Asianet Suvarna News Asianet Suvarna News

ಉತ್ತಮ ಮಳೆ: ರಾಜ್ಯದಲ್ಲಿ ಭರ್ಜರಿ ಬಿತ್ತನೆ

* ಈಗಾಗಲೇ 70% ಬಿತ್ತನೆ ಪೂರ್ಣ
* ಸೆಪ್ಟೆಂಬರ್‌ ಅಂತ್ಯದವರೆಗೂ ಬಿತ್ತನೆ ಕಾರ‍್ಯ
*  ಸಾಮಾನ್ಯಕ್ಕಿಂತ ಉತ್ತಮ ಮಳೆಯಾದ ಫಲ
 

Sowing in the Karnataka Due to Good Rain grg
Author
Bengaluru, First Published Aug 1, 2021, 7:09 AM IST
  • Facebook
  • Twitter
  • Whatsapp

ಸಂಪತ್‌ ತರೀಕೆರೆ

ಬೆಂಗಳೂರು(ಆ.01): ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯಕ್ಕಿಂತ ಉತ್ತಮ ಮಳೆಯಾಗಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದೆ. ಈವರೆಗೂ 53.89 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮುಂಗಾರು ಹಂಗಾಮಿನ ನೈರುತ್ಯ ಮಾರುತ ಮಳೆಯ ಅವಧಿಯಲ್ಲಿ (ಜೂ.1ರಿಂದ ಜುಲೈ 23ರವರೆಗೆ) ಸಾಮಾನ್ಯ ಮಳೆ 202 ಮಿ.ಮೀ.ಗೆ ಪ್ರತಿಯಾಗಿ ವಾಸ್ತವಿಕ ಮಳೆ 241 ಮಿ.ಮೀ. ಅಂದರೆ ಶೇ.19 ರಷ್ಟುಹೆಚ್ಚು ಮಳೆಯಾಗಿದೆ. ಕೃಷಿ ಇಲಾಖೆಯ ಪ್ರಕಾರ, ಕೃಷಿ ಬೆಳೆಗಳ ಬಿತ್ತನೆ ಗುರಿ 77 ಲಕ್ಷ ಹೆಕ್ಟೇರ್‌ ಇದ್ದು ಈವರೆಗೆ ರಾಜ್ಯಾದ್ಯಂತ 53.89 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆ ಪೂರ್ಣಗೊಳಿಸಲಾಗಿದೆ. ಇನ್ನು ಸೆಪ್ಟೆಂಬರ್‌ ಅಂತ್ಯದವರೆಗೂ ಬಿತ್ತನೆ ಕಾರ್ಯ ನಡೆಯಲಿದ್ದು, ಕೃಷಿ ಇಲಾಖೆಯು ಗುರಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದೆ.

2021-22ರ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳ ಬೇಡಿಕೆ 6 ಲಕ್ಷ ಕ್ವಿಂಟಾಲ್‌ಗಳೆಂದು ಅಂದಾಜಿಸಿದ್ದು, ಜು.23ರವರೆಗೆ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ 3.32 ಲಕ್ಷ ಕ್ವಿಂಟಾಲ್‌ಗಳಷ್ಟುಬಿತ್ತನೆ ಬೀಜಗಳನ್ನು ವಿತರಣೆ ಮಾಡಿದೆ. ಉಳಿದಂತೆ 51,264.20 ಕ್ವಿಂಟಾಲ್‌ಗಳಷ್ಟುಬಿತ್ತನೆ ಬೀಜ ದಾಸ್ತಾನು ಇದೆ. ಹಾಗೆಯೇ 26.47 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಇದ್ದು, ಈವರೆಗೆ 14.39 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಸಗೊಬ್ಬರಗಳನ್ನು ಸರಬರಾಜು ಮಾಡಲಾಗಿದೆ. 9.79 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಯಾವ ಬೆಳೆ ಎಷ್ಟು ಬಿತ್ತನೆ?

ಏಕದಳ ಧಾನ್ಯಗಳ ಪೈಕಿ ನೀರಾವರಿ ಪ್ರದೇಶದಲ್ಲಿ ಭತ್ತ( 54 ಸಾವಿರ ಹೆಕ್ಟೇರ್‌), ಜೋಳ (4 ಸಾವಿರ ಹೆಕ್ಟೇರ್‌), ರಾಗಿ (2 ಸಾವಿರ ಹೆಕ್ಟೇರ್‌), ಮೆಕ್ಕೆಜೋಳ (2.32 ಲಕ್ಷ ಹೆಕ್ಟೇರ್‌), ಸಜ್ಜೆ (19 ಸಾವಿರ ಹೆಕ್ಟೇರ್‌). ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ (1.48 ಲಕ್ಷ ಹೆಕ್ಟೇರ್‌), ಜೋಳ (54 ಸಾವಿರ ಹೆಕ್ಟೇರ್‌), ರಾಗಿ(1.15 ಲಕ್ಷ ಹೆಕ್ಟೇರ್‌), ಮೆಕ್ಕೆಜೋಳ (9.63 ಲಕ್ಷ ಹೆಕ್ಟೇರ್‌), ಸಜ್ಜೆ (1.22 ಲಕ್ಷ ಹೆಕ್ಟೇರ್‌), ತೃಣ ಧಾನ್ಯಗಳು( 40 ಸಾವಿರ ಹೆಕ್ಟೇರ್‌) ಹೀಗೆ ಒಟ್ಟು 17.20 ಲಕ್ಷ ಹೆಕ್ಟೇರ್‌(ಶೇ.54.84) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ವೇಳೆಗೆ ಕೇವಲ 17.57 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು.

