Asianet Suvarna News Asianet Suvarna News

ರಾಜ್ಯ ಹೊಸ ಅನ್ವೇಷಣೆಗಳ ನೆಲೆಯಾಗಬೇಕು: ಕೃಷಿ ಸೇರಿ ಎಲ್ಲ ರಂಗಗಳಿಗೆ ತಂತ್ರಜ್ಞಾನ!

ರಾಜ್ಯ ಹೊಸ ಅನ್ವೇಷಣೆಗಳ ನೆಲೆಯಾಗಬೇಕು| ಕೃಷಿ ಸೇರಿ ಎಲ್ಲ ರಂಗಗಳಿಗೆ ತಂತ್ರಜ್ಞಾನ ಕೊಂಡೊಯ್ಯಬೇಕು| ಜನರನ್ನು ಹೊಸ ಆವಿಷ್ಕಾರಗಳು ತಲುಪಬೇಕು| ಬೆಂಗಳೂರು ಹೊರತಾದ ನಗರಗಳಲ್ಲಿ ಐಟಿ ಉದ್ಯಮ ಆರಂಭಸಿದರೆ ಭಾರೀ ವಿನಾಯ್ತಿ| ಬೆಂಗಳೂರಿನ ಆಚೆ ಐಟಿ ಉದ್ಯಮ ಸ್ಥಾಪನೆಗೇ ಪಂಚವಾರ್ಷಿಕ ಐಟಿ ನೀತಿ ಜಾರಿ| 2ನೇ ಹಂತದ ನಗರಗಳ ಬೆಳವಣಿಗೆಗೆ ವೈಟ್‌ ಪೇಪರ್‌ ಟಾಸ್ಕ್‌ಫೋರ್ಸ್‌| ಐಟಿಯಲ್ಲಿ ಸರ್ಕಾರದ ಸಾಧನೆ: ಕಳೆದ 6 ವರ್ಷದಲ್ಲಿ .2.25 ಲಕ್ಷ ಕೋಟಿ ಹೂಡಿಕೆ| ನ.19ರಿಂದ ಬೆಂಗಳೂರಿನಲ್ಲಿ ವರ್ಚುವಲ್‌ ಐಟಿ ಶೃಂಗ

Special Interview of Karnataka Deputy CM Dr CN Ashwath Narayan pod
Author
Bangalore, First Published Nov 17, 2020, 7:22 AM IST
  • Facebook
  • Twitter
  • Whatsapp

ಶ್ರೀಕಾಂತ್‌ ಎನ್‌.ಗೌಡಸಂದ್ರ/ಪ್ರಭುಸ್ವಾಮಿ ನಟೇಕರ್‌

ಕೊರೋನಾ ಕಾಲಿಟ್ಟಬಳಿಕ ಸಮಸ್ತವೂ ವರ್ಚುಯಲ್‌ ಜಗತ್ತಿನತ್ತ ಹೊರಳುತ್ತಿದೆ. ಶಾಲಾ-ತರಗತಿಗಳು ಮಾತ್ರವಲ್ಲ ಕೃಷಿ ಮೇಳವೂ ವರ್ಚುವಲ್‌ ರೂಪ ತಾಳುವಷ್ಟುಮಾಹಿತಿ-ತಂತ್ರಜ್ಞಾನದ ಅನಿವಾರ್ಯತೆ ಆವರಿಸಿದೆ. ಇದೇ ರೀತಿ ಎಲ್ಲಾ ಕ್ಷೇತ್ರಗಳಿಗೂ ಅತ್ಯಾಧುನಿಕ ತಂತ್ರಜ್ಞಾನ, ತಂತ್ರಜ್ಞಾನ ಬಳಕೆಯ ಉಪಯೋಗ, ವಿಫುಲ ಅವಕಾಶಗಳ ಮಾಹಿತಿ ಮುಟ್ಟಿಸಿ ಜಾಗತಿಕ ಮಟ್ಟದಲ್ಲಿ ರಾಜ್ಯದ ಉದ್ದಿಮೆ, ಸ್ಟಾರ್ಟ್‌ಅಪ್‌ಗಳು ಬೆಳೆಯುವಂತಾಗಬೇಕು ಎಂಬ ದೂರದೃಷ್ಟಿ, ಮಹತ್ವಾಕಾಂಕ್ಷೆಯೊಂದಿಗೆ ನ.19 ರಂದು ಗುರುವಾರ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬಿಟಿಎಸ್‌) ಆರಂಭವಾಗುತ್ತಿದೆ. ರಾಜ್ಯದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಶೇ.100 ರಷ್ಟುವರ್ಚುಯಲ್‌ ಮೂಲಕ ಜಾಗತಿಕ ಶೃಂಗಸಭೆ ಆಯೋಜನೆಗೊಳ್ಳುತ್ತಿದೆ.

