ಗಿಡಮೂಲಿಕೆಗಳು ಮತ್ತು ಔಷಧೀಯ ತೈಲಗಳ ವ್ಯಾಪಾರಕ್ಕಾಗಿ ಆಫ್ರಿಕಾದ ಕಾಂಗೋ ದೇಶಕ್ಕೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ 95 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೀಸಾ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳು ನಕಲಿ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧನವಾಗಿದೆ.

ಶಿವಮೊಗ್ಗ: ಸಾಂಪ್ರದಾಯಿಕ ಗಿಡಮೂಲಿಕೆ ಹಾಗೂ ಆಯುರ್ವೇದ ತೈಲಗಳ ವ್ಯಾಪಾರಕ್ಕಾಗಿ ಆಫ್ರಿಕಾ ಖಂಡದ 'ರಿಪಬ್ಲಿಕ್ ಆಫ್ ಕಾಂಗೋ' ದೇಶಕ್ಕೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ ಬರೋಬ್ಬರಿ 95 ಮಂದಿ ಈಗ ಅಲ್ಲಿನ ವಲಸೆ ಅಧಿಕಾರಿಗಳ ಬಂಧನಕ್ಕೊಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಂಧನಕ್ಕೊಳಗಾದ 95 ಮಂದಿಯೂ ಕರ್ನಾಟಕದ ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದವರಾಗಿದ್ದಾರೆ. ಈ ಪೈಕಿ ಶಿವಮೊಗ್ಗ ತಾಲೂಕಿನ ಹಕ್ಕಿಪಿಕ್ಕಿ ಕ್ಯಾಂಪ್‌ನ 70 ಮಂದಿ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯ 25 ಜನರು ಸೇರಿದ್ದಾರೆ. ಬದುಕಿನ ಬಂಡಿ ಸಾಗಿಸಲು ಮತ್ತು ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇವರೆಲ್ಲರೂ ಸಾಗರದಾಚೆ ವ್ಯಾಪಾರಕ್ಕೆ ತೆರಳಿದ್ದರು.

ನಕಲಿ ದಾಖಲೆ ಆರೋಪ: ಏಜೆಂಟರ ಮಹಾ ಮೋಸ!

ಪ್ರಯಾಣದ ಟಿಕೆಟ್ ಹಾಗೂ ವೀಸಾ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಸಿಕೊಡುವುದಾಗಿ ನಂಬಿಸಿದ್ದ ಮಧ್ಯವರ್ತಿಗಳು (ಏಜೆಂಟರು), ಈ ಬಡ ಬುಡಕಟ್ಟು ಜನರಿಂದ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಆದರೆ, ಏಜೆಂಟರು ನಕಲಿ ದಾಖಲೆಗಳನ್ನು ನೀಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಾಂಗೋ ದೇಶದ ವಲಸೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ವೀಸಾ ಹಾಗೂ ಇತರ ದಾಖಲೆಗಳು ನಕಲಿ ಎಂಬುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ 95 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಕಿನ್ಶಾಸಾಗೆ ಸ್ಥಳಾಂತರ: ಗಡಿಪಾರು ಸಿದ್ಧತೆ

ಮೊದಲು ಕಾಂಗೋದ ಬೆನಿ ಹಾಗೂ ಕಿಸಂಗಾನಿ ನಗರಗಳಲ್ಲಿ ಇವರನ್ನು ಬಂಧಿಸಿದ್ದ ಇಮಿಗ್ರೇಶನ್ ಅಧಿಕಾರಿಗಳು, ಇದೀಗ ಹೆಚ್ಚಿನ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆಗಳಿಗಾಗಿ ಎಲ್ಲರನ್ನೂ ದೇಶದ ರಾಜಧಾನಿ ಕಿನ್ಶಾಸಾಗೆ ಕರೆದೊಯ್ದಿದ್ದಾರೆ. ನಕಲಿ ವೀಸಾ ಆರೋಪದ ಹಿನ್ನೆಲೆಯಲ್ಲಿ ಎಲ್ಲಾ 95 ಮಂದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಕಾಂಗೋ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ರಾಯಭಾರ ಕಚೇರಿಯ ನೆರವಿಗೆ ಮೊರೆ

ವಿದೇಶಿ ನೆಲದಲ್ಲಿ ಭಾಷೆ ಹಾಗೂ ಕಾನೂನಿನ ಅರಿವಿಲ್ಲದೆ ಕಂಗಾಲಾಗಿರುವ ತಮ್ಮ ಸಮುದಾಯದ ಜನರನ್ನು ತಕ್ಷಣವೇ ರಕ್ಷಿಸುವಂತೆ 'ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ' ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಕಾಂಗೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಬಂಧಿತರಿಗೆ ಸೂಕ್ತ ಕಾನೂನು ನೆರವು ಹಾಗೂ ಭದ್ರತೆ ಒದಗಿಸಬೇಕು. ಅಲ್ಲದೆ, ವಂಚನೆ ಎಸಗಿ ಪರಾರಿಯಾಗಿರುವ ಏಜೆಂಟರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಂಕಷ್ಟದಲ್ಲಿರುವ ಎಲ್ಲಾ 95 ಮಂದಿಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.