ಬೆಂಗಳೂರು, [ಫೆ.01]: ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರನ್ನು ರಾಜಕೀಯವಾಗಿ ಟೀಕಿಸುವ ವೇಳೆ ಅವರ ಪತ್ನಿ ಟಬೂ ಗುಂಡೂರಾವ್​ ಅವರ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್​ ಮಾಡಿದ್ದ ಕೇಂದ್ರ ಸಚಿವ ಅನಂತ್​ಕುಮಾರ್​ ಹೆಗಡೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. 

ವಕೀಲರೂ ಹಾಗೂ ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಭವ್ಯ ಅನು ಎಚ್​.ವಿ ಎಂಬವರು ಇಂದು [ಶುಕ್ರವಾರ] ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

‘ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು'

“ಹಿಂದು ಹೆಣ್ಣುಮಕ್ಕಳನ್ನು ಮುಟ್ಟುವ ಕೈಗಳನ್ನು ಕಡಿಯಬೇಕು,” ಎಂಬ ಅನಂತ್​ಕುಮಾರ್ ಅವರ ಹೇಳಿಕೆಯನ್ನು ದಿನೇಶ್​ ಗುಂಡೂರಾವ್​ ಅವರು ಟ್ವೀಟ್​ ಮಾಡಿ ಟೀಕಿಸಿದ್ದರು. ” 

ಮಂತ್ರಿಯಾದ ಮೇಲೆ ನಿಮ್ಮ ಸಾಧನೆ ಏನು? ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ” ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಗಡೆ ಅವರು, ” ಮುಸ್ಲಿಂ ಮಹಿಳೆಯ ಹಿಂದೆ ಓಡಿದವ” ಎಂದು ದಿನೇಶ್​ ಗುಂಡೂರಾವ್​ ಅವರಿಗೆ ಟಾಂಗ್ ಕೊಟ್ಟಿದ್ದರು. 

 ಈ ರಾಜಕೀಯ ಕೆಸರೆರಚಾಟದಲ್ಲಿ ವಿನಾಕಾರಣ ಮಹಿಳೆಯೊಬ್ಬರನ್ನು ಮತ್ತು ಅವರ ಧರ್ಮವನ್ನು ಎಳೆದುತಂದ ಕಾರಣಕ್ಕೆ ಹೆಗಡೆ ವಿರುದ್ಧ ದೂರು ದಾಖಲಿಸಿದ್ದಾರೆ.