ಶೃಂಗಸಭೆಯ ಪ್ರಮುಖ ರೂವಾರಿ ಹಾಗೂ ಐಟಿ-ಬಿಟಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಶೃಂಗದ ಯಶಸ್ಸಿಗೆ ಹಗಲಿರುಳು ಕೃಷಿ ಮಾಡುತ್ತಿದ್ದಾರೆ. ಬೆಂಗಳೂರಿನಾಚೆಗೆ ಅತ್ಯಾಧುನಿಕ ತಂತ್ರಜ್ಞಾನ ಮುಟ್ಟಿಸುವ ಉದ್ದೇಶದಿಂದ ‘ಬೆಂಗಳೂರು ಟೆಕ್‌ ಸಮಿಟ್‌’ ಸಿದ್ಧತೆಯಲ್ಲಿ ತೊಡಗಿರುವ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಸಮ್ಮಿಟ್‌ನಲ್ಲಿ ಯಾವ್ಯಾವ ದೇಶ, ಯಾವ್ಯಾವ ಕ್ಷೇತ್ರಗಳ ಮುಂಚೂಣಿ ಕಂಪೆನಿಗಳು ಭಾಗವಹಿಸುತ್ತಿವೆ. ಸಿದ್ಧತೆ ಹೇಗಿದೆ? ಇದರ ಪರಿಣಾಮವೇನು? ರಾಜ್ಯಕ್ಕೆ ಹೇಗೆಲ್ಲಾ ಉಪಯೋಗವಾಗಲಿದೆ ಎಂಬ ಬಗ್ಗೆ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ವಿದೇಶಗಳೊಂದಿಗೆ ರಾಜ್ಯದ ಐಟಿ ಬಾಂಧವ್ಯ ವೃದ್ಧಿಗೆ ಪಣ: ಡಿಸಿಎಂ ಅಶ್ವತ್ಥ ನಾರಾಯಣ

-‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ (ಬಿಟಿಎಸ್‌) ಇದೇ ಮೊದಲ ಬಾರಿಗೆ ಶೇ.100 ರಷ್ಟುವರ್ಚುವಲ್‌ ರೂಪದಲ್ಲಿ ನಡೆಯುತ್ತಿದೆ. ಸಿದ್ಧತೆ ಹೇಗಿದೆ?

