Asianet Suvarna News Asianet Suvarna News

ಘೋಷಣೆಗಳ ಚಾಪಲ್ಯ VS ಸಂಕಲ್ಪದ ಸಾಫಲ್ಯ: ಸಚಿವ ಶ್ರೀರಾಮುಲು

ಪರಿಶಿಷ್ಟ ಪಂಗಡಗಳು ರಾಜ್ಯದಲ್ಲಿ ಮಧ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಸಾಂದ್ರವಾಗಿವೆ. ಆದರೆ, ಅರವತ್ತು ವರ್ಷ ರಾಜ್ಯಭಾರ ಮಾಡಿದವರು ಈ ಭಾಗಗಳ ಕಡೆಗೆ ಕಣ್ಣೆತ್ತಿಯೂ ನೋಡಿರಲಿಲ್ಲ. ಇಂದು ಸಿದ್ಧಿಗಳು, ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ಆಸ್ಥೆಯ ಫಲವಾಗಿ ಎಸ್ಟಿ ಸ್ಥಾನಮಾನ ಸಿಕ್ಕಿದೆ.

Special Article By Minister B Sriramulu Over Reservation gvd
Author
First Published Nov 18, 2022, 7:42 AM IST

ಬಿ.ಶ್ರೀರಾಮುಲು, ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ

‘ದೇಶವಾಸಿಗಳಾದ ನೀವು ಕಾಂಗ್ರೆಸ್ಸಿಗೆ 60 ವರ್ಷಗಳ ಕಾಲ ಈ ದೇಶವನ್ನಾಳಲು ಅವಕಾಶ ಕೊಟ್ಟಿದ್ದೀರಿ. ನಮಗೆ ಕೇವಲ 60 ತಿಂಗಳು ಒಂದು ಅವಕಾಶ ಕೊಡಿ, ಸಾಕು. ಕೊಟ್ಟಮಾತನ್ನು ಉಳಿಸಿಕೊಳ್ಳದಿದ್ದರೆ ನನ್ನನ್ನು ಶಿಕ್ಷಿಸುವ ಅಧಿಕಾರ ನಿಮಗೆ ಇದ್ದೇ ಇದೆ.’ 2014ರ ಚುನಾವಣೆಗೂ ಮುನ್ನ ನರೇಂದ್ರ ಮೋದಿಯವರು ಈ ದೇಶದ ಜನತೆಗೆ ಕೊಟ್ಟಿದ್ದ ವಾಗ್ದಾನವಿದು. ಅವರ ಈ ಮಾತನ್ನು ನಂಬಿದ ಕೋಟ್ಯನುಕೋಟಿ ಭಾರತೀಯರು ಬಿಜೆಪಿ ಪರವಾಗಿ ಸ್ಪಷ್ಟವಾದ ಜನಾದೇಶ ಕೊಟ್ಟರು. ನಂತರದ ಐದು ವರ್ಷಗಳಲ್ಲಿ ಮೋದಿಯವರು ಭಾರತ ಮತ್ತು ಭಾರತೀಯರ ಹಿತವನ್ನು ಪೊರೆದರು.

