ಸ್ವಾವ​ಲಂಬಿ ದೇಶಕ್ಕೆ ಬುನಾದಿ ಹಾಕಿದ ವಾಜಪೇಯಿ: ಸಚಿ​ವ ನಾಗೇ​ಶ್‌

ವಾಜಪೇಯಿ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು, ನೀವೆಲ್ಲರೂ ನಡೆಯಬೇಕಿದೆ. ರಾಷ್ಟ್ರೀಯ ವಿಚಾರಗಳು, ದೇಶ ಭಕ್ತಿ, ಭಾರತೀಯತೆ, ಸಂಸ್ಕೃತಿ, ಪರಂಪರೆಯ ಕುರಿತು ಹೆಮ್ಮೆ ಪಡುವ ಜೊತೆಗೆ ಅವುಗಳನ್ನು ಭಾರತೀಯರೆಲ್ಲರೂ ಪಾಲಿಸುವಂತೆ ನೋಡಿಕೊಳ್ಳಬೇಕಿದೆ.

Special Article By Minister BC Nagesh Over Atal Bihari Vajpayee gvd

ಬಿ.ಸಿ.ನಾಗೇ​ಶ್‌, ಶಿಕ್ಷಣ ಸಚಿ​ವ

ಅಟಲ್‌ ಬಿಹಾರಿ ವಾಜಪೇಯಿ ಎಂದರೆ ಆದರ್ಶ. ಪ್ರೇರಣೆ, ಬದ್ಧತೆ, ಸೈದ್ಧಾಂತಿಕ ದೃಢ ನಿಲುವಿನೊಂದಿಗೆ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯೇ ಎಲ್ಲರ ಕಣ್ಣೆದುರು ಬರುತ್ತದೆ. ಅಜಾತಶತ್ರು, ಜನನಾಯಕರಾಗಿ ವಾಜಪೇಯಿ ಅವರು ದೇಶ ಕಂಡ ಮಹಾನ್‌ ನಾಯಕರ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದೇಶದ ಅಭಿವೃದ್ಧಿಯ ಕುರಿತಾದ ಅವರ ಪರಿಕಲ್ಪನೆಗಳು ಇಂದು ಮತ್ತು ಮುಂದೆ ಎಂದೆಂದಿಗೂ ಪ್ರೇರಣಾದಾಯಕವಾಗುತ್ತವೆ. ವಾಜ​ಪೇಯಿ ಅವರು ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ, ಸುಧಾರಣೆ ತರಬೇಕು. ದೇಶದ ಪ್ರತಿಯೊಬ್ಬ ಮಗುವೂ ಶಿಕ್ಷಣ ಪಡೆಯಬೇಕು ಅದಕ್ಕಾಗಿ ದೇಶದ ಪ್ರತಿ ಮೂಲೆಗೂ ಶಾಲೆಗಳು ತಲುಪಬೇಕು ಎಂಬ ದೃಢ ನಿರ್ಧಾರ ತೆಗೆದುಕೊಂಡು ಶಾಲೆಗಳ ನಿರ್ಮಾಣ ಮಾಡಿದರು. 

ಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ಶೌಚಾಲಯದ ಸಮಸ್ಯೆ ಎದುರಾಗಬಾರದು ಎಂದು ಶೌಚಗೃಹಗಳ ನಿರ್ಮಾಣಕ್ಕೆ ಒತ್ತು ನೀಡಿದರು. ವಾಜಪೇಯಿ ಅವರ ಅವಧಿಯಲ್ಲಿ ನಿರ್ಮಾಣಗೊಂಡ ಶಾಲೆಗಳು ಮತ್ತು ಆ ಆಲೋಚನೆ ಎಂದೆಂದಿಗೂ ಮರೆಯಲು ಅಸಾಧ್ಯ. ಸರ್ಕಾರಿ ಶಾಲೆ ಎಂದರೆ ‘ಸರ್ವ ಶಿಕ್ಷಣ ಅಭಿಯಾನ’ ಘೋಷವಾಕ್ಯ ಹಾಗೂ ಪೆನ್ಸಿಲ್‌ ಮೇಲೆ ಕುಳಿತ ಇಬ್ಬರು ಮಕ್ಕಳ ಚಿತ್ರ ಪ್ರತಿಯೊಬ್ಬರ ಕಣ್ಣ ಮುಂದೆ ಬರುತ್ತದೆ. ಬೆಟ್ಟ, ಗುಡ್ಡಗಳು, ದ್ವೀಪ ಪ್ರದೇಶಗಳು, ಉತ್ತಮ ರಸ್ತೆ ಸಂಪರ್ಕವೇ ಇಲ್ಲದ ಊರುಗಳಲ್ಲೂ ಶಾಲೆಗಳನ್ನು ಆರಂಭಿಸಿ ದೇಶದಲ್ಲಿ ಬೃಹತ್‌ ಪ್ರಮಾಣದಲ್ಲಿ, ವ್ಯಾಪಕವಾಗಿ ಸಾಕ್ಷರತೆಗೆ ಒತ್ತು ನೀಡಿ ಯಶಸ್ಸು ಸಾಧಿಸಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ. 