ಶೃಂಗಸಭೆಯ ಪ್ರಾಥಮಿಕ ಸಿದ್ಧತೆ ಕಳೆದ ವರ್ಷದಿಂದಲೇ ಶುರುವಾಗಿದೆ. ಕೊರೋನಾ ಹಾವಳಿ ಉಂಟಾಗಿದ್ದರಿಂದ ಅನಿವಾರ್ಯವಾಗಿ ವರ್ಚುಯಲ್‌ನತ್ತ ಹೊರಳಬೇಕಾಯಿತು. ಸಾರ್ವಜನಿಕರಿಗೂ ಲಿಂಕ್‌ಗಳನ್ನು ಶೇರ್‌ ಮಾಡುವ ಮೂಲಕ ಬಿಟಿಎಸ್‌ನ ಪ್ರತಿಯೊಂದು ಮಾಹಿತಿಯನ್ನೂ ತಲುಪುವಂತೆ ಮಾಡಲಾಗುವುದು. ಶೃಂಗಸಭೆಯಲ್ಲಿ ಪ್ರದರ್ಶನವಾಗುವ ತಂತ್ರಜ್ಞಾನ, ಸಂಶೋಧನೆ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಯಶಸ್ಸಿಗಾಗಿ ವಿವಿಧ ಜವಾಬ್ದಾರಿಗಳನ್ನು ವಹಿಸಲು ಏಜೆನ್ಸಿಗಳ ನೇಕ ಮಾಡಲಾಗಿದೆ. ಏಪ್ರಿಲ್‌ ತಿಂಗಳಲ್ಲೇ ಅಂತಾರಾಷ್ಟ್ರೀಯ ಸಮಿತಿ ರಚನೆ ಮಾಡಿ ವ್ಯಾಪಕ ಸಿದ್ಧತೆ ನಡೆಸಿದ್ದೇವೆ.

- ಶೃಂಗಸಭೆಯ ಆದ್ಯತಾ ವಿಷಯಗಳೇನು?

ತಂತ್ರಜ್ಞಾನಕ್ಕೆ ಇತಿ-ಮಿತಿಗಳು ಎಂಬುದಿಲ್ಲ. ತಂತ್ರಜ್ಞಾನದ ಅನಿವಾರ್ಯತೆ, ಅನ್ವಯವಾಗದಂತಹ ಯಾವ ಕ್ಷೇತ್ರವೂ ಉಳಿದಿಲ್ಲ. ಕೃಷಿ ಮಾಡಲು, ಕುರಿ ಕಾಯಲೂ ಸಹ ತಂತ್ರಜ್ಞಾನ ಆವಿಷ್ಕಾರಗಳು ಆಗಿವೆ. ಹೀಗಾಗಿ ಎಲ್ಲಾ ರಂಗಗಳಿಗೂ ತಂತ್ರಜ್ಞಾನವನ್ನು ಕೊಂಡೊಯ್ಯಬೇಕು. ಈ ಮೂಲಕ ಹೊಸ ಐಡಿಯಾ, ಆವಿಷ್ಕಾರಗಳು ಜನರನ್ನು ತಲುಪಬೇಕು. ರಾಜ್ಯವು ಹೊಸ-ಹೊಸ ತಂತ್ರಜ್ಞಾನಗಳ ಅನ್ವೇಷಣೆಯ ನೆಲೆಯಬೇಕಾಗಬೇಕು ಎಂಬುದೇ ನಮ್ಮ ಉದ್ದೇಶ. ರಾಜ್ಯದ ಒಟ್ಟು ಜಿಡಿಪಿಯ ಶೇ.25 ರಷ್ಟುಆದಾಯ ಮಾಹಿತಿ ತಂತ್ರಜ್ಞಾನ ಈ ಕ್ಷೇತ್ರದಿಂದಲೇ ಬರುತ್ತಿದೆ. ಅಲ್ಲದೆ ಪರೋಕ್ಷ ತೆರಿಗೆ, ಉದ್ಯೋಗ ಸೃಷ್ಟಿ, ಉದ್ಯೋಗಿಗಳಿಂದ ಬರುವ ತೆರಿಗೆ ಆದಾಯಗಳು ಸೇರಿ ರಾಜ್ಯದ ಅಭಿವೃದ್ಧಿಗೆ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಬಹುದೊಡ್ಡ ಕೊಡುಗೆ ಇದೆ. ಇದನ್ನು ಮತ್ತಷ್ಟುಬೆಳೆಸಬೇಕು ತನ್ಮೂಲಕ ರಾಜ್ಯವನ್ನು ಮತ್ತಷ್ಟುಅಭಿವೃದ್ಧಿಪಥದತ್ತ ಕೊಂಡೊಯ್ಯಬೇಕು ಎಂಬುದು ನಮ್ಮ ಸಂಕಲ್ಪ.

