ಬೆಂಗಳೂರು (ನ.13):  ಕೋವಿಡ್‌-19 ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಪ್ರತಿ ಆಹಾರದಲ್ಲೂ ಪೌಷ್ಟಿಕತೆ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿ ತಿನ್ನುವಂತ ಪರಿಸ್ಥಿತಿ ಬಂದಿದ್ದು, ಅದಕ್ಕೆ ಪೂರಕವಾಗಿ ಬೆಂಗಳೂರು ಕೃಷಿ ವಿವಿ ವಿಜ್ಞಾನಿಗಳು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಭತ್ತವನ್ನು ಅಭಿವೃದ್ಧಿಪಡಿಸಿದ್ದಾರೆ.

ಪೌಷ್ಟಿಕ್‌-1, ಪೌಷ್ಟಿಕ್‌-7 ಮತ್ತು ಪೌಷ್ಟಿಕ್‌-9 ಎಂಬ ಮೂರು ವಿಧದ ಭತ್ತವನ್ನು ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು ಆಹಾರದಲ್ಲೇ ಔಷಧ ದೊರಕಿಸುವಂತ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಮಂಡ್ಯ, ಕುಣಿಗಲ್‌ ಮುಂತಾದೆಡೆಗಳಲ್ಲಿ ರೈತರು ಬೆಳೆಯುತ್ತಿದ್ದು ಈ ತಳಿ ಯಶಸ್ವಿಯಾಗಿದೆ. ಮುಂದಿನ ಕೃಷಿ ಮೇಳದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಉದ್ದೇಶ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ್ದು.

ಈ ಮೂರು ಭತ್ತದ ತಳಿಯಲ್ಲಿ ಜಿಂಕ್‌, ಕಬ್ಬಿಣದ ಅಂಶ, ಪ್ರೊಟೀನ್‌ ಪ್ರಮಾಣ ಇತರೆ ಭತ್ತಗಳಿಗಿಂತ ಹೆಚ್ಚಾಗಿದೆ. ಪೌಷ್ಟಿಕ್‌-1 ತಳಿ ಜಿಂಕ್‌ ಇದ್ದು 50ರಷ್ಟುಪಿಪಿಎಂ (ಪದಾರ್ಥದ ಸಾಂದ್ರತೆ) ಹೊಂದಿದೆ. ಪೌಷ್ಟಿಕ್‌-7ರಲ್ಲಿ ಕಬ್ಬಿಣದ ಅಂಶವಿದ್ದು 50 ಪಿಪಿಎಂ ಇದೆ. ಹಾಗೂ ಪೌಷ್ಟಿಕ್‌-9 ತಳಿ ಶೇ.4.5ರಿಂದ 5ರಷ್ಟುಪ್ರೋಟಿನ್‌ ಹೊಂದಿದೆ.

ಗಂಟೆಗೆ 100 ಕೆಜಿ ಅಡಿಕೆ ಸುಲಿವ ಕಡಿಮೆ ದರದ ಯಂತ್ರ ಇಲ್ಲಿದೆ : ಬೇಕಿದ್ದವರು ಸಂಪರ್ಕಿಸಿ ...

ಈ ತಳಿಯ ಅಕ್ಕಿಯನ್ನು ಸೇವಿಸಿದರೆ ಕೊರೋನಾ ಸೇರಿದಂತೆ ಎಲ್ಲಾ ರೀತಿಯ ಕಾಯಿಲೆಗಳ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ. ದೇಹದಲ್ಲಿ ಕೊರತೆ ಇರುವ ಖನಿಜಗಳನ್ನು ಹೀಗೆ ಅಕ್ಕಿಯ ಮೂಲಕ ನೀಡುವ ಉದ್ದೇಶ ಕೃಷಿ ವಿವಿಯದ್ದು. ಜಿಂಕ್‌ನ್ನು ಔಷಧಿಯ ರೂಪದಲ್ಲಿ ಸೇವಿಸುವ ಬದಲು ಪೌಷ್ಟಿಕ್‌ 1 ಅಕ್ಕಿಯನ್ನು ಬಳಕೆ ಆರಂಭಿಸಿದರೆ ಆರೋಗ್ಯದಲ್ಲಿ ಸಾಕಷ್ಟುಸುಧಾರಣೆ ಕಂಡುಕೊಳ್ಳಬಹುದು. ದೇಹದ ಅವಶ್ಯಕತೆಗೆ ಎಷ್ಟೇಷ್ಟುಪ್ರಮಾಣದಲ್ಲಿ ಈ ಅಕ್ಕಿಯ ಸೇವನೆ ಆಗಬೇಕು ಎನ್ನುವುದರ ಬಗ್ಗೆ ವೈದ್ಯಲೋಕ ಸಂಶೋಧನೆ ನಡೆಸಬೇಕಿದೆ ಎಂದು ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.