ಇದನ್ನು ಪುರಸ್ಕರಿಸಿದ ದೇಶವಾಸಿಗಳು 2019ರಲ್ಲಿ ಬಿಜೆಪಿಗೆ ಅಭೂತಪೂರ್ವ ಬಹುಮತ ನೀಡಿ, ಮತ್ತೊಮ್ಮೆ ಮೋದಿಯವರ ಕೈಗೆ ದೇಶದ ಚುಕ್ಕಾಣಿಯನ್ನು ಒಪ್ಪಿಸಿದರು. ಇಷ್ಟರ ನಡುವೆ ಇಡೀ ದೇಶದಲ್ಲಿ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎನ್ನುವುದು 21ನೇ ಶತಮಾನದ ಭಾರತದ ರಾಜಕಾರಣದಲ್ಲಿ ಹೊಸ ಮಂತ್ರವಾಗಿ ಸ್ಥಾಪಿತವಾಯಿತು. ಏತನ್ಮಧ್ಯೆ, ಸ್ವತಃ ಮೋದಿಯವರು ತಮ್ಮನ್ನು ತಾವು ‘ನಾನು ಪ್ರಧಾನಮಂತ್ರಿಯಲ್ಲ, ಏನಿದ್ದರೂ ಪ್ರಧಾನಸೇವಕ’ ಎಂದು ನಮ್ರವಾಗಿ ಹೇಳಿದರು; ದೆಹಲಿಯ ರಾಜಪಥವನ್ನು ಕರ್ತವ್ಯಪಥವನ್ನಾಗಿ ಪರಿವರ್ತಿಸಿದರು; ನವಭಾರತದ ಕನಸನ್ನು ಬಿತ್ತಿದರು. ಅವರಿಂದ ಸ್ಫೂರ್ತಿಗೊಂಡ ಕರ್ನಾಟಕ ಬಿಜೆಪಿ ಸರ್ಕಾರವೂ ನವಕರ್ನಾಟಕದ ನಿರ್ಮಾಣವನ್ನು ತನ್ನ ಗುರಿಯನ್ನಾಗಿ ಘೋಷಿಸಿತು.

ಬಿಜೆಪಿಗೀಗ ಹಿಂದುಳಿದವರ ಬಲ: ಬಿಜೆಪಿಯದು ಡಬಲ್‌ ಎಂಜಿನ್‌ ಸರ್ಕಾರ. ಇದರ ಶಕ್ತಿಗೆ ಸಹಜವಾಗಿ ಸಮಾಜದ ಸಮಗ್ರ ಅಭಿವೃದ್ಧಿಗೆ ಹಿಂದೆಂದೂ ಕಂಡರಿಯದ ವೇಗ ಬಂದೊದಗಿದೆ. ಇದರ ಜತೆಗೆ ಉತ್ತರದಾಯಿತ್ವದ ಸಂಸ್ಕೃತಿ ಈಗ ನೆಲೆಯೂರುತ್ತಿದೆ. ಜತೆಯಲ್ಲೇ ದಮನಿತ ಅಥವಾ ಅಂಚಿನಲ್ಲಿರುವ ಜನ ಸಮುದಾಯಗಳ ಸಬಲೀಕರಣವು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಆಶಯದೊಂದಿಗೆ ಆರೋಗ್ಯಕರವಾಗಿ ಮೇಳೈಸಿದೆ. ಆಳುವ ಸರ್ಕಾರಗಳಿಗೆ ಇಂತಹ ಹಲವು ಆಯಾಮಗಳ ದೃಷ್ಟಿಕೋನ ಬಹಳ ಮುಖ್ಯವೆನ್ನುವುದು ಬಿಜೆಪಿಯ ನಂಬಿಕೆಗಳಲ್ಲಿ ಒಂದಾಗಿದೆ.