ಆಯುಷ್ಮಾನ್‌ ಭಾರತಕ್ಕೆ ಡಿಜಿಟಲ್‌ ವೇಗದ ಸ್ಪರ್ಶ: ಸಚಿವ ಸುಧಾಕರ್‌

ಜಾತಿ, ಮತ ಮೀರಿ, ರಾಜ್ಯ, ಪ್ರದೇಶವನ್ನು ಮೀರಿ ಎಲ್ಲರಿಗೂ ಶಿಕ್ಷಣ ನೀಡಬೇಕು ಎಂಬ ಅವರ ಕಲ್ಪನೆಯೇ ಮೂಲೆ ಮೂಲೆಗೂ ಶಾಲೆಗಳು ಆರಂಭಕ್ಕೆ ಕಾರಣವಾಯಿತು.ನಬರೀ ಶಾಲೆಗಳ ಆರಂಭ ಮಾತ್ರವಲ್ಲದೇ ಅಗತ್ಯ ಶಿಕ್ಷಕರ ನೇಮಕಕ್ಕೂ ವಾಜಪೇಯಿ ಅವರು ಒತ್ತು ನೀಡಿದರು. ಒಬ್ಬರೇ ಶಿಕ್ಷಕರು ಇರುವ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಆದೇಶ ನೀಡಿ ಶಿಕ್ಷಕರು ಎಲ್ಲ ಶಾಲೆಗಳಲ್ಲಿ ಲಭ್ಯವಾಗುವಂತೆ ನೋಡಿಕೊಂಡರು. ಶಿಕ್ಷಣದಿಂದಲೇ ದೇಶದ ಸಮಗ್ರ ಅಭಿವೃದ್ಧಿ, ಸಮಾನತೆ ತರಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದರು ಮತ್ತು ತಮ್ಮ ಅಧಿಕಾರದ ಅವಧಿಯ ಉದ್ದಕ್ಕೂ ಅದನ್ನು ಪರಿಪಾಲಿಸಿದ್ದರು.

ಸುವರ್ಣ ಚತುಷ್ಪಥ ರೂವಾರಿ: ಹೆದ್ದಾರಿಗಳನ್ನು ನೋಡಿದರೆ ಜನರು ವಾಜಪೇಯಿ ಅವರನ್ನು ನೆನೆಸಿಕೊಳ್ಳುತ್ತಾರೆ. ಕಾರಣ, ಅವರ ಅವಧಿಯಲ್ಲಿ ಪರಿಕಲ್ಪನೆ ಮತ್ತು ಅನುಷ್ಠಾನಗೊಂಡ ಸುವರ್ಣ ಚತುಷ್ಪಥ ರಸ್ತೆ. ವಾಜಪೇಯಿ ಅವರು ಸುವರ್ಣ ಚತುಷ್ಪಥ ರಸ್ತೆಯ ಪರಿಕಲ್ಪನೆ ಬಿತ್ತಿದಾಗ ಇಂತಹ ಬೃಹತ್‌ ಯೋಜನೆಗೆ ಹಣವನ್ನು ಹೊಂದಿಸುವುದು ಹಾಗೂ ಯೋಜನೆ ಅನುಷ್ಠಾನಗೊಳಿಸಲು ಭೂ ಸ್ವಾಧೀನ ಸೇರಿದಂತೆ ಇನ್ನಿತರ ಸವಾಲುಗಳ ಕುರಿತು ಹಲವಾರು ಜನರು ಪ್ರಶ್ನಿಸಿದರು ಮತ್ತು ಯೋಜನೆ ಸಾಧ್ಯಾಸಾಧ್ಯತೆಯ ಬಗ್ಗೆ ಅನುಮಾನಪಟ್ಟರು. 