ದ್ವಿತೀಯ ಹಂತದ ನಗರಗಳಲ್ಲಿ ಐಟಿ ಕಂಪನಿ ಸ್ಥಾಪನೆ :ಡಿಸಿಎಂ

- ಸಂಕಲ್ಪ ಒಳ್ಳೆಯದೆ. ಆದರೆ, ಪ್ರೋತ್ಸಾಹ ಇಲ್ಲದಿದ್ದರೆ ಉದ್ಯಮ ಏಕೆ ಸ್ಪಂದಿಸಬೇಕು?

ಬೆಂಗಳೂರು ಹೊರತು ಪಡಿಸಿ ಇತರೆ ನಗರದಲ್ಲಿ ಐಟಿ ಉದ್ಯಮ ಆರಂಭಿಸುವವರಿಗೆ ಹೇರಳವಾಗಿ ಇನ್ಸೆಂಟಿವ್‌ ನೀಡುತ್ತಿದ್ದೇವೆ. ಐಟಿ ಕ್ಲಸ್ಟರ್‌ಗಳ ಸ್ಥಾಪನೆಗೆ 3 ಕೋಟಿ ರು.ವರೆಗೆ ಹಣಕಾಸು ನೆರವು. ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರಲ್ಲಿ ಶೇ.75ರಷ್ಟುಮುದ್ರಾಂಕ ಶುಲ್ಕ ವಿನಾಯಿತಿ, ಬೇರೆ ಪ್ರದೇಶದಲ್ಲಿ ಶೇ.100ರಷ್ಟುಮುದ್ರಾಂಕ ವಿನಾಯಿತಿ. ನಮ್ಮ ದೇಶದಲ್ಲಿನ ಪೇಟೆಂಟ್‌ಗಾಗಿ 2 ಲಕ್ಷ ರು. ವೆಚ್ಚ ಮರುಪಾವತಿ ಮತ್ತು ಅಂತಾರಾಷ್ಟ್ರೀಯ ಪೇಟೆಂಟ್‌ಗಾಗಿ 10 ಲಕ್ಷ ರು. ವೆಚ್ಚ ಮರುಪಾವತಿ ಮಾಡಲಾಗುತ್ತದೆ. 6 ಲಕ್ಷ ರು.ವರೆಗೆ ಗುಣಮಟ್ಟಪ್ರಮಾಣ ಪತ್ರ ವೆಚ್ಚ ಮರುಪಾವತಿ ಮಾಡಲಾಗುವುದು. ಹೀಗೆ ಹಲವು ವಿನಾಯಿತಿಗಳನ್ನು ನೀಡಿ ಪೋ›ತ್ಸಾಹಿಸಲಾಗುವುದು.

- ಈವರೆಗೆ ರಾಜ್ಯದಲ್ಲಿ ನಡೆದ ಟೆಕ್‌ ಶೃಂಗಗಳಿಂದ ಭಾರಿ ಲಾಭವೇನೂ ಆಗಿಲ್ಲ ಎಂಬ ದೂರಿದೆಯಲ್ಲ?

ಹಾಗೇನಿಲ್ಲ. ಕಳೆದ ಆರು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟುಅಭಿವೃದ್ಧಿ ಆಗಿದೆ. 2014ರಿಂದ ಈಚೆಗೆ 6 ವರ್ಷದಲ್ಲಿ ಬರೋಬ್ಬರಿ 2.25 ಲಕ್ಷ ಕೋಟಿ ರು. ಬಂಡವಾಳ ಬರೀ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆಯಾಗಿದೆ. ಹೀಗಾಗಿಯೇ ಸ್ಟಾರ್ಟ್‌ಅಪ್‌, ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳ ಉತ್ತೇಜನಕ್ಕಾಗಿ ಕರ್ನಾಟಕ ಡಿಜಿಟಲ್‌ ಎಕಾನಮಿ ವಿಷನ್‌, ಆವಿಷ್ಕಾರ ಪ್ರಾಧಿಕಾರ (ಇನೋವೇಷನ್‌ ಆಥಾರಿಟಿ), ಬೆಂಗಳೂರು ಹೊರತುಪಡಿಸಿ ಇತರೆ ಪ್ರದೇಶಗಳ ಅಭಿವೃದ್ಧಿಗಾಗಿ ಬಿಯಾಂಡ್‌ ಬೆಂಗಳೂರು ತರಲಾಯಿತು.

