ಕೇಂದ್ರ ಸರ್ಕಾರವು ದಕ್ಷಿಣ ಭಾರತದ ಪ್ರಮುಖ ನಗರಗಳನ್ನು ಬೆಸೆಯುವ ಹೊಸ ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಅನುಮೋದನೆ ನೀಡಿದೆ. ಇದರಿಂದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಇಳಿಕೆಯಾಗಲಿದೆ. ಇದರ ಜೊತೆಗೆ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೂ ಚಾಲನೆ ನೀಡಲಾಗಿದೆ.

ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಮತ್ತು ತಂತ್ರಜ್ಞಾನ ನಗರಗಳನ್ನು ಬೆಸೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಬೃಹತ್ ಯೋಜನೆ ಘೋಷಿಸಿದೆ. ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದಕ್ಷಿಣ ಭಾರತಕ್ಕೆ ಪ್ರಸ್ತಾವಿತ ದಕ್ಷಿಣ ಭಾರತದ ಬುಲೆಟ್ ರೈಲು ಕಾರಿಡಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಈ ಯೋಜನೆಯು ರಾಜ್ಯ ರಾಜಧಾನಿ ಬೆಂಗಳೂರನ್ನು ಹೈದರಾಬಾದ್, ಅಮರಾವತಿ ಮತ್ತು ಚೆನ್ನೈ ನಗರಗಳೊಂದಿಗೆ ನೇರವಾಗಿ ಸಂಪರ್ಕಿಸಲಿದೆ.

ಕೇವಲ 73 ನಿಮಿಷಗಳಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣ!

ಈ ಹೊಸ ಬುಲೆಟ್ ರೈಲು ಕಾರಿಡಾರ್ ಯೋಜನೆ ಆರಂಭವಾದ ಬಳಿಕ ದಕ್ಷಿಣ ಭಾರತದ ಮೆಟ್ರೋ ನಗರಗಳ ನಡುವಿನ ಪ್ರಯಾಣದ ಅವಧಿ ಗಮನಾರ್ಹವಾಗಿ ಕಡಿಮೆಯಾಗಲಿದೆ. ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 73 ನಿಮಿಷಕ್ಕೆ ಇಳಿಕೆಯಾಗಲಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಈ ಮಾರ್ಗದಲ್ಲಿ ಪ್ರಯಾಣ ಕೇವಲ 2 ಗಂಟೆ 10 ನಿಮಿಷಗಳಲ್ಲಿ ತಲುಪಬಹುದು. ಹೈದರಾಬಾದ್ to ಅಮರಾವತಿ 70 ನಿಮಿಷದಲ್ಲಿ ತಲುಪಬಹುದು.

ಈ ಯೋಜನೆ ಕುರಿತು ಮಾತನಾಡಿದ ಸಚಿವರು, ಬೆಂಗಳೂರು ಮತ್ತು ಚೆನ್ನೈ ನಡುವಿನ ಶರವೇಗದ ಸಂಪರ್ಕದಿಂದಾಗಿ ಈ ಎರಡೂ ನಗರಗಳು ಒಂದೇ ನಗರದಂತೆ ಕಾರ್ಯನಿರ್ವಹಿಸಲಿವೆ. ಇದು ದಕ್ಷಿಣದ ರಾಜ್ಯಗಳಲ್ಲಿ ವ್ಯಾಪಾರ, ಉದ್ಯಮ ಹಾಗೂ ಆರ್ಥಿಕ ಏಕೀಕರಣವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು.

