ಬೆಂಗಳೂರು(ಜು.03): ರಾಜ್ಯ ಸರ್ಕಾರ ಆನ್‌ಲೈನ್‌ ಶಿಕ್ಷಣಕ್ಕೆ ಅನುಮತಿ ನೀಡಿರುವ ಬೆನ್ನಲ್ಲೇ ಬಿಬಿಎಂಪಿ ಶಾಲೆಗಳ ಎಷ್ಟುಮಂದಿ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್‌ಗಳು ಇದೆ ಎಂಬ ಮಾಹಿತಿ ಕಲೆ ಹಾಕಲು ಸಮೀಕ್ಷೆಗೆ ಮುಂದಾಗಿದೆ.

ಹೈಕೋರ್ಟ್‌ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ 1ನೇ ತರಗತಿಯಿಂದ 10ನೇ ತರಗತಿ ವರೆಗೆ ಆನ್‌ಲೈನ್‌ ಶಿಕ್ಷಣ ಅನುಮತಿ ನೀಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 2020-21ನೇ ಸಾಲಿನ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬೈಯಪ್ಪನಹಳ್ಳಿ 3ನೇ ಕೋಚಿಂಚ್‌ ಟರ್ಮಿನಲ್‌ ಪೂರ್ಣ: ಮೆಜೆಸ್ಟಿಕ್, ಯಶವಂತಪುರದಿಂದ 64 ಟ್ರೈನ್ ಶಿಫ್ಟ್

ಮೊದಲ ಹಂತದಲ್ಲಿ ಬಿಬಿಎಂಪಿಯ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿ ಓದುತ್ತಿರುವ ಸುಮಾರು 7500 ವಿದ್ಯಾರ್ಥಿಗಳ ಪೈಕಿ ಎಷ್ಟುಮಂದಿಯ ಬಳಿ ಸ್ಮಾರ್ಟ್‌ ಫೋನ್‌ ಇದೆ, ಎಷ್ಟುವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್‌ ವ್ಯವಸ್ಥೆ ಹೊಂದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕೆ ಮುಂದಾಗಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯವಾಗುತ್ತಿದಂತೆ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸುವುದಕ್ಕೆ ಪಾಲಿಕೆ ಶಿಕ್ಷಣ ವಿಭಾಗ ತೀರ್ಮಾನಿಸಿದೆ.

ಆನಂತರ ಬಿಬಿಎಂಪಿಯ ವಿದ್ಯಾರ್ಥಿಗಳಿಗೆ ಹೇಗೆ ಆನ್‌ಲೈನ್‌ ಶಿಕ್ಷಣ ನೀಡುವುದು, ಸ್ಮಾರ್ಟ್‌ಫೋನ್‌, ಟ್ಯಾಬ್‌ ಅಥವಾ ಲ್ಯಾಪ್‌ಟಾಪ್‌ ಇಲ್ಲದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ಪೂರಕ ಸಾಮಗ್ರಿ ವಿತರಣೆ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ಪಾಲಿಕೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಜೆ.ಮಂಜುನಾಥ್‌ ಮಾಹಿತಿ ನೀಡಿದ್ದಾರೆ.

ಸಿಎಸ್‌ಆರ್‌ ನಿಧಿ:

ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟುಬಹುರಾಷ್ಟ್ರೀಯ ಕಂಪನಿಗಳು ಸಿಎಸ್‌ಆರ್‌ ಅಡಿ (ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ) ಸಹಾಯ ಮಾಡುವುದಕ್ಕೆ ಮುಂದೆ ಬರಲಿದೆ. ಆ ಮೂಲಕ ಬಿಬಿಎಂಪಿ ಶಾಲಾ ಮಕ್ಕಳಿಗೆ ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ ಫೋನ್‌ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ಇದೆ. ಜತೆಗೆ ಆಯಾ ವಾರ್ಡ್‌ನ ಪಾಲಿಕೆ ಸದಸ್ಯರು, ಜನ ಪ್ರತಿನಿಧಿಗಳು ಮುಂದೆ ಬಂದು ಬಿಬಿಎಂಪಿ ಶಾಲಾ ಮಕ್ಕಳಿಗೆ ಸಹಕಾರ ನೀಡುವ ಸಾಧ್ಯತೆ ಇದೆ. ಹಾಗಾಗಿ, ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಮಾಡುವ ಬಗ್ಗೆ ಹೆಚ್ಚಿನ ಆತಂಕ ಪಡಬೇಕಾಗಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ಶಿಕ್ಷಕರಿಗೆ ತರಬೇತಿ:

ಕಳೆದ ವರ್ಷದ ಗುತ್ತಿಗೆ ಶಿಕ್ಷಕರನ್ನು2020-21ನೇ ಸಾಲಿಗೂ ಮುಂದುವರೆಸಲಾಗಿದೆ. ಆನ್‌ಲೈನ್‌ ಶಿಕ್ಷಣ ನೀಡುವ ಬಗ್ಗೆ ಪಾಲಿಕೆ ಶಿಕ್ಷಕರಿಗೆ ತರಬೇತಿ ನೀಡಬೇಕಿದೆ. ಆ ಬಗ್ಗೆಯೂ ಶೀಘ್ರದಲ್ಲಿ ಸಂಪನ್ಮೂಲ ವ್ಯಕ್ತಿಯಿಂದ ತರಬೇತಿ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಮಂಜುನಾಥ್‌ ಮಾಹಿತಿ ನೀಡಿದ್ದಾರೆ.

Fact Check: ಅಯ್ಯಯ್ಯೋ... ಅಡ್ವೈಸರ್‌ ಬಿಯರ್‌ನಲ್ಲಿ ಮೂತ್ರ!

ಲಾಕ್‌ಡೌನ್‌ ಸಂದರ್ಭದಲ್ಲಿ ಪಾಲಿಕೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪೂರಕ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗಿತ್ತು. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ಬಗ್ಗೆ ಹೇಳಿದ್ದಾರೆ. ಹಾಗಾಗಿ, ಪಾಲಿಕೆ ಶಾಲೆಗಳಲ್ಲಿ ಆನ್‌ಲೈನ್‌ ಶಿಕ್ಷಣ ಆರಂಭಿಸುವುದಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ಸಿದ್ಧತೆ ಶೀಘ್ರದಲ್ಲಿ ಮಾಹಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜೆ.ಮಂಜುನಾಥ್‌ ತಿಳಿಸಿದ್ದಾರೆ.

-ವಿಶ್ವನಾಥ ಮಲೇಬೆನ್ನೂರು