Asianet Suvarna News Asianet Suvarna News

ನ್ಯಾಯಾಂಗದ ತೇರೆಳೆಯುವ ವ್ಯಕ್ತಿ ಹೇಗಿರಬೇಕೆಂಬುದಕ್ಕೆ ನಿದರ್ಶನ ಮೋಹನ ಶಾಂತನಗೌಡರ್‌

1958ರ ಮೇ 5ರಂದು ರಟ್ಟಿಹಳ್ಳಿ ತಾಲೂಕಿನ ಖಂಡೇಬಾಗೂರಿನಲ್ಲಿ ಮೋಹನ ಎಂ.ಶಾಂತನಗೌಡರ ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ 1977ರಲ್ಲಿ ಬಿಎಸ್ಸಿ, 1980ರಲ್ಲಿ ಕಾನೂನು ಪದವಿ. ಒಂದು ವರ್ಷ ಧಾರವಾಡದ ಹಿರಿಯ ನ್ಯಾಯವಾದಿ ಐ.ಜಿ.ಹಿರೇಗೌಡರ ಗರಡಿಯಲ್ಲಿ ವಕೀಲಿಕೆ ತಯಾರಿ. ನಂತರ ವೃತ್ತಿಗಾಗಿ ಬೆಂಗಳೂರಿನಲ್ಲಿ ನೆಲೆ. 

Special Tribute to Hon'ble Justice Mohan M Shantanagoudar hls
Author
Bengaluru, First Published May 21, 2022, 4:12 PM IST

ಮೋಹನ ಶಾಂತನಗೌಡರ ತಾಯಿಯ ತವರು ಖಂಡೇಬಾಗೂರು. ನನ್ನ ಊರಾದ ಮಾಸೂರಿಗೆ ಹತ್ತಿಕೊಂಡ ಹಳ್ಳಿ. ಶಾಂತನಗೌಡ ಸಾಹೇಬರು ಮತ್ತು ನಾನು ಕೂಗಳತೆ ದೂರದ ಹಳ್ಳಿಯವರು. ಅವರ ತಂದೆ ಮಲ್ಲಿಕಾರ್ಜುನಗೌಡರು ಕರ್ನಾಟಕ ಕಾಲೇಜಿನಲ್ಲಿ ನನಗೆ ಗುರುಗಳಾಗಿದ್ದರು. ಮಾತ್ರವಲ್ಲ ಪ್ರಸಿದ್ಧ ವಕೀಲರೂ ಸಹ. ನಾನು ಎಲ್ ಎಲ್‌ಬಿ ಪಾಸಾದ 1989ರ ಕಾಲಾವಧಿ. ಭವಿಷ್ಯದ ಹಾದಿ ತುಳಿಯುವ ಮುನ್ನ ಮಲ್ಲಿಕಾರ್ಜುನಗೌಡರ ಬಳಿ ಹೋದೆ. ವಕೀಲಿ ವೃತ್ತಿಗಾಗಿ ನಾನು ಬೆಂಗಳೂರಿಗೆ ಹೋಗಲು ಪ್ರೇರೇಪಿಸಿದ ಅವರು ಪ್ರಯಾಣ ಬೆಳೆಸುವ ಮುನ್ನ ಹೇಳಿದ್ದು, ‘ನಮ್ಮ ಮೋಹನ ಅಲ್ಲೇ ಇದ್ದಾನ. ನೀ ಹೋಗಿ ಭೆಟ್ಯಾಗು. ನಾನೂ ಫೋನ್‌ ಮಾಡಿ ಹೇಳ್ತೀನಿ.’

ಮಲ್ಲಿಕಾರ್ಜುನಗೌಡರು ಸೂಚಿಸಿದಂತೆಯೇ ಮೋಹನ ಶಾಂತನಗೌಡರನ್ನು ಹೈಕೋರ್ಚ್‌ನಲ್ಲಿ ಕಂಡೆ. ನನ್ನ ವಕೀಲಿ ವೃತ್ತಿಗೆ ಮಾರ್ಗದರ್ಶನ ಕೋರಿದಾಗ ಮುಗುಳುನಗೆ ಚೆಲ್ಲಿ ಹರಸಿದ ಹರನ ಭಕ್ತ. ನನ್ನಂಥ ಹಳ್ಳಿಗ ಬೆಂಗಳೂರಿಗೆ ಬಂದು ವಕೀಲಿ ವೃತ್ತಿ ಕೈಗೊಂಡಿದ್ದು ಅವರಿಗೆ ಭಾರಿ ಹೆಮ್ಮೆಯ ವಿಷಯವಾಗಿತ್ತು.