ಆದರೆ, ಅಭಿವೃದ್ಧಿಯ ಸ್ಪಷ್ಟತೆಯನ್ನು ಹೊಂದಿದ್ದ ವಾಜಪೇಯಿ ಅವರು ಸುವರ್ಣ ಚತುಷ್ಪಥ ರಸ್ತೆಯನ್ನು ಅನುಷ್ಠಾನಗೊಳಿಸಿದರು. ವಾಜಪೇಯಿ ಅವರ ಅವಧಿಯಲ್ಲಿನ ಈ ರಸ್ತೆಯು ದೇಶದ ಅತ್ಯಂತ ಪ್ರಸಿದ್ಧವಾದ ರಸ್ತೆಯಾಗಿದೆ. ದೇಶದ ಪೂರ್ವ ಮತ್ತು ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗಗಳನ್ನು ವೇಗವಾಗಿ ಸಂಪರ್ಕ ಕಲ್ಪಿಸಿದ ಈ ರಸ್ತೆಯು ದೇಶದ ಆರ್ಥಿಕ ವ್ಯವಸ್ಥೆಗೆ ಭಾರಿ ಉತ್ತೇಜನ ನೀಡಿತು. ಮಹಾನಗರಗಳು, ಸಣ್ಣ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ಕೃಷಿ, ಕೈಗಾರಿಕೆ, ಉದ್ಯಮಗಳ ಸ್ಥಾಪನೆ, ಬೆಳವಣಿಗೆಗೆ ಭಾರಿ ಕೊಡುಗೆ ನೀಡಿತು. ಇಂಧನ ಉಳಿತಾಯ, ಪ್ರಯಾಣದ ಅವಧಿಯನ್ನು ಕಡಿತಗೊಳಿಸಿತು. ಈ ಹೆದ್ದಾರಿಯ ನಿರ್ಮಾಣದ ಯಶಸ್ಸು ಅನೇಕ ಹೆದ್ದಾರಿಗಳು, ಎಕ್ಸ್‌​ಪ್ರೆಸ್‌ ವೇ ಗಳಿಗೆ ಸ್ಪೂರ್ತಿ ನೀಡಿತು.

ಬೆದರಿಕೆಗೂ ಜಗ್ಗದೆ ದಿಟ್ಟ ನಿರ್ಧಾರ: ರಾಷ್ಟ್ರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ವಾಜಪೇಯಿ ಅವರು ತತ್ವ ಸಿದ್ಧಾಂತಗಳೊಂದಿಗೆ ಎಂದಿಗೂ ರಾಜಿಯಾಗಲಿಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ದೇಶದ ಹಿತವೇ ಸರ್ವೋಚ್ಚ ಎಂಬ ತತ್ವವನ್ನು ಪರಿಪಾಲಿಸುತ್ತಿದ್ದರು. ಅಧಿಕಾರದ ಹಿಂದೆ ಹೋಗಲಿಲ್ಲ ಮತ್ತು ಅದಕ್ಕಾಗಿ ತಾವು ನಂಬಿದ್ದ ತತ್ವ ಸಿದ್ಧಾಂತಗಳನ್ನು ಬಲಿ ಕೊಡಲಿಲ್ಲ. ವಾಜಪೇಯಿ ಅವರು ದೇಶದ ಭದ್ರತೆ ವಿಚಾರದಲ್ಲೂ ಅತ್ಯಂತ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಭಾರತದ ಭದ್ರತೆಯ ವಿಚಾರದಲ್ಲಿ ಜಗತ್ತಿಗೆ ಸ್ಪಷ್ಟಸಂದೇಶ ನೀಡಿದರು. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ನಿಬಂಧ​ನೆಗಳಿಗೆ ಒಳಪಡಿಸುತ್ತೇವೆ ಎಂದು ಹಾಕಿದ ಬೆದರಿಕೆಗೂ ಜಗ್ಗದೆ ದಿಟ್ಟನಿರ್ಧಾರ ತೆಗೆದುಕೊಂಡಿದ್ದರು. ನಮ್ಮ ದೇಶವನ್ನು ಬಲಿಷ್ಠಗೊಳಿಸದೆ ಇದ್ದರೆ ಬೇರೆ ದೇಶಗಳು ನಮ್ಮ ದೇಶವನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಸ್ವಾವಲಂಬಿ ದೇಶಕ್ಕೆ ವಾಜಪೇಯಿ ಅವರ ಭದ್ರ ಬುನಾದಿ ಹಾಕಿದ್ದರು.