4,000 ಕಿ.ಮೀ. ಬುಲೆಟ್ ರೈಲು ಜಾಲ

'ವಿಕಸಿತ ಭಾರತ'ದ ಗುರಿಯತ್ತ ದೇಶ ದಾಪುಗಾಲು ಇಡುತ್ತಿದ್ದು, ಕೇಂದ್ರ ಸರ್ಕಾರವು ಈಗಾಗಲೇ ದೇಶಾದ್ಯಂತ 4,000 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದೆ. ಭವಿಷ್ಯದಲ್ಲಿ ಹೆಚ್ಚುವರಿಯಾಗಿ 3,000 ಕಿ.ಮೀ. ಕಾರಿಡಾರ್ ಯೋಜನೆಗಳನ್ನು ಪ್ರಕಟಿಸಲಾಗುವುದು. ಇದಲ್ಲದೆ, ಉತ್ತರ ಕರ್ನಾಟಕದಲ್ಲಿ ಹಾದು ಹೋಗಲಿರುವ ಬೆಂಗಳೂರು-ಪುಣೆ ಬುಲೆಟ್ ರೈಲು ಕಾರಿಡಾರ್ ಕೂಡ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹಾದು ಹೋಗಲಿದೆ ಮುಂಬೈ ವಂದೇ ಭಾರತ್ ಸ್ಲೀಪರ್

ಕರ್ನಾಟಕ ರಾಜ್ಯೋತ್ಸವದಂದೇ ಚಾಲನೆ ನೀಡಲಾದ ಬೆಂಗಳೂರು ಮತ್ತು ಮುಂಬೈ ನಡುವಿನ ಹೊಸ ವಂದೇ ಭಾರತ್ ಸ್ಲೀಪರ್ ಸಂಚಾರ ಮಾರ್ಗವು ಉತ್ತರ ಕರ್ನಾಟಕದ ಪ್ರಮುಖ ಭಾಗಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಬೆಂಗಳೂರಿನಿಂದ ಹೊರಟು ಆಂಧ್ರಪ್ರದೇಶದ ಗುಂತಕಲ್ ಮೂಲಕ ಸಾಗಿ, ಕರ್ನಾಟಕದ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಮೂಲಕ ಮಹಾರಾಷ್ಟ್ರಕ್ಕೆ ತಲುಪಲಿದೆ.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ ಮತ್ತು ವಿ. ಸೋಮಣ್ಣ ಅವರೊಂದಿಗೆ ಸಮಾಲೋಚಿಸಿ ಈ ಮಾರ್ಗವನ್ನು ಅಂತಿಮಗೊಳಿಸಲಾಗಿದೆ. ಇದುವರೆಗೆ ಸೂಕ್ತ ರೈಲು ಸಂಪರ್ಕವಿಲ್ಲದ ಪ್ರದೇಶಗಳಿಗೆ ಈ ಹೊಸ ಸೇವೆ ಬಲ ನೀಡಲಿದೆ.

ಯಾರಿಗೆ ಆದ್ಯತೆ

ಪ್ರಧಾನಿ ಮೋದಿ ಅವರ ಮಾರ್ಗದರ್ಶನದಂತೆ, ರೈಲ್ವೆ ಇಲಾಖೆಯು ಆಧುನಿಕ ಸೇವೆಗಳನ್ನು ಪರಿಚಯಿಸುವಾಗ ಮಹಿಳೆಯರು ಮಕ್ಕಳು ಸೇರಿ ಕೆಳಹಂತದಿಂದ ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿದೆ. ಪ್ರಸ್ತುತ ದೇಶದಲ್ಲಿ ವಿವಿಧ ವರ್ಗದ ಪ್ರಯಾಣಿಕರಿಗಾಗಿ ಮೂರು ಮಾದರಿಯ ಪ್ರಮುಖ ರೈಲು ಸೇವೆಗಳನ್ನು ಒದಗಿಸಲಾಗುತ್ತಿದೆ. ಅವೆಂದರೆ ನಮೋ ಭಾರತ್ , ಅಮೃತ್ ಭಾರತ್ , ವಂದೇ ಭಾರತ್. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರ ಬೃಹತ್ ಯೋಜನೆಗಳ ಪ್ರಕಟಣೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಭಿನಂದನೆ ಸಲ್ಲಿಸಿದರು. ಬಳಿಕ ನಾಯಕರು ಕೈಜೋಡಿಸಿ ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಘೋಷಣೆಗಳೊಂದಿಗೆ ಭಾರತದ ರೈಲ್ವೆ ಮೂಲಸೌಕರ್ಯದ ಹೊಸ ಯುಗಕ್ಕೆ ಮುನ್ನುಡಿ ಬರೆದರು.