ಬೆಂಗ​ಳೂ​ರು(ಆ.20): ಕೊರೋನಾ ಹಿನ್ನೆ​ಲೆ​ಯಲ್ಲಿ ನಗ​ರ​ಗ​ಳಲ್ಲಿ ಉದ್ಯೋಗ ಕಳೆ​ದು​ಕೊಂಡ ಮಂದಿ ಲಕ್ಷಾಂತರ ಸಂಖ್ಯೆ​ಯಲ್ಲಿ ಕೃಷಿ​ಯತ್ತ ವಾಲಿರು​ವ ನಡು​ವೆಯೇ ಕೊಪ್ಪಳ, ಕಲ​ಬು​ರಗಿ ಸೇರಿ​ ಉತ್ತರ ಕರ್ನಾ​ಟ​ಕ​ದ ನಾಲ್ಕು ಜಿಲ್ಲೆ​ಗ​ಳಲ್ಲಿ ದಿಢೀರ್‌ ಯೂರಿಯಾ ಗೊಬ್ಬ​ರಕ್ಕೆ ಹಾಹಾ​ಕಾರ ಎದ್ದಿ​ದೆ. 

ಬೇಡಿ​ಕೆ​ಯಷ್ಟು ಗೊಬ್ಬ​ರದ ಪೂರೈಕೆ ಇಲ್ಲ ಎಂದು ಹೇಳು​ತ್ತಿ​ರುವ ಮಾರಾ​ಟ​ಗಾ​ರರು ಪ್ರತಿ ಚೀಲ ಯೂರಿಯಾ ಗೊಬ್ಬ​ರದ ದರ​ವ​ನ್ನು 50ರಿಂದ 135 ರುಪಾಯಿನಷ್ಟು ಹೆಚ್ಚಿಸಿ ಮಾರಾ​ಟ ಮಾಡು​ತ್ತಿ​ದ್ದಾರೆ. ಲಾಕ್‌​ಡೌ​ನ್‌​ನಿಂದಾಗಿ ಸಕಾ​ಲಕ್ಕೆ ಬೇಡಿ​ಕೆ​ಯಿ​ರು​ವಷ್ಟು ಗೊಬ್ಬರ ಪೂರೈಕೆಗೆ ಸಮ​ಸ್ಯೆ​ಯಾ​ಗಿದೆ ಎಂದು ಕೃಷಿ ಇಲಾಖೆ ಹೇಳಿ​ಕೊಂಡಿ​ದ್ದು, ಇದನ್ನೇ ಬಂಡ​ವಾಳ ಮಾಡಿ​ಕೊಂಡ ಮಾರಾ​ಟ​ಗಾ​ರರು ಬಡ ರೈತ​ರನ್ನು ಸುಲಿ​ಗೆ ಮಾಡು​ತ್ತಿ​ದ್ದಾ​ರೆ.