'40 ಸಾವಿರ ಅಂತರದಲ್ಲಿ ಮುನಿರತ್ನ ವಿಜಯ : ಶಿರಾದಲ್ಲಿ ಬಿಜೆಪಿ ಭವಿಷ್ಯ ಹಿಂಗಿದೆ'

- ಬಿಯಾಂಡ್‌ ಬೆಂಗಳೂರು ಎಷ್ಟುಕಾರ್ಯ ಸಾಧ್ಯ?

ಇದಕ್ಕಾಗಿಯೇ ಐಟಿ ನೀತಿ -2020-25ನ್ನು ಜಾರಿ ಮಾಡಿದ್ದೇವೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಹೂಡಿಕೆ ಮಾಡುವವರಿಗೆ ಯಾವುದೇ ರಿಯಾಯಿತಿಗಳನ್ನು ರಾಜ್ಯ ಸರ್ಕಾರ ನೀಡುವುದಿಲ್ಲ. ಇತರೆ ಪ್ರದೇಶಗಳಿಗೆ ಮಾತ್ರ ರಿಯಾಯಿತಿ ನೀಡುತ್ತಿದ್ದೇವೆ. 2ನೇ ಹಂತದ ನಗರಗಳ ಬೆಳವಣಿಗೆಗೆ ವೈಟ್‌ ಪೇಪರ್‌ ಟಾಸ್ಕ್‌ಫೋರ್ಸ್‌ ರಚಿಸಿದ್ದೇವೆ. ಹಳ್ಳಿಯಿಂದ ಅತ್ಯುತ್ತಮವಾದದ್ದನ್ನು ಪತ್ತೆ ಹಚ್ಚಿ ಜಾಗತಿಕ ಮಾರುಕಟ್ಟೆಒದಗಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಯುವಕರು ತೊಡಗಿಸಿಕೊಂಡಿದ್ದಾರೆ. ಆ ಯಶೋಗಾಧೆಗಳನ್ನೂ ಟೆಕ್‌ಸಮಿಟ್‌ನಲ್ಲಿ ಪ್ರಸ್ತುಪಡಿಸುತ್ತೇವೆ.

- ಈ ವರ್ಚುವಲ್‌ ಸಮ್ಮೇಳನಕ್ಕೆ ಜಾಗತಿಕ ಸ್ಪಂದನೆ ಹೇಗಿದೆ?

ತಂತ್ರಜ್ಞಾನ ಸಮ್ಮೇಳನದ ಪಾಲುದಾರಿಕೆ ರಾಷ್ಟ್ರಗಳಾದ ಆಸ್ಪ್ರೇಲಿಯಾ, ಫ್ರಾನ್ಸ್‌, ಜರ್ಮನಿ, ನೆದರ್‌ಲ್ಯಾಂಡ್‌, ಸ್ವಿಡ್ಜರ್‌ಲ್ಯಾಂಡ್‌, ಇಂಗ್ಲೆಂಡ್‌ ಸೇರಿದಂತೆ ಇತರೆ ರಾಷ್ಟ್ರಗಳು ಭಾಗವಹಿಸಲಿವೆ. 25ಕ್ಕೂ ಹೆಚ್ಚು ದೇಶಗಳು ಸಮ್ಮೇಳನಕ್ಕೆ ಸಾಕ್ಷಿಯಾಗಲಿವೆ. 270ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. 100ಕ್ಕೂ ಹೆಚ್ಚು ಸ್ಟಾರ್ಟ್‌ಆಪ್‌ಗಳು, 4 ಸಾವಿರಕ್ಕೂ ಹೆಚ್ಚು ವ್ಯಾಪಾರ ಪ್ರತಿನಿಧಿಗಳು, 15ಕ್ಕೂ ಹೆಚ್ಚು ಜಾಗತಿಕ ಆವಿಷ್ಕಾರ ಒಪ್ಪಂದ ಸಮಾವೇಶ, 500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 12ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಲಾಗುವುದು.

