ವರದಿ : ಶಿವಾನಂದ ಗೊಂಬಿ

ಹುಬ್ಬಳ್ಳಿ(ಆ.25):  ಬಹುನಿರೀಕ್ಷಿತ ಎಫ್‌ಎಂಜಿಸಿ (ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌) ಕ್ಲಸ್ಟರ್‌ ಆರಂಭಕ್ಕೆ ಇದೀಗ ಕಾಲ ಸನ್ನಿಹಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎಫ್‌ಎಂಜಿಸಿ ಕ್ಲಸ್ಟರ್‌ ಇನ್ನೊಂದು ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ. ಇದಕ್ಕಾಗಿ ಈಗಾಗಲೇ ವಿಜನ್‌ ಗ್ರೂಪ್‌ (ಸಮಿತಿ) ಕೂಡ ರಚಿಸಿದೆ. ಈ ಸಮಿತಿ ವರದಿ ಕೊಟ್ಟಬಳಿಕ ಅಂತಿಮ ರೂಪ ಪಡೆದುಕೊಳ್ಳಲಿದೆ.

ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌ ಎಂದರೆ ಪ್ರತಿನಿತ್ಯ ಜನರಿಗೆ ಬೇಕಾಗುವ ಅಗತ್ಯ ವಸ್ತುಗಳು. ಉದಾಹರಣೆಗೆ ಫೇಸ್ಟ್‌, ಸೋಪ್‌ ಸೇರಿದಂತೆ ದಿನನಿತ್ಯ ಗ್ರಾಹಕರಿಗೆ ಬೇಕಾಗುವ ಅಗತ್ಯ ವಸ್ತುಗಳು. ಇವುಗಳನ್ನು ಸದ್ಯ ಗುವಾಹಟಿಯಿಂದಲೇ ತರಿಸಲಾಗುತ್ತದೆ. ಇವು ಒಂದೊಂದೇ ಫ್ಯಾಕ್ಟರಿ ಬರಲ್ಲ. ಬಗೆ ಬಗೆಯ ವಸ್ತುಗಳನ್ನು ತಯಾರಿಸುವ 15-20 ಘಟಕಗಳು ಏಕಕಾಲಕ್ಕೆ ಬರುತ್ತವೆ. ಸದ್ಯ ಆಸ್ಸಾಂನ ಗುವಾಹಟಿಯಲ್ಲಿ ಇಂತಹ ಕ್ಲಸ್ಟರ್‌ ಇದೆ. ಅಂತಹದ್ದೆ ಕ್ಲಸ್ಟರ್‌ವೊಂದು ಉತ್ತರ ಕರ್ನಾಟಕಕ್ಕೆ ತರಬೇಕೆಂಬ ಕನಸು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರದ್ದಾಗಿತ್ತು. ಇಲ್ಲಿ ಕ್ಲಸ್ಟರ್‌ ಬಂದರೆ ಸ್ಥಳೀಯರಿಗೆ ಉದ್ಯೋಗ ಲಭಿಸುತ್ತದೆ. ಇಲ್ಲೇ ವಸ್ತುಗಳು ಉತ್ಪಾದನೆಯಾಗಿ ಇಲ್ಲಿನ ಗ್ರಾಹಕರಿಗೆ ವಸ್ತುಗಳನ್ನು ಇಲ್ಲಿಂದಲೇ ಪೂರೈ

ರಾಷ್ಟ್ರೀಯ ನೇಮಕಾತಿ ಏಜೆನ್ಸಿಗೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿ..

ಸಮಾವೇಶದಲ್ಲಿ ಪ್ರಸ್ತಾಪವಿಲ್ಲ:

