Asianet Suvarna News

ಶಾಲಾ ಮಕ್ಕಳಿಗೆ ಸಾಕ್ಸ್, ಶೂ, ಬ್ಯಾಗ್; ಸುವರ್ಣ ನ್ಯೂಸ್ ಕೆಲಸಕ್ಕೆ ಸುರೇಶ್ ಕುಮಾರ್ ಮೆಚ್ಚುಗೆ

ಮೊನ್ನೆ ‘ಸುವರ್ಣ ನ್ಯೂಸ್‌’ನಲ್ಲಿ ರಾಯಚೂರು ಜಿಲ್ಲೆಯ ಕೆಲ ಶಾಲೆಗಳು ಕಳಪೆ ಶೂ, ಸಾಕ್ಸ್‌ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಿದ ಬಗ್ಗೆ ವರದಿ ಪ್ರಸಾರವಾಯಿತು. ಸಂಬಂಧಪಟ್ಟಎಸ್‌ಡಿಎಂಸಿ ಸದಸ್ಯರು ಚರ್ಚಿಸಿಯೇ ಇಂತಹ ಶೂ, ಸಾಕ್ಸ್‌ ಖರೀದಿ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನುವ ಆಘಾತಕಾರಿ ಅಂಶವೂ ವರದಿಯಲ್ಲಿತ್ತು.

State Education Minister S Suresh Kumar applauds suvarna news Big 3 campaign
Author
Bengaluru, First Published Nov 13, 2019, 2:06 PM IST
  • Facebook
  • Twitter
  • Whatsapp

ಇತ್ತೀಚೆಗೆ ನಾನು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಸಮನ್ವಯ ವೇದಿಕೆಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದೆ. ಹಲವಾರು ಶಾಲೆಗಳ ಅಭಿವೃದ್ಧಿ ಸಮಿತಿಗಳ ಪ್ರತಿನಿಧಿಗಳು ಅಲ್ಲಿ ಹಾಜರಿದ್ದರು.

ಅಲ್ಲಿ ನಡೆದ ಉತ್ಸಾಹದ ಚರ್ಚೆಗಳು, ವಿಚಾರ ವಿನಿಮಯಗಳು ನಮ್ಮಲ್ಲಿ ಎಷ್ಟುಸತ್ವಯುತವಾದ ವ್ಯವಸ್ಥೆ ಇದೆ ಹಾಗೂ ಇದರ ಪರಿಣಾಮಕಾರಿಯಾದ ಬಳಕೆ ನಮ್ಮ ಶೈಕ್ಷಣಿಕ ವಾತಾವರಣಕ್ಕೆ ಎಷ್ಟುರಚನಾತ್ಮಕವಾದ ಕೊಡುಗೆಯನ್ನು ನೀಡಬಹುದು ಎನ್ನುವ ಕುರಿತು ನನ್ನನ್ನು ದೀರ್ಘವಾಗಿ ಆಲೋಚಿಸುವ ಹಾಗೆ ಮಾಡಿತು.

ಗುರಿ ತಲುಪಿತು BIG 3 ಪಯಣ; ಮಕ್ಕಳ ಮೊಗದಲ್ಲಿ ಹರ್ಷದ ಕಿರಣ!

