂದ ಆ ಮಾರ್ಗದ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರಮುಖ ಸಂಪರ್ಕ ಕಡಿತವಾಗಿದೆ.

ಗದಗ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆಯಿಂದ ಮಲಪ್ರಭಾ, ಬೆಣ್ಣೆಹಳ್ಳದ ಪ್ರವಾಹ ಏರಿಕೆಯಾಗುತ್ತಲೇ ಇದೆ. ನರಗುಂದ ತಾಲೂಕಿನ ಲಖಮಾಪುರ ಗ್ರಾಮ ಮಲಪ್ರಭಾ ನದಿ ಪ್ರವಾಹದಿಂದಾಗಿ ಸಂಪೂರ್ಣ ಸುತ್ತುವರಿದ್ದು, ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದೆ. ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಸೇರುವ 7 ಗ್ರಾಮಗಳಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿದ್ದು, ಈಗಾಗಲೇ ಕುರುವಿನಕೊಪ್ಪ ಮತ್ತು ಅಮರಗೋಳ ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.
 

Follow Us:
Download App:
  • android
  • ios