ವರದಿ :  ಸಂಪತ್‌ ತರೀಕೆರೆ

 ಬೆಂಗಳೂರು (ನ.23):  ಪಡಿತರ ಫಲಾನುಭವಿಗಳಿಗೆ ವಿಟಮಿನ್‌, ಕಬ್ಬಿಣಾಂಶ ಮತ್ತು ಪೌಷ್ಟಿಕಾಂಶಗಳನ್ನು ಒಳಗೊಂಡ ಸಾರವರ್ಧಕ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಯೋಜಿಸಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ತುಮಕೂರು ಅಥವಾ ಯಾದಗಿರಿ ಜಿಲ್ಲೆಯ ಪೈಕಿ ಒಂದರಲ್ಲಿ ಜಾರಿಗೊಳಿಸಲು ಉದ್ದೇಶಿಸಿದೆ.

ಸೂಕ್ಷ್ಮ ಪೋಷಕಾಂಶಗಳು ಮತ್ತು ಕಬ್ಬಿಣಾಂಶದಿಂದ ಸಾರವರ್ಧನೆಗೊಳಿಸಿದ ಅಕ್ಕಿಯನ್ನು ಪಡಿತರ ಫಲಾನುಭವಿಗಳಿಗೆ ನೀಡುವ ಮೂಲಕ ಅಪೌಷ್ಠಿಕತೆ ಸಮಸ್ಯೆ ನಿವಾರಿಸುವುದು ಈ ಯೋಜನೆ ಉದ್ದೇಶವಾಗಿದೆ. ರಾಜ್ಯದಲ್ಲಿ ರೂಢಿಯಲ್ಲಿರುವ ಆಹಾರ ಪದ್ಧತಿಯನ್ನು ಗಮನದಲ್ಲಿರಿಸಿಕೊಂಡು ಅಪೌಷ್ಟಿಕತೆ ಸಮಸ್ಯೆ ನಿವಾರಿಸಲು ಸಾರವರ್ಧಕ (ಫೋರ್ಟಿಫೈಡ್‌ ರೈಸ್‌) ಅಕ್ಕಿಯನ್ನು ಹಂಚಿಕೆ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ.

ರೋಗ ನಿರೋಧಕ ಶಕ್ತಿಯ ಅಕ್ಕಿ ಅಭಿವೃದ್ಧಿ! ಆಹಾರದಲ್ಲೇ ಔಷಧ ...

ಕೇಂದ್ರ ಸರ್ಕಾರದ ಒಟ್ಟು 174.6 ಕೋಟಿ ರು.ಗಳ ಯೋಜನೆ ಇದಾಗಿದ್ದು, ಪ್ರಾಯೋಗಿಕವಾಗಿ 15 ರಾಜ್ಯಗಳ ಜಿಲ್ಲೆಯೊಂದರಲ್ಲಿ ಈ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಹಾಗಾಗಿ ಕರ್ನಾಟಕದ ತುಮಕೂರು ಅಥವಾ ಯಾದಗಿರಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಲೆಕ್ಕಾಚಾರದಲ್ಲಿ ತೊಡಗಿದೆ.

ತುಮಕೂರಿನಲ್ಲಿ ಬಿಪಿಎಲ್‌ ಕಾರ್ಡುಗಳು 6,13,698 ಇದ್ದು 20,46,698 ಫಲಾನುಭವಿಗಳು ಮತ್ತು ಅಂತ್ಯೋದಯ ಕಾರ್ಡುದಾರರು 49,463 ಹಾಗೂ ಫಲಾನುಭವಿಗಳು 2,10,575 ಮಂದಿ ಇದ್ದಾರೆ. ಹಾಗೆಯೇ ಯಾದಗಿರಿಯಲ್ಲಿ ಬಿಪಿಎಲ್‌ ಕಾರ್ಡುಗಳು 2,35,136 ಇದ್ದು ಫಲಾನುಭವಿಗಳು 8,46,474 ಮತ್ತು ಅಂತ್ಯೋದಯ ಕಾರ್ಡುದಾರರು 29,352 ಹಾಗೂ ಫಲಾನುಭವಿಗಳು 1,18,969 ಮಂದಿ ಇದ್ದಾರೆ. ರಾಜ್ಯದಲ್ಲಿ ಬಿಪಿಎಲ್‌ ಫಲಾನುಭವಿಗಳು 3,89,47,262, ಅಂತ್ಯೋದಯ ಫಲಾನುಭವಿಗಳು 46,64,732 ಮತ್ತು ಎಪಿಎಲ್‌ ಫಲಾನುಭವಿಗಳು 74,09,121 ಮಂದಿ ಇದ್ದಾರೆ.