ಹಾಗೆ ನೋಡಿದರೆ ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ ಸಮಾವೇಶದಲ್ಲೂ ಎಫ್‌ಎಂಸಿಜಿ ಬಗ್ಗೆ ಯಾವುದೇ ಒಪ್ಪಂದ ಆಗಿರಲಿಲ್ಲ. ಒಂದೇ ಸೂರಿನಡಿ ಬಹಳಷ್ಟುಕೈಗಾರಿಕೆಗಳು ಬರುವ ಕಾರಣ ಎಲ್ಲ ಉದ್ಯಮಿಗಳೊಂದಿಗೆ ಚರ್ಚಿಸಿ ಬಳಿಕ ನಿರ್ಧಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿತ್ತು. ಆಮೇಲೆ ಕೊರೋನಾ ವಕ್ಕರಿಸಿತು. ಹೀಗಾಗಿ ಎಫ್‌ಎಂಸಿಜಿ ಕ್ಲಸ್ಟರ್‌ ಘಟಕ ಸ್ಥಾಪನೆ ಕೊಂಚ ಹಿನ್ನೆಡೆಯಾಗಿತ್ತು. ಇದೀಗ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಉದ್ಯಮಿಗಳೊಂದಿಗೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲಿ ಎಫ್‌ಎಂಸಿಜಿ ಘಟಕ ಪ್ರಾರಂಭಿಸಲು ಕೈಗಾರಿಕಾ ಕ್ಲಸ್ಟರ್‌ ಘಟಕವನ್ನು ಧಾರವಾಡ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಇದೀಗ ಜ್ಯೋತಿ ಲ್ಯಾಬ್‌ನ ಉಲ್ಲಾಸ ಕಾಮತ್‌ ನೇತೃತ್ವದಲ್ಲಿ ವಿಜನ್‌ ಗ್ರೂಪ್‌ನ್ನು ರಚಿಸಲಾಗಿದ್ದು, ಈ ಗ್ರೂಪ್‌ವು ಇದೀಗ ಸಮೀಕ್ಷೆ ಕೈಗೊಳ್ಳುತ್ತಿದೆ. ಎಷ್ಟುಜಾಗ ಬೇಕಾಗುತ್ತದೆ? ಎಷ್ಟುಜನರಿಗೆ ಉದ್ಯೋಗ ನೀಡಬಹುದು? ಮಾರುಕಟ್ಟೆವ್ಯವಸ್ಥೆ ಯಾವ ರೀತಿ ಇದೆ? ಇಲ್ಲಿ ಕ್ಲಸ್ಟರ್‌ ಸ್ಥಾಪಿಸುವುದರಿಂದ ಯಾವ್ಯಾವ ಭಾಗಕ್ಕೆ ಸಲೀಸಾಗಿ ಗೂಡ್ಸ್‌ನ್ನು ಕಳುಹಿಸಬಹುದು ಎಂಬುದನ್ನು ಅಧ್ಯಯನ ನಡೆಸುತ್ತಿದೆ. ಈ ಸಮಿತಿ ವರದಿ ಕೊಟ್ಟಬಳಿಕ ಜಿಲ್ಲಾ ಕೈಗಾರಿಕಾ ಕೇಂದ್ರವೂ ಕೆಲಸ ಪ್ರಾರಂಭಿಸಲಿದೆ.

ಅಬ್ಬೋ..! ಐಎಎಸ್ ಸಂದರ್ಶನದಲ್ಲಿ ಹೀಗೂ ಪ್ರಶ್ನೆ ಕೇಳ್ತಾರಾ..?

500 ಎಕರೆ ಮೀಸಲು:  ಈ ನಡುವೆ ಕ್ಲಸ್ಟರ್‌ ಸ್ಥಾಪನೆಗೆ ಧಾರವಾಡದ ಮುಮ್ಮಿಗಟ್ಟಿಕೈಗಾರಿಕಾ ಪ್ರದೇಶದಲ್ಲಿ 500 ಎಕರೆ ಜಾಗವನ್ನು ಮೀಸಲು ಕೂಡ ಇಡಲಾಗಿದೆ. ಆ ಜಾಗಕ್ಕೆ ಉಲ್ಲಾಸ್‌ ಕಾಮತ್‌ ಸೇರಿದಂತೆ ಹಲವರು ಆಗಮಿಸಿ ನೋಡಿಕೊಂಡು ಹೋಗಿದ್ದುಂಟು. ಎಫ್‌ಎಂಜಿಸಿ ಕ್ಲಸ್ಟರ್‌ ಸ್ಥಾಪನೆಗೆ ಉತ್ತಮ ಎಂಬ ನಿರ್ಧಾರಕ್ಕೂ ಬಂದಿದ್ದುಂಟು. ಇದೀಗ ವರದಿ ಕೊಡುವುದೊಂದು ಬಾಕಿಯಿದೆ.

ಎಫ್‌ಎಂಸಿಜಿ ಘಟಕ ಬಂದರೆ ಕನಿಷ್ಠವೆಂದರೂ 10 ಸಾವಿರ ಜನರಿಗೆ ಪ್ರಾರಂಭದಲ್ಲೇ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಹಾಗೇ ವರ್ಷದಿಂದ ವರ್ಷಕ್ಕೆ ಉದ್ಯೋಗದ ಪ್ರಮಾಣ ಜಾಸ್ತಿಯಾಗಲಿದೆ ಎಂದು ಮೂಲಗಳು ತಿಳಿಸುತ್ತವೆ.

ಎಫ್‌ಎಂಸಿಜಿ ಎಂದರೇನು?