ಕಾದಂಬರಿ ಓದೋದು ನಿಲ್ಸು!

ಒಮ್ಮೆ ನಾನು ಯಂಡಮೂರಿ ವೀರೇಂದ್ರನಾಥರ ‘ಬೆಳಂದಿಗಳ ಬಾಲೆ’ ಕಾದಂಬರಿಯೊಂದಿಗೆ ಕೋರ್ಚ್‌ ಕಾರಿಡಾರಿನಲ್ಲಿ ನಡೆಯುತ್ತಿದ್ದೆ. ಅದನ್ನು ನೋಡಿದ ಶಾಂತನಗೌಡರು, ಕೃಷ್ಣಾ, ಸ್ವಲ್ಪ ದಿವ್ಸ ಕಾದಂಬರಿ ಓದೋದು ನಿಲ್ಸು. ಪ್ರಿವಿ ಕೌನ್ಸಿಲ್ ಮತ್ತು ಸುಪ್ರೀಂಕೋರ್ಟ್ (Supreme Court) ತೀರ್ಪುಗಳ ಕಡೆಗೆ ಗಮನ ಹರಿಸು. ಕೆಲವು ತೀರ್ಪುಗಳು ಕಾದಂಬರಿಗಿಂತನೂ ಛಂದ್‌ ಅದಾವು. ನಮ್ಮ ಸೀನಿಯರ್‌ ನಂಗೆ ಹೇಳಿದ್ದನ್ನು ನಿಂಗ್‌ ಹೇಳಾಕತ್ತೀನಿ ಎಂಬ ಹಿತವಚನ ನೀಡಿದರು. ಅದು ನನ್ನನ್ನು ವಕೀಲನನ್ನಾಗಿ ರೂಪಿಸುವಲ್ಲಿ ಬಹುದೊಡ್ಡ ಸಹಾಯ ಮಾಡಿತು.

ಲೆಕ್ಕಾಚಾರವಿಲ್ಲದ ಪರೋಪಕಾರಿ

ಅದೊಂದು ಮಧ್ಯಾಹ್ನ ರಣರಣ ಬಿಸಿಲು. ಕಣ್ಣಿಗೆ ಗಾಯ ಮಾಡಿಕೊಂಡಿದ್ದ ರೈತನೊಬ್ಬ ಬಾರ್‌ ಅಸೋಸಿಯೇಷನ್‌ ಹಾಲ್‌ಗೆ ಬಂದಿದ್ದ. ಡಾಕ್ಟರ್‌ ಹತ್ತಿರ ಹೋಗಬೇಕು ಎಂದು ಸಹಾಯ ಯಾಚಿಸುತ್ತಿದ್ದ. ತನ್ನ ತಲೆಗೆ ಸುತ್ತಿದ್ದ ಟವೆಲ್‌ನ ತುದಿಯಿಂದ ಒಂದು ಕಣ್ಣು ಮುಚ್ಚಿಕೊಂಡಿದ್ದ. ಕರಡಿ ಅವನ ಒಂದು ಕಣ್ಣನ್ನು ಕಿತ್ತಿತ್ತು. ಆ ಕಣ್ಣು ಜೋತಾಡುತ್ತಿತ್ತು. ಅದನ್ನು ನೋಡಿದಾಕ್ಷಣ ಶಾಂತನಗೌಡರು ತಮ್ಮ ಜೇಬಿನಲ್ಲಿದ್ದ ಅಷ್ಟೂರುಪಾಯಿಗಳನ್ನು ಎಣಿಸದೆಯೇ ಅವನಿಗೆ ಕೊಟ್ಟುಬಿಟ್ಟರು! ಲೆಕ್ಕಾಚಾರ ಹಾಕುವ ಜಾಯಮಾನ ಅವರದ್ದಾಗಿರಲಿಲ್ಲ. ತದ್ವಿರುದ್ಧವಾಗಿ ಅವರಿಗಿಂತಲೂ ಪ್ರಸಿದ್ಧರಾಗಿದ್ದ ಕೆಲವು ವಕೀಲರು ಕೃಪಣತೆ ತೋರಿದ್ದರು. ಕೊಟ್ಟೋರು ಕೊಡ್ತಾರ, ಬಿಟ್ಟೋರು ಬಿಡ್ತಾರ. ಅದನ್ನು ಕಟ್ಕೊಂಡು ನಾನೇನು ಮಾಡಲಿ’ ಎನ್ನುತ್ತಾ ಲಗುಬಗೆಯಿಂದ ಕೋರ್ಚ್‌ಗೆ ಹೋದರು. ಚಿಕಿತ್ಸೆ ಫಲಕಾರಿಯಾಗಿತ್ತು.