ಘೋಷಣೆಗಳ ಚಾಪಲ್ಯ VS ಸಂಕಲ್ಪದ ಸಾಫಲ್ಯ: ಸಚಿವ ಶ್ರೀರಾಮುಲು

ಸಹೃ​ದಯಿ ಕವಿ, ವಾಗ್ಮಿ: ಸಹೃದಯಿ ಕವಿಯಾಗಿ ಹಲವು ಕವನಗಳನ್ನು ರಚಿಸಿದ್ದ ವಾಜಪೇಯಿ ಅವರು, ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಸಂಸತ್ತಿನಲ್ಲಿ ಅವರ ವಾಗ್ಝರಿ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಅಭಿವೃದ್ಧಿ, ಸಾಮಾಜಿಕ ನ್ಯಾಯ, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಏಳಿಗೆಯಾಗಬೇಕು ಎಂದು ಸದಾ ಬಯಸುತ್ತಿದ್ದ ವಾಜಪೇಯಿ ಅವರು ಹೊಸ ರಾಜಕೀಯ ತಲೆಮಾರುಗಳ ಉದಯ, ಬೆಳವಣಿಗೆಗೆ ಕಾರಣರಾದರು. ವಾಜಪೇಯಿ ಅವರ ಅಭಿವೃದ್ಧಿ ಕುರಿತಾದ ಚಿಂತನೆಗಳು, ಅಭಿವೃದ್ಧಿ ಕಾರ್ಯಗಳು, ತತ್ವ ಸಿದ್ಧಾಂತಗಳು ಹಲವಾರು ಜನರಿಗೆ ಸ್ಪೂರ್ತಿಯಾದವು. ಅಸಂಖ್ಯಾತ ಕಾರ್ಯಕರ್ತರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಭಾರತೀಯ ಜನತಾ ಪಕ್ಷವು ಕೇಂದ್ರ ಹಾಗೂ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಅದಕ್ಕೆ ವಾಜಪೇಯಿ ಅವರ ಕೊಡುಗೆ ಅಪಾರ. 

ಬಿಜೆಪಿಯನ್ನು ಪುಟ್ಟ ಸಸಿಯಂತೆ ನೋಡಿದ ವಾಜಪೇಯಿ ಅವರು ಗಿಡವಾಗಿ, ಮರವಾಗಿ ಬೆಳೆಯುವುದನ್ನು ಕಂಡಿದ್ದಾರೆ. ಉತ್ತಮ ಆರೈಕೆಯಲ್ಲಿ ಬೆಳೆದ ಗಿಡಗಳು, ಮರಗಳಾಗಿ ಬೆಳೆದು ನಿಂತಾಗ ಉತ್ತಮ ಫಲವನ್ನೇ ನೀಡುತ್ತವೆ. ಅಂದು ವಾಜಪೇಯಿ ಅವರು ಕಟ್ಟಿಬೆಳೆಸಿದ ಪಕ್ಷ ಇಂದು ಬೃಹತ್‌ ಸಂಘಟನೆಯಾಗಿ ಬೆಳೆದಿದೆ. ವಾಜಪೇಯಿ ಅವರು ಹಾಕಿಕೊಟ್ಟಸನ್ಮಾರ್ಗದಲ್ಲಿ ನಾವು, ನೀವೆಲ್ಲರೂ ನಡೆಯಬೇಕಿದೆ. ಪ್ರತಿಯೊಬ್ಬರ ಗುರಿಯು ಸಮಾಜದ ಏಳಿಗೆಯೇ ಆಗಿರಬೇಕು.ರಾಷ್ಟ್ರೀಯ ವಿಚಾರಗಳು, ದೇಶ ಭಕ್ತಿ, ಭಾರತೀಯತೆ, ಸಂಸ್ಕೃತಿ, ಪರಂಪರೆಯ ಕುರಿತು ಹೆಮ್ಮೆ ಪಡುವ ಜೊತೆಗೆ ಅವುಗಳನ್ನು ಭಾರತೀಯರೆಲ್ಲರೂ ಪಾಲಿಸುವಂತೆ ನೋಡಿಕೊಳ್ಳಬೇಕಿದೆ.

Latest Videos
Follow Us:
Download App:
  • android
  • ios