Asianet Suvarna News Asianet Suvarna News

ಅರ್ಜಿ ಸಲ್ಲಿಸಿ ಫೀ ಕಟ್ಟದ್ದಕ್ಕೆ ಹೈಕೋರ್ಟ್‌ ಕ್ಷಮೆಯಾಚಿಸಿದ ಎಸ್‌.ಆರ್‌. ಹಿರೇಮಠ

* ಅರ್ಜಿ ಸಲ್ಲಿಸಿ ಶುಲ್ಕ ಕಟ್ಟದೇ, ವಿಚಾರಣೆಗೆ ಅಸಹಕಾರ ನೀಡಿದ್ದ ಪ್ರಕರಣ
* ಇದೇ ರೀತಿ ನಡೆದುಕೊಂಡರೆ ಪಿಐಎಲ್‌ ಸಲ್ಲಿಸಲು ನಿರ್ಬಂಧದ ಎಚ್ಚರಿಕೆ
* ಸೆ.13ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ 

SR Hiremath Apologized to the Karnataka High Court grg
Author
Bengaluru, First Published Aug 11, 2021, 8:54 AM IST

ಬೆಂಗಳೂರು(ಆ.11):  ರಾಜ್ಯದಲ್ಲಿ 2013-14ನೇ ಸಾಲಿನಲ್ಲಿ ನಡೆದ 197 ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರೊಸೆಸ್‌ ಫೀ (ಕೋರ್ಟ್‌ ಶುಲ್ಕ) ಪಾವತಿಸದ ಹಾಗೂ ವಿಚಾರಣೆಗೆ ಸಹಕರಿಸದ ಸಂಬಂಧ ‘ಸಮಾಜ ಪರಿವರ್ತನಾ ಸಮುದಾಯ’ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಹೈಕೋರ್ಟ್‌ಗೆ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ. 

ಈ ಕುರಿತಂತೆ ಎಸ್‌.ಆರ್‌.ಹಿರೇಮಠ ಹಾಗೂ ವಕೀಲೆ ಸುಧಾ ಕಾಟ್ವಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ಎಸ್‌.ಆರ್‌. ಹಿರೇಮಠ, ಪ್ರಮಾಣ ಪತ್ರ ಸಲ್ಲಿಸಿ, ಬೇಷರತ್‌ ಕ್ಷಮೆ ಯಾಚಿಸಿದರು. ಜತೆಗೆ, ಆ.1ರಂದು ಪತ್ರಿಕೆ ನೋಡಿದಾಗಲೇ ಅರ್ಜಿ ಸಂಬಂಧ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗ್ಗೆ ನನಗೆ ತಿಳಿಯಿತು. ಇದುವರೆಗೂ ನಾನು ಸಾಕಷ್ಟುಪಿಐಎಲ್‌ ಸಲ್ಲಿಸಿದ್ದೇನೆ. ಯಾವ ಅರ್ಜಿಯಲ್ಲೂ ಕೋರ್ಟ್‌ ಶುಲ್ಕ 5ರಿಂದ 10 ಸಾವಿರ ರು. ದಾಟುತ್ತಿರಲಿಲ್ಲ. ಸಣ್ಣ ಪುಟ್ಟದೇಣಿಗೆ ಸಂಗ್ರಹಿಸಿ ಅರ್ಜಿ ನಡೆಸಿಕೊಂಡು ಹೋಗುತ್ತಿರುವೆ. ಇದೇ ಮೊದಲ ಬಾರಿಗೆ ಲಕ್ಷಾಂತರ ರು. ಕೋರ್ಟ್‌ ಶುಲ್ಕ ಪಾವತಿಸುವ ಪರಿಸ್ಥಿತಿ ನನಗೆ ಎದುರಾಗಿದೆ ಎಂದು ತಿಳಿಸಿದರು.

