Asianet Suvarna News Asianet Suvarna News

6ನೇ ಗ್ಯಾರಂಟಿಯಾಗಿ ಅಂಗನವಾಡಿ ಗೌರವಧನ ಹೆಚ್ಚಿಸುವಂತೆ ಸಿಬ್ಬಂದಿ ಪ್ರತಿಭಟನೆ

ಚುನಾವಣೆ ವೇಳೆ ಘೋಷಿಸಿದ ಪ್ರಕಾರ, 6ನೇ ಗ್ಯಾರಂಟಿ ಆಗಿ ಗೌರವ ಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿಗೆ ಮನವಿ ಸಲ್ಲಿಸಿದರು.

Staff protest to increase Anganwadi honorarium as 6th guarantee at bengaluru rav
Author
First Published Jun 28, 2023, 2:03 AM IST

ಬೆಂಗಳೂರು (ಜೂ.28) :  ಚುನಾವಣೆ ವೇಳೆ ಘೋಷಿಸಿದ ಪ್ರಕಾರ, 6ನೇ ಗ್ಯಾರಂಟಿ ಆಗಿ ಗೌರವ ಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ತಕ್ಷಣ ಬೇಡಿಕೆಗೆ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

 

65 ಸಾವಿರ ಅಂಗನವಾಡಿಗಳ 2.60 ಲಕ್ಷ ಮಕ್ಕಳಿಗಿಲ್ಲ ಹಾಲು: 5 ತಿಂಗಳಿಂದ ಹಾಲಿನ ಪೌಡರ್ ಪೂರೈಕೆ ಮಾಡದ ಕೆಎಂಎಫ್!

ಫೆಡರೇಶನ್‌ ಕಾರ್ಯದರ್ಶಿ ಎಂ.ಜಯಮ್ಮ ಮಾತನಾಡಿ, ಕಾಂಗ್ರೆಸ್‌ ಪಕ್ಷ ಚುನಾವಣೆ ವೇಳೆ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವ ಧನವನ್ನು 15ಸಾವಿರ ರು. ಹಾಗೂ ಸಹಾಯಕಿಯರಿಗೆ 10 ಸಾವಿರ ರು.ಗೆ ಹೆಚ್ಚಿಸಬೇಕು. ನಿವೃತ್ತರಿಗೆ 3 ಲಕ್ಷ ರು. ಇಡುಗಂಟು ಯೋಜನೆಯನ್ನು ಆರನೇ ಗ್ಯಾರಂಟಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಗುಣಮಟ್ಟದ ಟ್ಯಾಬ್‌ ಕೊಡಿ:

ಸಮಗ್ರ ಶಿಶು ಅಭಿವೃದ್ಧಿ ಕಾರ್ಯಕ್ರಮ ಸೇರಿ ಇತರೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು 4 ವರ್ಷಗಳ ಹಿಂದೆ ನೀಡಿದ್ದ ಮೊಬೈಲ್‌ ಕಳಪೆ ಗುಣಮಟ್ಟದ್ದಾಗಿದ್ದು,ಈಗ ಕೆಟ್ಟುಹೋಗಿದ್ದು, ಕೆಲಸ ಮಾಡಲಾಗುತ್ತಿಲ್ಲ. ಈ ಸಮಸ್ಯೆ ಹೇಳಿಕೊಂಡರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಬದಲಾಗಿ ಕೆಲಸ ಮಾಡಿ ಇಲ್ಲವೇ ಅಮಾನತ್ತು ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಹೀಗಾಗಿ ತಕ್ಷಣ ಈ ಮೊಬೈಲ್‌ಗಳನ್ನು ಹಿಂಪಡೆದು ಗುಣಮಟ್ಟದ ಟ್ಯಾಬ್‌ಗಳನ್ನು ನೀಡಬೇಕು ಎಂದರು.

ಈಗ ಸರಬರಾಜು ಆಗುತ್ತಿರುವ ಮೊಟ್ಟೆತೀರಾ ಸಣ್ಣ ಹಾಗೂ ಕಳಪೆ ಗುಣಮಟ್ಟದಿಂದ ಕೂಡಿದೆ. ಅಂಗನವಾಡಿಗೆ ಮೊಟ್ಟೆಪೂರೈಸುವ ಜವಾಬ್ದಾರಿಯನ್ನು ಬಾಲ ವಿಕಾಸ ಸಮಿತಿಗೆ ನೀಡಬೇಕು. ಅಂಗನವಾಡಿ ಕೇಂದ್ರಗಳ ಬಾಡಿಗೆ ಮೊತ್ತ, ಗ್ಯಾಸ್‌ ಹಾಗೂ ವಿದ್ಯುತ್‌ ಬಿಲ್‌ ಪಾವತಿಸಬೇಕು ಎಂದು ಒತ್ತಾಯಿಸಿದರು.

BIG 3: ಅಂಗನವಾಡಿ ಕಂದಮ್ಮಗಳಿಗೆ ಜಾಗವಿಲ್ಲ: ಇಡೀ ಊರ ಜನರಿಗೆ ಆ 'ಭಯ'

ಸಹಾಯಕಿಯರಿಗೆ ಮುಂಬಡ್ತಿಯನ್ನು ಹಿಂದಿನ ಆದೇಶದಂತೆ ಜಾರಿಗೊಳಿಸಿ ಡಿಸೆಂಬರ್‌ಗೂ ಹಿಂದೆ ನೀಡಿರುವ ಅರ್ಜಿಗಳ ಆಧಾರದ ಮೇಲೆ ಮುಂಬಡ್ತಿ ನೀಡಬೇಕು. ಇದರಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಹೇಳಿದರು.

ಫೆಡರೇಷನ್‌ ಅಧ್ಯಕ್ಷ ಬಿ. ಅಮ್ಜದ್‌, ಪ್ರಮುಖರಾದ ಅನಸೂಯ, ಸಾವಿತ್ರಿ, ಶ್ರೀಶೈಲಾ, ಅಮುದ, ಬೈಲಮ್ಮ ಸೇರಿ ಇತರರಿದ್ದರು.

ಸಚಿವೆ ಹೆಬ್ಬಾಳ್ಕರ್‌ಗೆ ಮನವಿ

ಅಂಗನವಾಡಿ ಕಾರ್ಯಕರ್ತೆಯರ ನಿಯೋಗ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್‌ ಅವರನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು. ಈ ವೇಳೆ ಸಚಿವರು ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.

Follow Us:
Download App:
  • android
  • ios