ಮಂಗಳೂರು (ನ.05):   ಮಂಗಳೂರಿನಲ್ಲಿ ನ.5ರಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಇದಕ್ಕೆ ಸಿಎಂ ಸಹಿತ ಕೇಂದ್ರ ಹಾಗೂ ರಾಜ್ಯ ಸಚಿವರು, ಬಿಜೆಪಿಗರು ಚಿನ್ನದಂತಹ ಶಿರಾಡಿ ಘಾಟ್‌ ಹೆದ್ದಾರಿ ಮೂಲಕ ಸಂಚರಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಜಾಲತಾಣದಲ್ಲಿ ವ್ಯಂಗ್ಯಭರಿತವಾಗಿ ಸವಾಲು ಹಾಕಿದ್ದಾರೆ.

ಜಾಲತಾಣದಲ್ಲಿ ಈ ಕುರಿತು ಪೋಸ್ಟ್‌ ಮಾಡಿ ಸಿಎಂ ಸಹಿತ ಕೇಂದ್ರ ಸಚಿವರಿಗೆ ಮಿಥುನ್‌ ರೈ ಟ್ಯಾಗ್‌ ಮಾಡಿದ್ದಾರೆ. ತನ್ನ ‘ರೋಡ್‌ ಚಾಲೆಂಜ್‌’ ಟ್ಯಾಗ್‌ನಡಿ ಈ ಹೆದ್ದಾರಿಯಲ್ಲಿ ಸಂಚರಿಸಿ ಫೋಟೋ ತೆಗೆದು ಅಪ್‌ಲೋಡ್‌ ಮಾಡುವಂತೆ ಮಿಥುನ್‌ ರೈ ಮನವಿ ಮಾಡಿದ್ದಾರೆ.

'ಫಲಿಸಿಲ್ಲ ಪ್ರತಿಪಕ್ಷಗಳ ತಂತ್ರ : ಎರಡೂ ಕಡೆ ಬಿಜೆಪಿಗೆ ವಿಜಯ' ...

ಅಲ್ಲದೆ ಶಿರಾಡಿ ಘಾಟ್‌ ಹೆದ್ದಾರಿಯ ಹೊಂಡ ಗುಂಡಿಗಳ ಫೋಟೋ ತೆಗೆದು ಅಪ್‌ಲೋಡ್‌ ಮಾಡುವಂತೆ ನೆಟ್ಟಿಗರಿಗೆ ಆಹ್ವಾನ ನೀಡಿದ್ದಾರೆ. ಮಿಥುನ್‌ ರೈಯ ಈ ಪೋಸ್ಟ್‌ ಜಾಲತಾಣದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈ ಹಿಂದೆ ಶಿರಾಡಿ ಘಾಟ್‌-ಗುಂಡ್ಯ ಹೆದ್ದಾರಿ ಕಾಮಗಾರಿ ವಿಳಂಬ ವಿರುದ್ಧವೂ ಮಿಥುನ್‌ ರೈ ಇದೇ ರೀತಿ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ನೆಟ್ಟಿಗರು ಅದನ್ನು ಹಿಂಬಾಲಿಸಿದ್ದರು. ಇದು ಕೂಡ ಜಾಲತಾಣದಲ್ಲಿ ವ್ಯಾಪಕವಾಗಿ ಟ್ರೋಲ್‌ ಆಗಿತ್ತು.

ಪ್ರಸ್ತುತ ಶಿರಾಡಿ ಘಾಟ್‌ ಹೆದ್ದಾರಿ ವ್ಯಾಪಕವಾಗಿ ಹದಗೆಟ್ಟಿದ್ದು, ಅದರಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಹೀಗಿದ್ದೂ ಹೆದ್ದಾರಿ ಇಲಾಖೆ ಮಳೆ ಪೂರ್ತಿ ಮುಗಿದು 15 ದಿನ ನಂತರವೇ ದುರಸ್ತಿ ಮಾಡುವುದಾಗಿ ಇತ್ತೀಚೆಗೆ ಸಂಸದರಲ್ಲಿ ಹೇಳಿತ್ತು. ಆದರೆ ಮಳೆಯೂ ನಿಂತಿಲ್ಲ, ಹೆದ್ದಾರಿಯೂ ತಾತ್ಕಾಲಿಕವಾಗಿ ತೇಪೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಹಿತ ಜಿಲ್ಲೆಯ ಜನತೆ ಹೆದ್ದಾರಿ ದುರವಸ್ಥೆ ವಿರುದ್ಧ ಜಾಲತಾಣದಲ್ಲಿ ಟ್ರೋಲ್‌ ಮಾಡಿತ್ತು.