ಎಸ್‌ಪಿಪಿ ಅಂದರೆ ಹೀಗಿರಬೇಕು

ಅವರು ಎಸ್‌ಪಿಪಿಯಾಗಿದ್ದ ಸಮಯ. ಒಂದು ಹೇಬಿಯಸ್‌ ಕಾರ್ಪಸ್‌ ಪ್ರಕರಣದಲ್ಲಿ ಕಾಣೆಯಾದ ಹುಡುಗಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ. ಹುಡುಗಿಯ ಪೋಷಕರು ಜನನಿಬಿಡ ಕೋರ್ಚ್‌ ಹಾಲ್‌ನಲ್ಲಿ ಕಣ್ಣೀರಿಡುತ್ತಿದ್ದರು. ನ್ಯಾಯಮೂರ್ತಿಗಳೋ ಗರಂ ಆಗಿದ್ದರು. ಶಾಂತನಗೌಡರು, ‘ನನಗೆ ಎರಡು ದಿನದ ಕಾಲಾವಕಾಶ ಕೊಡಿ. ಪ್ರಯತ್ನ ಮಾಡುತ್ತೇನೆ’ ಎಂದು ದೃಢವಾಗಿ ನ್ಯಾಯಪೀಠಕ್ಕೆ ಮನವಿ ಮಾಡಿದರು. ‘ನಿಗದಿತ ಕಾಲದೊಳಗೆ ಹುಡುಗ-ಹುಡುಗಿಯನ್ನು ಹಿಡಿದು ತರದಿದ್ದಲ್ಲಿ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಗದರಿಸಿದರು.

ಪೊಲೀಸರಿಗೆ ಬಿಸಿ ಮುಟ್ಟಿತ್ತು. ನಿಗದಿತ ದಿನದಂದು ಹುಡುಗ-ಹುಡುಗಿಯನ್ನು ಕೋರ್ಟಿಗೆ ಹಾಜರು ಪಡಿಸಲಾಯಿತು. ಕ್ಲಿಷ್ಟಮೊಕದ್ದಮೆ ಮದುವೆಯ ಒಡಂಬಡಿಕೆಯಲ್ಲಿ ಸುಖಾಂತ್ಯ ಕಂಡಿತ್ತು. ಎಸ್‌ಪಿಪಿ ಹೇಗಿರಬೇಕು ಎಂಬುದಕ್ಕೆ ಶಾಂತನಗೌಡರು ಜ್ವಲಂತ ನಿದರ್ಶನವಾಗಿದ್ದರು. ನಂತರದ ದಿನಗಳಲ್ಲಿ ಅದೇ ಕಚೇರಿಯನ್ನು ಅಲಂಕರಿಸಿದ ಕೆಲವರು ಕೈ-ಮೈಗಳನ್ನು ಹೊಲಸು ಮಾಡಿಕೊಂಡ ಬಗ್ಗೆ ಗುಸುಗುಸು ಮಾತು ಇತ್ತು. ಕೆಲವರಿಗಂತೂ ಬೆನ್ನುಲುಬೇ ಇರಲಿಲ್ಲ!

