Asianet Suvarna News Asianet Suvarna News

ಮಳೆ ಬಂದ್ರೂ ಕಷ್ಟ ಬರದಿದ್ರೂ ಕಷ್ಟ: ಅನ್ನದಾತನಿಗೆ ತಪ್ಪದ ಗೋಳು..!

* ಸತತ ಮಳೆಗೆ ಹಾಳಾಗುತ್ತಿರುವ ಬೆಳೆ
* ವಾಡಿಕೆಗಿಂತ ಹೆಚ್ಚು ಸುರಿಯುತ್ತಿರುವ ಮಳೆಯಿಂದಾಗಿ ತತ್ತರಿಸುತ್ತಿರುವ ರೈತ
* ಜಡಿ ಮಳೆಯಿಂದ ಕೊಳೆಯುತ್ತಿರುವ ಬೆಳೆಗಳು
 

Farmers Faces Problems for continuous Rainfall at Nargund in Gadag grg
Author
Bengaluru, First Published Jul 15, 2021, 1:13 PM IST

ಎಸ್‌.ಜಿ. ತೆಗ್ಗಿನಮನಿ

ನರಗುಂದ(ಜು.15):  ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸತತ ಮಳೆಗೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹಾಳಾಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಕೃಷಿಯನ್ನೆ ನಂಬಿಕೊಂಡು ಜೀವನ ಮಾಡುವ ರೈತರು ತಾಲೂಕಿನಲ್ಲಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಗಳಾದ ಗೋವಿನ ಜೋಳ, ಬಿ.ಟಿ. ಹತ್ತಿ, ಹೆಸರು ಬಿತ್ತನೆ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ಕೊಳೆತುಹೋಗುವ ಸ್ಥಿತಿ ಬಂದೊದಗಿದೆ. ಕಳೆದ ಒಂದು ವಾರದಿಂದ ಸತತವಾಗಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ರೈತರು ಬೇಸಿಗೆ ಸಮಯದಲ್ಲಿ ತಮ್ಮ ಹೊಲಗಳಲ್ಲಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಿದ ಬದು, ಕೃಷಿ ಹೊಂಡಗಳೂ ಮಳೆಯಿಂದಾಗಿ ತುಂಬಿ ಹಾಳಾಗಿವೆ.

ಸಂಪೂರ್ಣ ಹಾನಿ:

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೆಗ್ಗು ಪ್ರದೇಶದ ಜಮೀನುಗಳಲ್ಲಿ ಮಳೆನೀರು ಹರಿದು ಹೋಗದೇ ನಿಲ್ಲುತ್ತಿರುವುದರಿಂದಾಗಿ ತಗ್ಗು ಪ್ರದೇಶದಲ್ಲಿ ಬೆಳೆದ ಬೆಳೆಗಳೆಲ್ಲ ನಿಂತ ನೀರಿನಿಂದಾಗಿ ಕೊಳೆತು ಹೋಗುತ್ತಿವೆ. ಇನ್ನು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆ ಮಾಡಿದ ಜಮೀನುಗಳಲ್ಲೂ ಮಳೆ ನೀರು ನಿಂತು ತೊಂದರೆ ಅನುಭವಿಸುವಂತಾಗಿದೆ,

