ಪರಿಶಿಷ್ಟ ಜಾತಿ (ಎಸ್ಸಿ)ಯಲ್ಲಿ ಒಳ ಮೀಸಲಾತಿ ಕಲ್ಪಿಸಿ ಹೊರಡಿಸಿರುವ ಆದೇಶದ ಅನುಸಾರ ನೇಮಕಾತಿಯ ಅಂತಿಮ ಆದೇಶಗಳನ್ನು ಪ್ರಕಟಿಸದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರು (ಅ.19): ಪರಿಶಿಷ್ಟ ಜಾತಿ (ಎಸ್ಸಿ)ಯಲ್ಲಿ ಒಳ ಮೀಸಲಾತಿ ಕಲ್ಪಿಸಿ ಹೊರಡಿಸಿರುವ ಆದೇಶದ ಅನುಸಾರ ನೇಮಕಾತಿಯ ಅಂತಿಮ ಆದೇಶಗಳನ್ನು ಪ್ರಕಟಿಸದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಒಳ ಮೀಸಲಾತಿ ಆದೇಶ ಪ್ರಶ್ನಿಸಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿಗಳ ಮಹಾ ಒಕ್ಕೂಟದಿಂದ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಬಹುದು. ಆದರೆ, ಮುಂದಿನ ವಿಚಾರಣೆವರೆಗೆ ನೇಮಕಾತಿ ಆದೇಶವನ್ನು ನೀಡುವಂತಿಲ್ಲ ಎಂದು ಹೇಳಿದ ಹೈಕೋರ್ಟ್ ವಿಚಾರಣೆಯನ್ನು ನ.13ಕ್ಕೆ ಮುಂದೂಡಿದೆ.
ಮೂರೂವರೆ ದಶಕಗಳ ಹೋರಾಟ ಮತ್ತು ಸುಪ್ರೀಂಕೋರ್ಟ್ ಆದೇಶದ ಅನುಸಾರ ಒಳಮೀಸಲಾತಿಗಾಗಿ ಸರ್ಕಾರ ಆಯೋಗವನ್ನು ರಚಿಸಿತ್ತು. ಅದರಂತೆ ಅಧ್ಯಯನ ನಡೆಸಿದ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಅಲೆಮಾರಿಗಳಿಗೆ ಎಸ್ಸಿಯಲ್ಲಿ ಶೇ.1ರಷ್ಟು ಒಳಮೀಸಲಾತಿ ಕಲ್ಪಿಸಬೇಕು ಎಂದು ಉಲ್ಲೇಖಿಸಲಾಗಿದೆ.
ರಾಜ್ಯ ಸರ್ಕಾರಕ್ಕೆ ನೋಟಿಸ್
ಆದರೆ, ರಾಜ್ಯ ಸರ್ಕಾರದ ಅಂತಿಮ ಆದೇಶದಲ್ಲಿ ಅಲೆಮಾರಿಗಳನ್ನು ಕಡೆಗಣಿಸಲಾಗಿದೆ. ಇದರಿಂದ 59 ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಒಕ್ಕೂಟದ ಪರ ವಕೀಲರು ವಾದ ಮಂಡಿಸಿದರು. ಪ್ರಾಥಮಿಕ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