ರಾಜ್ಯದ ಉಳಿದ ಜಿಲ್ಲೆ​ಗ​ಳಿಗೆ ಹೋಲಿ​ಸಿ​ದರೆ ಕಲ​ಬು​ರಗಿ, ಧಾರ​ವಾಡ, ಕೊಪ್ಪಳ, ಗದ​ಗ​ದಲ್ಲಿ ಕಳೆದ 15 ದಿನ​ಗ​ಳಿಂದ ಯೂರಿಯಾ ಗೊಬ್ಬ​ರದ ಸಮಸ್ಯೆ ಗಂಭೀ​ರ​ವಾಗಿ ಕಾಡು​ತ್ತಿ​ದೆ. ಮಾಮೂ​ಲಿ​ಯಾಗಿ 45 ಕೆಜಿ ಯೂರಿಯಾ ಗೊಬ್ಬರದ ಚೀಲದ ನಿಗ​ದಿತ ದರ 265 ರುಪಾಯಿ. ಆದರೆ ಗೊಬ್ಬ​ರಕ್ಕೆ ಬೇಡಿಕೆ ಹೆಚ್ಚಿ​ರುವ ಹಿನ್ನೆ​ಲೆ​ಯಲ್ಲಿ ರಾಜ್ಯ​ದ ಒಂದೊಂದು ಜಿಲ್ಲೆ​ಯಲ್ಲಿ ಒಂದೊಂದು ದರ​ದಲ್ಲಿ ಮಾರಾ​ಟ​ವಾ​ಗು​ತ್ತಿದೆ. ಕೆಲವು ಕಡೆ ಗೊಬ್ಬ​ರದ ದರ ಕನಿಷ್ಠ 15 ರು. ನಷ್ಟು ಹೆಚ್ಚಳ ಮಾಡಿ​ದ್ದರೆ ಕೆಲ ಜಿಲ್ಲೆ​ಗ​ಳಲ್ಲಿ 135ರಷ್ಟು ಹೆಚ್ಚಿನ ದರಕ್ಕೆ ಮಾರಾ​ಟ​ವಾ​ಗು​ತ್ತಿ​ದೆ. ಅಂದರೆ 300ರಿಂದ 400 ರುಪಾಯಿವರೆ​ಗೂ ಗೊಬ್ಬರ ಮಾರಾಟವಾಗು​ತ್ತಿ​ದೆ.

ಯೂರಿಯಾ ಗೊಬ್ಬರ ಕೊಳ್ಳಲು ರೈತರ ನೂಕುನುಗ್ಗಲು..!

ಕೊಪ್ಪಳ, ಗದ​ಗ​ದ​ಲ್ಲಿ ದಿನ​ವಿಡೀ ಅಂಗಡಿ ಮುಂದೆ ಸರದಿ ಸಾಲಲ್ಲಿ ನಿಂತರೂ ರೈತ​ರಿಗೆ ಗೊಬ್ಬರ ಸಿಗುತ್ತಿ​ಲ್ಲ. ಆದರೆ, ಉಳ್ಳವರಿಗೆ ಗೊಬ್ಬರದ ಕೊರತೆಯಾಗಿಲ್ಲ ಎಂಬುದು ರೈತರ ಆರೋ​ಪ. ಸರ್ಕಾರ ಶೀಘ್ರ ಮಧ್ಯ​ಪ್ರ​ವೇ​ಶಿ​ಸ​ಬೇಕು, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡು​ವ​ವರ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳ​ಬೇಕು ಎಂದು ಆಗ್ರ​ಹಿ​ಸಿ​ದ್ದಾ​ರೆ.

ಕೃತಕ ಅಭಾವ-ಆರೋ​ಪ: ಕೃಷಿ ಇಲಾಖೆ ಪ್ರಕಾರ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶೇ.90-96ರಷ್ಟು ಬಿತ್ತ​ನೆ​ಯಾ​ಗಿ​ದೆ. ಈ ಮಧ್ಯೆ, ಉತ್ತಮ ಮಳೆ​ಯಾ​ಗು​ತ್ತಿ​ರುವ ಕಾರಣ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿ​ದೆ. ಆದರೂ ಎಲ್ಲಾ ಜಿಲ್ಲೆ​ಗ​ಳಿಗೆ ಹೆಚ್ಚುವರಿಯಾಗಿ ಯೂರಿಯಾ ಗೊಬ್ಬರ ಪೂರೈಕೆಗೆ ಕ್ರಮ ಕೈಗೊ​ಳ್ಳ​ಲಾ​ಗಿದೆ.