ಎಫ್‌ಎಂಜಿಸಿ ಅಂದರೆ ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌. ಜನಸಾಮಾನ್ಯರು ದಿನನಿತ್ಯ ನಿರಂತರವಾಗಿ ಬಳಕೆ ಮಾಡಿಕೊಳ್ಳುವಂಥ ಅಗತ್ಯ ವಸ್ತುಗಳನ್ನೇ ಎಫ್‌ಎಂಸಿಜಿ ವಸ್ತುಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಕನ್ಸ್ಯೂಮರ್‌ ಪ್ಯಾಕ್‌್ಡ ಗೂಡ್ಸ್‌ (ಸಿಪಿಜಿ) ಎಂದು ಕೂಡ ಕರೆಯಲಾಗುತ್ತದೆ. ಇದಕ್ಕೆ ಯಾವುದೇ ಮಿತಿ ಎನ್ನುವುದಿಲ್ಲ. ಕೆಲವೊಂದು ವಸ್ತುಗಳು ಹೊಸದಾಗಿ ಸೇರಿಕೊಳ್ಳುತ್ತಲೇ ಇರುತ್ತವೆ. ಕೆಲವೊಂದು ಇವುಗಳ ಲಿಸ್ಟ್‌ನಿಂದ ಹೊರಗೆ ಕೂಡ ಹೋಗುತ್ತಿರುತ್ತವೆ.

ಸೋಪು, ಪೇಸ್ಟ್‌, ಬಟ್ಟೆಗೆ ಬಳಸುವ ಉಜಾಲಾ (ಬ್ಲ್ಯೂ), ಪೌಡರ್‌, ಕ್ರೀಮ್‌, ಫೇಸಿಯಲ್‌ ಕ್ರೀಮ್‌, ಬಟನ್‌, ಬೆಂಕಿ ಪೊಟ್ಟಣ, ಶಾಂಪು, ಟೊಮೆಟೋ ಸಾಸ್‌, ಹಾರ್ಪಿಕ್‌, ಕುರಕುರೆ, ಕೋಲ್ಡ್‌ಡ್ರಿಂಕ್ಸ್‌... ಹೀಗೆ ನೂರಾರು ವಸ್ತುಗಳು ಇದರಡಿಯಲ್ಲಿ ಬರುತ್ತವೆ.

ಇತ್ತೀಚೆಗೆ ಸ್ಯಾನಿಟೈಸರ್‌, ಮಾಸ್ಕ್‌ ಕೂಡ ಎಫ್‌ಎಂಸಿಜಿ ವ್ಯಾಪ್ತಿಯಲ್ಲಿ ಸೇರ್ಪಡೆಯಾಗಿವೆ. ಏಕೆಂದರೆ ಇವು ಇದೀಗ ನಿರಂತರ ಬಳಕೆಯ ವಸ್ತುಗಳಾಗಿವೆ. ಇದರ ವ್ಯಾಪ್ತಿ ಇಷ್ಟೇ ಎಂಬುದಿಲ್ಲ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ತಿಳಿಸುತ್ತಾರೆ. ಫೇಸ್‌ಶಿಲ್ಡ್‌ ಇನ್ನೂ ಎಫ್‌ಎಂಸಿಜಿ ಗ್ರೂಪಲ್ಲಿ ಬಂದಿಲ್ಲ.

ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೆರಡು ದಿನಗಳಲ್ಲಿ ಮುಮ್ಮಿಗಟ್ಟಿಯಲ್ಲಿ ಸಿವಿಲ್‌ ವರ್ಕ್ ಆರಂಭವಾಗುವ ಸಾಧ್ಯತೆಯುಂಟು. ಇನ್ನೊಂದು ವರ್ಷದಲ್ಲಿ ಕ್ಲಸ್ಟರ್‌ ತಲೆ ಎತ್ತುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸುತ್ತವೆ.

ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆಗೆ ಪ್ರಕ್ರಿಯೆ ಆರಂಭವಾಗಿರುವುದಂತೂ ಸತ್ಯ.

ಎಫ್‌ಎಂಸಿಜಿ ಕ್ಲಸ್ಟರ್‌ ಪ್ರಾರಂಭಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಈ ಸಂಬಂಧ ಉಲ್ಲಾಸ್‌ ಕಾಮತ್‌ ನೇತೃತ್ವದಲ್ಲಿ ಈಗಾಗಲೇ ವಿಜನ್‌ ಗ್ರೂಪ್‌ ರಚಿಸಲಾಗಿದೆ. ಅದು ವರದಿ ಕೊಟ್ಟಬಳಿಕ ಕೆಲಸ ಪ್ರಾರಂಭವಾಗಲಿದೆ. ಇನ್ನೊಂದು ವರ್ಷದಲ್ಲಿ ಕ್ಲಸ್ಟರ್‌ ಸ್ಥಾಪಿಸಬೇಕೆಂಬ ಇಚ್ಛೆ ಸರ್ಕಾರದ್ದು.

- ಜಗದೀಶ ಶೆಟ್ಟರ್‌, ಸಚಿವರು, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಖಾತೆ