Asianet Suvarna News Asianet Suvarna News

ದ್ವಿತೀಯ ಹಂತದ ನಗರಗಳಲ್ಲಿ ಐಟಿ ಕಂಪನಿ ಸ್ಥಾಪನೆ :ಡಿಸಿಎಂ

 ಎರಡನೇ ಹಂತದ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಶಕ್ತಿಶಾಲಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಸರ್ಕಾರವು ಹೊಸ ಐಟಿ ನೀತಿಯನ್ನು (2020-25) ಬಿಡುಗಡೆ ಮಾಡಿದೆ.

DCM Aswath Narayan invites IT Hubs For Small Cities snr
Author
Bengaluru, First Published Nov 13, 2020, 8:08 AM IST

 ಬೆಂಗಳೂರು (ನ.13):  ರಾಜಧಾನಿ ಬೆಂಗಳೂರು ನಗರವನ್ನು ಹೊರತುಪಡಿಸಿ ಎರಡನೇ ಹಂತದ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಶಕ್ತಿಶಾಲಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಸರ್ಕಾರವು ಹೊಸ ಐಟಿ ನೀತಿಯನ್ನು (2020-25) ಬಿಡುಗಡೆ ಮಾಡಿದೆ.

ನ.19ರಿಂದ ಆರಂಭವಾಗುವ ಬಯೋ ಟೆಕ್‌ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಎರಡನೇ ಹಂತದ ನಗರಗಳಲ್ಲಿ ಐಟಿ ಕ್ಷೇತ್ರ ಅಭಿವೃದ್ಧಿ ಪಡಿಸುವ ಉಪಕ್ರಮಗಳ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ವೇಳೆ ವರ್ಚುವಲ್‌ ಮೂಲಕ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ 2020-2025ರ ನೂತನ ಐಟಿ ನೀತಿಯನ್ನು ಬಿಡುಗಡೆ ಮಾಡಿದರು.

ರಾಜ್ಯದ ವಿವಿಧ ನಗರದಲ್ಲಿ ಐಟಿ ಕಂಪನಿಗಳ ಸ್ಥಾಪನೆ ಮತ್ತು ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಮಾನವ ಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿಸೇರಿದಂತೆ ಹಲವು ಅಂಶಗಳನ್ನು ಐಟಿ ನೀತಿ ಒಳಗೊಂಡಿದೆ. ಇದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಇನ್ನಷ್ಟುಅಭಿವೃದ್ಧಿ ಹೊಂದಲಿದೆ. ಈಗಾಗಲೇ ಎರಡನೇ ಹಂತದ ನಗರದಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಪ್ರಯತ್ನಗಳು ನಡೆದಿವೆ. ಇಸ್ಫೋಸಿಸ್‌ ಕಂಪನಿಯು ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರು ನಗರಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ದೊಡ್ಡ ಪ್ರಯತ್ನ ಮಾಡಿತು. ಇದೇ ರೀತಿಯ ಪ್ರಯತ್ನಗಳು ಮುಂದಿನದಲ್ಲಿ ರಚನಾತ್ಮಕ ವೇಗ ಪಡೆಯಲಿವೆ ಎಂದು ಹೇಳಿದರು.

ಟ್ರಕ್‌ನಲ್ಲಿ ಊರೆಲ್ಲಾ ಸುತ್ತಿದ ನಿರುದ್ಯೋಗಿ: ಟಾಪ್ ಕಂಪನಿಯಿಂದ ಸಿಕ್ತು ಬಂಪರ್ ಜಾಬ್ ಆಫರ್ ...

ಸದ್ಯಕ್ಕೆ 5ಜಿ ಹೊಸ್ತಿಲಲ್ಲಿ ಇದ್ದೇವೆ. ಆದರೆ 4ಜಿ ಅನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಪ್ರಯತ್ನ ಇನ್ನೂ ಆಗಬೇಕಿದೆ. ಸಂಪರ್ಕ ಬಹಳ ಮುಖ್ಯವಾಗಿರುವ ಹಿನ್ನೆಲೆಯಲ್ಲಲಿ ಟೆಲಿಕಾಂ ಸೇವೆಗಳ ಪರಧಿಯನ್ನು ವಿಸ್ತರಿಸಬೇಕು. ಈಗಷ್ಟೇ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿರುವುದರಿಂದ ನೆಟ್‌ವರ್ಕಿಂಗ್‌ ಅತ್ಯಗತ್ಯವಾಗಿದೆ. ಬೆಂಗಳೂರು ಹೊರತುಪಡಿಸಿ ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಮತ್ತು ಶಿವಮೊಗ್ಗ ನಗರಗಳತ್ತ ಟೆಲಿಕಾಂ, ಎಲೆಕ್ಟ್ರಾನಿಕ್‌ ಸಿಸ್ಟಮ್‌ ವಿನ್ಯಾಸ ಮತ್ತು ಅಭಿವೃದ್ಧಿ (ಇಎಸ್‌ಡಿಎಂ) ಹಾಗೂ ಐಟಿ ಕಂಪನಿಗಳನ್ನು ಇಡೀ ರಾಜ್ಯದಲ್ಲೆಡೆ ಅಸ್ತಿತ್ವ ಇರುವಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ವರ್ಕ್ ಫ್ರಂ ಎನಿವೇರ್‌:  ಕೋವಿಡ್‌ ಬಂದ ಮೇಲೆ ನಮ್ಮೆಲ್ಲರ ಸಾಂಪ್ರದಾಯಿಕ ಪರಿಕಲ್ಪನೆಗಳು ಬದಲಾಗಿವೆ. ಸೋಂಕು ಬರುವುದಕ್ಕೂ ಮುನ್ನ ವರ್ಕ್ ಫ್ರಂ ಹೋಮ್‌ ಎನ್ನುವುದು ವಿರಳವಾಗಿ ಬಳಸುವ ಪದವಾಗಿತ್ತು. ಆದರೆ, ಕೋವಿಡ್‌ ನಂತರ ಇದು ಸರ್ವೇ ಸಾಮಾನ್ಯವಾಗಿದೆ. ಇನ್ನೂ ಮುಂದೆ ಹೋಗಿ ವರ್ಕ್ ಫ್ರಂ ಎನಿವೇರ್‌ ಆಗಿದೆ. ಇದಕ್ಕೆ ಅತ್ಯುತ್ತಮ ನೆಟ್‌ವರ್ಕಿಂಗ್‌, ಸಂಪರ್ಕ ಮಾಡಿದರೆ ಹೆಚ್ಚಿನ ಫಲಶ್ರುತಿಯನ್ನು ಕಾಣಬಹುದು. ಅಲ್ಲದೇ, ರಾಜ್ಯದ ಉದ್ದಗಲಕ್ಕೂ ಹೂಡಿಕೆಗೆ ಅತ್ಯುತ್ತಮ ಅವಕಾಶಗಳಿವೆ. ಒಂದೆಡೆ ಶೈಕ್ಷಣಿಕ ಕ್ಷೇತ್ರಕ್ಕೆ ಶಕ್ತಿ ತುಂಬುತ್ತಾ, ಮತ್ತೊಂದೆಡೆ ಐಟಿ ಕ್ಷೇತ್ರವನ್ನು ವಿಸ್ತರಿಸುತ್ತಾ ಹೊದರೆ ಅತ್ಯುತ್ತಮ ಸಾಧನೆ ಮಾಡಬಹುದು. ಜಾರಿಗೆ ಬರುತ್ತಿರುವ ವಿನೂತನ ಐಟಿ ನೀತಿಯು ಈ ಕ್ಷೇತ್ರದ ವಿಕೇಂದ್ರೀಕರಣಕ್ಕೆ ಶಕ್ತಿ ತುಂಬುತ್ತದೆ ಎಂದರು.

ರಾಜ್ಯ ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ಐಟಿ ಮೂಲಸೌಕರ್ಯ ಕಾರ್ಯಪಡೆ ಮುಖ್ಯಸ್ಥ ಬಿ.ವಿ.ನಾಯ್ಡು, ಎಸ್‌ಟಿಪಿಐ ನಿರ್ದೇಶ ಶೈಲೇಂದ್ರ ತ್ಯಾಗಿ, ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌ ಉಪಸ್ಥಿತರಿದ್ದರು.