1 ವಾರ ಸುತ್ತಾಡಿದರೂ 1 ಚೀಲ ಸಿಕ್ತಿಲ್ಲ

ಯೂರಿಯಾ ಗೊ​ಬ್ಬ​ರ​ವನ್ನು ಮೆಕ್ಕೆ ಜೋಳಕ್ಕೆ ತುರ್ತಾಗಿ ಹಾಕ​ಬೇ​ಕಾ​ಗಿ​ದೆ. ಒಂದು ವಾರ​ದಿಂದ ಸುತ್ತಾ​ಡಿ​ದರೂ ಮಾರು​ಕ​ಟ್ಟೆ​ಯಲ್ಲಿ 1 ಚೀಲ ಗೊಬ್ಬರವೂ ಸಿಕ್ಕಿಲ್ಲ. 14 ಎಕ​ರೆ​ಯ​ಲ್ಲಿನ ಮೆಕ್ಕೆ​ಜೋಳಕ್ಕೆ ಸಕಾ​ಲದಲ್ಲಿ ಗೊಬ್ಬರ ಪೂರೈ​ಸ​ಲಾ​ಗದೆ ಸಮಸ್ಯೆ​ಯಾ​​ಗು​ತ್ತಿ​ದೆ. - ಗ್ಯಾನಪ್ಪ ಬೇಳೂ​ರು, ಕೊಪ್ಪ​ಳ

ಚೀನಾದಿಂದ ಬಂದಿದೆ, ಹಬ್ಬದ ಬಳಿಕ ಸಿಗುತ್ತೆ

ಚೀನಾದಿಂದ ಹಡಗಿನ ಮೂಲಕ ಬರಬೇಕಿದ್ದ 45 ಸಾವಿರ ಟನ್‌ ಯೂರಿಯಾ ಮಂಗಳೂರು ಬಂದರಿಗೆ ಬರುವುದು ತಡವಾಗಿದೆ. ಬುಧವಾರವಷ್ಟೇ ಈ ಹಡಗು ಮಂಗಳೂರು ಬಂದರು ಮುಟ್ಟಿದೆ. ಆ.20ರಂದು ಯೂರಿಯಾ ಲಾರಿಗಳಿಗೆ ಲೋಡಿಂಗ್‌ ನಡೆಯಲಿದೆ. ಅನಂತರ ರಾಜ್ಯದ ಎಲ್ಲ ಜಿಲ್ಲೆಗಳಿಗೆ ರವಾನೆಯಾಗಲಿದೆ. ಒಟ್ಟಾರೆ ಗೌರಿ-ಗಣೇಶ ಹಬ್ಬ ಮುಗಿಯುವ ವೇಳೆಗೆ ರೈತರಿಗೆ ಯೂರಿಯಾ ದೊರೆಯಲಿದೆ. - ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌, ಕೃಷಿ ಇಲಾಖೆ ಆಯುಕ್ತ

ಕೋವಿಡ್‌ ಮತ್ತು ಪ್ರವಾ​ಹ​ದಿಂದ ಹಡ​ಗಿ​ನಲ್ಲಿ ಆಮ​ದಾ​ಗಿ​ರುವ ಯೂರಿಯಾ ಗೊಬ್ಬ​ರ​ವನ್ನು ಸಕಾ​ಲಕ್ಕೆ ಪೂರೈಕೆ ಮಾಡು​ವಲ್ಲಿ ಸಮ​ಸ್ಯೆ​ಯಾ​ಗು​ತ್ತಿ​ದೆ. ಆದರೂ ಜಿಲ್ಲೆ​ಯಲ್ಲಿ ಆಗಸ್ಟ್‌ ಅಂತ್ಯಕ್ಕೆ 55 ಸಾವಿರ ಮೆಟ್ರಿ​ಕ್‌ ಟನ್‌ ಅಗ​ತ್ಯ​ವಿದ್ದು, ಈ ಪೈಕಿ 47 ಸಾವಿರ ಮೆಟ್ರಿಕ್‌ ಟನ್‌ ಪೂರೈ​ಸ​ಲಾ​ಗಿದೆ. 22 ಅಥ​ವಾ 23ರಂದು ಸುಮಾರು 3 ಸಾವಿರ ಮೆಟ್ರಿಕ್‌ ಟನ್‌ ಜಿಲ್ಲೆಗೆ ಬರ​ಲಿ​ದೆ. - ಶಿವ​ಕು​ಮಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಕೊಪ್ಪಳ