ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷಾ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇದೇ ರೀತಿ, ದಾವಣಗೆರೆಯಲ್ಲೂ ಸಮೀಕ್ಷಾ ಕಾರ್ಯದಲ್ಲಿ ನಿರಾಸಕ್ತಿ ತೋರಿದ್ದಕ್ಕಾಗಿ ಇಬ್ಬರು ಶಿಕ್ಷಕರು ಮತ್ತು ಓರ್ವ ಸಿಬ್ಬಂದಿ ಅಮಾನತು.

ಹುಬ್ಬಳ್ಳಿ (ಸೆ.29): ಮಹಾನಗರಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿ, ಕರ್ತವ್ಯಲೋಪ ಎಸಗಿರುವ ಪಾಲಿಕೆಯ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಆದೇಶಿಸಿದ್ದಾರೆ. ಈ ಕುರಿತು ಭಾನುವಾರ ಸಂಜೆ ಪ್ರಗತಿ ಪರಿಶೀಲನೆ ಮಾಡಿರುವ ಅವರು, ಸಮೀಕ್ಷೆಯಲ್ಲಿ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: ನೈಜ ಸಮಸ್ಯೆಗಳನ್ನು ಮರೆಮಾಚಲು ಜಾತಿ ಸಮೀಕ್ಷೆ: ಪ್ರಲ್ಹಾದ್‌ ಜೋಶಿ ಆರೋಪ

ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸರ್ಕಾರವು ನಿರ್ದೇಶಿಸಿರುವುದರಿಂದ ಎಲ್ಲರೂ ಕಾಳಜಿ ಮತ್ತು ನಿರಂತರವಾಗಿ ಸಮೀಕ್ಷಾ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದ್ದಾರೆ‌. ಪ್ರತಿಯೊಬ್ಬರೂ ನೀಡಿರುವ ಸಮೀಕ್ಷಾ ಗುರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಸಂಪರ್ಕಿಸಿ, ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ದಾವಣಗೆರೆಯಲ್ಲೂ ಇಬ್ಬರು ಶಿಕ್ಷಕರು ಓರ್ವ ಸಿಬ್ಬಂದಿ ಅಮಾನತು:

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕೈಗೊಳ್ಳಲು ನಿರಾಸಕ್ತಿ ತೋರಿದ ಇಬ್ಬರು ಶಿಕ್ಷಕರೂ ಸೇರಿದಂತೆ ಮೂವರು ಸಿಬ್ಬಂದಿಯನ್ನು ಜಿಲ್ಲಾ ಶಿಸ್ತು ಪ್ರಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೇವೆಯಿಂದ ಅಮಾನತುಗೊಳಿಸಿದ್ದರು.

ದಾವಣಗೆರೆ ಉತ್ತರ ವಲಯದ ಜಮಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಡಿ.ಕೆ.ಮಂಜುನಾಥ, ದಾವಣಗೆರೆ ದಕ್ಷಿಣ ವಲಯದ ನಾಗನೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಚ್.ಬಸವರಾಜಪ್ಪ, ದಾವಣಗೆರೆ ತಾಲೂಕು ಮಾಯಕೊಂಡ ಹಿಂದುಳಿಗ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಕೆ.ಆರ್.ದುರ್ಗಪ್ಪ ಅಮಾನತುಗೊಳಿಸಿದ್ದರು.