ಬೆಂಗಳೂರು (ಆ.20):  ಚೀನಾದಿಂದ ಬರಬೇಕಿದ್ದ ಹಡಗು ಮಳೆಯಿಂದಾಗಿ ವಿಳಂಬವಾದ ಕಾರಣ ರಾಜ್ಯಕ್ಕೆ ಯೂರಿಯಾ ತಲುಪುವುದು ತಡವಾಗಿದೆ. ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಉಂಟಾಗಿದ್ದು, ಈ ಸಮಸ್ಯೆಯು ಗೌರಿ-ಗಣೇಶ ಹಬ್ಬದ ನಂತರ ನಿವಾರಣೆಯಾಗಲಿದೆ.

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌ ಈ ಅಭಯ ನೀಡಿದ್ದಾರೆ. ಚೀನಾದಿಂದ ಹಡಗಿನ ಮೂಲಕ ಬರಬೇಕಿದ್ದ 45 ಸಾವಿರ ಟನ್‌ ಯೂರಿಯಾ ಮಂಗಳೂರು ಬಂದರಿಗೆ ಬರುವುದು ತಡವಾಗಿದೆ. ಬುಧವಾರವಷ್ಟೇ ಈ ಹಡಗು ಮಂಗಳೂರು ಬಂದರು ಮುಟ್ಟಿದೆ. ಆ.20ರಂದು ಯೂರಿಯಾ ಲಾರಿಗಳಿಗೆ ಲೋಡಿಂಗ್‌ ನಡೆಯಲಿದೆ. ಅನಂತರ ರಾಜ್ಯದ ಎಲ್ಲ ಜಿಲ್ಲೆಗಳಿಗೆ ರವಾನೆಯಾಗಲಿದೆ. ಒಟ್ಟಾರೆ ಗೌರಿ-ಗಣೇಶ ಹಬ್ಬ ಮುಗಿಯುವ ವೇಳೆಗೆ ರೈತರಿಗೆ ಯೂರಿಯಾ ದೊರೆಯಲಿದೆ ಎಂದು ಅವರು ತಿಳಿಸಿದರು.

ಯೂರಿಯಾ ಗೊಬ್ಬರ ದಂಧೆ: ರೈತರು ಕಂಗಾಲು..!..

ಆಗಸ್ಟ್‌ ತಿಂಗಳಲ್ಲಿ ಕಲಬುರಗಿ, ಗದಗ, ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ 1.77 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಬೇಡಿಕೆ ಬಂದಿದೆ. ಪ್ರಸ್ತುತ ಕೃಷಿ ಇಲಾಖೆ ಸೇರಿದಂತೆ ವಿವಿಧ ಗೊಬ್ಬರದ ಕಂಪನಿಗಳಲ್ಲಿ 1.25 ಲಕ್ಷ ಟನ್‌ ಯೂರಿಯಾ ದಾಸ್ತಾನು ಇದೆ. ಕೇಂದ್ರ ಸರ್ಕಾರ ಕೂಡ 22 ಸಾವಿರ ಟನ್‌ ಯೂರಿಯಾ ಹಂಚಿಕೆ ಮಾಡಿದೆ. ಹೀಗಾಗಿ, ಯೂರಿಯಾ ಕೊರತೆ ಇಲ್ಲ. ರೈತರಿಗೆ ತಲುಪುವಲ್ಲಿ ತುಸು ವಿಳಂಬವಾಗಿದೆ ಎಂದರು.

ಈ ಬಾರಿ ಬಿತ್ತನೆ ಕ್ಷೇತ್ರ ಹೆಚ್ಚಳ:

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇದುವರೆಗೂ 68.26 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 11 ಲಕ್ಷ ಹೆಕ್ಟೇರ್‌ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. 2018ರ ಇದೇ ಅವಧಿಯಲ್ಲಿ 58.01 ಲಕ್ಷ ಹೆಕ್ಟೇರ್‌ನಲ್ಲಿ ಮತ್ತು 2019ರಲ್ಲಿ 57.12 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಹೀಗೆ ಒಟ್ಟಾರೆ ಐದು ವರ್ಷಗಳ ಅಕ್ಕಿ ಸಂಖ್ಯೆಯ ಆಧಾರದಲ್ಲಿ 57.09 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬಹುದೆಂಬ ಲೆಕ್ಕಾಚಾರ ಮಾಡಲಾಗಿತ್ತು.

ಧಾರವಾಡ: ನವಲಗುಂದದಲ್ಲಿ ಯೂರಿಯಾ ಪಡೆಯಲು ರೈತರ ಮಾರಾಮಾರಿ.

ಆದರೆ ಈ ಬಾರಿ ಶೇ.25ರಷ್ಟುಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕೃಷಿ ಇಲಾಖೆ ಕಳೆದ ಐದು ವರ್ಷಗಳ ಲೆಕ್ಕಾಚಾರದಲ್ಲಿ ಯೋಜನೆ ರೂಪಿಸಿತ್ತು. ಆದರೆ, ನಿರೀಕ್ಷೆಗೂ ಮೀರಿ ಬಿತ್ತನೆ ಪ್ರಮಾಣ ಹೆಚ್ಚಾಗಿರುವುದು ಯೂರಿಯಾಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಆದರೂ, ಈ ಪ್ರಮಾಣದಲ್ಲಿ ಯೂರಿಯಾ ಪೂರೈಕೆ ಮಾಡಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.