Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ ಶೀಘ್ರ ಎರಡು ಮಹತ್ವದ ನಿರ್ಧಾರ?


ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಪ್ರತಿಧ್ವನಿ, ಕೋರ್‌ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ. ಕರ್ನಾಟಕ ಸರ್ಕಾರದಿಂದ ಶೀಘ್ರ ಮಹತ್ವದ ಕ್ರಮ
 

Soon Karnataka Govt Will Take Action Against Love Jihad snr
Author
Bengaluru, First Published Nov 6, 2020, 7:08 AM IST

ಮಂಗಳೂರು (ನ.06):  ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಲವ್‌ ಜಿಹಾದ್‌ ಮತ್ತು ಗೋಹತ್ಯೆ ನಿಷೇಧ ವಿಚಾರ ಮಂಗಳೂರಿನಲ್ಲಿ ಗುರುವಾರ ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಹಾಗೂ ಕೋರ್‌ ಕಮಿಟಿ ಸಭೆಯಲ್ಲಿ ನಿರೀಕ್ಷೆಯಂತೆ ಪ್ರಧಾನ ಚರ್ಚೆಯ ವಿಷಯವಾಗಿ ಮೂಡಿಬಂದಿದೆ. ದೇಶದ ಬಿಜೆಪಿ ರಾಜ್ಯಗಳಲ್ಲಿ ಜಾರಿಗೊಳಿಸಿದ ಮಾದರಿಯಲ್ಲೇ ರಾಜ್ಯದಲ್ಲಿ ಕೂಡ ಲವ್‌ ಜಿಹಾದ್‌, ಗೋಹತ್ಯೆ ನಿಷೇಧಕ್ಕೆ ಕಠಿಣ ಕಾನೂನನ್ನು ಕಾರ್ಯರೂಪಕ್ಕೆ ತರಲು ಕೋರ್‌ ಕಮಿಟಿ ಸಭೆ ಮಹತ್ವದ ನಿರ್ಧಾರ ಕೈಗೊಂಡರೆ, ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಚಾರ ಪ್ರತಿಧ್ವನಿಸಿದೆ.

ಆರಂಭದಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತಿ ಯಡಿಯೂರಪ್ಪ ಅವರು, ಲವ್‌ಜಿಹಾದ್‌ ಹಾಗೂ ಗೋಹತ್ಯೆ ಕುರಿತು ಸರ್ಕಾರದ ಮುಂದಿನ ನಿಲುವಿನ ಬಗ್ಗೆ ಸುಳಿವು ನೀಡಿದರು. ಕಾರ್ಯಕಾರಿಣಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರದಿದ್ದರೂ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಹೇಳಿರುವುದು ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

ಕೈ ಮುಖಂಡ ಅರೆಸ್ಟ್ : ಸಮರ್ಥಿಸಿಕೊಂಡ ಸಿಎಂ ಬಿ.ಎಸ್ ಯಡಿಯೂರಪ್ಪ ...

ಕರ್ನಾಟಕದಲ್ಲಿ ಲವ್‌ ಜಿಹಾದ್‌ ಹೆಸರಲ್ಲಿ ಮತಾಂತರ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ ಬಿಗು ಕ್ರಮ ಕೈಗೊಳ್ಳಲಾಗುವುದು. ಇತ್ತೀಚಿನ ಹೆಚ್ಚಿನ ವರದಿಗಳು ಲವ್‌ಜಿಹಾದ್‌ ಹೆಸರಲ್ಲಿ ಮತಾಂತರವಾಗುತ್ತಿರುವುದನ್ನು ಪುಷ್ಠೀಕರಿಸಿವೆ. ಪ್ರೀತಿ, ಪ್ರೇಮದ ಆಮಿಷವೊಡ್ಡಿ ಮತಾಂತರಗೊಳಿಸುವುದು ಗಮನಕ್ಕೆ ಬಂದಿದೆ. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಅವರು ಭರವಸೆಯ ಮಾತನ್ನಾಡಿದ್ದಾರೆ.