ಶಾಲಾಭಿವೃದ್ಧಿ ಸಮಿತಿ ಕಾವಲು

ನಮ್ಮ ರಾಜ್ಯದಲ್ಲಿ ಸುಮಾರು 45 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಸುಮಾರು 5 ಸಾವಿರ ಸರ್ಕಾರಿ ಪ್ರೌಢಶಾಲೆಗಳಿವೆ. ಈ ಎಲ್ಲ ಶಾಲೆಗಳಲ್ಲಿಯೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು, ಶಾಲಾಡಳಿತದಲ್ಲಿ ಸಮುದಾಯದ ಸಕ್ರಿಯ ಪಾತ್ರವನ್ನು ಖಚಿತಪಡಿಸಲು ಈ ಸಮಿತಿಗಳು ರೂಪುಗೊಂಡಿವೆ. ಇದು ನನ್ನ ಶಾಲೆ, ನನ್ನ ಊರಿನ ಒಳಿತಿಗಾಗಿ ಇದೆ, ನಮ್ಮ ಮಕ್ಕಳು ಉತ್ತಮ ನಾಗರಿಕರಾಗಿ ರೂಪುಗೊಳ್ಳುವಲ್ಲಿ ಈ ಶಾಲೆ ಶ್ರಮಿಸುತ್ತಿದೆ ಎನ್ನುವ ಭಾವನೆಯನ್ನು ಜನರಲ್ಲಿ ಮೂಡಿಸಲು ಅನುಕೂಲವಾಗುವಂತೆ ಊರಿನ ಪ್ರಮುಖರನ್ನು, ಪೋಷಕರನ್ನು, ಸರ್ವ ಸಮುದಾಯದ ಪ್ರತಿನಿಧಿಗಳನ್ನು ಅವು ಒಳಗೊಂಡು ಕೆಲಸ ನಿರ್ವಹಿಸುವ ರೀತಿಯಲ್ಲಿ ರಚನೆಯಾಗಿವೆ. ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದಾಗಿನಿಂದಲೂ, ಆಡಳಿತ ವಿಕೇಂದ್ರೀಕರಣದ ಕಾರಣದಿಂದ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳು ಇನ್ನೂ ಹೆಚ್ಚು ಅಧಿಕಾರಯುಕ್ತಗೊಂಡಿವೆ. ತಮ್ಮ ಶಾಲೆಯ ಅಭಿವೃದ್ಧಿಗಾಗಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳ ಮೇಲೆ ಈ ಸಮಿತಿಗಳು ಪರಿಪೂರ್ಣವಾದ ಅಧಿಕಾರವನ್ನು ಹೊಂದಿವೆ.

ಮಕ್ಕಳ ಪೋಷಕರನ್ನು ಒಳಗೊಂಡ ತಂದೆ-ತಾಯಿಯರ ಪರಿಷತ್ತು, ಮಹಿಳಾ ಪ್ರತಿನಿಧಿಗಳು, ಪರಿಶಿಷ್ಟಜಾತಿ, ಪಂಗಡಗಳ ಪ್ರತಿನಿಧಿಗಳು, ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಪ್ರತಿನಿಧಿಗಳು, ಆಯಾ ಗ್ರಾಮಗಳಲ್ಲಿರುವ ಶಿಕ್ಷಣ ತಜ್ಞರು, ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಒಟ್ಟು ಸುಮಾರು ಹದಿನೆಂಟು ಪೋಷಕ ಪ್ರತಿನಿಧಿಗಳು, ಮೂರು ನಾಮ ನಿರ್ದೇಶಿತ ಪ್ರತಿನಿಧಿಗಳು ಹಾಗೂ ಮೂರು ಪದನಿಮಿತ್ತ ಸದಸ್ಯರು ಈ ಸಮಿತಿಗಳಲ್ಲಿ ಇರುತ್ತಾರೆ.

ಸಾಮುದಾಯಿಕ ಸ್ಪಂದನೆ

ಶಾಲೆಯ ವಾರ್ಷಿಕ ಕ್ರಿಯಾಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವುದು, ಶಾಲೆಯ ಸಂಪೂರ್ಣ ನೈರ್ಮಲ್ಯ, ಸುಸ್ಥಿತಿ ಕಾಪಾಡುವುದರಿಂದ ಹಿಡಿದು, ಮಕ್ಕಳನ್ನು ಶಾಲೆಗೆ ಕಳಿಸಲು ವಿಫಲರಾಗುವ ತಂದೆ-ತಾಯಿಯರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವುದು, ಶಾಲೆಯ ಎಲ್ಲಾ ಸ್ವತ್ತು, ನಿಧಿಗಳು, ಹಣಕಾಸಿನ ಪಾರದರ್ಶಕ ಮೇಲ್ವಿಚಾರಣೆ ಮಾಡುವುದು, ಸರ್ಕಾರದ ಎಲ್ಲ ಪ್ರೋತ್ಸಾಹದಾಯಕವಾದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು, ಗುಣಮಟ್ಟದ ಶಿಕ್ಷಣಕ್ಕೆ ಶ್ರಮಿಸುವುದೂ ಸೇರಿದಂತೆ ಶಾಲೆಯ ಹಿತದೃಷ್ಟಿಯಿಂದ ಅವಶ್ಯಕವಿರುವ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುವ, ಅನುಷ್ಠಾನಗೊಳಿಸುವ ಮಹತ್ತರ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳು ಹೊಂದಿರುತ್ತವೆ. ಒಟ್ಟಾರೆ ಹೇಳುವುದಾದರೆ, ಶಾಲೆಯ ಎಲ್ಲ ಜೀವಂತ ಅವಶ್ಯಕತೆಗಳಿಗೆ ಸಾಮುದಾಯಿಕ ಸ್ಪಂದನೆಯ ರೂಪದಲ್ಲಿ ಈ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳು ಕೆಲಸ ಮಾಡಬೇಕಾದ ಆದರ್ಶಯುತ ಜವಾಬ್ದಾರಿಯನ್ನು ಹೊಂದಿವೆ.

