ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಬೆಂಗಳೂರು ಉಪನಗರ ರೈಲು ಯೋಜನೆ ವೇಗ ಪಡೆದುಕೊಂಡಿದೆ. ಇದೀಗ ಫ್ಲೈಓವರ್ ಸೇರಿದಂತೆ ಯೋಜನೆ ಪ್ರಮುಖ ಗುತ್ತಿಯನ್ನು ಅದಾನಿ ಗ್ರೂಪ್ ಬರೋಬ್ಬರಿ 666 ಕೋಟಿ ರೂಪಾಯಿಗೆ ಪಡೆದುಕೊಂಡಿದೆ.

ಬೆಂಗಳೂರು (ಅ.31) ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೆಟ್ರೋ, ಸಾರ್ವಜನಿಕ ಸಾರಿಗೆ ಬಸ್ , ರಸ್ತೆ ಅಗಲೀಕರಣ ಸೇರಿದಂತೆ ಹಲವು ರೀತಿಯ ಪರಿಹಾರಗಳು ಸಾಲುತ್ತಿಲ್ಲ. ಹೀಗಾಗಿ ಬೆಂಗಳೂರು ಉಪನಗರ ರೈಲು ಯೋಜನೆ ಶೀಘ್ರದಲ್ಲೇ ಮುಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ಗುತ್ತಿಗೆಯನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ. 666 ಕೋಟಿ ರೂಪಾಯಿ ಮೌಲ್ಯದ ಸಿವಿಲ್ ವರ್ಕ್ಸ್ ಗುತ್ತಿಗೆ ಅದಾನಿ ಗ್ರೂಪ್ ಪಾಲಾಗಿದೆ. ಅದಾನಿ ಗ್ರೂಪ್ ಬೆಂಬಲಿತ 'ಸಿಇಎಂಇಂಡಿಯಾ ಪ್ರಾಜೆಕ್ಟ್ಸ್ ಲಿಮಿಟೆಡ್' (Cemindia Projects Limited) ಈ ಗುತ್ತಿಗೆ ಪಡೆದುಕೊಂಡಿದೆ.

ಬೆನ್ನಿಗಾನಹಳ್ಳಿಯಿಂಗದ ಶೆಟ್ಟಿಹಳ್ಳಿವರೆಗಿನ ಯೋಜನೆ

ಬೆನ್ನಿಗಾನಹಳ್ಳಿಯಿಂದ ಶೆಟ್ಟಿಹಳ್ಳಿವರೆಗಿನ ಯೋಜನಾ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಲು ಕೆ-ರೈಡ್ (K-RIDE - ರೈಲ್ ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಕರ್ನಾಟಕ ಲಿಮಿಟೆಡ್) ಸಂಸ್ಥೆ ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಈ ಪ್ರಕ್ರಿಯೆಯಲ್ಲಿ ಸಿಇಎಂಇಂಡಿಯಾ ಸಂಸ್ಥೆಯು ಅತ್ಯಂತ ಕಡಿಮೆ ಮೊತ್ತವನ್ನು (L-1) ನಮೂದಿಸುವ ಮೂಲಕ ಕಾಮಗಾರಿಯ ಒಪ್ಪಂದದ ಪಡೆದುಕೊಂಡಿದೆ. ಸಾರ್ವಜನಿಕ ಉದ್ಯಮ ರಂಗದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) 759.05 ಕೋಟಿ ರೂ. ನಮೂದಿಸಿ ಎರಡನೇ ಅತಿ ಕಡಿಮೆ ಬಿಡ್‌ದಾರ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಸಿಇಎಂಇಂಡಿಯಾ ಸಂಸ್ಥೆಯು ಅಂದಾಜು ಯೋಜನಾ ವೆಚ್ಚಕ್ಕಿಂತಲೂ ಕಡಿಮೆ ಬಿಡ್ ಸಲ್ಲಿಸಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