ಕೋರ್‌ ಕಮಿಟಿಯಲ್ಲಿ ನಿರ್ಣಯ:

ಬಳಿಕ ಖಾಸಗಿ ಹೊಟೇಲ್‌ನಲ್ಲಿ ನಡೆದ ಪಕ್ಷದ ನೀತಿ ನಿರೂಪಣೆಯ ಮಹತ್ವದ ಕೋರ್‌ ಕಮಿಟಿ ಸಭೆಯಲ್ಲಿ ಕೂಡ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ.

ಲವ್‌ಜಿಹಾದ್‌ ಹೆಸರಿನಲ್ಲಿ ಬಲವಂತದ ಮತಾಂತರ ನಡೆಯುವುದನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿ ಅಗತ್ಯ ಎನ್ನುವ ತೀರ್ಮಾನ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ವಿಚಾರವನ್ನು ಕೋರ್‌ ಕಮಿಟಿಯಲ್ಲಿ ಪ್ರಸ್ತಾಪಿಸಿದ್ದು, ಅಲ್ಲಿ ಕೂಡ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳು, ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರುವ ನಿರ್ಧಾರ ಕೈಗೊಂಡಿದ್ದಾರೆ.

ಗೋಹತ್ಯೆ ನಿಷೇಧಕ್ಕೆ ಕಠಿಣ ಕಾನೂನು:

2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಗೋಹತ್ಯೆ ನಿಷೇಧಕ್ಕೆ ಕಾನೂನು ತರಲಾಗಿತ್ತು. ನಂತರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅದನ್ನು ರದ್ದುಗೊಳಿಸಿತ್ತು. ಈ ಕಾನೂನಿನ ಕುರಿತು ಪುನರ್‌ ವಿಮರ್ಶೆ ನಡೆಸಿ ಇನ್ನಷ್ಟುಕಠಿಣ ಅಂಶಗಳನ್ನು ಸೇರಿಸಿ ಹೊಸ ಕಾನೂನು ಜಾರಿಗೊಳಿಸಲು ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

'ಫಲಿಸಿಲ್ಲ ಪ್ರತಿಪಕ್ಷಗಳ ತಂತ್ರ : ಎರಡೂ ಕಡೆ ಬಿಜೆಪಿಗೆ ವಿಜಯ'

ಗೋಹತ್ಯೆ ನಿಷೇಧಕ್ಕೆ ಕಠಿಣ ಕಾನೂನು ಜಾರಿಗೊಳಿಸುವಂತೆ ರಾಜ್ಯವ್ಯಾಪಿ ಹಿಂದೂ ಸಂಘಟನೆಗಳಿಂದ ಪ್ರಬಲ ಒತ್ತಾಯ ಕೇಳಿಬಂದಿತ್ತು. ಪ್ರಮುಖವಾಗಿ ಕರಾವಳಿಯಲ್ಲಿ ಪದೇ ಪದೇ ಶಾಂತಿಕದಡಲು ಕಾರಣವಾಗುವ ಗೋಹತ್ಯೆ ಹಾಗೂ ಮತಾಂತರ ವಿರುದ್ಧ ಕಠಿಣ ಕಾನೂನಿಗೆ ಇಲ್ಲಿನ ಹಿಂದೂ ಸಂಘಟನೆಗಳೂ ಗುರುವಾರ ಸಿಎಂಗೆ ಪ್ರತ್ಯೇಕ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.

ಕುಟುಂಬ ಮಿಲನ ರಾಜ್ಯಕ್ಕೆ ವಿಸ್ತಾರ:

ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆ ಗೆಲುವಿನ ದಿಶೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ಜನತೆಗೆ ಮತ್ತು ಫಲಾನುಭವಿಗಳಿಗೆ ತಲುಪಿಸುವ ಕುಟುಂಬ ಮಿಲನ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ವಿಸ್ತರಿಸಲು ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ವಿಚಾರ ಕೋರ್‌ ಕಮಿಟಿ ಸಭೆಯಲ್ಲೂ ಪ್ರಸ್ತಾಪಗೊಂಡಿದ್ದು, ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೋನ್ಮುಖರಾಗುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.