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯೂ ಹೀಗೇ ಇತ್ತು. ಸ್ಥಳೀಯ ಆಡಳಿತ ವ್ಯವಸ್ಥೆ ಸಬಲೀಕರಣಗೊಂಡಲ್ಲಿ, ಸಾಮಾಜಿಕ ಸ್ತರದ ಕಟ್ಟಕಡೆಯ ವ್ಯಕ್ತಿಯೂ ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಂಡಲ್ಲಿ ಮಾತ್ರ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡಲು ನಮಗೆ ಸಾಧ್ಯವೆಂದು ಗಾಂಧೀಜಿ ನಂಬಿದ್ದರು.

ಬೋಧನಾ ಕ್ರಮಗಳು ಸ್ಥಳೀಯವಾದಷ್ಟೂ, ಕಲಿಕೆಯ ಗುಣಮಟ್ಟಪರಿಣಾಮಕಾರಿ ಆಗಿರುತ್ತದೆನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾದ ಸತ್ಯ. ಹಾಗಾಗಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಯಶಸ್ಸು ಸ್ವತಂತ್ರ ಭಾರತವು ಗಾಂಧೀಜಿಯ ಆಶಯಗಳಿಗೆ ನೀಡಬಹುದಾದ ಬಹುದೊಡ್ಡ ಗೌರವವೆನ್ನುವುದೇ ನನ್ನ ನಂಬಿಕೆ.

ಆದರೆ, ಇಷ್ಟುವರ್ಷಗಳಾದ ಮೇಲೆ ನಿಜಕ್ಕೂ ನಾವು ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದ್ದೇವೆಯೇ? ಸಾಮಾಜಿಕ ವ್ಯವಸ್ಥೆ, ಆದರ್ಶ ಕಲ್ಪನೆಗಳ ನಡುವಿನ ನಿರೀಕ್ಷೆಯ ಕಂದಕವನ್ನು ಮುಚ್ಚುವ ಮೂಲಕ ಸಮರ್ಥವಾದ ವ್ಯವಸ್ಥೆಯನ್ನು ನಿರ್ಮಿಸಲು ನಮಗೆ ನಿಜಕ್ಕೂ ಸಾಧ್ಯವಾಗಿದೆಯೇ? ಶಾಲಾಭಿವೃದ್ಧಿ ಸಮಿತಿಗಳ ರಚನೆಯ, ಕಾರ್ಯನಿರ್ವಹಣೆಯ ಹಿಂದಿನ ಸದಾಶಯ ನಿಜಕ್ಕೂ ಸಾಕಾರಗೊಂಡಿದೆ ಎಂಬ ಅಗಾಧವಾದ ನಂಬಿಕೆಗೆ ಒಮ್ಮೊಮ್ಮೆ ಅಪವಾದವೆಂಬಂತೆ ನಡೆಯುವ ಕೆಲವು ಘಟನೆಗಳು ವಿಶ್ವಾಸವನ್ನೇ ಕದಡಿಬಿಡುತ್ತವೆ.

ಬೇಲಿಯೇ ಎದ್ದು ಮೇಯ್ದರೆ?

ಮೊನ್ನೆ ‘ಸುವರ್ಣ ನ್ಯೂಸ್‌’ ವಾಹಿನಿಯಲ್ಲಿ ರಾಯಚೂರು ಜಿಲ್ಲೆಯ ಕೆಲವು ಶಾಲೆಗಳು ಕಳಪೆ ಗುಣಮಟ್ಟದ ಶೂ, ಸಾಕ್ಸ್‌ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಿದ ಬಗ್ಗೆ ವರದಿ ಪ್ರಸಾರವಾಯಿತು. ಸಂಬಂಧಪಟ್ಟಎಲ್ಲ ಶಾಲೆಗಳ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರು ಚರ್ಚಿಸಿಯೇ ಇಂತಹ ಶೂ, ಸಾಕ್ಸ್‌ ಖರೀದಿ ನಿರ್ಣಯವನ್ನು ತೆಗೆದುಕೊಂಡಿದ್ದಾರೆ ಎನ್ನುವ ಆಘಾತಕಾರಿ ಅಂಶವನ್ನು ಆ ವರದಿ ಬಿತ್ತರಿಸಿತ್ತು.

