Karnataka social educational survey: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿರುವ 1.20 ಲಕ್ಷಕ್ಕೂ ಹೆಚ್ಚು ಸಮೀಕ್ಷಕರಿಗೆ ತಲಾ ₹5,000 ಗೌರವಧನ ನೀಡಲು ರಾಜ್ಯ ಸರ್ಕಾರವು ₹60.36 ಕೋಟಿ ಮೊದಲ ಕಂತಿನ ಅನುದಾನವನ್ನು ಬಿಡುಗಡೆ ಮಾಡಿದೆ. 

ಬೆಂಗಳೂರು (ಸೆ.27): ರಾಜ್ಯದಲ್ಲಿ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿರುವ 1,20,728 (ಜಿಬಿಎ ಹೊರತುಪಡಿಸಿ) ಸಮೀಕ್ಷಕರಿಗೆ ತಲಾ ₹5,000 ಗೌರವಧನ ಮೊತ್ತವಾಗಿ ಪಾವತಿಸಲು ₹60.36 ಕೋಟಿ ಮೊದಲ ಕಂತಿನ ರೂಪದಲ್ಲಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಮೊದಲನೆಯ ಕಂತಿನಲ್ಲಿ ₹5,000 ಮತ್ತು ಪ್ರತಿ ಮನೆಗೆ ₹100 ನಂತೆ ಗೌರವ ಸಂಭಾವನೆ ನೀಡಲಾಗುವುದು. ಜತೆಗೆ ಮೇಲ್ವಿಚಾರಕರಿಗೆ ₹10,000 ನೀಡಲು ಜಿಲ್ಲಾಧಿಕಾರಿಗಳ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಆರಂಭಿಸಿರುವ ಸಮೀಕ್ಷೆಯಲ್ಲಿ ಒಟ್ಟು 1.20 ಲಕ್ಷ ಸಮೀಕ್ಷೆದಾರರು (ಗಣತಿದಾರರು) ಪಾಲ್ಗೊಂಡಿದ್ದಾರೆ. ಇವರಿಗೆ ಮೊದಲ ಕಂತಿನಲ್ಲಿ ₹5,000 ಬಿಡುಗಡೆ ಮಾಡಬೇಕು. ಉಳಿದ ಅನುದಾನವನ್ನು ಮುಂದಿನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.

ಇದನ್ನೂ ಓದಿ: Social and Educational Survey Karnataka: ಭಾಗವಹಿಸುವುದು ಕಡ್ಡಾಯವೇ? ಆಯೋಗ ಹೇಳಿದ್ದೇನು?

ಸಮೀಕ್ಷೆಗೆ ಸಂಬಂಧಿಸಿ ಬಿಡುಗಡೆ ಮಾಡಲಾದ ಅನುದಾನ, ವೆಚ್ಚದ ವಿವರವನ್ನು ಪ್ರತ್ಯೇಕವಾಗಿ ನಿರ್ವಹಿಸಿ ಆಯೋಗಕ್ಕೆ ಹಣ ವಿನಿಯೋಗ ಪತ್ರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.