ರೈತ ವಿರೋಧಿ ಬಿಜೆಪಿಯನ್ನು ಸೋಲಿಸಿ: ಎಸ್‌.ಆರ್‌. ಹಿರೇಮಠ

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ಅರ್ಜಿಯಲ್ಲಿ 200ಕ್ಕೂ ಹೆಚ್ಚು ಪ್ರತಿವಾದಿಗಳನ್ನು ಮಾಡಿದ್ದೀರಿ. ಇಂತಹ ಸಂದರ್ಭದಲ್ಲಿ ಕೋರ್ಟ್‌ ಶುಲ್ಕ ಹೆಚ್ಚಿರುತ್ತದೆ ಎಂಬ ಬಗ್ಗೆ ನಿಮಗೆ ಗೊತ್ತಿರಲಿಲ್ಲವೇ, ಅರ್ಜಿ ದಾಖಲಿಸಿ ನಂತರ ವಿಚಾರಣೆಗೆ ಸೂಕ್ತ ಸಹಕಾರ ನೀಡದೆ ಹೋದರೆ ಹೇಗೆ, ಇದೇ ವರ್ತನೆ ಪುನರಾವರ್ತಿಸಿದರೆ ಭವಿಷ್ಯದಲ್ಲಿ ಪಿಐಎಲ್‌ ಸಲ್ಲಿಸಿದಂತೆ ನಿಮಗೆ ನಿರ್ಬಂಧ ಹೇರಲಾಗುವುದು ಎಂದು ಎಚ್ಚರಿಕೆ ನೀಡಿತು.

ಅದಕ್ಕೆ ಉತ್ತರಿಸಿದ ಹಿರೇಮಠ್‌, ಸದ್ಯ ಒಂದು ತಿಂಗಳು ಕಾಲಾವಕಾಶ ನೀಡಿದರೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕೋರ್ಟ್‌ ಶುಲ್ಕ ಪಾವತಿಸಲಾಗುವುದು. ಅರ್ಜಿ ವಿಚಾರಣೆಗೆ ಸೂಕ್ತ ಸಹಕಾರ ನೀಡಲಾಗುವುದು. ತಮ್ಮ ಪರ ವಾದ ಮಂಡಿಸಲು ಬೇರೆ ವಕೀಲರನ್ನು ನೇಮಿಸಿಕೊಂಡು ಅರ್ಜಿಯನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಹಿರೇಮಠ ಪರ ವಕೀಲ ಎಸ್‌. ಉಮಾಪತಿ, ಎರಡನೇ ಅರ್ಜಿದಾರರಾದ ಸುಧಾ ಕಾಟ್ವಾ ಅವರಿಗೂ ಆರ್ಥಿಕ ಸಮಸ್ಯೆಯಿದೆ. ಇಷ್ಟೊಂದು ಕೋರ್ಟ್‌ ಶುಲ್ಕ ಪಾವತಿಸಲು ಅವರಿಗೂ ಕಷ್ಟ. ಜತೆಗೆ, ಅರ್ಜಿಯಿಂದ ತಾವು ನಿವೃತ್ತಿ ಪಡೆಯಲು ಬಯಸಿದ್ದು, ಆ ಸಂಬಂಧ ಸಲ್ಲಿಸಿರುವ ಮೆಮೊವನ್ನು ಮಾನ್ಯ ಮಾಡಬೇಕು ಎಂದು ಕೋರಿದರು.

ಅರ್ಜಿದಾರರು ಬೇರೊಬ್ಬ ವಕೀಲರನ್ನು ನಿಯೋಜಿಸುವವರೆಗೂ ಯಾರನ್ನು ಅರ್ಜಿಯಿಂದ ಕೈ ಬಿಡಲು ಸಾಧ್ಯವಿಲ್ಲ ಎಂದು ನುಡಿದ ನ್ಯಾಯಪೀಠ, ಹಿರೇಮಠ ಸಲ್ಲಿಸಿರುವ ಪ್ರಮಾಣ ಪತ್ರವನ್ನು ದಾಖಲಿಸಿಕೊಂಡು, ಕೋರ್ಟ್‌ ಶುಲ್ಕ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿತು.
 

Follow Us:
Download App:
  • android
  • ios