- ಕಳೆದ ಸಮ್ಮೇಳನದಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಆರೋಪ ಇದೆ?

ಯಾವ ಒಪ್ಪಂದ ಕಾರ್ಯರೂಪಕ್ಕೆ ಬಂದಿಲ್ಲವೋ ಅವುಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗುವುದು. ಕೇವಲ ಸಂಖ್ಯೆ ತೋರಿಸಲು ಒಪ್ಪಂದ ಮಾಡಿಕೊಳ್ಳುತ್ತಿಲ್ಲ. ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಒಪ್ಪಂದಗಳು ಒಪ್ಪಂದವಾಗಿಯೇ ಉಳಿಯದೆ ಅನುಷ್ಠಾನಕ್ಕೆ ತಂದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೊಳಿಸುವ ಕಾರ್ಯ ಮಾಡಲಾಗುವುದು.

ರಾಜ್ಯ ಸರ್ಕಾರದಿಂದ ಶೀಘ್ರ ಎರಡು ಮಹತ್ವದ ನಿರ್ಧಾರ?

- ಕೊರೋನಾ ಯುಗದಲ್ಲಿ ಉನ್ನತ ಶಿಕ್ಷಣದ ಪರಿಸ್ಥಿತಿ ಹೇಗಿದೆ?

ತರಗತಿಗಳು ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ಆನ್‌ಲೈನ್‌ ಶಿಕ್ಷಣದ ಗುಣಮಟ್ಟಹೆಚ್ಚಾಗುತ್ತಿದೆ. ಕಾಲ-ಕಾಲಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಸೂಚಿಸುವ ಮಾರ್ಗಸೂಚಿ, ಕಾನೂನುಗಳನ್ನು ಪಾಲಿಸುತ್ತಿದ್ದೇವೆ. ಕೊರೋನಾ ನಡುವೆಯೇ ಯಶಸ್ವಿಯಾಗಿ ಸಿಇಟಿಯಂತಹ ಪರೀಕ್ಷೆ ನಡೆಸಿದ್ದೇವೆ.

- ಕೊರೋನಾ ನಡುವೆಯೇ ಪದವಿ ಕಾಲೇಜುಗಳ ತರಗತಿಗಳನ್ನು ಆರಂಭಿಸುತ್ತಿದ್ದೀರಿ. ಸಿದ್ಧತೆ ಹೇಗೆ ಮಾಡಿಕೊಂಡಿದ್ದೀರಿ?

ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಹೀಗಾಗಿ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಭರವಸೆ ಇದೆ.

- ತಮಿಳುನಾಡಿನಲ್ಲಿ ತರಗತಿ ಆರಂಭದ ಆದೇಶ ಹಿಂಪಡೆಯಲಾಗಿದೆ. ಆಂಧ್ರ ಪ್ರದೇಶದಲ್ಲಿ ಮಕ್ಕಳು, ಶಿಕ್ಷಕರಲ್ಲಿ ಕೊರೋನಾ ಹೆಚ್ಚಾಗಿ ಆತಂಕ ಹೆಚ್ಚಾಗಿದೆ?

ನಮ್ಮ ರಾಜ್ಯದಲ್ಲಿ ತರಗತಿಗಳಿಗೆ ಬರುವುದು ಅವರ ಆಯ್ಕೆ. ತರಗತಿಗೆ ಬರಲೇಬೇಕು ಎಂಬುದು ಕಡ್ಡಾಯವಿಲ್ಲ. ಪ್ರತಿಯೊಬ್ಬರಿಗೂ ಕೊರೋನಾ ಪರೀಕ್ಷೆ ನಡೆಸುತ್ತೇವೆ. ಸಾಮಾಜಿಕ ಅಂತರ, ಸುರಕ್ಷತಾ ಮಾರ್ಗಸೂಚಿ ಪಾಲಿಸುತ್ತೇವೆ. ತರಗತಿಗೆ ಬರುವವರು ಪೋಷಕರ ಒಪ್ಪಿಗೆ ಪ್ರಮಾಣಪತ್ರ ತರಬೇಕು. ರೋಗ ಲಕ್ಷಣಗಳಿಲ್ಲದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದೇವೆ. ಕಾಲ ಉರುಳುತ್ತಿದೆ ಹೀಗಾಗಿ ಏನಾದರೂ ಮಾಡಬೇಲೇಬೇಕಲ್ಲ.