24 ತಿಂಗಳಲ್ಲಿ ಕಾಮಗಾರಿ ಪೂರ್ಣ

ಈ ಕಾಮಗಾರಿ ಪ್ಯಾಕೇಜ್‌ನ ಒಟ್ಟು ಅವಧಿ 24 ತಿಂಗಳುಗಳು. ಅಂದರೆ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಳಿದೆ. ಈ ಪ್ಯಾಕೇಜ್‌ನಲ್ಲಿ 7.795 ಕಿಲೋಮೀಟರ್ ಉದ್ದದ ಎಲಿವೇಟೆಡ್ ವಯಾಡಕ್ಟ್ (ಮೇಲ್ಸೇತುವೆ ಮಾರ್ಗ), ಪ್ರವೇಶ ಮತ್ತು ನಿರ್ಗಮನ ರಾಂಪ್‌ಗಳು ಸೇರಿವೆ. ನಗರದ ದಟ್ಟಣೆಯಿರುವ ಯಶವಂತಪುರ ಮತ್ತಿಕೆರೆ ನಡುವೆ ಜಾಗದ ಅಭಾವವಿರುವುದರಿಂದ, ಇಲ್ಲಿ ಅತ್ಯಂತ ವಿಶಿಷ್ಟವಾದ 1.2 ಕಿಲೋಮೀಟರ್ ಉದ್ದದ 'ಡಬಲ್ ಡೆಕ್ಕರ್' (ರೈಲು ಮತ್ತು ರಸ್ತೆ ಮೇಲ್ಸೇತುವೆ ಒಂದೇ ಕಡೆ ಬರುವ ಯೋಜನೆ) ನಿರ್ಮಿಸಲಾಗುತ್ತಿದೆ.

ಡಬಲ್ ಡೆಕ್ಕರ್ ಮೇಲ್ಸೆತುವೆ

ಮೋಹನ್ ಕುಮಾರ್ ರಸ್ತೆಯ ಉದ್ದಕ್ಕೂ ಬರಲಿರುವ ಈ ಯೋಜನೆಗೆ ಪೂರಕವಾಗಿ ಮಾತಿಕೆರೆಯಲ್ಲಿ ಬೃಹತ್ ಡಬಲ್ ಡೆಕ್ಕರ್ ರೈಲು ನಿಲ್ದಾಣವನ್ನು ನಿರ್ಮಿಸಲಾಗುವುದು. ಇದರ ಕೆಳಹಂತದಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕಾಗಿ ರಸ್ತೆ ಮೇಲ್ಸೇತುವೆ ಇರಲಿದ್ದು, ಮೇಲ್ಭಾಗದಲ್ಲಿ ಉಪನಗರ ರೈಲು ಮಾರ್ಗ ಹಾದುಹೋಗಲಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದು ಮಾತ್ರವಲ್ಲ, ಜಾಗ ಉಳಿಸುವ ತಂತ್ರವೂ ಇದಾಗಿದೆ. ಇದಲ್ಲದೆ ಹೆಬ್ಬಾಳ, ಶೆಟ್ಟಿಹಳ್ಳಿ ಮತ್ತು ಯಶವಂತಪುರ ಪ್ರದೇಶಗಳಲ್ಲೂ ಅಗತ್ಯ ಸೇತುವೆ ಹಾಗೂ ಪೂರಕ ಮೂಲಸೌಕರ್ಯ ಕಾಮಗಾರಿಗಳನ್ನು ಈ ಸಂಸ್ಥೆ ನಿರ್ವಹಿಸಲಿದೆ.

ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತು ದೂರದ ಪ್ರಯಾಣದ ಕಷ್ಟವನ್ನು ತಪ್ಪಿಸಲು 148 ಕಿಲೋಮೀಟರ್ ಒಟ್ಟು ಉದ್ದದ ಈ ಉಪನಗರ ರೈಲು ಯೋಜನೆ ಅತ್ಯಂತ ಆಶಾದಾಯಕವಾಗಿದೆ. ಕರಡೂರು-2 (ಬೆನ್ನಿಗಾನಹಳ್ಳಿ - ಶೀಘ್ರದಲ್ಲೇ ಚಿಕ್ಕಬಾಣಾವರ ಸಂಪರ್ಕ) ಕಾರಿಡಾರ್ ಪೂರ್ಣಗೊಂಡರೆ ಬಾಣಸವಾಡಿ, ನಾಗವಾರ, ಜಾಲಹಳ್ಳಿ, ಯಶವಂತಪುರ ಮತ್ತು ಮ್ಯಾಡರಹಳ್ಳಿ ಸಂಪರ್ಕ ಜಾಲಕ್ಕೆ ಹೊಸ ಬಲ ಸಿಗಲಿದೆ. 24 ತಿಂಗಳಲ್ಲಿ ಈ ಎಂಜಿನಿಯರಿಂಗ್ ವಿಭಾಗವನ್ನು ಪೂರ್ಣಗೊಳಿಸಿ, ನಂತರ ಹಳಿ ಅಳವಡಿಕೆ, ವಿದ್ಯುದ್ದೀಕರಣ ಮತ್ತು ಸಿಗ್ನಲಿಂಗ್ ಕೆಲಸಗಳನ್ನು ಆರಂಭಿಸಲು ಕೆ-ರೈಡ್ ನಿರ್ಧರಿಸಿದೆ.