Karnataka Politics: ಸಿದ್ದು ವಿರುದ್ಧ ಅಚ್ಚರಿಯ ಅಭ್ಯರ್ಥಿ ಕಣಕ್ಕೆ: ಸಚಿವ ಶ್ರೀರಾಮುಲು

ಬಿಜೆಪಿಯನ್ನು ಕೇವಲ ಮೇಲ್ಜಾತಿಯವರ ಪಕ್ಷ ಎನ್ನುವ ಕಾಲವೊಂದಿತ್ತು. ಆದರೆ, ರಾಜ್ಯ ಮತ್ತು ದೇಶದಲ್ಲಿ ಪರಿಶಿಷ್ಟಪಂಗಡಗಳಿಗೆ ಮೀಸಲಾಗಿರುವ ಕ್ಷೇತ್ರಗಳು ಹೆಚ್ಚಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿಯೇ ಜನಾದೇಶ ನೀಡುತ್ತಿವೆ ಎನ್ನುವುದು ವಾಸ್ತವ. ನಮ್ಮ ಇತ್ತೀಚಿನ ಎರಡು ದಶಕಗಳ ರಾಜಕೀಯ ಇತಿಹಾಸವನ್ನು ನೋಡಿದರೆ ಈ ‘ಸುಳಿಗಾಳಿ’ ಗೊತ್ತಾಗುತ್ತದೆ. ಕೇವಲ ಕುಟುಂಬ ರಾಜಕಾರಣದ ಕೆಸರಿನಲ್ಲಿ ಮುಳುಗಿರುವ ಪಕ್ಷಗಳಿಗೂ ಪ್ರಾದೇಶಿಕ ಹಿತದ ಹೆಸರಿನಲ್ಲಿ ಎರಡು-ಮೂರು ಜಿಲ್ಲೆಗಳಿಗೆ ಸೀಮಿತವಾಗಿ ರಾಜಕೀಯ ಆಟವಾಡುವ ಪಕ್ಷಗಳಿಗೂ ಇದು ಅಪಥ್ಯವೆನ್ನುವುದು ನಿಜ. ಆದರೆ, ಪರಿಶಿಷ್ಟಪಂಗಡಗಳ ಜನರು ಕಾಂಗ್ರೆಸ್ಸಿನಿಂದ ದೂರ ಸರಿದಿದ್ದೇಕೆ? ಅವರು ಜೆಡಿಎಸ್‌ನಂತಹ ಪಕ್ಷಗಳ ಬಗ್ಗೆ ಭ್ರಮನಿರಸನರಾಗಿದ್ದೇಕೆ? ಇಂತಹ ಚರ್ಚೆಗಳು ನಮ್ಮಲ್ಲಿ ಆಗಬೇಕು.

ಪರಿಶಿಷ್ಟ ಪಂಗಡಗಳ ಕಲ್ಯಾಣ: ನಮ್ಮಲ್ಲಿ ರೈತರ ಉದ್ಧಾರದ ಬಗ್ಗೆ, ದಲಿತರ ಕಲ್ಯಾಣದ ಬಗ್ಗೆ, ಪರಿಶಿಷ್ಟಪಂಗಡಗಳ ಸಬಲೀಕರಣದ ಬಗ್ಗೆ ದೊಡ್ಡದೊಡ್ಡ ಮಾತುಗಳಿಗೇನೂ ಬರವಿಲ್ಲ. ವಾಸ್ತವದಲ್ಲಿ, ನಮ್ಮಲ್ಲಿ ಕಳೆದ ಆರೇಳು ದಶಕಗಳ ಕಾಲ ನಡೆದಿರುವುದೆಲ್ಲ ಇಂತಹ ಮಂಕುಬೂದಿ ರಾಜಕಾರಣವೇ! ಬದ್ಧತೆ, ಸಂಕಲ್ಪಶಕ್ತಿ, ಇಚ್ಛಾಶಕ್ತಿ, ಅಭಿವೃದ್ಧಿಕೇಂದ್ರಿತ ದೃಷ್ಟಿಕೋನ, ದುರ್ಬಲರ ಬಗ್ಗೆ ಕಳಕಳಿ ಇವ್ಯಾವೂ ಇಲ್ಲದಿದ್ದಾಗ ಇಂತಹ ರೋಗಗ್ರಸ್ತ ರಾಜಕಾರಣ ವಿಜೃಂಭಿಸುತ್ತದೆಯಷ್ಟೆ. ಆದರೆ, ಅಬ್ರಹಾಂ ಲಿಂಕನ್‌ ಹೇಳಿದಂತೆ, ‘ಎಲ್ಲರನ್ನೂ ಎಲ್ಲ ಕಾಲದಲ್ಲೂ ವಂಚಿಸುವುದು ಸಾಧ್ಯವಿಲ್ಲ.’ ಬಿಜೆಪಿಯ ಜನಪರ ಆಡಳಿತದ ಎದುರು ಕಂಗಾಲಾಗಿರುವ ಪ್ರತಿಪಕ್ಷಗಳು ಈ ಸರಳ ಸತ್ಯವನ್ನು ಅರಿಯಬೇಕು.