- ರಾಜ್ಯದಲ್ಲಿನ 413 ಪದವಿ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರೇ ಇಲ್ಲ. ಇದರಿಂದ ಗುಣಮಟ್ಟದ ಶಿಕ್ಷಣಕ್ಕೆ ಸಮಸ್ಯೆ ಆಗುತ್ತಿದೆ?

ಹಂತ-ಹಂತವಾಗಿ ನೇಮಕ ಮಾಡುವ ಕೆಲಸ ಮಾಡಲಾಗುವುದು. ಇದಕ್ಕೆ ಸೂಕ್ತ ಕಾಲಾವಕಾಶ ಬೇಕಾಗುತ್ತದೆ. ಎಲ್ಲಾ ಪ್ರಕ್ರಿಯೆಯನ್ನೂ ಆರಂಭಿಸಿದ್ದೇವೆ.

- ಕಾಲೇಜುಗಳಲ್ಲಿ ಉಪನ್ಯಾಸ ಮಾಡುತ್ತಿರುವ 14 ಸಾವಿರ ಮಂದಿ ಅತಿಥಿ ಉಪನ್ಯಾಸಕರನ್ನೇ ಖಾಯಂ ಮಾಡಬೇಕೆಂಬ ಒತ್ತಾಯವಿದೆ?

ಕಾಯಂ ನೇಮಕ ಮಾಡಲು ಸಾಧ್ಯವಿಲ್ಲ. ಅತಿಥಿ ಉಪನ್ಯಾಸಕರಿಗೆ ಬಾಕಿಯಿದ್ದ 5 ತಿಂಗಳ ವೇತನ ಬಿಡುಗಡೆ ಮಾಡಿದ್ದೇವೆ. ಕೊರೋನಾ ಲಾಕ್ಡೌನ್‌ ಅವಧಿಯಲ್ಲಿ ಕೆಲಸ ಮುಖ್ಯಮಂತ್ರಿಗಳು ವೇತನ ಪಾವತಿ ಮಾಡಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 100 ಕೋಟಿ ರು. ಹೆಚ್ಚುವರಿ ಹೊರೆ ಆಗಿದೆ. ಆದರೂ ನಮ್ಮ ಉಪನ್ಯಾಸಕರಿಗಾಗಿ ಸರ್ಕಾರ ಭರಿಸಿದೆ.

- ಈಗಾಗಲೇ ಕೌನ್ಸೆಲಿಂಗ್‌ ಮುಗಿಸಿಕೊಂಡು ನೇಮಕಾತಿ ಆದೇಶದ ನಿರೀಕ್ಷೆಯಲ್ಲಿರುವವರಿಗೂ ನೇಮಕಾತಿ ಪತ್ರ ನೀಡಿಲ್ಲ?

ಅಕ್ಟೋಬರ್‌ನಲ್ಲೇ ಧರಣಿನಿರತ ಉಪನ್ಯಾಸಕರನ್ನು ಭೇಟಿ ಮಾಡಿ ಈ ಬಗ್ಗೆ ಭರವಸೆ ನೀಡಿದ್ದೇವೆ. ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ.

- ಉಪ ಚುನಾವಣೆಯಲ್ಲ ಬಿಜೆಪಿ ಗೆಲುವಿನ ಸಂದೇಶವೇನು? ಒಕ್ಕಲಿಗರು ಬಿಜೆಪಿಯತ್ತ ವಾಲಿದ್ದಾರಾ?

