ಬೆಂಗಳೂರು (ಆ.22): ಕೊರೋನಾ ಸೋಂಕು ಭೀತಿಯಿಂದ ಕಳೆದ ಐದು ತಿಂಗಳಿನಿಂದ ಬಾರ್‌ ಮತ್ತು ಕ್ಲಬ್‌ಗಳಲ್ಲಿ ಮದ್ಯ ಸರಬರಾಜಿಗೆ ವಿಧಿಸಿರುವ ನಿರ್ಬಂಧವನ್ನು ಸೆಪ್ಟೆಂಬರ್‌ 1ರಿಂದ ತೆರವುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಹಣಕಾಸು ಮತ್ತು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಿದ್ದು, ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳು, ನೆರೆ ರಾಜ್ಯಗಳಲ್ಲಿ ಕೊರೋನಾ ನಡುವೆ ಮದ್ಯ ಸರಬರಾಜಿಗೆ ಅವಕಾಶ ಮಾಡಿಕೊಟ್ಟಿರುವ ಕುರಿತು ಪರಿಶೀಲಿಸಲಾಗಿದೆ. ಈ ಬಗ್ಗೆ ಅಂತಿಮವಾಗಿ ಪ್ರತ್ಯೇಕ ಎಸ್‌ಒಪಿ (ಕಾರ್ಯಾಚರಣೆ ವಿಧಾನ) ಸಿದ್ಧಪಡಿಸಿ ರಾಜ್ಯದಲ್ಲಿ ಬಾರ್‌ ಮತ್ತು ಕ್ಲಬ್‌ಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶ ಮಾಡಿಕೊಡುವ ಕುರಿತು ಚರ್ಚಿಸಲಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಕುರಿತು ತಜ್ಞರ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮದ್ಯಪ್ರಿಯರಿಗಾಗಿ ಹಿಪ್ ಬಾರ್ ತೆರೆದ ಫ್ಲಿಪ್ ಕಾರ್ಟ್.. ಆನ್‌ಲೈನ್‌ನಲ್ಲೇ ಎಣ್ಣೆ!

 ಬಾರ್‌ ಮತ್ತು ಕ್ಲಬ್‌ಗಳಲ್ಲಿ ಜನ ಸೇರುವ ಸಾಮರ್ಥ್ಯದ ಆಧಾರದಲ್ಲಿ ಶೇ.50ರಷ್ಟುಜನರಿಗೆ ಮಾತ್ರ ಅವಕಾಶ ನೀಡುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯಗೊಳಿಸುವ ಸಂಬಂಧ ಚರ್ಚೆ ನಡೆದಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮದ್ಯ ಮಾರಾಟಕ್ಕೆ ಮುಖ್ಯಮಂತ್ರಿಗಳ ಅನುಮತಿ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಕಡತವನ್ನು ಸೋಮವಾರ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಲಾಗುವುದು. ಅನುಮತಿ ಲಭ್ಯವಾದ ಬಳಿಕ ರಾಜ್ಯಾದ್ಯಂತ ಬಾರ್‌ ಮತ್ತು ಕ್ಲಬ್‌ಗಳಲ್ಲಿ ಮದ್ಯ ಸರಬರಾಜು ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.