ಅನುಭವದಿಂದ ನ್ಯಾಯ ನಿರ್ಣಯ

ವೃತ್ತಿಯ ಉಚ್ಛ್ರಾಯಮಾನದಲ್ಲಿ ಶಾಂತನಗೌಡರು ಹೈಕೋರ್ಚ್‌ ನ್ಯಾಯಮೂರ್ತಿಯಾದರು. ಕ್ಲಿಷ್ಟಕರ ಮೊಕದ್ದಮೆಗಳನ್ನು ಸಲೀಸಾಗಿ ನಿಕಾಲಿ ಮಾಡುವ ಕಲೆ ಅವರಿಗೆ ಕರಗತವಾಗಿತ್ತು. ಅವರ ಭಾಷೆ ಸರಳ ಮತ್ತು ಸುಂದರವಾಗಿತ್ತು. ಅವರಿಗೆ ಸಿಟ್ಟು ಬಂದದ್ದನ್ನು ನಾವಾರೂ ನೋಡಲೇ ಇಲ್ಲ. ವೃತ್ತಿಯ ಒತ್ತಡದಿಂದ ನಮ್ಮಂಥ ಕೆಲವರು ಒಮ್ಮೊಮ್ಮೆ ಸಿಡಿಮಿಡಿಗೊಳ್ಳುವುದುಂಟು.

ಉತ್ತರ ಕರ್ನಾಟಕದ ಒಬ್ಬ ಶ್ರೀಮಂತ ರೈತ ಎರಡನೆ ಮದುವೆ ಮಾಡಿಕೊಂಡಿದ್ದ. ಮೊದಲನೇ ಹೆಂಡತಿಗೆ ಇಬ್ಬರು ಮಕ್ಕಳು. ಎರಡನೆಯವಳಿಗೆ ಒಂದು ಮಗು. ಎರಡನೆಯ ಮದುವೆ ಅಸಿಂಧು, ಅಂತಹ ಹೆಣ್ಣಿನ ಜೀವನಾಂಶಕ್ಕೆ ಏನನ್ನೂ ಕೊಡಲಾಗದು ಎಂಬ ಪ್ರಬಲ ವಾದ ಮಂಡಿಸಲಾಗಿತ್ತು. ವಾದ-ಪ್ರತಿವಾದ ಮುಗಿಯಿತು. ಪ್ರಕರಣಕ್ಕೆ ಸಂಬಂಧವಿಲ್ಲದ ಇಬ್ಬರು ನಿಷ್ಣಾತ ವಕೀಲರನ್ನು ಎರಡೂ ಪಕ್ಷದವರೊಂದಿಗೆ ಮಾತನಾಡಲು ನಿಯೋಜಿಸಲಾಗಿತ್ತು. ಮೊಕದ್ದಮೆ ಅದೇ ದಿನ ಮಧ್ಯಾಹ್ನ ರಾಜಿಯಲ್ಲಿ ಅಂತ್ಯಗೊಂಡಿತು. ಆವತ್ತು ಶಾಂತನಗೌಡ ಸಾಹೇಬರು ಹೇಳಿದ್ದು, ‘ಕೌಟುಂಬಿಕ ವ್ಯಾಜ್ಯಗಳಲ್ಲಿ ಕಾನೂನಿನ ಪಾತ್ರ ಸೀಮಿತ. ಊಟದ ಜೊತೆಗಿನ ಉಪ್ಪಿನ ಕಾಯಿಯಂತೆ. ಅನುಭವದಿಂದ ನ್ಯಾಯ ನಿರ್ಣಯ ಮಾಡಬೇಕು. ಇಲ್ಲದಿದ್ದರೆ ನ್ಯಾಯ ದೊರಕುವುದಿಲ್ಲ.’ ಇದು ಅಗಾಧವಾದ ಮಾತು.

ಸಿಟ್ಟು ಬಂದರೆ ಜೋಕ್‌ ಮಾಡಿ!

ಶಾಂತನಗೌಡರಲ್ಲಿ ನಾಯಕತ್ವದ ಗುಣಗಳು ವಿಜೃಂಭಿಸುತ್ತಿದ್ದವು. ಸಹವರ್ತಿಗಳು ಅವರನ್ನು ತುಂಬಾ ಗೌರವಿಸುತ್ತಿದ್ದರು. ಮೊಕದ್ದಮೆ ಸೋತ ವಕೀಲರೂ ಸಹ ತೀರ್ಪಿಗೆ ತಲೆಬಾಗುತ್ತಿದ್ದರು. ಯಾರೂ ಗೊಣಗುಡುತ್ತಿರಲಿಲ್ಲ. ನ್ಯಾಯಮೂರ್ತಿಯಾಗಿ ಅವರು ಹಲವಾರು ಉತ್ಕೃಷ್ಟತೀರ್ಪುಗಳನ್ನು ನೀಡಿದ್ದರು.