ಐಟಿ ನೀತಿಯಲ್ಲಿ ಏನಿದೆ?

* ಆವಿಷ್ಕಾರ ಮತ್ತು ತಂತ್ರಜ್ಞಾನದಲ್ಲಿ ರಾಜ್ಯ ಹೊಂದಿರುವ ಸ್ಥಾನವನ್ನು ಮತ್ತಷ್ಟುಭದ್ರಪಡಿಸಿ ಮುಂದೆ ಸಾಗುವುದು

* ರಾಜ್ಯದ ಉದ್ದಗಲಕ್ಕೂ ಹೂಡಿಕೆಯನ್ನು ಉತ್ತೇಜಿಸಿ ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು. ಇದಕ್ಕೆ ಬೇಕಾಗಿರುವ ಕಾರ್ಯತಂತ್ರ ರೂಪಿಸುವುದು

* ಬೆಂಗಳೂರು ಹೊರತುಪಡಿಸಿ ಎರಡನೇ ಹಂತದ ನಗರದಲ್ಲಿ ಹೂಡಿಕೆ ಹೆಚ್ಚಿಸಿ ಐಟಿ ಕಂಪನಿ ಸ್ಥಾಪಿಸುವುದು

* ರಾಜ್ಯವ್ಯಾಪಿ ಉದ್ಯೋಗ ಸೃಷ್ಟಿಸುವುದು

* ಬೆಂಗಳೂರು ಹೊರಗೆ ಚಟುವಟಿಕೆ ವಿಸ್ತರಿಸುವ ಕಂಪನಿಗಳಿಗೆ ಆರ್ಥಿಕ, ಮೂಲಸೌಕರ್ಯ ಒದಗಿಸುವುದು ಮತ್ತು ರಿಯಾಯಿತಿ ನೀಡುವುದು

ಐಟಿ ನೀತಿಯ ಗುರಿಗಳು:

* ಟ್ರಿಲಿಯನ್‌ ಡಾಲರ್‌ಗೂ ಮೀರಿ ಡಿಜಿಟಲ್‌ ಆರ್ಥಿಕತೆಯಾಗಿ ಹೊರಹೊಮ್ಮುವ ಭಾರತದ ಗುರಿಗೆ ಶೇ.30ರಷ್ಟುಕೊಡುಗೆ ನೀಡಲು ಐಟಿ ಉದ್ಯಮವನ್ನು ಸಜ್ಜುಗೊಳಿಸುವುದು

* 2020-2025ರ ಅವಧಿಯಲ್ಲಿ ರಾಜ್ಯದಲ್ಲಿ 60 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗದ ಅವಕಾಶ ಕಲ್ಪಿಸುವುದು

* ಐಟಿ ಕ್ಷೇತ್ರವನ್ನು ಆದ್ಯತೆಯ ಮೇರೆಗೆ ವಿಸ್ತರಿಸುವುದು ಮತ್ತು ಎಲ್ಲಾ ಭಾಗದಲ್ಲಿ ಸಮಾನಾಂತರ ಅಭಿವೃದ್ಧಿಯನ್ನು ಸಾಧಿಸುವುದು

* ಐಟಿ ಉದ್ಯಮಕ್ಕೆ ಪೂರಕವಾಗಿ ಬೆಂಗಳೂರು ಹೊರಗೆ ಅತ್ಯುತ್ತಮ ಮಾನವ ಸಂಪನ್ಮೂಲಗಳನ್ನು ಸಜ್ಜುಗೊಳಿಸುವುದು

* ಅಗತ್ಯ ದತ್ತಾಂಶ ಸಂರಕ್ಷಣೆಗೆ ಬೇಕಾದ ಸೈಬರ್‌ ಭದ್ರತಾ ನೀತಿ ರೂಪಿಸುವುದು

Follow Us:
Download App:
  • android
  • ios