ಬಳಕೆಯಿಂದ ಸಿಗುವ ಲಾಭ:

ಸಾರವರ್ಧಕ ಅಕ್ಕಿಯಿಂದ ತಯಾರಿಸಿದ ಆಹಾರ ಸೇವಿಸುವುದರಿಂದ ಅಪೌಷ್ಟಿಕತೆ ಕಡಿಮೆಯಾಗುವುದರ ಜತೆಗೆ ದೇಹಕ್ಕೆ ಚೈತನ್ಯ ಲಭ್ಯವಾಗುತ್ತದೆ. ಇದು ದೈಹಿಕ ಬೆಳವಣಿಗೆಯಲ್ಲಿ ಕುಂಠಿತ, ಕಡಿಮೆ ತೂಕ ಹಾಗೂ ಕೃಶ ದೇಹದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ ವೈಜ್ಞಾನಿಕ ಸಮಿತಿಯಿಂದ ಸಾರವರ್ಧಕ ಅಕ್ಕಿಯ ಗುಣಮಟ್ಟವು ಅನುಮೋದಿಸಲ್ಪಟ್ಟಿದೆ. ಶೀಘ್ರವೇ ತುಮಕೂರು ಅಥವಾ ಯಾದಗಿರಿ ಜಿಲ್ಲೆಯ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರವರ್ಧಕ ಅಕ್ಕಿ ಅಂದರೇನು?

ಮಿಟಮಿನ್‌ ಮತ್ತು ಕಬ್ಬಿಣಾಂಶ ಮೊದಲಾದ ಪೌಷ್ಟಿಕಾಂಶಗಳನ್ನು ಅಕ್ಕಿಯ ಹಿಟ್ಟಿನ ಜತೆಯಲ್ಲಿ ಬೆರೆಸಿ ಅಕ್ಕಿಯ ರೂಪ ಮತ್ತು ಗಾತ್ರದ ಕಾಳಿನ ರೀತಿಯಲ್ಲಿ ತಯಾರಿಸಲಾಗಿರುತ್ತದೆ. ಇದನ್ನು ಸಾರವರ್ಧಕ ಅಕ್ಕಿಯ ತಿರುಳು ಎಂದು ಕರೆಯಲಾಗುತ್ತದೆ. ಈ ಅಕ್ಕಿಯ ತಿರುಳು (ಸ್ವರೂಪ, ಹೊಳಪು, ಸಾಂದ್ರತೆ ಮತ್ತು ಸುವಾಸನೆಯಲ್ಲಿ) ಸ್ವಾಭಾವಿಕ ಅಕ್ಕಿಯನ್ನು ಹೋಲುತ್ತದೆ. ಒಂದು ಭಾಗ ಸಾರವರ್ಧಕ ಅಕ್ಕಿಯ ತಿರುಳನ್ನು ನೂರು ಭಾಗ ಕಚ್ಚಾ ಅಕ್ಕಿಯೊಂದಿಗೆ ಬೆರಸಿ, ನಿರೀಕ್ಷಿತ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವ ಅಂತಿಮ ಉತ್ಪನ್ನವನ್ನು ತಯಾರಿಸಲಾಗುತ್ತದೆ.