Asianet Suvarna News Asianet Suvarna News

ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ವಿಶೇಷ ಕಾರ್ಯಪಡೆ

  •  ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ವಿಶೇಷ ಕಾರ್ಯಪಡೆ
  •  ಹಾಳಕೆರೆ ಶ್ರೀಗಳ ಗುರುವಂದನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  •  ರೈತರ ಮಕ್ಕಳ ಸಮಗ್ರ ಅಭಿವೃದ್ಧಿಯೇ ಸರ್ಕಾರದ ಗುರಿ
Special team fir kittur Karnataka Development  snr
Author
Bengaluru, First Published Nov 10, 2021, 6:58 AM IST | Last Updated Nov 10, 2021, 6:58 AM IST

 ಗದಗ (ನ.10):  ಈಗಾಗಲೇ ಘೋಷಣೆ ಮಾಡಿರುವ ‘ಕಿತ್ತೂರು ಕರ್ನಾಟಕ’ (Kittur karnataka) ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಪಡೆ ಹಾಗೂ ಪ್ಯಾಕೇಜ್‌ (package) ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja bommai) ಭರವಸೆ ನೀಡಿದರು.

ಗಜೇಂದ್ರಗಡ ತಾಲೂಕಿನ ಹಾಳಕೇರಿ ಗ್ರಾಮದಲ್ಲಿ ಮಂಗಳವಾರ ಅಭಿನವ ಅನ್ನದಾನ ಶಿವಯೋಗಿಗಳ ಗುರುವಂದನೆ ಹಾಗೂ ಮುಪ್ಪಿನ ಬಸವಲಿಂಗ ದೇವರ ನಿರಂಜನ ಚರ ಪಟ್ಟಾಧಿಕಾರಿ ಕಾರ್ಯಕ್ರಮದಲ್ಲಿ ‘ಹಾಳಕೆರೆಯ ಬೆಳದಿಂಗಳು ಚಿತ್ರ ಸಂಪುಟ’ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮಹಾರಾಷ್ಟ್ರ (Maharashtra) ಗಡಿ ವಿವಾದ ಇತ್ಯರ್ಥವಾಗಿದ್ದರೂ ಮಹಾರಾಷ್ಟ್ರದ ಜನರು ನಿತ್ಯವೂ ಅದನ್ನು ಕೆಣಕುತ್ತಲೇ ಇರುವ ಈ ಸಂದರ್ಭದಲ್ಲಿ ಈ ಭಾಗವನ್ನು ಮುಂಬೈ ಕರ್ನಾಟಕ (Mumbai Karnataka) ಎಂದು ಕರೆಯುವುದು ಸೂಕ್ತವಲ್ಲ ಎನ್ನುವ ಹಲವು ಹಿರಿಯರ ಮಹಾದಾಸೆಯಂತೆ ಕಿತ್ತೂರು ಕರ್ನಾಟಕ (kittur karnataka) ಎಂದು ಹೆಸರು ಘೋಷಣೆ ಮಾಡಲಾಗಿದೆ. ನಮ್ಮ ಸರ್ಕಾರ ಈ ಹಿಂದೆ ಕಲ್ಯಾಣ ಕರ್ನಾಟಕ (Kalyana karnataka) ಎಂದು ಹೈದರಾಬಾದ್‌ ಕರ್ನಾಟಕಕ್ಕೆ (Hyderabad karnataka) ಘೋಷಿಸಿ ಅಲ್ಲಿನ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್‌ ನೀಡಿದಂತೆ, ಕಿತ್ತೂರು ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಮುಖ್ಯಮಂತ್ರಿಯಾದ ಒಂದು ಗಂಟೆಯಲ್ಲೇ ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ (Student scholarship) ಮಂಜೂರು ಮಾಡಿದ್ದು, ಇದಕ್ಕಾಗಿ ಸಾವಿರ ಕೋಟಿ ರುಪಾಯಿ ಮೀಸಲಿಟ್ಟಿದ್ದೇನೆ. ಉತ್ತರ ಕರ್ನಾಟಕ (north Karnataka) ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾವಿರಾರು ಕುಟುಂಬಗಳು ಇಂದಿಗೂ ಕೃಷಿಯನ್ನೇ ಕುಟುಂಬದ ಆದಾಯದ ಮೂಲವಾಗಿಸಿದ್ದು, ಈ ರೀತಿ ಕೃಷಿ ಕುಟುಂಬಗಳು ಹಾಗೂ ಕೃಷಿಯನ್ನೇ ನಂಬಿರುವ ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ನಮ್ಮ ಸರ್ಕಾರದ ಗುರಿ ಎಂದು ಹೇಳಿದರು.

ರಾಜ್ಯದ ತಲಾವಾರು ಆದಾಯ ಇಂದಿಗೂ ಶೇ. 35 ರಷ್ಟುಜನರ ಆದಾಯದ ಆಧಾರದಲ್ಲೇ ನಿರ್ಧಾರವಾಗುತ್ತಿದ್ದು, ಅದರಲ್ಲಿಯೂ ಮುಖ್ಯವಾಗಿ ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಿದೆ. ರೈತರ ಮನೆಯಲ್ಲಿ ಯಾರಾದರೊಬ್ಬರು ಕೃಷಿಯೊಂದಿಗೆ ಅನ್ಯ ಉದ್ಯೋಗ ಪಡೆದಲ್ಲಿ ಅವರು ಆರ್ಥಿಕವಾಗಿ ಚೇತರಿಕೆಯಾಗುವುದನ್ನು ನಾನು ಗಮನಿಸಿದ್ದು, ಅದಕ್ಕಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ ಎಂದರು.

7 ಜಿಲ್ಲೆಗಳು ಕಿತ್ತೂರು ಕರ್ನಾಟಕ :  ಹೈದರಾಬಾದ್‌-ಕರ್ನಾಟಕ (Hyderabad Karnataka) ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಮಾದರಿಯಲ್ಲಿಯೇ ಮುಂಬೈ-ಕರ್ನಾಟಕ (Mumbai Karnataka) ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಮೂಲಕ ಮುಂಬೈ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಕೆಯಾದಂತಾಗಿದೆ.

ಸೋಮವಾರ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ (JC Madhuswamy), ‘ಮುಂಬೈ ಕರ್ನಾಟಕ ಎಂದು ಕರೆಯುತ್ತಿದ್ದ ಬೆಳಗಾವಿ , ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಪ್ರದೇಶಗಳನ್ನು ಇನ್ನು ಮುಂದೆ ಕಿತ್ತೂರು ಕರ್ನಾಟಕ (Kittur Karnataka) ಪ್ರದೇಶ ಎಂದು ನಾಮಕರಣ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ’ ಎಂದು ಹೇಳಿದರು.

ಹೈದರಾಬಾದ್‌-ಕರ್ನಾಟಕ ಪ್ರಾಂತ್ಯವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಬಳಿಕ ಮುಂಬೈ-ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂದು ಆ ಭಾಗದ ಜನರು ಒತ್ತಾಯಿಸಿದ್ದರು. ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡುವ ಬಗ್ಗೆ ಆಶ್ವಾಸನೆ ನೀಡಿದ್ದರು. ಇತ್ತೀಚೆಗೆ ಕಿತ್ತೂರು ಉತ್ಸವದಲ್ಲಿ ಹಾಗೂ ಉಪಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj Bommai) ಸಹ ಮುಂಬೈ ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಸಚಿವ ಸಂಪುಟದಲ್ಲಿ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಿದೆ.

Latest Videos
Follow Us:
Download App:
  • android
  • ios