ಹೊಸದಾಗಿ ನೇಮಕಗೊಂಡ ನ್ಯಾಯಮೂರ್ತಿಗಳಿಗೆ ಡೂಸ್‌ ಅಂಡ್‌ ಡೋಂಟ್ಸ್‌ಗಳ ಬಗ್ಗೆ ಮನೋಜ್ಞವಾಗಿ ವಿವರಿಸುತ್ತಿದ್ದರು. ಅದು ಅತ್ಯಮೂಲ್ಯವಾಗಿರುತ್ತಿತ್ತು. ಕೋರ್ಟಿನಲ್ಲಿ ಸಿಟ್ಟು ಬಂದಾಗ ಒಂದು ಪುಟ್ಟಜೋಕನ್ನು ಮಾಡಿ ನಕ್ಕು ಬಿಡಬೇಕು ಎಂಬುದು ಅವರ ಪ್ರಥಮ ಪಾಠವಾಗಿತ್ತು. ನಮ್ಮ ಪೈಕಿ ಒಬ್ಬ ನ್ಯಾಯಮೂರ್ತಿಗೆ ಅಪಚಾರವಾದಾಗ ಶಿಷ್ಟಾಚಾರಗಳನ್ನು ಬದಿಗಿರಿಸಿ ತಪ್ಪನ್ನು ಸರಿಮಾಡಿಸಿದ್ದರು. ಇಂತಹ ನಿದರ್ಶನಗಳು ಅನೇಕ. ಸಾಮಗಾನದ ಬಾಳನ್ನು ವಿಧಿ ಮೊಟಕುಗೊಳಿಸಿ ಒಂದು ವರ್ಷ ಕಳೆದಿದೆ. ನಮ್ಮ ಶಾಂತನಗೌಡ ಸಾಹೇಬರು ಮತ್ತೊಮ್ಮೆ ಹುಟ್ಟಿಬರಲಿ.

ಶಾಂತನಗೌಡರ್‌ ಬದುಕಿನ ಘಟ್ಟಗಳು

1958ರ ಮೇ 5ರಂದು ರಟ್ಟಿಹಳ್ಳಿ ತಾಲೂಕಿನ ಖಂಡೇಬಾಗೂರಿನಲ್ಲಿ ಮೋಹನ ಎಂ.ಶಾಂತನಗೌಡರ ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ 1977ರಲ್ಲಿ ಬಿಎಸ್ಸಿ, 1980ರಲ್ಲಿ ಕಾನೂನು ಪದವಿ. ಒಂದು ವರ್ಷ ಧಾರವಾಡದ ಹಿರಿಯ ನ್ಯಾಯವಾದಿ ಐ.ಜಿ.ಹಿರೇಗೌಡರ ಗರಡಿಯಲ್ಲಿ ವಕೀಲಿಕೆ ತಯಾರಿ. ನಂತರ ವೃತ್ತಿಗಾಗಿ ಬೆಂಗಳೂರಿನಲ್ಲಿ ನೆಲೆ. ಹಿರಿಯ ವಕೀಲ ಶಿವರಾಜ್‌ ಪಾಟೀಲರ ಸಾರಥ್ಯ. ಕರ್ನಾಟಕ ವಕೀಲ ಪರಿಷತ್ತಿನ ಅಧ್ಯಕ್ಷ. ರಾಜ್ಯ ಅಭಿಯೋಜಕ (ಎಸ್‌ಪಿಪಿ) ಆಗಿ ನಿಯೋಜನೆ. 2003ರ ಮೇ 12ರಂದು ಹೈಕೋರ್ಚ್‌ ನ್ಯಾಯಮೂರ್ತಿ ಪಟ್ಟ. ಕೇರಳ ಹೈಕೋರ್ಚ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ. ನಂತರದಲ್ಲಿ 2017ರ ಫೆಬ್ರುವರಿ 17ರಂದು ಸುಪ್ರೀಂಕೋರ್ಟಿಗೆ ನೇಮಕ. 2021ರ ಏಪ್ರಿಲ್‌ 24ರಂದು ದೈವಾಧೀನ. ಇಂದು ಧಾರವಾಡದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ವಾರ್ಷಿಕ ಸ್ಮರಣೆ.

Follow Us:
Download App:
  • android
  • ios