ಯಾವ ಸಮಿತಿಯಲ್ಲಿ ಮಕ್ಕಳ ಪೋಷಕರು, ಜವಾಬ್ದಾರಿಯುತ ನಾಗರಿಕರು, ಶಾಲೆಯ ಕುರಿತಂತೆ ಕಾಳಜಿಯುಳ್ಳ ವ್ಯಕ್ತಿಗಳು ಸದಸ್ಯರಾಗಿರುತ್ತಾರೋ, ಯಾವ ವ್ಯಕ್ತಿಗಳು ತಮ್ಮದೇ ಶಾಲಾ ದೇಗುಲವನ್ನು, ತಮ್ಮದೇ ಮಕ್ಕಳ ಹಿತವನ್ನು ರಕ್ಷಿಸಬೇಕಾದ ಪವಿತ್ರ ಜವಾಬ್ದಾರಿಯನ್ನು ಹೊಂದಿರುತ್ತಾರೋ ಅಂತಹ ಸದಸ್ಯರೇ ಇಂತಹುದೊಂದು ಅಮಾನವೀಯ ಹಾಗೂ ವಿದ್ಯಾರ್ಥಿ ವಿರೋಧಿ ನಿರ್ಣಯ ತೆಗೆದುಕೊಳ್ಳುವ ಮನಸ್ಥಿತಿಯನ್ನು ಹೊಂದಿರುವುದು ನನ್ನನ್ನು ತೀವ್ರ ವೇದನೆಗೊಳ್ಳುವಂತೆ ಮಾಡಿತು. ಸಂಬಂಧಿಸಿದವರ ಮೇಲೆ ಶಿಸ್ತುಕ್ರಮಕ್ಕೆ ನಾನು ಆದೇಶ ಕೊಟ್ಟರೂ ಅದರಿಂದ ನನ್ನ ಜವಾಬ್ದಾರಿ ಪೂರ್ಣವಾಯಿತೇ ಎಂಬ ಆಲೋಚನೆ ನನ್ನನ್ನು ತುಂಬಾ ಹೊತ್ತು ಕಾಡಿತು.

ಕಳಪೆ ಕಾರ್ಯಕ್ಕೂ ಪ್ರಶಸ್ತಿ?

ಇದೇ ಘಟನೆಯ ಆಸುಪಾಸಿನ ಅವಧಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ಕರೆದು, ನೆರೆಪೀಡಿತ ಶಾಲೆಗಳ ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ಆಯಾ ಶಾಲೆಗಳ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳೇ ನಿರ್ವಹಿಸಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದು ವ್ಯವಸ್ಥೆಯ ಕುರಿತಂತೆ ಆಡಳಿತ ಯಂತ್ರಕ್ಕಿರುವ ಭರವಸೆಗೆ ಸಾಕ್ಷಿ. ಇಂತಹ ಪರಿಪೂರ್ಣವಾದ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ್ದು ಆ ವ್ಯವಸ್ಥೆಯ ಭಾಗವಾದ ಪ್ರತಿಯೊಬ್ಬರ ಕರ್ತವ್ಯವಲ್ಲವೇ?

ಉತ್ತಮವಾಗಿ ಕಾರ್ಯ ನಿರ್ವಹಿಸುವ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳನ್ನು ಸರ್ಕಾರವು ಪ್ರತಿ ವರ್ಷವೂ ಗುರುತಿಸಿ ಸನ್ಮಾನಿಸುತ್ತದೆ. ಅವುಗಳ ಸಾಧನೆಯನ್ನು ಕೊಂಡಾಡುತ್ತದೆ. ಆದರೆ, ಇದ್ಯಾವುದನ್ನೂ ಲೆಕ್ಕಿಸದೇ ತಮ್ಮ ಜವಾಬ್ದಾರಿಯನ್ನು ಮರೆತು ಶಿಕ್ಷಣ ವ್ಯವಸ್ಥೆಯ ನೈಜ ಪಾಲುದಾರರಾದ, ಆ ಮುಗ್ಧ ವಿದ್ಯಾರ್ಥಿಗಳ ಹಿತವನ್ನು ಕಾಯಲು ವಿಫಲರಾಗುವ ಇಂತಹ ಸಮಿತಿಗಳು ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ರವಾನಿಸುತ್ತವೆ? ಅಂತಹ ಸಮಿತಿಗಳಿಗೆ, ಕಳಪೆ ಕಾರ್ಯ ನಿರ್ವಹಣೆಗೂ ಪ್ರಶಸ್ತಿ ನೀಡುವ ಪರಿಪಾಠವನ್ನು ಆರಂಭಿಸಿ ಸಾಮಾಜಿಕವಾದ ಅಪನಂಬಿಕೆಯನ್ನು ಸಹ ಪ್ರಕಟಿಸಬೇಕಾದ ಅನಿವಾರ್ಯತೆಯನ್ನು ಈ ಘಟನೆಗಳು ಸೃಷ್ಟಿಸುತ್ತಿಲ್ಲವೇ?