ಪರಿಶಿಷ್ಟಪಂಗಡಗಳ ಅಡಿಯಲ್ಲಿ ನಮ್ಮಲ್ಲಿ ತೀರಾ ಹೆಚ್ಚಿನ ಸಮುದಾಯಗಳೇನೂ ಇಲ್ಲ. ಆದರೆ, ಬೆರಳೆಣಿಕೆಯಷ್ಟುಸಮುದಾಯಗಳ ಅಡಿಯಲ್ಲೇ ಅವರ ಜನಸಂಖ್ಯೆಯು ಗಮನಾರ್ಹವಾಗಿದೆ. ಇದನ್ನು ಗಮನಿಸಿಯೇ ರಾಜ್ಯ ಬಿಜೆಪಿ ಸರ್ಕಾರವು ನಾಗಮೋಹನ್‌ ದಾಸ್‌ ವರದಿಯನ್ನು ಅಂಗೀಕರಿಸುವ ದೈರ್ಯವನ್ನು ಪ್ರದರ್ಶಿಸಿದ್ದು, ಎಸ್‌.ಟಿ.ಗಳಿಗೆ ಈವರೆಗೆ ಇದ್ದ ಶೇ.3ರಷ್ಟುಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸುವ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿದೆ. ಇದಕ್ಕೂ ಮೊದಲೇ ಈ ಸಮುದಾಯಗಳ ಹಿತ ಕಾಪಾಡಲು ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದ್ದು ಬಿಜೆಪಿ ಸರ್ಕಾರದ ಎಸ್‌.ಟಿ. ಪರ ದಿಟ್ಟಹೆಜ್ಜೆಯಾಗಿದೆ. ಬರೀ ಬಾಯುಪಚಾರದ ಮಾತುಗಳನ್ನಾಡುತ್ತ ಅಂಗೈಯಲ್ಲೇ ಆಕಾಶ ತೋರಿಸುವವರಿಗೂ ಇಂತಹ ಸಮುದಾಯಗಳ ದುಃಖದುಮ್ಮಾನಗಳನ್ನು ಕಂಡು, ನಿಜವಾದ ಸಬಲೀಕರಣದ ಆಶಯವನ್ನು ಸಾಧಿಸುವವರಿಗೂ ಇರುವ ವ್ಯತ್ಯಾಸ ಇದೇ! ಇಷ್ಟೇ ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ಬಂದಮೇಲಿನ ನಾಲ್ಕು ಹಣಕಾಸು ವರ್ಷಗಳಲ್ಲಿ ವಿವಿಧ ಇಲಾಖೆಗಳ ಮೂಲಕ ಪರಿಶಿಷ್ಟಪಂಗಡಗಳ ಒಳಿತಿಗೆ ಹತ್ತಿರ ಹತ್ತಿರ 33 ಸಾವಿರ ಕೋಟಿ ರು.ಗಳನ್ನು ವಿನಿಯೋಗಿಸಲಾಗಿದೆ. ಇದರ ಸಕಾರಾತ್ಮಕ ಫಲಗಳು ಎಸ್‌.ಟಿ. ಪಂಗಡಗಳ ಬದುಕಿನಲ್ಲಿ ಪ್ರತಿಫಲಿಸುತ್ತಿವೆ.

