ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನೂ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾಗೆ ವಹಿಸಬೇಕೋ? ಅಥವಾ ಸರ್ಕಾರವೇ ನಿರ್ವಹಿಸಬೇಕೋ? ಎಂಬುದರ ಚರ್ಚೆಯೂ ಸರ್ಕಾರ ಮಟ್ಟದಲ್ಲಿ ನಡೆದಿದೆ: ಸಚಿವ ಡಾ.ಎಂ.ಬಿ.ಪಾಟೀಲ 

ವಿಜಯಪುರ(ಜು.29): ರಾಜ್ಯದ ಕೆಲ ವಿಮಾನ ನಿಲ್ದಾಣಗಳನ್ನು ಇನ್ನು ಮುಂದೆ ರಾಜ್ಯ ಸರ್ಕಾರದಿಂದಲೇ ನಿರ್ವಹಿಸಲು ಚಿಂತನೆ ನಡೆಸಿದೆ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು. 

ಶುಕ್ರವಾರ ವಿಜಯಪುರ ಹೊರ ವಲಯದ ಬುರಣಾಪುರ ಬಳಿ ನಿರ್ಮಾಣ ಹಂತದ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿಮಾನ ನಿಲ್ದಾಣ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಸರ್ಕಾರವೇ ನಿರ್ವಹಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. 

ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಾಪಸ್‌ ಪಡೆಯಲ್ಲ: ಸಚಿವ ಎಂ.ಬಿ.ಪಾಟೀಲ್‌

ಶಿವಮೊಗ್ಗ, ವಿಜಯಪುರ, ರಾಯಚೂರು ಈ ಎಲ್ಲ ವಿಮಾನ ನಿಲ್ದಾಣಗಳನ್ನು ಏರ್‌ಪೋರ್ಚ್‌ ಅಥಾರಿಟಿ ಆಫ್‌ ಇಂಡಿಯಾಗೆ ವಹಿಸಬೇಕೋ? ಅಥವಾ ರಾಜ್ಯ ಸರ್ಕಾರವೇ ನಡೆಸಬೇಕೋ? ಎಂಬುದು ಇನ್ನೂ ತೀರ್ಮಾನವಾಗಬೇಕಿದೆ. ಇದಕ್ಕೆ ರಾಜ್ಯ ಸರ್ಕಾರ ಅನುದಾನ ಕೊಟ್ಟಿದ್ದು, ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾಗೆ ವಹಿಸಿದರೆ ರಾಜ್ಯ ಸರ್ಕಾರಕ್ಕೆ ಯಾವ ಆದಾಯವೂ ಬರುವುದಿಲ್ಲ. ಅದನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಲು ಸಮರ್ಥವಾಗಿದೆ ಎಂದು ಪ್ರತಿಕ್ರಿಯಿಸಿದರು.

ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನೂ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾಗೆ ವಹಿಸಬೇಕೋ? ಅಥವಾ ಸರ್ಕಾರವೇ ನಿರ್ವಹಿಸಬೇಕೋ? ಎಂಬುದರ ಚರ್ಚೆಯೂ ಸರ್ಕಾರ ಮಟ್ಟದಲ್ಲಿ ನಡೆದಿದೆ. ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ, ಭೌತಿಕ ಕಾಮಗಾರಿ ಹಾಗೂ ಉಪಕರಣ ಅಳವಡಿಕೆ ಮೊದಲಾದ ಕಾಮಗಾರಿಗಳು ಪೂರ್ಣಗೊಂಡರೆ ಏಪ್ರಿಲ್‌ ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಸಹ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.