ಮಳೆ ಬಂದ್ರೂ ಕಷ್ಟ ಬರದಿದ್ರೂ ಕಷ್ಟ: ಅನ್ನದಾತನಿಗೆ ತಪ್ಪದ ಗೋಳು..!

ಇದಲ್ಲದೆ ದ್ವಿದಳ ಧಾನ್ಯಗಳನ್ನು ಕಳೆದ ವರ್ಷ 15.54 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಈ ವರ್ಷ 17.80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ 7.73 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳುಗಳನ್ನು ಬಿತ್ತನೆ ಮಾಡಿದ್ದರೆ ಈ ವರ್ಷ 7.97 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ 10.43 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ವಾಣಿಜ್ಯ ಬೆಳೆಗಳು ಈ ಬಾರಿ 13.89 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿವೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ದ್ವಿದಳ ಧಾನ್ಯಗಳು: 

ನೀರಾವರಿ ಪ್ರದೇಶದಲ್ಲಿ ತೊಗರಿ- 54 ಸಾವಿರ ಹೆಕ್ಟೇರ್‌, ಉದ್ದು- 6 ಸಾವಿರ ಹೆಕ್ಟೇರ್‌, ಹೆಸರು 1 ಸಾವಿರ ಹೆಕ್ಟೇರ್‌. ಮಳೆಯಾಶ್ರಿತ ಪ್ರದೇಶದಲ್ಲಿ ಈ ಬಾರಿ ತೊಗರಿ- 11.82 ಲಕ್ಷ ಹೆಕ್ಟೇರ್‌, ಹುರುಳಿ- 1 ಸಾವಿರ ಹೆಕ್ಟೇರ್‌, ಉದ್ದು- 85 ಸಾವಿರ ಹೆಕ್ಟೇರ್‌, ಹೆಸರು- 3.85 ಲಕ್ಷ ಹೆಕ್ಟೇರ್‌, ಅಲಸಂದೆ ಮತ್ತು ಇತರೆ- 54 ಸಾವಿರ ಹೆಕ್ಟೇರ್‌, ಅವರೆ- 9 ಸಾವಿರ ಹೆಕ್ಟೇರ್‌ ಸೇರಿದಂತೆ 17.80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷದಲ್ಲಿ 15.54 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು.

ಎಣ್ಣೆ ಕಾಳುಗಳು: 

ನೀರಾವರಿ ಪ್ರದೇಶದಲ್ಲಿ ಶೇಂಗಾ - 17 ಸಾವಿರ ಹೆಕ್ಟೇರ್‌, ಸೂರ್ಯಕಾಂತಿ- 25 ಸಾವಿರ ಹೆಕ್ಟೇರ್‌, ಸೋಯಾ ಅವರೆ- 11 ಸಾವಿರ ಹೆಕ್ಟೇರ್‌. ಮಳೆಯಾಶ್ರಿತ ಪ್ರದೇಶದಲ್ಲಿ ಶೇಂಗಾ- 2.89 ಲಕ್ಷ ಹೆಕ್ಟೇರ್‌, ಎಳ್ಳು- 21 ಸಾವಿರ ಹೆಕ್ಟೇರ್‌, ಸೂರ್ಯಕಾಂತಿ- 71 ಸಾವಿರ ಹೆಕ್ಟೇರ್‌, ಹರಳು- 2 ಸಾವಿರ ಹೆಕ್ಟೇರ್‌, ಹುಚ್ಚೆಳ್ಳು- 2 ಸಾವಿರ ಹೆಕ್ಟೇರ್‌, ಸೋಯಾ ಅವರೆ- 3.63 ಲಕ್ಷ ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಹೀಗೆ ಒಟ್ಟು 7.97 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 7.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು.

ವಾಣಿಜ್ಯ ಬೆಳೆಗಳು: 

ನೀರಾವರಿ ಪ್ರದೇಶದಲ್ಲಿ ಹತ್ತಿ - 1.20 ಲಕ್ಷ ಹೆಕ್ಟೇರ್‌, ಕಬ್ಬು -5.25 ಲಕ್ಷ ಹೆಕ್ಟೇರ್‌, ತಂಬಾಕು- 2 ಸಾವಿರ ಹೆಕ್ಟೇರ್‌. ಮಳೆಯಾಶ್ರಿತ ಪ್ರದೇಶದಲ್ಲಿ ಹತ್ತಿ- 3.52 ಲಕ್ಷ ಹೆಕ್ಟೇರ್‌, ಕಬ್ಬು- 21 ಸಾವಿರ ಹೆಕ್ಟೇರ್‌), ತಂಬಾಕು- 72 ಸಾವಿರ ಹೆಕ್ಟೇರ್‌ ಸೇರಿ 13.89 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 10.43 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
 

Follow Us:
Download App:
  • android
  • ios