ದೇಶಕ್ಕೆ ಮೊದಲ ಬುಡಕಟ್ಟು ರಾಷ್ಟ್ರಪತಿ: ದುರ್ಬಲ ಸಮುದಾಯಗಳಿಗೆ ರಾಜಕೀಯ ಅಧಿಕಾರವನ್ನು ಕೊಡಬೇಕು. ಇದೇ ನಿಟ್ಟಿನಲ್ಲಿ ಸಾಗಿ ಬಿಜೆಪಿ ನೇತೃತ್ವದ ಎನ್‌.ಡಿ.ಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಒಡಿಶಾದ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಮಾಡಿದ್ದಲ್ಲದೆ, ಅವರ ಗೆಲುವನ್ನೂ ನಿಶ್ಚಯಿಸಿಕೊಂಡಿತು. ದೇಶದ ಪ್ರಪ್ರಥಮ ಬುಡಕಟ್ಟು ಜನಾಂಗದ ರಾಷ್ಟ್ರಪತಿಗಳನ್ನು ನೀಡಿದ ಹೆಮ್ಮೆ ಬಿಜೆಪಿಗಿದೆ. ಇದರ ಜತೆಯಲ್ಲೇ ಅವುಗಳ ಸರ್ವಾಂಗೀಣ ಅಭಿವೃದ್ಧಿಯೂ ಸಾಧ್ಯವಾಗುವಂತೆ ನೋಡಿಕೊಳ್ಳಬೇಕು ಎನ್ನುವುದು ಬಿಜೆಪಿ ಸರ್ಕಾರದ ಇರಾದೆಯಾಗಿದೆ. ಇದರಲ್ಲಿ ಸಾಮಾಜಿಕ ಭದ್ರತೆ, ಶೈಕ್ಷಣಿಕ ಉನ್ನತಿ, ಔದ್ಯೋಗಿಕ ರಕ್ಷಣೆ, ಆರ್ಥಿಕ ಪ್ರಗತಿ ಹೀಗೆ ಎಲ್ಲವೂ ಬರುತ್ತವೆ. 

ಮೀಸಲಾತಿಯ ಹೆಚ್ಚಳವು ಸಾಮಾಜಿಕ ನ್ಯಾಯದ ಪರಿಪಾಲನೆಯ ಜತೆಗೆ ಭದ್ರತೆಯ ಅಭಯವನ್ನು ನೀಡುತ್ತದೆ. ಇದನ್ನು ವಿಸ್ತರಿಸುವಂತೆ, ಈ ಸಮುದಾಯಗಳ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕೆ ಮೆಟ್ರಿಕ್‌ಪೂರ್ವ ಮತ್ತು ಮೆಟ್ರಿಕ್‌ ನಂತರದ ಶಿಕ್ಷಣಕ್ಕೆ 4 ಲಕ್ಷಕ್ಕೂ ಹೆಚ್ಚು ಅರ್ಹರಿಗೆ 113 ಕೋಟಿ ರು.ಗಳಿಗೂ ಹೆಚ್ಚಿನ ಮೊತ್ತದ ಸ್ಕಾಲರ್ಶಿಪ್‌ ಒದಗಿಸಲಾಗಿದೆ. ಅಂದಹಾಗೆ, ಇವೆಲ್ಲವನ್ನೂ ಆಯಾ ವಿದ್ಯಾರ್ಥಿಗಳ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. ತಂತ್ರಜ್ಞಾನದ ಅಳವಡಿಕೆಯು ದುರ್ಬಲರ ನೆರವಿಗೆ ಹೇಗೆ ಒದಗಿಬರಬಲ್ಲದು ಎನ್ನುವುದಕ್ಕೆ ಬಿಜೆಪಿ ಸರ್ಕಾರವು ಮೇಲ್ಪಂಕ್ತಿ ಹಾಕಿಕೊಟ್ಟಿದೆ. ದುರಂತವೆಂದರೆ, ಬಡವರ ಬಗ್ಗೆ ಕಾಳಜಿ ಇರುವಂತೆ ನಾಟಕವಾಡುವ ಕಾಂಗ್ರೆಸ್‌ ಪಕ್ಷದ ಸರ್ಕಾರದಲ್ಲಿ ಎಸ್ಸಿ-ಎಸ್ಟಿಹಾಸ್ಟೆಲ್‌ಗಳಿಗೆ ಬೇಕಾದ ಹಾಸಿಗೆ, ದಿಂಬು ಖರೀದಿಯಲ್ಲಿ 2,157 ಕೋಟಿ ರು.ಗಳ ಕರ್ಮಕಾಂಡವೇ ನಡೆದು ಹೋಯಿತು!

