ಒಳ ಜಗಳವನ್ನು, ನೈಜ ಸಮಸ್ಯೆಗಳನ್ನು ಮರೆಮಾಚಲು ಜಾತಿ ಸಮೀಕ್ಷೆ ನಡೆಯುತ್ತಿದೆ. ರಸ್ತೆಗಳಿಲ್ಲ, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಯಾವ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.
ಬೀದರ್ (ಸೆ.27): ಒಳ ಜಗಳವನ್ನು, ನೈಜ ಸಮಸ್ಯೆಗಳನ್ನು ಮರೆಮಾಚಲು ಜಾತಿ ಸಮೀಕ್ಷೆ ನಡೆಯುತ್ತಿದೆ. ರಸ್ತೆಗಳಿಲ್ಲ, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಯಾವ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಗುಂಡಿ ಮುಚ್ಚಲಿಕ್ಕೂ ಹಣ ಇಲ್ಲದಂಥ ಪರಿಸ್ಥಿತಿಗೆ ಇವರು ಬಂದು ತಲುಪಿದ್ದಾರೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಅವರು ಬಸವಕಲ್ಯಾಣಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಅವರು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಡಿ.ಕೆ ಶಿವಕುಮಾರ್ ಅವರು ನವೆಂಬರ್‌ನಲ್ಲಿ ಸಿಎಂ ಆಗ್ತೇನೆ ಎಂದು ಹೇಳಿದ್ದಾರೆ, ಮಾಜಿ ಸಚಿವ ರಾಜಣ್ಣ ಅವರೂ ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ ಎಂದಿದ್ದರು, ಅದೀಗ ಸಮೀಪಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಜಾತಿ ಸಮೀಕ್ಷೆಯನ್ನು ತರಾತುರಿಯಲ್ಲಿ ಮುಂದುವರೆಸಿದ್ದಾರೆ ಎಂದರು.
ಸರ್ಕಾರಿ ಶಿಕ್ಷಕರು ಹಾಗೂ ಸಮೀಕ್ಷೆ ಮಾಡುವಂಥ ಸಿಬ್ಬಂದಿಗಳಿಗೆ ತರಬೇತಿ ಕೂಡ ಕೊಟ್ಟಿಲ್ಲ. ಕೋವಿಡ್ ಮತ್ತು ಇತ್ಯಾದಿ ಕಾರಣದಿಂದ ಕೇಂದ್ರ ಸರ್ಕಾರ ಗಣತಿ ಮುಂದೂಡಿತ್ತು ನಾವು ಈಗ ತಯಾರಿ ಶುರು ಮಾಡಿದ್ದೇವೆ, ಇಡೀ ದೇಶಾದ್ಯಂತ ತರಬೇತಿ ಕೊಡಬೇಕಾಗುತ್ತದೆ. ಇದೆಲ್ಲ ಸಂಗತಿಗಳನ್ನು ಬಹಳ ವ್ಯವಸ್ಥಿತವಾಗಿ ಮಾಡಬೇಕಾಗುತ್ತದೆ. ಮೊದಲು 175 ಕೋಟಿ ಖರ್ಚು ಮಾಡಿದ್ರು ಹತ್ತಾರು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಕಸದ ಬುಟ್ಟಿಗೆ ಎಸೆದರು, ಈಗ ಯಾವುದೇ ರೀತಿಯ ಸಿದ್ಧತೆಯಿರದೆ ಪುನಃ ಸಮೀಕ್ಷೆ ಮಾಡಲಿಕ್ಕೆ ಹೊರಟಿದ್ದಾರೆ ಜನ ಉತ್ಸುಕರಾಗಿಲ್ಲ, ಸಿದ್ದರಾಮಯ್ಯ ಡ್ರಾಮಾ ಮಾಡ್ತಿದ್ದಾರೆ ಹಾಗೂ ಇವರು ಬೋಗಸ್ ಅಂತ ಜನರಿಗೆ ಗೊತ್ತಾಗಿದೆ ಎಂದರು.
ಉನ್ನತ ಮಟ್ಟದ ನಾಯಕರಿದ್ದಾರೆ
ಧರ್ಮಸ್ಥಳದ ಪ್ರಕರಣದಲ್ಲಿ ಕಾಂಗ್ರೆಸ್‌ನ ಉನ್ನತ ಮಟ್ಟದ ನಾಯಕರಿದ್ದಾರೆ, ಹೊರಗಿನ ಬೇರೆ ಬೇರೆ ಎಂಪಿಗಳು, ಬೇರೆ ಬೇರೆ ನಾಯಕರೂ ಇದ್ದಾರೆ. ತಿಮ್ಮರೋಡಿ ಆಮೇಲೆ ಇನ್ಯಾರೋ ಇದಾರೆ ಅವರ ಹೆಸರು ಹೇಳಲಿಕ್ಕೂ ಯೋಗ್ಯ ಇಲ್ಲ ಅವು, ತನಿಖೆಯಲ್ಲಿ ಎಲ್ಲವೂ ಬಹಿರಂಗವಾಗಲಿದ್ದು, ಯಾರ್ಯಾರು ಇದರ ಷಡ್ಯಂತ್ರ ಮಾಡಿದ್ದಾರೆ ಅವರಷ್ಟು ಜನರ ಹೆಸರುಗಳು ಬಯಲಾಗ್ತವೆ ಕಾಂಗ್ರೆಸ್ ಈ ಷಡ್ಯಂತ್ರದ ಹಿಂದೆ ಇದೆ ಎಂಬುವುದು ಜನರಿಗೂ ಅರ್ಥ ಆಗಿದೆ ಎಂದು ತಿಳಿಸಿದರು.
ಭಾರತ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡು ಜನರ ಹೊರೆಯನ್ನು ಕಡಿಮೆ ಮಾಡಿದೆ, ಮೂಲಸೌಲಭ್ಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹಂಚಿಕೆ ಮಾಡ್ತಾ ಇದ್ದೇವೆ. ಜಗತ್ತಿನ ನಾಲ್ಕನೇ ಆರ್ಥಿಕ ಅರ್ಥ ವ್ಯವಸ್ಥೆಯಾಗಿ ಭಾರತ ಹೊರಹೊಮ್ಮುತ್ತಿದೆ . ಜಿಎಸ್ಟಿ ಇಳಿಸಿದ್ದು ಸ್ವಾತಂತ್ರ್ಯಾನಂತರದ ಅತಿ ದೊಡ್ಡ ಸುಧಾರಣೆ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
