ರಾಜ್ಯಾದ್ಯಂತ ದಿನೇದಿನೆ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗಿದ್ದು, ಆರೋಗ್ಯ ಇಲಾಖೆ ಪ್ರಕಾರ ಕಳೆದ 20 ದಿನಗಳಲ್ಲಿ 1,404 ಮಂದಿಗೆ ಜ್ವರ ದೃಢಪಟ್ಟಿದೆ.

ಬೆಂಗಳೂರು (ಅ.23): ರಾಜ್ಯಾದ್ಯಂತ ದಿನೇದಿನೆ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗಿದ್ದು, ಆರೋಗ್ಯ ಇಲಾಖೆ ಪ್ರಕಾರ ಕಳೆದ 20 ದಿನಗಳಲ್ಲಿ 1,404 ಮಂದಿಗೆ ಜ್ವರ ದೃಢಪಟ್ಟಿದೆ.

Add Asianetnews Kannada as a Preferred SourcegooglePreferred

ಈವರೆಗೆ ಡೆಂಘೀ ಜ್ವರ ಪ್ರಕರಣಗಳು ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು. ಆದರೆ ಕಳೆದ 20 ದಿನಗಳಿಂದ ಬೆಂಗಳೂರುನಗರಕ್ಕಿಂತ ವೇಗವಾಗಿ ರಾಜ್ಯದ ಇತರೆ ಪ್ರದೇಶಗಳಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ. ನಿರ್ಲಕ್ಷ್ಯ ಮಾಡಿದರೆ ಮಾರಣಾಂತಿಕವಾಗಬಲ್ಲ ಜ್ವರದ ಬಗ್ಗೆ ಎಚ್ಚರ ವಹಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ. 

ಕರ್ನಾಟಕದಲ್ಲಿ ಡೆಂಘಿ ರುದ್ರ ನರ್ತನ: ಏನಿದರ ಲಕ್ಷಣಗಳು?

ಪ್ರಸಕ್ತ ವರ್ಷದಲ್ಲಿ ಅ.1ರ ವೇಳೆಗೆ ಬೆಂಗ ಳೂರು ನಗರದಲ್ಲಿ 5,767 ಪ್ರಕರಣ ವರದಿ ಯಾಗಿದ್ದವು. ಬೆಂಗಳೂರು ನಗರ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ 4,505 ಪ್ರಕರಣ ವರದಿಯಾಗಿದ್ದೆವರು. ಈ ಪ್ರಕರಣಗಳ ಸಂಖ್ಯೆ ಅ.20ರ ವೇಳೆಗೆ ಬೆಂಗಳೂರು ನಗರದಲ್ಲಿ 6,139 ಆಗಿದ್ದು, 372 ಪ್ರಕರಣ ಹೆಚ್ಚಾಗಿದೆ. ಇನ್ನು ರಾಜ್ಯದ ಇತರೆಡೆ 4,505 ರಷ್ಟಿದ್ದ ಪ್ರಕರಣಗಳು 5,571ಕ್ಕೆ ಏರಿಕೆಯಾಗಿದ್ದು, 20 ದಿನಗಳಲ್ಲಿ 1,066 ಮಂದಿಗೆ ಡೆಂಘೀ ಸೋಂಕು ದೃಢಪಟ್ಟಿದೆ. ಇವು ಆರೋಗ್ಯ ಇಲಾಖೆಗೆ ವೈದ್ಯರು ವರದಿ ಮಾಡಿರುವ ಅಂಕಿ-ಅಂಶಗಳಾಗಿದ್ದು, ವಾಸ್ತವವಾಗಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗಿರುತ್ತವೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ರೋಗದ ಲಕ್ಷಣಗಳೇನು?

ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯಿಂದ ಡೆಂಘೀ ಜ್ವರ ಹರಡುತ್ತದೆ. ಸೊಳ್ಳೆ ಕಚ್ಚಿದ 4-5 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೈಕೈ ನೋವು, ಕೀಲು ನೋವು, ವಿಪರೀತ ಜ್ವರ, ರಕ್ತದಲ್ಲಿ ಪ್ಲೇಟ್‌ಲೆಟ್ ಕಣಗಳ ಪ್ರಮಾಣ ಕುಸಿಯುವಿಕೆ ಪ್ರಮುಖ ಲಕ್ಷಣಗಳು. ಪ್ಲೇಟೈಟ್ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕಡಿಮೆಯಾದರೆ ರೋಗಿಯ ಸಾವಿಗೂ ಕಾರಣವಾಗಬಹುದು.

ಜಾಗರೂಕರಾಗಿರಿ! ಡೆಂಗ್ಯೂ ಸೊಳ್ಳೆಗಳು ರೆಫ್ರಿಜರೇಟರ್‌ನಲ್ಲೂ ಹುಟ್ಟುತ್ತೆ !

ಎಚ್ಚರ ವಹಿಸುವುದು ಹೇಗೆ?

  • ಹಗಲಿನ ವೇಳೆ ಕಚ್ಚುವ ಸೊಳ್ಳೆಯಿಂದ ಎಚ್ಚರದಿಂದ ಇರಬೇಕು
  • ಮನೆಯಲ್ಲಿರುವ ನೀರಿನ ಸಂಗ್ರಾಹಕಗಳನ್ನು ಸ್ವಚ್ಛಗೊಳಿಸಬೇಕು
  • ಸೊಳ್ಳೆ ಇರುವ ಒಡೆದ ಬಾಟಲಿ, ಟೈರು, ತೆಂಗಿನ ಚಿಪ್ಪು ವಿಲೇ ಮಾಡಿ
  • ಏರ್ ಕೂಲರ್, ಫ್ರಿಡ್ಜ್‌ಗಳಲ್ಲಿನ ನೀರನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು
  • ಸ್ಥಳೀಯ ಸಂಸ್ಥೆಗಳು ಸೊಳ್ಳೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು
  • ನೀರಿನ ಸಂಪ್, ನೀರು ನಿಲುಗಡೆ ಜಾಗದಲ್ಲಿನ ಲಾರ್ವಾ ನಾಶ ಮಾಡಿ
  • ಸೊಳ್ಳೆ ಹೆಚ್ಚಿರುವ ಕಡೆ ಧೂಮೀಕರಣದಂತಹ ಕ್ರಮ ಕೈಗೊಳ್ಳಬೇಕು
  • ತೀವ್ರ ಜ್ವರದ ಲಕ್ಷಣಗಳು ಕಂಡುಬಂದರೆ ವೈದ್ಯರ ಸಂಪರ್ಕಿಸಬೇಕು