ಪರಿಶಿಷ್ಟರ ಏಳ್ಗೆಗೆ ಹಲವು ಯೋಜನೆ: ರಾಜ್ಯ ಬಿಜೆಪಿ ಸರ್ಕಾರವು ಪರಿಶಿಷ್ಟಜಾತಿ ಸೇರಿದಂತೆ ಪರಿಶಿಷ್ಟಪಂಗಡಗಳ ಕುಟುಂಬಗಳಿಗೂ ತಿಂಗಳಿಗೆ 75 ಯೂನಿಟ್‌ ವಿದ್ಯುತ್ತನ್ನು ಉಚಿತವಾಗಿ ಕೊಡುತ್ತಿದೆ. ಹಾಗೆಯೇ, ಭೂ ಒಡೆತನ ಯೋಜನೆಯಡಿ ಎಸ್ಟಿಪಂಗಡಗಳ 817 ಅರ್ಹರಿಗೆ 1,218 ಎಕರೆಗೂ ಹೆಚ್ಚು ಜಮೀನನ್ನು ಖರೀದಿಸಿ ಕೊಟ್ಟಿದ್ದು, ಇದಕ್ಕಾಗಿ 89 ಕೋಟಿ ರು.ಗಳಿಗೂ ಅಧಿಕ ಹಣವನ್ನು ವಿನಿಯೋಗಿಸಿದೆ; 1,091 ಫಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಿ ಕೊಟ್ಟಿದೆ. ಈ ಸಮುದಾಯಗಳ 887 ಪ್ರತಿಭಾವಂತರಿಗೆ ಸ್ಟೈಪೆಂಡ್‌ ಕೊಡುವ ಮೂಲಕ ನಾಗರಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ತರಬೇತಿಯನ್ನು ಹೈದರಾಬಾದ್‌, ದೆಹಲಿ, ಬೆಂಗಳೂರುಗಳಲ್ಲಿ ಉಚಿತವಾಗಿ ಕೊಡಿಸುತ್ತಿದೆ. ನಾಳೆ ಇವರಲ್ಲಿ ಕೆಲವರಾದರೂ ಈ ಸಮಾಜವನ್ನು ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ.

ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಪರದೇಶಿ ಗಿರಾಕಿ: ಸಚಿವ ಶ್ರೀರಾಮುಲು

ಪರಿಶಿಷ್ಟ ಪಂಗಡಗಳು ರಾಜ್ಯದಲ್ಲಿ ಮಧ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಸಾಂದ್ರವಾಗಿವೆ. ಆದರೆ, ಅರವತ್ತು ವರ್ಷ ರಾಜ್ಯಭಾರ ಮಾಡಿದವರು ಈ ಭಾಗಗಳ ಕಡೆಗೆ ಕಣ್ಣೆತ್ತಿಯೂ ನೋಡಿರಲಿಲ್ಲ. ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಸಿದ್ಧಿಗಳು, ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ಆಸ್ಥೆಯ ಫಲವಾಗಿ ಎಸ್ಟಿಸ್ಥಾನಮಾನ ಸಿಕ್ಕಿದೆ. ಈ ಮೂಲಕ, ಎಸ್ಟಿಸಮುದಾಯಗಳು ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಬಿಜೆಪಿ ಉಳಿಸಿಕೊಂಡಿದೆ. ಇಷ್ಟೇ ಅಲ್ಲ, ಈ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರದ ಬಳಿ ಇನ್ನೂ ಹಲವು ಉಪಕ್ರಮಗಳು ಸಿದ್ಧವಾಗಿವೆ. ಇವು ಮುಂಬರುವ ದಿನಗಳಲ್ಲಿ ಒಂದೊಂದಾಗಿ ಅನುಷ್ಠಾನಕ್ಕೆ ಬರಲಿವೆ. ಈ ಮೂಲಕ ಎಸ್ಟಿಸಮುದಾಯಗಳ ಬಾಳಿನಲ್ಲಿ ಭರವಸೆಯ ಕಿರಣಗಳು ಥಳತಳಿಸುವಂತೆ ಮಾಡಲಾಗುತ್ತಿದೆ.

Follow Us:
Download App:
  • android
  • ios