ಎಲ್ಲಾ ಸಮುದಾಯದವರೂ ಬಿಜೆಪಿಗೆ ಮತ ಹಾಕಿದ್ದಾರೆ. ಆರ್‌.ಆರ್‌. ನಗರದಲ್ಲಿ ಜೆಡಿಎಸ್‌ ಅಥವಾ ಕಾಂಗ್ರೆಸ್‌ ಪಡೆದಿರುವ ಮತಗಳೆಷ್ಟು? ಚುನಾವಣೆಗೆ ಮೊದಲೇ ಶೇ.65ರಷ್ಟುಮತಗಳನ್ನು ಬಿಜೆಪಿ ಪಡೆಯಲಿದೆ ಎಂದು ಹೇಳಿದ್ದೆ. ಕೊನೆ ಹಂತದಲ್ಲಿ ಕಾಂಗ್ರೆಸ್‌ನವರು ಭಾರೀ ಹಣ ಹಂಚಿಕೆ ಮಾಡಿದರು. ನಮ್ಮ ಪ್ರಾಬಲ್ಯವಿರುವ ಭಾಗಗಳಲ್ಲಿ ಕಡಿಮೆ ಮತದಾನ ಆಗಿದೆ. ಹೀಗಿದ್ದರೂ ಶೇ.62 ರಷ್ಟುಮತ ಗಳಿಸಿದ್ದೇವೆ. ಹೀಗಾಗಿ ಎಲ್ಲಾ ಜಾತಿಗಳೂ ಬಿಜೆಪಿ ಪರ ಇದ್ದಾರೆ.

ಸಿಎಂ ಸಹಿತ ಬಿಜೆಪಿಗರಿಗೆ ಯುವ ಕಾಂಗ್ರೆಸ್‌ ಮುಖಂಡನ ಸವಾಲ್

- ಕೆಪಿಸಿಸಿ ಡಿ.ಕೆ. ಶಿವಕುಮಾರ್‌ ಹಾಗೂ ನಿಮ್ಮ ನಡುವೆ ವಾಕ್ಸಮರ ಇತ್ತೀಚೆಗೆ ಹೆಚ್ಚಾಗಿದೆಯಲ್ಲ? ಒಕ್ಕಲಿಗ ನಾಯಕತ್ವದ ಮೇಲಾಟವೇ?

ಹಾಗೇನೂ ಇಲ್ಲ. ರಾಜಕೀಯವಾಗಿ ಅವರಿಗೆ ಈವರೆಗೆ ಫ್ರೀ ರಸ್ತೆ ಇತ್ತು. ಟಾಂಗ್‌ ನೀಡುವವರು ಇರಲಿಲ್ಲ. ಭ್ರಷ್ಟಾಚಾರ, ಹಣ ಮಾಡುವುದೇ ರಾಜಕೀಯದ ಉದ್ದೇಶವಲ್ಲ. ಇದನ್ನು ನಾನು ಪ್ರಶ್ನಿಸುತ್ತಿದ್ದೇನೆ. ಹೀಗಾಗಿ ಆ ರೀತಿ ಮಾತನಾಡುತ್ತಿರಬಹುದು. ಅನ್ಯಾಯಗಳು ನಡೆಯುತ್ತಿದ್ದಾಗ ನಾವು ಸುಮ್ಮನೆ ಕೂರುವುದಿಲ್ಲ.

- ಶಿರಾ ಚುನಾವಣೆಯ ಗೆಲುವಿನ ಕ್ರೆಡಿಟ್‌ ಯಾರಿಗೆ?

ಶಿರಾ ಚುನಾವಣೆಯ ಗೆಲುವು ವಿಜಯೇಂದ್ರ ಸೇರಿ ಅಲ್ಲಿನ ಸಂಸದರು, ಉಸ್ತುವಾರಿಗಳು ಎಲ್ಲಾ ನಾಯಕರ ಸಮಷ್ಠಿ ಕೃಷಿಯ ಫಲ.

Follow Us:
Download App:
  • android
  • ios