ಈಗಾಗಲೇ ಹಲವಾರು ಗ್ರಾಮೀಣ ಮಂಡಲಗಳಲ್ಲಿ ವಾರ್‌ ರೂಮ್‌ ಸ್ಥಾಪನೆಯಾಗಿದೆ. ಶೀಘ್ರದಲ್ಲೇ ಕಾಲ್‌ ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು. ಪೇಜ್‌ ಪ್ರಮುಖ್‌ ನೇಮಕಾತಿ ನಡೆಯಲಿದೆ. ಇದರಿಂದಾಗಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಬಿಜೆಪಿ ಬೆಂಬಲಿಗರು ಪಡೆಯಲು ಕೋರ್‌ ಕಮಿಟಿಯಲ್ಲಿ ತಂತ್ರ ರೂಪಿಸಲಾಗಿದೆ.

ಈ ಕಾರ್ಯತಂತ್ರದ ಭಾಗವಾಗಿ 311 ಮಂಡಲಗಳಲ್ಲಿ ಪ್ರಶಿಕ್ಷಣ ವರ್ಗ ಆರಂಭಿಸಲಾಗಿದೆ. ನ.25ರಿಂದ ಡಿ.5ರವರೆಗೆ ಮಹಾಶಕ್ತಿ ಕೇಂದ್ರ ಮಟ್ಟದಲ್ಲಿ (ಜಿ.ಪಂ. ಮಟ್ಟ) ಪ್ರಶಿಕ್ಷಣ ವರ್ಗ ನಡೆಯಲಿದೆ. ಈಗಾಗಲೇ ಪ್ರತಿ ಬೂತ್‌ನಲ್ಲೂ ನೇಮಕವಾಗಿರುವ ‘ಪಂಚರತ್ನರು’(ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಇತರೆ ಸೇರಿದಂತೆ ಐವರ ತಂಡ) ಈ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಕೋರ್‌ ಕಮಿಟಿಯಲ್ಲಿ ತಿಳಿಸಲಾಗಿದೆ.

ಕಾರ್ಯಕಾರಿಣಿಯಲ್ಲಿ 3 ನಿರ್ಣಯ:

ದಿನಪೂರ್ತಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ, ರೈತ ಪರವಾದ ಮೂರು ಕೃಷಿ ಮಸೂದೆಗಳು ಹಾಗೂ ನೆರೆ ಹಾನಿ ಪರಿಹಾರ ಹಾಗೂ ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುವ ನಿರ್ಣಯ ಕೈಗೊಳ್ಳಲಾಯಿತು. ಇವುಗಳ ಕುರಿತು ಗ್ರಾಮ ಮಟ್ಟದಲ್ಲಿ ಜನತೆಗೆ ತಲುಪಿಸುವ ಬಗ್ಗೆ ಕುಟುಂಬ ಮಿಲನ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆಗೆ ವಿಸ್ತರಿಸುವಂತೆ ನಿರ್ಣಯಿಸಲಾಯಿತು.

ಬಜೆಟ್‌ನ ಎಲ್ಲ ಘೋಷಣೆ ಅನುಷ್ಠಾನ:

ಕೊರೋನಾ ಅನ್‌ಲಾಕ್‌ ಬಳಿಕ ಈಗ ರಾಜ್ಯದ ಹಣಕಾಸು ಪರಿಸ್ಥಿತಿ ಸುಧಾರಿಸಿದೆ. ಇನ್ನು ಎರಡು ತಿಂಗಳಲ್ಲಿ ಆರ್ಥಿಕತೆ ಮತ್ತಷ್ಟುಸುಧಾರಣೆಯಾಗುವ ವಿಶ್ವಾಸ ಇದೆ. ಬಜೆಟ್‌ನಲ್ಲಿ ಘೋಷಿಸಿದ ಎಲ್ಲ ಭರವಸೆಗಳನ್ನು ಆದ್ಯತೆ ಮೇರೆಗೆ ಈಡೇರಿಸಲು ಪ್ರಯತ್ನಿಸಲಾಗುವುದು. ಕೃಷಿ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ರಾಜ್ಯ ಅಭಿವೃದ್ಧಿ ಕಾಣಲಿದೆ ಎಂದು ಸಿಎಂ ಯಡಿಯೂರಪ್ಪ ಆಶಾಭಾವ ವ್ಯಕ್ತಪಡಿಸಿದರು.

ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಈಗಾಗಲೇ ತಲಾ 50 ಕೋಟಿ ರು. ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಂಗಳೂರಿಗೆ ಮಹಾತ್ಮಗಾಂಧಿ ಗ್ರಾಮೀಣ ವಿಕಾಸ್‌ ಯೋಜನೆಯಡಿ 120 ಕೋಟಿ ರು. ವರೆಗೆ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಶಾಸಕರಿಗೆ ಈ ಮೊದಲು ತಲಾ 50 ಲಕ್ಷ ರು. ಅಭಿವೃದ್ಧಿ ಅನುದಾನ ನೀಡಿದ್ದು, ಈಗ 2ನೇ ಕಂತಿನಲ್ಲಿ ತಲಾ 50 ಲಕ್ಷ ರು. ಬಿಡುಗಡೆಗೊಳಿಸಲಾಗಿದೆ. ಮೀನುಗಾರಿಕೆ ಅಭಿವೃದ್ಧಿ, ಕರಾವಳಿ ಆಂತರಿಕ ಭದ್ರತೆಗೆ ಆದ್ಯತೆ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ನೀಡಿದೆ. ಸಾಗರ ಅಲೆಗಳಿಂದ ವಿದ್ಯುತ್‌ ಉತ್ಪಾದನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಸಾಕಷ್ಟುಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡುತ್ತಿರುವುದು ಸಂತಸದ ವಿಚಾರ ಎಂದರು.

ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು, ಡ್ರಗ್ಸ್‌ನ್ನು ಮಟ್ಟಹಾಕಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಡ್ರಗ್ಸ್‌ ಮುಕ್ತ ರಾಜ್ಯಕ್ಕೆ ಸರ್ಕಾರ ಬಿಗು ಕ್ರಮ ಕೈಗೊಳ್ಳಲಿದ್ದು, ಈ ಬಗ್ಗೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಹಗುರ ಬೇಡ:

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಸಿಎಂ ಯಡಿಯೂರಪ್ಪ ಇದೇ ಸಂದರ್ಭ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಸಿಎಂ ಯಡಿಯೂರಪ್ಪ ಅವರಿಗೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವರ ವಿಗ್ರಹ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ ಜೋಶಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಸಚಿವರಾದ ಆರ್‌.ಅಶೋಕ್‌, ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ ಇದ್ದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ನಿರೂಪಿಸಿದರು.

ಬಿಜೆಪಿ ಕೋರ್‌ ಕಮಿಟಿ ಸದಸ್ಯರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ವಿಭಾಗ ಪ್ರಭಾರಿಗಳು, ಸಹ ಪ್ರಭಾರಿಗಳು, ವಿವಿಧ ಪ್ರಕೋಷ್ಠಗಳ ಸಂಚಾಲಕರು ಸಹಿತ 115 ಕ್ಕೂ ಅಧಿಕ ಆಹ್ವಾನಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಮುಂದೆಯೂ ಬಿಜೆಪಿ ಸರ್ಕಾರ

ಇನ್ನು ಎರಡೂವರೆ ವರ್ಷ ಬಳಿಕ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಬಿಜೆಪಿ 140ರಿಂದ 150 ಸೀಟು ಗೆಲ್ಲಬೇಕು. ಅದಕ್ಕಾಗಿ ಈಗಲೇ ಪಕ್ಷ ಸಂಘಟನೆಯನ್ನು ಬಲಪಡಿಸಲಾಗುತ್ತಿದ್ದು, ಮರಳಿ ಬಿಜೆಪಿ ಸರ್ಕಾರ ರಚನೆಯಾಗಬೇಕು ಎಂಬುದು ಜನತೆಯ ಬಯಕೆಯಾಗಿದೆ ಎಂದರು. ಇದೇ ರೀತಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಧೀಮಂತ ನಾಯಕರಾಗಿದ್ದಾರೆ. ಅವರ ಕಾರ್ಯವೈಖರಿಗೆ ಜಗತ್ತೇ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ದೇಶದ ಜನತೆಯ ಅಪೇಕ್ಷೆಯಂತೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಭವಿಷ್ಯ ನುಡಿದರು.

Follow Us:
Download App:
  • android
  • ios