ನಂಬಿಕೆ ನಾಶಗೊಳ್ಳದಿರಲಿ

ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯಂತಹ ಉತ್ಕೃಷ್ಟವಾದ ಸಾಮುದಾಯಿಕ ಕಲ್ಪನೆಗೆ ಇಂದು ನಮ್ಮಲ್ಲಿ ಪರ್ಯಾಯ ಇಲ್ಲ. ಬರಲು ಸಾಧ್ಯವೂ ಇಲ್ಲ. ನಮ್ಮ ಮಕ್ಕಳು ಇಂತಹ ಆದರ್ಶ ವಾತಾವರಣವನ್ನು ಹೊರತುಪಡಿಸಿ ಬೇರೆಲ್ಲೂ ಅದಕ್ಕಿಂತಾ ಹೆಚ್ಚಾದ ಸುರಕ್ಷಿತ ಭಾವವನ್ನು ಹೊಂದಲಾರರು. ಆದರೆ, ತೀವ್ರ ಭರವಸೆಗೆ ಪಾತ್ರವಾದ ವ್ಯವಸ್ಥೆಯೊಂದರ ಮೇಲಿಟ್ಟವಿಶ್ವಾಸವೆನ್ನುವುದು ಒಮ್ಮೆ ಕದಡಿದಾಗ, ನಂಬಿಕೆಯೆನ್ನುವುದು ಒಮ್ಮೆಗೇ ಘಾಸಿಗೊಂಡಾಗ ಮನಸ್ಸು ಬೇರೊಂದು ನಿರ್ಣಯ ತೆಗೆದುಕೊಳ್ಳಲಾಗದ ಅಸಹಾಯಕತೆಯನ್ನು, ಚಡಪಡಿಕೆಯನ್ನು ಅನುಭವಿಸುತ್ತದೆಯಲ್ಲಾ ಅದು ಅಭಿವ್ಯಕ್ತಿಯನ್ನು ಮೀರಿದ ವಿಷಯ.

ಅಪನಂಬಿಕೆಯೆನ್ನುವುದು ಎಂತಹ ಸದೃಢವಾದ ವ್ಯವಸ್ಥೆಯನ್ನೂ ನಾಶಗೊಳಿಸಿ ಖಿನ್ನವಾಗಿಸಿಬಿಡುತ್ತದೆ. ಅಲ್ಲಿದ್ದ ಸ್ವಾಸ್ಥ್ಯವನ್ನು ಒಂದೇ ಕ್ಷಣದಲ್ಲಿ ಹಾಳುಗೆಡವಿಬಿಡುತ್ತದೆ. ಆಡಳಿತ ಯಂತ್ರಕ್ಕೆ ತಮ್ಮನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ ಎಂಬುದನ್ನು ಶಾಲಾ ಅಭಿವೃದ್ಧಿ ಸಮಿತಿಗಳು ಮರೆತು ಅದನ್ನು ಅವಕಾಶವನ್ನಾಗಿ ಮಾಡಿಕೊಂಡಲ್ಲಿ, ನಾಗರಿಕ ಸಮಾಜದ ಅಧಃಪತನವನ್ನೇ ಅದು ಸಂಕೇತಿಸಿಬಿಡಬಹುದು. ಅದಾಗಬಾರದು, ಸಮುದಾಯದತ್ತವಾದ ವ್ಯವಸ್ಥೆಯೊಂದು ಎಂದಿಗೂ ಸಮಾಜದಲ್ಲಿ ನಂಬಿಕೆ ಕಳೆದುಕೊಳ್ಳಬಾರದು. ಅದು ಸಂಭವಿಸದ ನಿಟ್ಟಿನಲ್ಲಿ ನಮ್ಮೆಲ್ಲರ ಆಲೋಚನೆಗಳು ಗಟ್ಟಿಗೊಳ್ಳಬೇಕು.

 

Follow Us:
Download App:
  • android
  • ios