ಮುಂಗಾರು ಹಂಗಾಮಿನಲ್ಲಿ ತೇವಾಂಶದ ಮಳೆಯಾಗಿದ್ದರಿಂದ ರೈತರು ಪ್ರತಿ ಎಕರೆಗೆ 15 ರಿಂದ 20 ಸಾವಿರ ಖರ್ಚು ಮಾಡಿ ಬಂಪರ್‌ ಬೆಳೆ ಬೆಳೆಯಬೇಕೆಂದು ನಿರೀಕ್ಷೆಯಲ್ಲಿದ್ದರು. ಆದರೆ ಜಡಿ ಮಳೆಯಿಂದಾಗಿ ಉತ್ತಮ ಫಸಲು ತಗೆಯುವ ಭರವಸೆಯನ್ನೇ ಕೈಚೆಲ್ಲಿ ಕೂಡುವಂತಾಗಿದೆ. ಹೊಲದಲ್ಲಿ ಹಾಕಿರುವ ಬೆಳೆ ಬರುವ ಭರವಸೆ ಇಲ್ಲ, ಈ ಬೆಳೆಗೆ ಖರ್ಚು ಮಾಡಿದ ಹಣವೂ ಸಿಗದ ಸ್ಥಿತಿ ರೈತ ಸಮುದಾಯಕ್ಕೆ ಬಂದಿದೆ.

ಬಿತ್ತನೆ ಮುಗಿದರೂ ಸುರಿ​ಯದ ಮಳೆ: ಆತಂಕದಲ್ಲಿ ಅನ್ನದಾತ

ಬಿತ್ತನೆ ವಿವರ:

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ನೀರಾವರಿ ಮತ್ತು ಖುಷ್ಕಿ ಜಮೀನುಗಳಲ್ಲಿ ಸುಮಾರು 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, 9 ಸಾವಿರ ಹೆಕ್ಟೇರ್‌ ಗೋವಿನ ಜೋಳ, 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿ.ಟಿ. ಹತ್ತಿ ಬಿತ್ತನೆ ಮಾಡಿದ್ದು, ಈ ಎಲ್ಲ ಬೆಳೆಗಳು ನಿರಂತರ ಮಳೆಗೆ ಹಾಳಾಗುವ ಆತಂಕ ಮನೆಮಾಡಿದೆ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿ ಅಂದಾಜು ಮಾಡಿ ಹಾನಿಯಾದ ಪ್ರತಿ ಎಕರೆಗೆ .50 ಸಾವಿರ ಪರಿಹಾರ ಕೊಡಸಲು ಮುಂದಾಗಬೇಕೆಂದು ತಾಲೂಕು ರೈತ ಸೇನಾ ಸಂಘಟನೆ ಅಧ್ಯಕ್ಷ ಪರಶುರಾಮ ಜಂಬಗಿ ಒತ್ತಾಯಿಸಿದ್ದಾರೆ.

ತಾಲೂಕಿನಾದ್ಯಂತ ಮುಂಗಾರು ಹಂಗಾಮಿನ ಆಗಮನದ ವೇಳೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರೈತರು ತಮ್ಮ ಹೊಲಗಳಲ್ಲಿ ಈಗಾಗಲೇ ಬಿತ್ತನೆ ಮಾಡಿದ್ದು, ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳೆಲ್ಲ ಹಾಳಾಗುತ್ತಿರುವುದು ಗಮನಕ್ಕೆ ಬಂದಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಬಿತ್ತನೆ ಮಾಡಿದ ಬೆಳೆಗಳೆಲ್ಲ ಹಾನಿಯಾಗುವ ಆತಂಕವಿದೆ ಎಂದು ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಮೈತ್ರಿ ತಿಳಿಸಿದ್ದಾರೆ. 

ಸತತವಾಗಿ ಸುರಿದ ಮಳೆಗೆ ಬೆಳೆಗಳು ಹಾನಿಯಾಗಿರುವ ಕುರಿತು ಈವರೆಗೆ ಯಾವ ರೈತರು ಬೆಳೆಹಾನಿ ಸಮೀಕ್ಷೆ ಮಾಡುವಂತೆ ಮನವಿ ಮಾಡಿಲ್ಲ. ರೈತರು ಮನವಿ ಮಾಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ನರಗುಂದ ತಹಸೀಲ್ದಾರ್‌ ಎ.ಡಿ. ಅಮರಾವದಗಿ ಹೇಳಿದ್ದಾರೆ. 
 

Follow Us:
Download App:
  • android
  • ios