ಒಳಮೀಸಲಾತಿ ವಿಷಯ ಇತ್ಯರ್ಥವಾಗಿರುವುದರಿಂದ ಹಂತ ಹಂತವಾಗಿ ವಿವಿಧ ಇಲಾಖೆಯಲ್ಲಿನ ಒಟ್ಟು 1,88,037 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು, ಈಗಾಗಲೇ ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಅನುಮೋದನೆ ದೊರಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನ ಪರಿಷತ್‌ : ಒಳಮೀಸಲಾತಿ ವಿಷಯ ಇತ್ಯರ್ಥವಾಗಿರುವುದರಿಂದ ಹಂತ ಹಂತವಾಗಿ ವಿವಿಧ ಇಲಾಖೆಯಲ್ಲಿನ ಒಟ್ಟು 1,88,037 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು, ಈಗಾಗಲೇ ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಅನುಮೋದನೆ ದೊರಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪ್ರಸ್ತುತ ವಿವಿಧ ಇಲಾಖೆಯಲ್ಲಿ 2,84,881 ಹುದ್ದೆಗಳು

ಬಿಜೆಪಿಯ ಹಣಮಂತ ನಿರಾಣಿ ಹಾಗೂ ಡಾ. ಧನಂಜಯ ಸರ್ಜಿ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ವಿವಿಧ ಇಲಾಖೆಯಲ್ಲಿ 2,84,881 ಹುದ್ದೆಗಳು, ನಿಗಮ, ಮಂಡಳಿಗಳಲ್ಲಿ 1,01,420 ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳು ಖಾಲಿ ಇವೆ. ಈ ಪೈಕಿ 8157 ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದೆ. 3,081 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. 32 ಇಲಾಖೆಗಳ 24,300 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ ಎಂದು ತಿಳಿಸಿದರು.

ಆರ್ಥಿಕ ಇಲಾಖೆ ಅನುಮತಿ ಕಡ್ಡಾಯ:

ಹಣಕಾಸು ಮೇಲೆ ಪರಿಣಾಮ ಉಂಟಾಗುವ ಯಾವುದೇ ಹುದ್ದೆ ನೇಮಕ ಮಾಡುವ ಮುನ್ನ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ವೇತನ ಸೇರಿ ವಿವಿಧ ಸೌಲಭ್ಯ ನೀಡುವ ಜವಾಬ್ದಾರಿ ಆರ್ಥಿಕ ಇಲಾಖೆಗೆ ಸೇರಿದೆ. ಹೀಗಾಗಿ ಆರ್ಥಿಕ ಇಲಾಖೆ ಅನುಮತಿ ಕಡ್ಡಾಯ, ಆದರೆ ಆಡಳಿತ ಇಲಾಖೆ ಹಂತದಲ್ಲೇ ನಿಯಮಾನುಸಾರ ಮುಂಬಡ್ತಿ ಮೂಲಕ ಭರ್ತಿ ಮಾಡಿಕೊಳ್ಳಬಹುದಾದ ಹುದ್ದೆಗಳು, ಅನುಕಂಪ ಆಧಾರದ ನೇಮಕಾತಿಗಳು, ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.80 ರವರೆಗೆ ಹುದ್ದೆಗಳ ನೇಮಕಾತಿ ಹಾಗೂ ಆರ್ಥಿಕ ಇಲಾಖೆ ಅನುಮತಿಸಿದ ಹುದ್ದೆಗಳಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳೆಂದು ಗುರುತಿಸಿರುವ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ಬೇಕಿಲ್ಲ ಎಂದು ವಿವರಿಸಿದರು.